ಬಸವಕಲ್ಯಾಣದಲ್ಲಿ ಶೀಘ್ರ ಅನುಭವ ಮಂಟಪ ಕಟ್ಟಡ ಉದ್ಘಾಟನೆ: ಈಶ್ವರ ಖಂಡ್ರೆ

By Kannadaprabha NewsFirst Published Jun 13, 2023, 1:54 PM IST
Highlights

ರಾಜಕೀಯ ಇದೊಂದು ಸಮಾಜ ಸೇವೆ ಎಂದು ತಿಳಿದುಕೊಂಡು ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೆ. ಡಾ. ಚನ್ನಬಸವ ಪಟ್ಟದ್ದೇವರ ಆಶೀರ್ವಾದ ಮತ್ತು ನಮ್ಮ ತಂದೆ ಭೀಮಣ್ಣ ಖಂಡ್ರೆ ಮಾರ್ಗದರ್ಶದಲ್ಲಿ ನನ್ನ ರಾಜಕೀಯ ಬೆಳವಣಿಗೆ ಕಂಡಿದ್ದೇನೆ. ರಾಜ್ಯದಲ್ಲಿ ಎರಡನೇ ಬಾರಿಗೆ ಸಚಿವನಾಗುವ ಅವಕಾಶ ನನಗೆ ಸಿಕ್ಕಿದೆ: ಸಚಿವ ಈಶ್ವರ ಖಂಡ್ರೆ 

ಭಾಲ್ಕಿ(ಜೂ.13):  ಬಸವಕಲ್ಯಾಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪ ಕಟ್ಟಡ ಕಾಮಗಾರಿಗೆ ಇನ್ನಷ್ಟುಚುರುಕು ಮುಟ್ಟಿಸಿ ನಮ್ಮ ಅವಧಿಯಲ್ಲಿ ಉದ್ಘಾಟಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಸೋಮವಾರ ಶ್ರೀಗಳ ಆಶೀರ್ವಾದ ಪಡೆದು ಮಾತನಾಡಿದ ಅವ​ರು, 2013ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಹಿರಿಯ ಸಾಹಿತಿ ಗೋ.ರು.ಚ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿ ವಿನ್ಯಾಸ ಸಿದ್ಧಪಡಿಸಿ ಅನುದಾನ ಕೂಡ ಘೋಷಣೆ ಮಾಡಿತ್ತು. ಯೋಗಾ ಯೋಗ ಎಂಬಂತೆ ರಾಜ್ಯದಲ್ಲಿ ಮತ್ತೆ ಐದು ವರ್ಷಗಳ ಬಳಿಕ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈಗ ಪ್ರಗತಿಯಲ್ಲಿರುವ ಅನುಭವ ಮಂಟಪ ಕಾಮಗಾರಿ ನಮ್ಮ ಕಾರ್ಯಕಾಲದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ಲೋಕ​ಸಭೆ ಚುನಾ​ವ​ಣೆಯಲ್ಲಿ ಮತ್ತೆ ಬಿಜೆಪಿ ಸೋಲಿಸಿ: ಸಚಿ​ವ ಖಂಡ್ರೆ

ರಾಜಕೀಯ ಇದೊಂದು ಸಮಾಜ ಸೇವೆ ಎಂದು ತಿಳಿದುಕೊಂಡು ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೆ. ಡಾ. ಚನ್ನಬಸವ ಪಟ್ಟದ್ದೇವರ ಆಶೀರ್ವಾದ ಮತ್ತು ನಮ್ಮ ತಂದೆ ಭೀಮಣ್ಣ ಖಂಡ್ರೆ ಮಾರ್ಗದರ್ಶದಲ್ಲಿ ನನ್ನ ರಾಜಕೀಯ ಬೆಳವಣಿಗೆ ಕಂಡಿದ್ದೇನೆ. ರಾಜ್ಯದಲ್ಲಿ ಎರಡನೇ ಬಾರಿಗೆ ಸಚಿವನಾಗುವ ಅವಕಾಶ ನನಗೆ ಸಿಕ್ಕಿದೆ. ಈ ಬಾರಿ ಅರಣ್ಯ ಮತ್ತು ಪರಿಸರ ಇಲಾಖೆ ಸಚಿವನಾಗಿದ್ದು ಜಿಲ್ಲೆ ಸಂಪೂರ್ಣ ಹಸಿರೀಕರಣ ಮಾಡುವ ಸಂಕಲ್ಪ ಹೊತ್ತಿದ್ದು ಇದಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ನ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, 70ರ ದಶಕದಲ್ಲಿ ಭೀಮಣ್ಣ ಖಂಡ್ರೆ ಅವರು ಶಾಸಕರಾಗಿ ಜನರ ಕಷ್ಟಸುಖಗಳಲ್ಲಿ ಭಾಗಿಯಾಗಿ ಜನಪರ ಕಾರ್ಯ ಮಾಡಿದ್ದರು. ಅವರಂತೆ ಅವರ ಪುತ್ರ ಈಶ್ವರ ಖಂಡ್ರೆ ಕೂಡ ಜನಮನ್ನಣೆ ಗಳಿಸಿ ರಾಜಕೀಯ ಏಳಿಗೆ ಕಾಣುತ್ತಿರುವುದು ಸಂತಸ ತರಿಸಿದೆ ಎಂದು ತಿಳಿಸಿದರು.

ಮೋದಿ ಸರ್ಕಾರದಿಂದ ರೈತರಿಗೆ ಬೆಂಬಲ ಬೆಲೆ: ಭಗವಂತ ಖೂಬಾ ಶ್ಲಾಘ​ನೆ

ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಕ್ಷೇತ್ರದ ಶಾಸಕ ಈಶ್ವರ ಖಂಡ್ರೆಗೆ ಅರಣ್ಯ ಮತ್ತು ಪರಿಸರ ಇಲಾಖೆ ಜವಾಬ್ದಾರಿ ಸಿಕ್ಕಿರುವುದು ಸಂತಸ ತರಿಸಿದೆ. ಇವರ ಅವಧಿಯಲ್ಲಿ ಜಿಲ್ಲೆ, ರಾಜ್ಯದಲ್ಲಿ ಹಸಿರು, ಪರಿಸರ ಪೂರಕ ವಾತಾವರಣ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಸವಲಿಂಗ ದೇವರು ಸಮ್ಮುಖ ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ, ಪುರಸಭೆ ಸದಸ್ಯ ಬಸವರಾಜ ವಂಕೆ, ರಾಜಕುಮಾರ ಬಿರಾದಾರ್‌, ಸಂಗಮೇಶ ವಾಲೆ, ರಾಜು ಜುಬರೆ, ಬಾಬು ಬೆಲ್ದಾಳ ಸೇರಿದಂತೆ ಹಲವರು ಇದ್ದರು.

click me!