ಶಕ್ತಿ ಯೋಜನೆ: ಬೆಳಗಾವಿಯೇ ಫಸ್ಟ್‌..!

Published : Jun 13, 2023, 12:29 PM IST
ಶಕ್ತಿ ಯೋಜನೆ: ಬೆಳಗಾವಿಯೇ ಫಸ್ಟ್‌..!

ಸಾರಾಂಶ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಉತ್ತರಕನ್ನಡ ಸೇರಿದಂತೆ 6 ಜಿಲ್ಲೆಗಳಲ್ಲಿ ಜೂ.11ರಂದು ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಒಟ್ಟು 1,22,354 ಮಹಿಳೆಯರು ಪ್ರಯಾಣಿಸಿದ್ದಾರೆ. ಪ್ರಯಾಣ ಮಾಡಿದ ಬಸ್‌ ಟಿಕೆಟ್‌ ದರದ ಮೊತ್ತ 36,17,096 ಆಗಿದೆ.

ಬೆಳಗಾವಿ(ಜೂ.13):  ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯ ಮೊದಲ ದಿನವೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಬಸ್‌ಗಳಲ್ಲಿ ಬರೋಬ್ಬರಿ 1.22 ಲಕ್ಷ ಮಹಿಳೆಯರು ಪ್ರಯಾಣ ಮಾಡಿ ಬೆಳಗಾವಿ ವಿಭಾಗದಲ್ಲೇ ಅತಿ ಹೆಚ್ಚು ಮಹಿಳೆಯರು ಪ್ರಯಾಣಿಸಿ ದಾಖಲೆ ಮಾಡಿದ್ದಾರೆ.

ಸ್ತ್ರೀ ಸಬಲೀಕರಣದ ನಿಟ್ಟಿನಲ್ಲಿ ಭಾನುವಾರ (ಜೂ.11ರಂದು) ಆರಂಭಿಸಿದ ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಶಕ್ತಿ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಉತ್ತರಕನ್ನಡ ಸೇರಿದಂತೆ 6 ಜಿಲ್ಲೆಗಳಲ್ಲಿ ಜೂ.11ರಂದು ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಒಟ್ಟು 1,22,354 ಮಹಿಳೆಯರು ಪ್ರಯಾಣಿಸಿದ್ದಾರೆ. ಪ್ರಯಾಣ ಮಾಡಿದ ಬಸ್‌ ಟಿಕೆಟ್‌ ದರದ ಮೊತ್ತ .36,17,096 ಆಗಿದೆ.

ಉಚಿತ ಪ್ರಯಾಣ 2ನೇ ದಿನ: ಬಸ್‌ಗಳು ರಶ್‌

ಬೆಳಗಾವಿ ಜಿಲ್ಲೆಯಲ್ಲಿ ಮೊದಲ ದಿನವೇ ಬರೋಬ್ಬರಿ 34,797 ಮಹಿಳಾ ಪ್ರಯಾಣಿಕರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿ ವಾಯುವ್ಯ ಕರ್ನಾಟಕ ಸಾರಿಗೆಯಲ್ಲಿ ದಾಖಲೆ ನಿರ್ಮಿಸಿದ್ದಾರೆ. ಉಳಿದಂತೆ ಧಾರವಾಡ ನಗರ ಸಾರಿಗೆ 12,354 ಹಾಗೂ ಧಾರವಾಡ ಗ್ರಾಮಾಂತರದಲ್ಲಿ 11,780 ಮಹಿಳೆಯರು ಪ್ರಯಾಣಿಸುವ ಮೂಲಕ ಧಾರವಾಡ 2ನೇ ಜಿಲ್ಲೆಯಾಗಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ 16,656 ಮಹಿಳಾ ಪ್ರಯಾಣಿಕರು ಶಕ್ತಿ ಪ್ರಯೋಜನ ಪಡೆದರು. ಗದಗದಲ್ಲಿ 13,630, ಬಾಗಲಕೋಟೆಯಲ್ಲಿ 11,687 ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದರು. ಇನ್ನು, ಕರಾವಳಿ ಜಿಲ್ಲೆ ಉತ್ತರ ಕನ್ನಡದಲ್ಲಿ ಕೇವಲ 8,497 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿ ಖುಷಿಪಟ್ಟಿದ್ದಾರೆ. ಸೋಮವಾರದಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಬಹಳಷ್ಟುಹೆಚ್ಚಳವಾಗಿದೆ. ಬಸ್‌ಗಳ ಸುಗಮ ಕಾರ್ಯಾಚರಣೆ ಮೇಲ್ವಿಚಾರಣೆಗಾಗಿ ಪ್ರಮುಖ ಬಸ್‌ ನಿಲ್ದಾಣಗಳಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್‌ ಎಸ್‌.ತಿಳಿಸಿದ್ದಾರೆ.

ಮಹಿಳೆಯರ ಉಚಿತ ಪ್ರಯಾಣವನ್ನು ಮತ್ತಷ್ಟು ಸುಲಭವಾಗಿಸುವ ದೃಷ್ಟಿಯಿಂದ ರಾಜ್ಯದ ವಿಳಾಸವಿರುವ ಭಾವಚಿತ್ರ ಸಹಿತ ಅಧಿಕೃತ ದಾಖಲೆಗಳ ಮೂಲ ಪ್ರತಿ, ನಕಲು, ಡಿಜಿಲಾಕರ್‌ (ಹಾರ್ಡ್‌ ಮತ್ತು ಸಾಫ್ಟ್‌ಪ್ರತಿ) ಮಾದರಿಯ ಗುರುತಿನ ದಾಖಲೆಗಳನ್ನು ಸಹ ಮಾನ್ಯ ಮಾಡಲು ನಿರ್ಧರಿಸಲಾಗಿದೆ. ಮಹಿಳೆಯರಿಗೆ ಪ್ರಯಾಣ ಉಚಿತ. ಆದರೆ ಟಿಕೆಟ್‌ ಪಡೆಯುವುದು ಮಾತ್ರ ಕಡ್ಡಾಯ ಅಂತ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್‌.ಎಸ್‌ ತಿಳಿಸಿದ್ದಾರೆ. 

PREV
Read more Articles on
click me!

Recommended Stories

ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ
ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!