ಸಾರಿಗೆ ಸೇವೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿ, ಅನಾವಶ್ಯಕ ವೆಚ್ಚಗಳಿಗೆ ಕಡಿವಾಣ ಹಾಕಲಾಗುವುದು. ರಾಜ್ಯದ ರಸ್ತೆ ಸಾರಿಗೆಯ ವಿವಿಧ ಸಂಸ್ಥೆ, ಬಿಎಂಟಿಸಿ ಸೇರಿ ಸರ್ಕಾರಿ ಸಾರಿಗೆ ಸೇವೆಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಕಾಣಲಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಳಗಾವಿ(ಡಿ.28): ಸಾರಿಗೆ ಸೇವೆಯನ್ನು ಲಾಭದಾಯಕವಾಗಿ ಮಾಡಲು ಕ್ರಮ ವಹಿಸಲಾಗುವುದು. ಖಾಸಗಿ ಸಾರಿಗೆಗೆ ಪೈಪೋಟಿ ನೀಡುವಂತೆ ಸಾರಿಗೆ ಸಂಸ್ಥೆಗಳಲ್ಲಿ ಸುಧಾರಣೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದರು. ಅವರು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಬೆಳಗಾವಿ ವಿಭಾಗ ಬೆಳಗಾವಿ ಇವರ ವತಿಯಿಂದ ಕೇಂದ್ರ ಬಸ್ ನಿಲ್ದಾಣ ಆವರಣದಲ್ಲಿ ಆಯೋಜಿಸಿರುವ ಬೆಳಗಾವಿ ನೂತನ ಕೇಂದ್ರ ಬಸ್ ನಿಲ್ದಾಣ ಉದ್ಘಾಟಿಸಿ ಮಾತನಾಡಿ, ಸಾರಿಗೆ ನಿಗಮಗಳ ಸುಧಾರಣೆಗಾಗಿ ನಿವೃತ್ತ ಅಧಿಕಾರಿ ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿ ವರದಿ ಕೊಟ್ಟಿದೆ. ವರದಿಯ ಅನುಷ್ಠಾನದ ಜವಾಬ್ದಾರಿಯನ್ನು ಸಹ ಅವರಿಗೆ ನೀಡಲಾಗಿದೆ. ಸಾರಿಗೆ ಸೇವೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿ, ಅನಾವಶ್ಯಕ ವೆಚ್ಚಗಳಿಗೆ ಕಡಿವಾಣ ಹಾಕಲಾಗುವುದು. ರಾಜ್ಯದ ರಸ್ತೆ ಸಾರಿಗೆಯ ವಿವಿಧ ಸಂಸ್ಥೆ, ಬಿಎಂಟಿಸಿ ಸೇರಿ ಸರ್ಕಾರಿ ಸಾರಿಗೆ ಸೇವೆಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಕಾಣಲಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಹೊಸ ಯೋಜನೆ ಘೊಷಣೆ ಮಾಡಲು ಚರ್ಚಿಸಲಾಗುವುದು. ವಾಯುವ್ಯ ಸಾರಿಗೆ ಬೆಳ್ಳಿಹಬ್ಬ ಆಚರಿಸಲಿದ್ದು, ಬರುವ ಬಜೆಟ್‌ನಲ್ಲಿ 500 ಬಸ್ ಖರೀದಿಗೆ ಹಾಗೂ 500 ಸಿಬ್ಬಂದಿ ನೇಮಕ ಮಾಡಲು ಅನುಮತಿ ನೀಡುವ ಬಗ್ಗೆ ಚರ್ಚಿಸಲಾಗುವುದು ಎಂದರು.
2 ವರ್ಷದಲ್ಲಿ 2000 ಕೋಟಿ ಆರ್ಥಿಕ ನೆರವು:
ಕರ್ನಾಟಕ ಸಾರಿಗೆ ಸೇವೆ ಒಳ್ಳೆಯ ಸೇವೆ ಕೊಡುತ್ತ ಬಂದಿದೆ. ಕೋವಿಡ್ ಸಂದರ್ಭದಲ್ಲಿ ಸಂಸ್ಥೆಗೆ ಆರ್ಥಿಕ ನಷ್ಟಉಂಟಾಗಿದೆ. ಸರ್ಕಾರ 2 ವರ್ಷದಲ್ಲಿ ಸಾರಿಗೆ ಸಂಸ್ಥೆಗೆ .2000 ಕೋಟಿಯ ಆರ್ಥಿಕ ನೆರವು ನೀಡಿದೆ. ಸಾರಿಗೆಯ ವಿವಿಧ ಸಂಸ್ಥೆಗಳಿಗೆ ಬಸ್ ಖರೀದಿಗೆ ಅನುದಾನ ಮತ್ತು ಸಾಲ ಪಡೆಯಲು ಅನುಮತಿ ನೀಡಲಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಗ್ರಾಮೀಣ ಪ್ರದೇಶದ ಜನರಿಗೆ, ಬಡ ಮಕ್ಕಳಿಗೆ ಸೇವೆ ಸಲ್ಲಿಸುತ್ತಿದೆ. ಕಾಲಕಾಲಕ್ಕೆ ಸರ್ಕಾರ ಈ ಸಂಸ್ಥೆಗಳಿಗೆ ಸಹಾಯ ಒದಗಿಸುತ್ತಿದೆ ಎಂದರು.
ಕೋವಿಡ್ ಸಿದ್ಧತೆ: ರಾಜ್ಯ ವ್ಯಾಪಿ ತಾಲೀಮು, ಸಚಿವ ಸುಧಾಕರ್
ನವೀಕೃತ ಬಸ್ ನಿಲ್ದಾಣಕ್ಕೆ 30 ಕೋಟಿ ವೆಚ್ಚ:
ಬೆಳಗಾವಿ ಬಸ್ ನಿಲ್ದಾಣ ಉತ್ತಮ ರೀತಿಯಲ್ಲಿ ನಿರ್ವಹಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರ ಕಾಲದಲ್ಲಿ ಅತ್ಯಂತ ಸುಧಾರಣೆಯಾಗುತ್ತಿದೆ. ಬೆಳಗಾವಿ ಬಸ್ ನಿಲ್ದಾಣ ಎಲ್ಲ ಕಡೆ ಸಂಪರ್ಕ ಕಲ್ಪಿಸುವ ಕೇಂದ್ರ. ಬೆಳಗಾವಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ನಗರ. ಸುತ್ತಲಿನ ನಗರಗಳ ಜೊತೆ ಇದಕ್ಕೆ ಸಂಪರ್ಕ ಕಲ್ಪಿಸಲಾಗಿದೆ. ಇಲ್ಲಿ ನವೀಕೃತ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಸುಮಾರು .30 ಕೊಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಬಸ್ ನಿಲ್ದಾಣದಿಂದ ಪ್ರಯಾಣಕರಿಗೆ ಅನುಕೂಲವಾಗಬೇಕು. ಇದರ ಸೇವೆ ಸದುಪಯೋಗವಾಗಲಿ ಎಂದರು.
ಬೆಂಗಳೂರಿನ ರೈಲು ನಿಲ್ದಾಣಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಬೈಯಪ್ಪನಹಳ್ಳಿ ರೈಲು ನಿಲ್ದಾಣ ಅತಿ ದೊಡ್ಡ ರೈಲು ನಿಲ್ದಾಣವಾಗಿದೆ. ವಂದೇ ಭಾರತ ಹೈಸ್ಪೀಡ್ ರೈಲನ್ನು ಪ್ರಾರಂಭಿಸಲಾಗಿದ್ದು, ಬೆಂಗಳೂರಿನಿಂದ-ಹುಬ್ಬಳ್ಳಿ ಅಲ್ಲಿಂದ ಬೆಳಗಾವಿಗೆ ಮಾರ್ಗ ವಿಸ್ತರಿಸುವ ಯೋಜನೆ ಇದೆ ಎಂದರು. ಸಮಾರಂಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಸಂಸದರಾದ ಮಂಗಳಾ ಅಂಗಡಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.