
ಬೆಂಗಳೂರು [ಸೆ.19]: ಐಎಂಎ ಸಂಸ್ಥೆ ಬಹುಕೋಟಿ ಹಗರಣದಲ್ಲಿ ಸಿಲುಕಿರುವ ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಬಿ.ಎಂ.ವಿಜಯಶಂಕರ್ ಅವರಿಗೆ ಮತ್ತಷ್ಟು ಸಂಕಷ್ಟಎದುರಾಗಿದ್ದು, ಎಸ್‌ಐಟಿ ಬಳಿಕ ಈಗ ಸಿಬಿಐ ತನಿಖೆ ಉರುಳು ಸುತ್ತಿಕೊಂಡಿದೆ.
ಜು.8ರಂದು ಐಎಂಎ ಸಂಸ್ಥೆ ಪರವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲು 1.5 ಕೋಟಿ ರು. ಲಂಚ ಸ್ವೀಕರಿಸಿದ ಆರೋಪದ ಮೇರೆಗೆ ಐಎಎಸ್ ಅಧಿಕಾರಿ ವಿಜಯಶಂಕರ್ ಅವರನ್ನು ಎಸ್‌ಐಟಿ ಬಂಧಿಸಿತ್ತು. ಆ ಸಂದರ್ಭದಲ್ಲಿ ವಿಜಯಶಂಕರ್ ಅವರಿಂದ 2.5 ಕೋಟಿ ರು. ನಗದು ಜಪ್ತಿಯಾಗಿತ್ತು. ಈ ಹೆಚ್ಚುವರಿ ಹಣದ ಬಗ್ಗೆ ಅನುಮಾನಗೊಂಡಿದ್ದ ಎಸ್‌ಐಟಿ, ಈ ಸಂಬಂಧ ವಿಜಯಶಂಕರ್ ವಿರುದ್ಧ ಪ್ರತ್ಯೇಕವಾಗಿ ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಶಿಫಾರಸು ಮಾಡಿತ್ತು. ಅದರಂತೆ ಐಎಎಸ್ ಅಧಿಕಾರಿ ವಿರುದ್ಧ ಎಸಿಬಿ ಸಹ ಎಫ್‌ಐಆರ್ ದಾಖಲಿಸಿತ್ತು ಎನ್ನಲಾಗಿದೆ.
ಹೀಗಿರುವಾಗ ಐಎಂಎ ವಂಚನೆ ಪ್ರಕರಣ ಸಿಬಿಐ ತನಿಖೆಗೆ ಸರ್ಕಾರ ಆದೇಶಿಸಿತು. ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಮಾಜಿ ಜಿಲ್ಲಾಧಿಕಾರಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಸಹ ಸಿಬಿಐಗೆ ವರ್ಗಾವಣೆ ಮಾಡಿದ್ದಾರೆ. ಈ ಪ್ರಕರಣ ಹಸ್ತಾಂತರ ವಿಚಾರವನ್ನು ಎಸಿಬಿ ಎಸ್ಪಿ ಜಿನೇಂದ್ರ ಖಣಗಾವಿ ಖಚಿತಪಡಿಸಿದ್ದಾರೆ.
ಈಗಾಗಲೇ ಐಎಂಎಯಿಂದ ಲಂಚ ಸ್ವೀಕರಿಸಿದ ಆರೋಪದ ಮೇರೆಗೆ ಬಿಡಿಎ ಕಾರ್ಯನಿರ್ವಾಹಕ ಎಂಜಿನಿಯರ್ ಕುಮಾರ್ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಹೀಗಾಗಿ ಎಸ್‌ಐಟಿ ಬಳಿಕ ಬೆಂಗಳೂರು ನಗರದ ಮಾಜಿ ಜಿಲ್ಲಾಧಿಕಾರಿಗೆ ಸಿಬಿಐ ತನಿಖೆ ನಡುಕ ಹುಟ್ಟಿಸಿದೆ ಎಂದು ಮೂಲಗಳು ಹೇಳಿವೆ.
ವಿಜಯಶಂಕರ್ ಈಗ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದು, ಕರ್ತವ್ಯದಿಂದ ಅಮಾನತುಗೊಂಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಐಎಂಎ ಪರ ವರದಿ ನೀಡಲು ಲಂಚ: ಐಎಂಎ ಸಂಸ್ಥೆ ಆರ್ಥಿಕ ವಹಿವಾಟಿನ ಬಗ್ಗೆ ಶಂಕಿಸಿದ್ದ ಭಾರತೀಯ ರಿಸವ್‌ರ್ ಬ್ಯಾಂಕ್‌ನ ಪ್ರಾದೇಶಿಕ ಆಯುಕ್ತರು, ಆ ಸಂಸ್ಥೆಯ ಹಣಕಾಸು ವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ 2018ರ ನವೆಂಬರ್‌ನಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಐಎಂಎ ಸಂಸ್ಥೆ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವ ಸಲುವಾಗಿ ಉಪ ವಿಭಾಗಾಧಿಕಾರಿ ನಾಗರಾಜ್ ಅವರನ್ನು ಸಕ್ಷಮ ಪ್ರಾಧಿಕಾರಿಯನ್ನಾಗಿ ನೇಮಿಸಿತ್ತು.
ಆಗ ಮನ್ಸೂರ್ ಪರವಾಗಿ ಆ ಸಂಸ್ಥೆಯ ನಿರ್ದೇಶಕ ನಿಜಾಮುದ್ದೀನ್, ಏಪ್ರಿಲ್‌ನಲ್ಲಿ ಜಿಲ್ಲಾಧಿಕಾರಿ ವಿಜಯಶಂಕರ್ ಅವರನ್ನು ಭೇಟಿಯಾಗಿ ತಮ್ಮ ಪರವಾಗಿ ವರದಿ ನೀಡಲು ಸಹಕರಿಸುವಂತೆ ಕೋರಿದ್ದ. ಮೊದಲು ಎರಡು ಕೋಟಿಗೆ ಬೇಡಿಕೆ ಇಟ್ಟಜಿಲ್ಲಾಧಿಕಾರಿ, ಕೊನೆಗೆ 1.5 ಕೋಟಿ ರು.ಗೆ ಒಪ್ಪಿದ್ದರು. ಅನಂತರ ಜಿಲ್ಲಾಧಿಕಾರಿ ವಿಜಯಶಂಕರ್ ಸೂಚನೆ ಮೇರೆಗೆ ನಿಜಾಮುದ್ದೀನ್, ಜೆ.ಸಿ.ರಸ್ತೆಯ ಜೈನ್ ಕಾಲೇಜು ಸಮೀಪದಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣಮೂರ್ತಿ ಕಚೇರಿಗೆ ತೆರಳಿ ಒಂದು ಹಂತದಲ್ಲೇ ಹಣ ತಲುಪಿಸಿದ್ದ ಎಂದು ಮೂಲಗಳು ಹೇಳಿವೆ.
ಈ ಬಗ್ಗೆ ತನಿಖೆ ನಡೆಸಿದ ಎಸ್‌ಐಟಿ ಅಧಿಕಾರಿಗಳು, ವಿಜಯಶಂಕರ್ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದರು. ಆ ವೇಳೆ ಅವರ ಬಳಿ 2.5 ಕೋಟಿ ರು. ನಗದು ಜಪ್ತಿಯಾಗಿತ್ತು. ಈ ಹಣವೇ ಈಗ ಮಾಜಿ ಜಿಲ್ಲಾಧಿಕಾರಿಗೆ ಕುತ್ತು ತಂದಿದೆ ಎನ್ನಲಾಗಿದೆ.
ಅಲ್ಲದೆ ಉಪ ವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಹಾಗೂ ಗ್ರಾಮಲೆಕ್ಕಿಗ ಮಂಜುನಾಥ್ ಸಹ ಮನ್ಸೂರ್‌ನಿಂದ 4.5 ಕೋಟಿ ರು. ಲಂಚ ಪಡೆದ ಆರೋಪವಿದ್ದು, ಅವರನ್ನು ಸಹ ಎಸ್‌ಐಟಿ ಬಂಧಿಸಿತ್ತು.