ಬೆಂಗಳೂರು: ಸಿಬ್ಬಂದಿಗೆ ಗರ್ಭಪಾತ ಆರೋಪಕ್ಕೆ ಆಸ್ಪತ್ರೆ ಸ್ಪಷ್ಟನೆ

By Kannadaprabha NewsFirst Published Sep 19, 2019, 8:16 AM IST
Highlights

ಬೆಂಗಳೂರಿನ ಪ್ರಖ್ಯಾತ ಆಸ್ಪತ್ರೆಯೊಂದು ರಜೆ ನೀಡಬೇಕು ಎನ್ನುವ ಕಾರಣಕ್ಕೆ ಸಿಬ್ಬಂದಿಗೆ ಕಾನೂನು ಬಾಹಿರವಾಗಿ ಗರ್ಭಪಾತ ಮಾಡಿಸಿದೆ ಎಂದು ಆರೋಪಿಸಲಾಗಿದೆ. ಆದರೆ, ಆಸ್ಪತ್ರೆ ಈ ಆರೋಪ ಹಾಗೂ ದೂರಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದೆ. 

ಬೆಂಗಳೂರು  [ಸೆ.19]: ರಜೆ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಪ್ರತಿಷ್ಠಿತ ‘ಆಸ್ಟರ್‌ ಸಿಎಮ್‌ಐ’ ಆಸ್ಪತ್ರೆ ತನ್ನ ಸಿಬ್ಬಂದಿಗೆ ಸ್ವತಃ ಮಾತ್ರೆಗಳನ್ನು ನೀಡಿ ‘ಗರ್ಭಪಾತ’ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ದೂರು ಸಹ ದಾಖಲಾಗಿದೆ. ಆದರೆ, ಸಿಬ್ಬಂದಿಯ ಈ ಗುರುತರ ಆರೋಪಕ್ಕೆ ಹಾಗೂ ಗರ್ಭಪಾತಕ್ಕೆ ವೈದ್ಯಕೀಯ ಕಾರಣವೇನೆಂದು ಹೇಳಿ ಆಸ್ಪತ್ರೆ ಸ್ಪಷ್ಟನೆ ನೀಡಿದೆ. 

ಹೆಬ್ಬಾಳದ ಆಸ್ಟರ್‌ ಆಸ್ಪತ್ರೆಯಲ್ಲಿ ಟೆಕ್ನಿಷಿಯನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಆಸ್ಪತ್ರೆಯ ವಿರುದ್ಧ ಕೊಡಿಗೇಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳಾದ ಆಸ್ಟರ್‌ ಆಸ್ಪತ್ರೆಯ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ (ಸಿಇಓ) ನಿತೀಶ್‌, ಸಿಓಓ ರಮೇಶ್‌, ಮಾನಸ ಸಂಪನ್ಮೂಲ ವಿಭಾಗದ ದುರ್ಗಾ ಪ್ರಸಾದ್‌, ಮಾರುತಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಯಲಹಂಕದ ಮಾರುತಿ ನಗರ ನಿವಾಸಿಯಾಗಿರುವ ನಾನು ಕೆಲವು ವರ್ಷಗಳಿಂದ ಬಳ್ಳಾರಿ ಮುಖ್ಯರಸ್ತೆಯಲ್ಲಿರುವ ‘ಆಸ್ಟರ್‌ ಸಿಎಮ್‌ಐ’ ಆಸ್ಪತ್ರೆಯಲ್ಲಿ ಟೆಕ್ನಿಷಿಯನ್‌ ಆಗಿ ಕೆಲಸ ಮಾಡುತ್ತಿದ್ದೇನೆ. ವಿವಾಹಿತೆಯಾದ ನಾನು ಗರ್ಭಿಣಿಯಾಗಿರುವ ವಿಷಯವನ್ನು ಆಸ್ಪತ್ರೆ ಆಡಳಿತ ವರ್ಗದವರ ಗಮನಕ್ಕೆ ತಂದಿದ್ದೆ. ಆಸ್ಪತ್ರೆಯ ಮಾನವ ಸಂಪನ್ಮೂಲ ವಿಭಾಗದ ದುರ್ಗ ಪ್ರಸಾದ್‌ ಅವರು ಕರೆದು ನೀನು ಗರ್ಭಪಾತ ಮಾಡಿಸಿಕೊ, ಇಲ್ಲವೆಂದರೆ ಕೆಲಸದಿಂದ ವಜಾ ಮಾಡುತ್ತೇವೆ ಎಂದು ಹೆದರಿಸಿ, ನಿತ್ಯ ಕಿರುಕುಳ ನೀಡುತ್ತಿದ್ದರು,' ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

'ರಜೆ ಮುಗಿಸಿ ಜು.8ರಂದು ಕೆಲಸಕ್ಕೆ ವಾಪಸ್‌ ಆಗಿದ್ದೆ. ನನಗೆ ಆಸ್ಪತ್ರೆಯ ಸಿಇಓ ನಿತೀಶ್‌ ಶೆಟ್ಟಿ, ಸಿಓಓ ರಮೇಶ್‌ ಹಾಗೂ ಎಚ್‌ಆರ್‌ಗಳಾದ ದುರ್ಗ ಪ್ರಸಾದ್‌ ಮತ್ತು ಮಾರುತಿ ಅವರು ಕೆಲಸ ಬಿಡುವಂತೆ ಒತ್ತಾಯಿಸಿದ್ದರು. ಇದಕ್ಕೆ ಒಪ್ಪಿ ನಾನು ರಾಜೀನಾಮೆ ಸಲ್ಲಿಸಿದ್ದೆ. ನಂತರ ನಿಯಮದಂತೆ ಆಸ್ಪತ್ರೆಯಲ್ಲಿ ಒಂದು ತಿಂಗಳು ಕೆಲಸ ಮಾಡಬೇಕಿದ್ದು, ಈ ಸಮಯದಲ್ಲಿ ಆರೋಪಿತರು ‘ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ನೀವು ಗರ್ಭಪಾತ ಮಾಡಿಸಿಕೊಂಡರೆ, ಇಲ್ಲಿಯೇ ಕೆಲಸ ಮಾಡಬಹುದು. ಇಲ್ಲವಾದರೆ ನಿಮ್ಮ ಸೇವಾ ದಾಖಲೆಯಲ್ಲಿ ನಿಮ್ಮ ಬಗ್ಗೆ ಕೆಟ್ಟದಾಗಿ ಬರೆದುಕೊಡುತ್ತೇವೆ. ಇದರಿಂದ ನಿಮಗೆ ಎಲ್ಲೂ ಕೆಲಸ ಸಿಗುವುದಿಲ್ಲ’ ಎಂದು ಹೆದರಿಸಿದ್ದರು, ಎಂದು ಆರೋಪಿಸಿದ್ದಾರೆ. 

ಜು.27ರಂದು ನನ್ನ ಪತಿಯ ಗಮನಕ್ಕೆ ತರದೇ ನನಗೆ ಇಷ್ಟವಿಲ್ಲದೆ, ಒತ್ತಾಯ ಪೂರ್ವಕವಾಗಿ ಮಾತ್ರೆಗಳನ್ನು ನೀಡಿ ಜು.29ರಂದು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಕಾನೂನು ಬಾಹಿರವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಮಹಿಳೆ ನೀಡಿರುವ ದೂರು ಸ್ವೀಕರಿಸಿ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕೊಡಿಗೇಹಳ್ಳಿ ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆ ಹೇಳುವುದೇನು?

ಆಸ್ಪತ್ರೆಯಲ್ಲಿ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆ ಕೆಲಸಕ್ಕೆ ನಿರಂತರವಾಗಿ ಗೈರಾಗಿದ್ದು, ಯಾವುದೇ ಕಾರಣ ನೀಡಿರಲಿಲ್ಲ. ಕಾರಣ ಕೇಳಿ ನೋಟಿಸ್ ಸಹ ನೀಡಲಾಗಿತ್ತು. ಅವರಿಂದ ಉತ್ತರ ಬಾರದ ಕಾರಣ ಜುಲೈ ಮೊದಲ ವಾರದಿಂದಲೇ ಅವರ ಗೈರನ್ನು ರಾಜೀನಾಮೆ ನೀಡಿದ್ದಾಗಿ ಪರಿಗಣಿಸಲಾಗಿದೆ. ಈ ಬಗ್ಗೆ ನಡೆದ ಪತ್ರ ವ್ಯವಹಾರದ ಬಗ್ಗೆಯೂ ಆಸ್ಪತ್ರೆ ಬಳಿ ಸೂಕ್ತ ದಾಖಲೆಗಳಿವೆ. 

ಕಿಬ್ಬೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ಈ ಸಿಬ್ಬಂದಿಯನ್ನು ಸೂಕ್ತವಾಗಿ ಪರೀಕ್ಷಿಸಿದ ನಂತರ, ಹೃದಯದ ಬಡಿತ ನಿಲ್ಲಿಸಿದ್ದ ಭ್ರೂಣ ಮೃತಪಟ್ಟಿರುವುದು ಗಮನಕ್ಕೆ ಬಂದಿತ್ತು. ಅಷ್ಟೇ ಅಲ್ಲ ಗರ್ಭಪಾತವೂ ಆಗಿತ್ತು. ಆಸ್ಪತ್ರೆ ಯಾವುದೇ ರೀತಿಯ ಗರ್ಭಪಾತ ಮಾಡಿರುವುದಿಲ್ಲ. ಈ ಪರಿಸ್ಥಿತಿಯನ್ನು ಬಳಸಿಕೊಂಡು ದೂರು ನೀಡಿರುವ ಆಸ್ಪತ್ರೆಯ ಮಾಜಿ ಸಿಬ್ಬಂದಿ ಹಾಗೂ ಅವರ ಪತಿ ಹಣ ಪೀಕಲು ಯತ್ನಿಸುತ್ತಿದ್ದಾರೆ, ಎಂದು ಪೊಲೀಸರಿಗೆ ನೀಡಿರುವ ಸ್ಪಷ್ಟನೆಯಲ್ಲಿ ಆಸ್ಪತ್ರೆ ತಿಳಿಸಿದೆ. 

ಅಷ್ಟೇ ಅಲ್ಲದೇ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಹಣಕ್ಕಾಗಿ ಪೀಡಿಸಿದ ದೂರುದಾರೆ ವಿರುದ್ಧವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು, ಆಸ್ಪತ್ರೆ ಆಗ್ರಹಿಸಿದೆ. 


click me!