ನಾನು ಡಿಸಿಎಂ ಆಗಲು ಬಯಸುವುದಿಲ್ಲ. ನಾನು ಡಿಸಿಎಂ ಹುದ್ದೆಯ ಆಕಾಂಕ್ಷಿಯೂ ಅಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗ [ಜ.09]: ರಾಜ್ಯದಲ್ಲಿ ಒಂದೆಡೆ ಉಪಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳ ಪಟ್ಟಿಬೆಳೆಯುತ್ತಾ ಸಾಗಿದ್ದರೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಮಾತ್ರ ನಾನು ಯಾವ ಕಾರಣಕ್ಕೂ ಉಪ ಮುಖ್ಯಮಂತ್ರಿ ಆಗುವುದಿಲ್ಲ. ನಾನು ಆ ಹುದ್ದೆ ಆಕಾಂಕ್ಷಿಯೂ ಅಲ್ಲ, ಆ ಸ್ಥಾನಕ್ಕೆ ಅಪೇಕ್ಷೆಯನ್ನೂ ಪಟ್ಟಿಲ್ಲ ಎಂದಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೂವರು ಉಪಮುಖ್ಯಮಂತ್ರಿಗಳಾಗಿದ್ದಾರೆ. ಇನ್ನೂ ಹಲವರು ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ. ಅಲ್ಲದೇ ಎಲ್ಲಾ ಡಿಸಿಎಂ ಹುದ್ದೆ ತೆಗೆಯುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ. ಇದರ ಬಗ್ಗೆ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಶಾಸಕರು ಹುಲಿಗಳಿದ್ದಂತೆ:
ಬಿಜೆಪಿ ಹಲವರು ಜೆಡಿಎಸ್‌ಗೆ ಬರಲಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಮೊದಲು ಜೆಡಿಎಸ್‌ನ ಶಾಸಕರನ್ನು ಉಳಿಸಿಕೊಳ್ಳಲಿ. ನಂತರ ಬಿಜೆಪಿ ಶಾಸಕರ ಬಗ್ಗೆ ಹೇಳಿಕೆ ನೀಡುವುದು ಒಳಿತು ಎಂದು ತಿರುಗೇಟು ನೀಡಿದ್ದಾರೆ.
JDS ಶಾಸಕರು ನಮ್ಮ ಕಡೆ ಬರದಂತೆ ನೋಡ್ಕೊಳ್ಳಿ: HDKಗೆ ಬಿಜೆಪಿ ನಾಯಕ ಕಿವಿ ಮಾತು..
ಬಿಜೆಪಿ ಶಾಸಕರು ಹುಲಿಗಳಿದ್ದಂತೆ. ಯಡಿಯೂರಪ್ಪ ನೇತೃತ್ವದಲ್ಲಿನ ರಾಜ್ಯ ಸರ್ಕಾರ ಅವಧಿ ಪೂರ್ಣಗೊಳಿಸುತ್ತದೆ. ನಮ್ಮ ಪಕ್ಷಕ್ಕೆ ಬೇರೆ ಪಕ್ಷದ ಮತ್ತಷ್ಟುಶಾಸಕರು ಬರುವುದು ಬೇಡ. ನಮ್ಮದು ಈಗಾಗಲೇ ಓವರ್ ಲೋಡ್ ಆಗಿದೆ. ಇನ್ನು ಕಾಂಗ್ರೆಸ್-ಜೆಡಿಎಸ್ ಪಕ್ಷದವರು ಬಿಜೆಪಿಗೆ ಬಂದರೆ ನಮ್ಮ ಪಕ್ಷದವರ ಕಥೆ ಏನು? ಆಮೇಲೆ ನಾವೆಲ್ಲಿಗೆ ಹೋಗಬೇಕು? ಎಂದು ವ್ಯಂಗ್ಯವಾಡಿದರು.