Yadgir: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಯಾದಗಿರಿ ಜಿಲ್ಲೆಯ ಅಕ್ರಮ

By Kannadaprabha News  |  First Published Sep 22, 2022, 10:30 AM IST

ಕೃಷ್ಣಭಾಗ್ಯ ಜಲ ನಿಗಮದ ಆಸ್ತಿ, ಖಾಸಗಿ ಹೆಸರಲ್ಲಿ ವರ್ಗಾವಣೆ ಪ್ರಕರಣ, ಕೊಡೇಕಲ್‌ ಸಮೀಪ ಕೆಬಿಜೆಎನ್‌ಎಲ್‌ನ 15 ಎಕರೆ ಭೂಮಿ ಖಾಸಗಿಯವರಿಗೆ ವರ್ಗಾವಣೆ ವಿಚಾರ, ಅಕ್ರಮವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಸರ್ಕಾರಕ್ಕೆ ಆಗ್ರಹ


ಅನಿಲ್‌ ಬಿರಾದಾರ್‌

ಯಾದಗಿರಿ(ಸೆ.22): ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತಕ್ಕೆ ಸೇರಿದ ಕೊಡೇಕಲ್‌ ಗ್ರಾಮದ ಸ.ನಂ.72ರ ಭೂಮಿಯನ್ನು ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿದ ಕುರಿತು ಕನ್ನಡಪ್ರಭ ಮಾಡಿದ್ದ ಸರಣಿ ಸುದ್ದಿಗಳು ಸಂಚಲನ ಮೂಡಿಸಿದ್ದವು. ಈ ಕುರಿತು ಬುಧವಾರ ವಿಧಾನಸಭೆಯಲ್ಲಿ ಕಲಾಪದಲ್ಲಿ ಚರ್ಚಿಸಲಾಗಿದ್ದು, ಪ್ರಕರಣಕ್ಕೆ ಮತ್ತಷ್ಟುಜೀವ ಬಂದಂತಾಗಿದೆ.

Tap to resize

Latest Videos

undefined

ಕೆಬಿಜೆಎನ್‌ಎಲ್‌ಗೆ ಸೇರಿದ ಭೂಮಿಯನ್ನು ಕೊಡೇಕಲ್‌ನ ಖಾಸಗಿ ವ್ಯಕ್ತಿಗೆ ವರ್ಗಾಯಿಸಿ ಅಕ್ರಮದಲ್ಲಿ ಭಾಗಿಯಾಗಿದ್ದ ಹುಣಸಗಿ ತಾಲೂಕಿನ ಕಂದಾಯ ನಿರೀಕ್ಷಕ ಹಾಗೂ ಕೊಡೇಕಲ್‌ ಉಪತಹಸೀಲ್ದಾರ್‌, ಕೊಡೇಕಲ್‌ ಹೋಬಳಿಯ ತಿದ್ದುಪಡಿ ವಿಷಯ ನಿರ್ವಾಹಕ ಭೂಮಿ ಆಪರೇಟರ್‌ ಸೇರಿದಂತೆ ಗ್ರಾಮ ಲೆಕ್ಕಾ​ಧಿಕಾರಿ ಕೊಡೇಕಲ್‌ ಮತ್ತು ಪಹಣಿ ತಿದ್ದುಪಡಿ ಶಾಖೆಯ ಶಿರಸ್ತೇದಾರ ಅವರನ್ನು ಜಿಲ್ಲಾ​ಧಿಕಾರಿಗಳ ಆದೇಶದಂತೆ ಅಮಾನತುಗೊಳಿಸಲಾಗಿತ್ತು. ಸದರಿ ಈ ವಿಷಯದ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸದನದ ಭಾವಿಯಲ್ಲಿ ಚರ್ಚಿಸುವುದರ ಜೊತೆಗೆ ತಪ್ಪಿತಸ್ಥರನ್ನು ಕೇವಲ ಅಮಾನತು ಮಾಡದೇ ಕ್ರಿಮಿನಲ್‌ ಮೊಕದ್ದಮೆಯನ್ನು ಅವರ ವಿರುದ್ಧ ದಾಖಲಿಸಲು ಸರ್ಕಾರಕ್ಕೆ ಒತ್ತಾಯಿಸಿದರು. ಇನ್ನು ಈ ಪ್ರಕರಣದಲ್ಲಿ ತಹಸೀಲ್ದಾರರ ವಿರುದ್ಧ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲದಿರುವುದು ಸರ್ಕಾರದ ಭ್ರಷ್ಟಾಚಾರ ಎದ್ದು ಕಾಣುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಯಾದಗಿರಿಯ ರೇಷ್ಮೆ ಬೆಳೆಗಾರರಿಗೆ ಶಾಕ್, ಗೂಡು ಕಟ್ಟಬೇಕಾದ ರೇಷ್ಮೆ ಹುಳುಗಳು ಮಣ್ಣುಪಾಲು!

ಸದರಿ ವಿಷಯದ ಕುರಿತು ಚರ್ಚಿಸಿದ ಅವರು ಹುಣಸಗಿ ತಾಲೂಕಿನ ಕೊಡೇಕಲ್‌ ಸ.ನಂ.72ರಲ್ಲಿ ಬರುವ ಕೆಬಿಜೆಎನ್‌ಎಲ್‌ ಜಮೀನನ್ನು ಯಾವುದೇ ದಾಖಲಾತಿಯಿಲ್ಲದೇ ಸಾಗುವಾಳಿ ಮಾಡುತ್ತಿರುವವರೆಂದು ದಾಖಲಾತಿಗಳನ್ನು ಸೃಷ್ಟಿಸಿ ಖಾಸಗಿ ವ್ಯಕ್ತಿಯ ಹೆಸರಿಗೆ ಬರೋಬ್ಬರಿ 15 ಎಕರೆ 10 ಗುಂಟೆ ಜಮೀನನ್ನು ವರ್ಗಾಯಿಸಿದ್ದಾರೆ. ಕೆಬಿಜೆಎನ್‌ಎಲ್‌ ಆಸ್ತಿಯನ್ನು ಬೇಕಾಬಿಟ್ಟಿಯಾಗಿ ವರ್ಗಾಯಿಸಿರುವುದು ನಿಗಮದ ಅಧಿ​ಕಾರಿಗಳು ಸಹ ಈ ಪ್ರಕರಣದಲ್ಲಿ ಶಾಮೀಲಾಗಿರುವ ಸಾಧ್ಯತೆ ಇರುವುದರಿಂದ ಸರಕಾರ ಕುಲಂಕುಷವಾಗಿ ಪರಿಶೀಲಿಸಿ ಕೇವಲ ಅವರುಗಳನ್ನು ಅಮಾನತುಗೊಳಿಸದೇ ಅವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲು ಸೂಚಿಸಿದರು.

ಹಿಂದುತ್ವ ಪ್ರತಿಪಾದಕರಿಗೆ ಮತ ಹಾಕಿ, ತಾಕತ್ತು ತೋರಿಸಿ: ಯತ್ನಾಳ್‌

ಸಿದ್ದರಾಮಯ್ಯನವರ ವಿಸ್ತೃತ ವರದಿಗೆ ತಕ್ಷಣವೇ ಸ್ಪಂದಿಸಿದ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರು ಘಟನೆಯ ಕುರಿತಾಗಿ ತಮಗೆ ವಿಷಯ ತಿಳಿದಿಲ್ಲ. ಆದ ಕಾರಣ ಶೀಘ್ರವೇ ಈ ಕುರಿತು ಯಾದಗಿರಿ ಜಿಲ್ಲಾ​ಧಿಕಾರಿಗಳಿಂದ ಸಮಗ್ರ ವರದಿಯನ್ನು ತರಿಸಿ, ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನೂ ಅಮಾನತುಗೊಳಿಸುವುದರ ಜೊತೆಗೆ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದರು.

ಘಟನೆಯ ವಿವರ:

ಹುಣಸಗಿ ತಾಲೂಕಿನ ಕೊಡೇಕಲ್‌ ಸ.ನಂ. 72ರಲ್ಲಿ ಬರುವ ಕೆಬಿಜೆಎನ್‌ಎಲ್‌ ಜಮೀನನ್ನು ಯಾವುದೇ ದಾಖಲಾತಿಯಿಲ್ಲದೇ ಕಂದಾಯ ಅ​ಧಿಕಾರಿಗಳು ಭೂ ಸಾಗುವಾಳಿ ಮಾಡುತ್ತಿರುವವರೆಂದು ದಾಖಲಾತಿಗಳನ್ನು ಸೃಷ್ಟಿಸಿ ಖಾಸಗಿ ವ್ಯಕ್ತಿಯ ಹೆಸರಿಗೆ ಬರೋಬ್ಬರಿ 15 ಎಕರೆ 10 ಗುಂಟೆ ಜಮೀನನ್ನು ವರ್ಗಾಯಿಸಿದ್ದರು. ಈ ಕುರಿತು ಅಕ್ರಮ ಸಾಭೀತಾಗಿದ್ದರಿಂದ ಪ್ರಕರಣದಲ್ಲಿ ಭಾಗಿಯಾಗಿದ್ದ ಅಧಿ​ಕಾರಿಗಳನ್ನು ಅಮಾನತುಗೊಳಿಸಲಾಗಿತ್ತು.
 

click me!