ಸೂರತ್ -ಚೆನ್ನೈ ಎಕ್ಸಪ್ರೆಸ್ ವೇ ಭೂಸ್ವಾಧೀನ ವಿಚಾರ-ಪರಿಷತ್ ಸದಸ್ಯ ಅರಳಿ ಪ್ರಶ್ನೆಗೆ ಸಚಿವ ಪಾಟೀಲ್ ಅಸ್ಪಷ್ಟ ಉತ್ತರ
ಯಾದಗಿರಿ(ಸೆ.22): ಕೇಂದ್ರ ಸರ್ಕಾರದ ಭಾರತಮಾಲಾ ಯೋಜನೆಯ, ‘ಸೂರತ್-ಚೆನ್ನೈ ಎಕ್ಸಪ್ರೆಸ್ ವೇ’ ಅರು ಪಥಗಳ ರಾಷ್ಟ್ರೀಯ ಹೆದ್ದಾರಿ (150 ಸಿ) ನಿರ್ಮಾಣಕ್ಕಾಗಿನ ಭೂಸ್ವಾಧೀನ ವೇಳೆ ಯಾದಗಿರಿ ಜಿಲ್ಲೆಯ ರೈತರಿಗಾಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪರಿಷತ್ ಸದಸ್ಯ ಅರವಿಂದ ಅರಳಿ ಅವರ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್ ಅವರು ನೀಡಿದ ಉತ್ತರ ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎನ್ನುವಂತಿದೆ.
ವಿಧಾನಸಭೆಯಿಂದ ಚುನಾಯಿತರಾದ ಪರಿಷತ್ ಸದಸ್ಯ, ಬೀದರಿನ ಅರವಿಂದ ಅರಳಿ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ (ಸಂಖ್ಯೆ 985) ಬುಧವಾರ ಸಚಿವ ಸಿ. ಸಿ. ಪಾಟೀಲ್ ಅವರು ನೀಡಿರುವ ಉತ್ತರಗಳು ಅಚ್ಚರಿ ಮೂಡಿಸಿವೆ.
ಭೂಸ್ವಾಧೀನ ವಿಚಾರವಾಗಿ ರೈತರಿಗೆ ಮಹಾಮೋಸದ ಪ್ರಕರಣವೊಂದು ಈ ಭಾಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿ, ನೂರಾರು ಸಂಖ್ಯೆಯಲ್ಲಿ ಸಂತ್ರಸ್ತ ರೈತರು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ನೀರಾವರಿ ಜಮೀನುಗಳನ್ನು ‘ಖುಷ್ಕಿ’ ಎಂದು ಪರಿಗಣಿಸಿ ಪರಿಹಾರ ಅಲ್ಪಮೊತ್ತದ ಪರಿಹಾರಕ್ಕೆ ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಂತ್ರಸ್ತರು, ನ್ಯಾಯಯುತ ಬೇಡಿಕೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ಹೀಗಿರುವಾಗ, ಸದನದಲ್ಲಿ ಗಂಭೀರವಾದ ವಿಷಯದಲ್ಲಿ ತನಗೇನೂ ಗೊತ್ತಿಲ್ಲ ಎಂದು ಉತ್ತರಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
undefined
ಸೂರತ್-ಚೆನ್ನೈ ಎಕ್ಸಪ್ರೆಸ್ ವೇ: ನ್ಯಾಯಯುತ ಪರಿಹಾರಕ್ಕೆ ರೈತರ ಆಗ್ರಹ
* ಪರಿಷತ್ ಸದಸ್ಯ ಅರಳಿಯವರು ಕೇಳಿದ್ದು :
ಯಾದಗಿರಿ ಜಿಲ್ಲೆಯಲ್ಲಿ ಹಾದು ಹೋಗುತ್ತಿರುವ ಭಾರತಮಾಲಾ ರಾಷ್ಟ್ರೀಯ ಹೆದ್ದಾರಿಯಿಂದ ರೈತರಿಗೆ ವಂಚನೆಯಾಗುತ್ತಿರುವುದು ಸೇರಿದಂತೆ, ಹೆದ್ದಾರಿಗಾಗಿ ರೈತರ ಭೂಮಿ ಅಕ್ರಮಿಸಿ ಅವರಿಗೆ ನೀರಾವರಿ ಭೂಮಿ ಇದ್ದರೂ ಖುಷ್ಕಿ ಎಂದು ಪರಿಹಾರ ನೀಡುತ್ತಿರುವ ಘೋಷಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ಒಂದು ವೇಳೆ ಇದು ಬಂದಿದ್ದಲ್ಲಿ ರೈತರಿಗಾಗುತ್ತಿರುವ ಅನ್ಯಾಯ ಸರಿಪಡಿಸಲು ಸರ್ಕಾರ ತೆಗೆದುಕೊಂಡ ಕ್ರಮ ಹಾಗೂ ಕೆಬಿಜೆಎನ್ನೆಲ್ ವ್ಯಾಪ್ತಿಯ ನೀರಾವರಿ ಭೂಮಿಗಳನ್ನೂ ಖುಷ್ಕಿ ಎಂದು ಪರಿಗಣಿಸಿ ರೈತರಿಗೆ ಪರಿಹಾರ ನೀಡುತ್ತಿರುವುದು ವಂಚನೆಯಲ್ಲವೇ ಎಂದು ಪ್ರಶ್ನಿಸಿರುವ ಪರಿಷತ್ ಸದಸ್ಯ ಅರಳಿ, ಇದನ್ನು ಸರಿಪಡಿಸೋದು ಯಾವಾಗ ಎಂದು ಪ್ರಶ್ನಿಸಿದ್ದಾರೆ.
* ಸರ್ಕಾರದ ಉತ್ತರ :
ಇದಕ್ಕೆ ಉತ್ತರಿಸಿರುವ ಸಚಿವರು, ಮಹಾರಾಷ್ಟ್ರದ ಅಕ್ಕಲಕೋಟೆ ಹಾಗೂ ಕರ್ನಾಟಕ-ತೆಲಂಗಾಣದ ಮೂಲಕ ಹಾಯ್ದ ಹೆದ್ದಾರಿ ಯೋಜನೆಯ ಬಗ್ಗೆ ಸಂಕ್ಷಿಪ್ತ ವಿವರಿಸಿ, ಭೂಸ್ವಾಧೀನದ ದಾಖಲೆಗಳನ್ನು ಕಂದಾಯ ಹಾಗೂ ನೀರಾವರಿ ಇಲಾಖೆಯಿಂದ ಪಡೆದಿದ್ದೇವೆ. ಇದರಲ್ಲಿ ಯಾವುದೇ ತಾರತಮ್ಯ ಇಲ್ಲ, ಫಲಾನುಭವಿಗಳು ವಂಚಿತರಾಗಿಲ್ಲ ಎಂದು ತಿಳಿಸಿದ್ದಾರೆ.
* ಸರ್ಕಾರಕ್ಕೇ ಅಸ್ಪಷ್ಟಮಾಹಿತಿ ?
ಈ ಕುರಿತು ಸರ್ಕಾರ ಸದನದಲ್ಲಿ ಉತ್ತರಿಸುವಾಗ, ವಾಸ್ತವ ಚಿತ್ರಣದ ಮಾಹಿತಿ ನೀಡಬೇಕಿದ್ದ ಅಧಿಕಾರಿಗಳು ಹಾಗೂ ಇಲಾಖೆ ಸಚಿವರಿಗೇ ದಿಕ್ಕು ತಪ್ಪಿಸಲು ಯತ್ನಿಸಿತೇ ಎಂಬ ಅನುಮಾನಗಳು ಮೂಡಿವೆ. ಕಳೆದೆರಡು ವರ್ಷಗಳಿಂದ ರೈತರ ಅಲೆದಾಟ ಹಾಗೂ ಇತ್ತೀಚಿನ ದಿನಗಳಲ್ಲಿ ರೈತರ ಈ ಬಗ್ಗೆ ಹೋರಾಟಗಳು ಪ್ರತಿಧ್ವನಿಸಿದ್ದವು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸಹ ಈ ಬಗ್ಗೆ ಕೆಡಿಪಿ ಸಭೆಯಲ್ಲಿ ಚರ್ಚಿಸಿ, ಗೊಂದಲ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಯಾದಗಿರಿ: ಹೆದ್ದಾರಿ ಪರಿಹಾರ, ಪ್ರಭಾವಿಗಳಿಗೆ ಬೆಣ್ಣೆ, ಬಡವರಿಗೆ ಸುಣ್ಣ!
ಆದರೆ, ಅಧಿವೇಶನದ ವೇಳೆ ಇಲ್ಲಿಂದ ಮಾಹಿತಿ ನೀಡುವಾಗ, ಸಚಿವರಿಗೆ ಇಲ್ಲಿನ ಸ್ಥಿತಿಗತಿಯ ಬಗ್ಗೆ ಸಂಬಂಧಿತ ಅಧಿಕಾರಿಗಳು ಮಾಹಿತಿ ನೀಡದೆ, ಎಲ್ಲವೂ ಸರಿಯಿದೆ ಎನ್ನುವಂತೆ ಬಿಂಬಿಸಿದರೇ ಅನ್ನೋ ಪ್ರಶ್ನೆಗಳ ಜೊತೆಗೆ ಇದು ಸರ್ಕಾರಕ್ಕೆ ಆಗೂ ರೈತರಿಗೆ ತಪ್ಪು ಮಾಹಿತಿ ನೀಡಿದಂತಾಗುವುದಿಲ್ಲವೇ ಎಂಬುದಾಗಿ ರೈತರಲ್ಲಿ ಕೇಳಿಬರುತ್ತಿದೆ.
* ರೈತರಿಗೆ ಮಹಾಮೋಸ : ಕನ್ನಡಪ್ರಭ ವರದಿಗಳು
ಈ ಭೂಸ್ವಾಧೀನ ವಿಚಾರದಲ್ಲಿ ರೈತರಿಗಾಗುತ್ತಿರುವ ಇಂತಹ ಗೊಂದಲದ ಬಗ್ಗೆ ಕನ್ನಡಪ್ರಭ ಜುಲೈ 30 ರಂದು ವಿಶೇಷ ವರದಿ ಪ್ರಕಟಿಸಿ, ಗಮನ ಸೆಳೆದಿತ್ತು. ನಂತರದಲ್ಲಿ ಸರಣಿ ವರದಿಗಳು ಇಲ್ಲಿ ಸಂಚಲನ ಮೂಡಿಸಿ, ರೈತರಿಗಾಗುತ್ತಿರುವ ಮಹಾಮೋಸದ ಬಗ್ಗೆ ಬಯಲಿಗೆಳೆದಿತ್ತು. ಭೂಮಿ ಪರಿಹಾರ ನೀಡುವ ಮೊದಲೇ, ದಾಖಲೆಗಳ ಪರಿಶೀಲನೆಗೂ ಮುನ್ನವೇ ಪಹಣಿಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಕ್ಕು ಮಂಡಿಸಿರುವ ಬಗ್ಗೆ ಸುದ್ದಿಗಳು ಚರ್ಚೆಗೆ ಗ್ರಾಸವಾಗಿದ್ದವು.