* ಮರಳು ಗಣಿಗಾರಿಕೆ ಗೊತ್ತಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು
* ತಹಸೀಲ್ದಾರ್ ಭೇಟಿ ನೀಡಿ ಕ್ರಮ ಕೈಗೊಳ್ಳಲು ಸೂಚಿಸಿದರೂ ಕ್ಯಾರೆ ಎನ್ನದ ಅಧಿಕಾರಿಗಳು
* ಹಗಲು- ರಾತ್ರಿ ಎನ್ನದೆ ಮರಳು ದೋಚುತ್ತಿರುವ ಅಕ್ರಮ ಮರಳು ಲೂಟಿಕೋರರು
ಅಶೋಕ ಸೊರಟೂರ
ಲಕ್ಷ್ಮೇಶ್ವರ(ಜು.29): ಸಮೀಪದ ಪು. ಬಡ್ನಿ ಗಾಮದ ಪಕ್ಕದಲ್ಲಿ ಹರಿಯುವ ದೊಡ್ಡ ಹಳ್ಳಕ್ಕೆ ಹೊಂದಿಕೊಂಡಿರುವ ಹಿಂದೂ ರುದ್ರ ಭೂಮಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆಯು ಜೋರಾಗಿ ನಡೆಯುತ್ತಿದೆ. ಮರಳು ಕಳ್ಳರು ಸ್ಮಶಾನವನ್ನೂ ಬಿಡುತ್ತಿಲ್ಲ.
ಸಮೀಪದ ಪು. ಬಡ್ನಿ ಗ್ರಾಮದ ರಿ.ಸಂ. 71ರಲ್ಲಿಯ 6.02 ಎಕರೆ ಜಮೀನು ಸಾರ್ವಜನಿಕ ಸ್ಮಶಾನಕ್ಕೆ ಬಿಟ್ಟಿದ್ದು ಇಲ್ಲಿ ಎಗ್ಗಿಲ್ಲದೇ ಸಾಗಿದೆ. ಗ್ರಾಮದ ಪಕ್ಕದಲ್ಲಿ ಹರಿಯುವ ದೊಡ್ಡ ಹಳ್ಳವು ಯಥೇಚ್ಚವಾಗಿ ಮರಳನ್ನು ಸ್ಮಶಾನದಲ್ಲಿ ಬಿಟ್ಟು ಮುಂದೆ ಸಾಗುವುದು. ಹೀಗಾಗಿ ಸ್ಮಶಾನದಲ್ಲಿ ಶವಗಳನ್ನು ಹೂಳುವ ಬದಲು ಅಕ್ರಮ ಮರಳು ಎತ್ತುವ ಕಾಯಕ ನಿರಂತವಾಗಿ ಸಾಗುತ್ತಿದೆ.
ಕಳೆದ 20 ದಿನಗಳ ಹಿಂದೆ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರು ಕ್ಕೆ ಭೇಟಿ ನೀಡಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು ಅದನ್ನು ತಡೆಯುವ ನಿಟ್ಟಿನಲ್ಲಿ ತಾಲೂಕಿನ ಕಂದಾಯ, ಗ್ರಾಪಂ ಆಡಳಿತ ಮಂಡಳಿ, ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಯ ಅಧಿಖೆಗಾರಿಗಳ ಟಾಸ್ಕ್ ಪೋರ್ಸ್ ರಚಿಸಲಾಗುವುದು ಎಂದು ತಿಳಿಸಿದ್ದರು. ಆದರೆ, ಈ ಟಾಸ್ಕ್ ಪೋರ್ಸ್ ಎಷ್ಟುದಿನ ಕಾರ್ಯ ನಿರ್ವಹಿಸಿದಿಯೋ ದೇವರೆ ಬಲ್ಲ. ಅಕ್ರಮ ಮರಳು ಗಣಿಗಾರಿಕೆ ಮಾತ್ರ ಇಂದಿಗೂ ನಿರಾತಂಕವಾಗಿದೆ.
ಅಕ್ರಮ ಗಣಿಗಾರಿಕೆ ಹಿಂದೆ ರಾಜಕಾರಣಿಗಳ ಕೈವಾಡ..!
ಅಕ್ರಮ ಮರಳು ಲೂಟಿಕೋರರು ಮತ್ತೆ ಕಾರ್ಯ ಪ್ರವೃತ್ತರಾಗಿ ಹಗಲು- ರಾತ್ರಿ ಎನ್ನದೆ ಮರಳು ದೋಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸ್ಮಶಾನ ಭೂಮಿಯಲ್ಲಿನ ಮರಳನ್ನು ಎತ್ತುವುದನ್ನು ತಡೆಯಲು ಹೋದ ಪಂಚಾಯಿತಿ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಕೂಡಾ ನಡೆದಿದೆ. ಹೀಗಾಗಿ ಪಂಚಾಯಿತಿ ಸಿಬ್ಬಂದಿಗಳು ಅಕ್ರಮ ಮರಳು ಗಣಿಗಾರಿಕೆ ತಡೆಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಪು. ಬಡ್ನಿ ಗ್ರಾಮದ ಸ್ಮಶಾನ ಭೂಮಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಗೊತ್ತಿದ್ದರೂ ಸಹ ಕಣ್ಮುಚ್ಚಿ ಕುಳಿತಿದ್ದಾರೆ. ಅಕ್ರಮ ಮರಳು ಗಣಿಗಾರಿಕೆ ನಿಲ್ಲಸಲು ಆಗದಿರುವ ಅಧಿಕಾರಿಗಳ ಮೇಲೆ ಹಿರಿಯ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಪಂ ಮಾಜಿ ಸದಸ್ಯ ಸುಭಾಷ ಬಟಗುರ್ಕಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳೊಂದಿಗೆ ಈಚೆಗೆ ನಡೆದ ಸಭೆಯಲ್ಲಿ ಗ್ರಾಪಂನಲ್ಲಿ ಈ ಕುರಿತು ಠರಾವು ಪಾಸ್ ಮಾಡಿ ಸೂಕ್ತ ಬಂದೋಬಸ್ತ್ ಮಾಡುವಂತೆ ಸೂಚನೆ ನೀಡಿದ್ದಾರೆ. ಅಕ್ರಮ ಮರಳುಗಾರಿಕೆ ತಡೆಗೆ ಬೇಕಾದ ಕ್ರಮ ಕೈಗೊಳ್ಳುವಂತೆ ತಾಪಂ ಇಒಗೂ ಸೂಚನೆ ನೀಡಲಾಗಿದೆ ಎಂದು ಲಕ್ಷ್ಮೇಶ್ವರ ತಹಸೀಲ್ದಾರ್ ಭ್ರಮರಾಂಬ ಗುಪ್ಪಿಶೆಟ್ಟಿ ತಿಳಿಸಿದ್ದಾರೆ.