ಅಕ್ರಮ ಗಣಿಗಾರಿಕೆ: ಡಾ. ರಾಜ್ ತಂಗಿ ನಾಗಮ್ಮ ಆರೋಪ

By Kannadaprabha NewsFirst Published Sep 24, 2019, 1:17 PM IST
Highlights

ಡಾ.ರಾಜ್ ಕುಮಾರ್, ಪಾರ್ವತಮ್ಮ ರಾಜಕುಮಾರ್ ಹಾಗೂ ಕುಟುಂಬದ ಎಲ್ಲ ಸದಸ್ಯರು ದೀಕ್ಷೆ ಪಡೆದು ಪೂಜೆ ಸಲ್ಲಿಸುತ್ತಿದ್ದ ಮಠಕ್ಕೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಡಾ.ರಾಜ್ ಸಹೋದರಿ ನಾಗಮ್ಮ ಅವರು ಆರೋಪಿಸಿದ್ದಾರೆ.

ಚಾಮರಾಜನಗರ(ಸೆ.24): ವರನಟ ಡಾ. ರಾಜ್‌ಕುಮಾರ್ ಕುಟುಂಬದ 3 ತಲೆಮಾರಿಗೆ ದೀಕ್ಷೆ ನೀಡಿರುವ ಬಿಳಿಗುಡ್ಡೆ ಮಠಕ್ಕೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಡಾ.ರಾಜ್ ಸಹೋದರಿ ನಾಗಮ್ಮ ಅವರು ಆರೋಪಿಸಿದ್ದಾರೆ.

ಯಳಂದೂರು ತಾಳೂಕಿನ ಗುಂಬಳ್ಳಿ- ಯರಗಂಬಳ್ಳಿ ಮಾರ್ಗ ಮಧ್ಯೆ ಇರುವ 200 ವರ್ಷ ಇತಿಹಾಸ ವಿರುವ ಬಿಳಿಗುಡ್ಡೆ ಮಠದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಠದ ಮುಂಭಾಗ ಕೆರೆಯ ಪಕ್ಕದ ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆ ಅನುಮತಿ ಪಡೆದು ಪಟ್ಟಾ ಭೂಮಿ ಯಲ್ಲದೆ ಮಠದ ಸರ್ವೆ ನಂ.730ರ 1.10 ಎಕರೆ ಜಾಗವನ್ನು ಆಕ್ರಮಿಸಿಕೊಂಡು ಕರಿಕಲ್ಲು ಗಣಿಗಾರಿಕೆ  ನಡೆಸಲಾಗುತ್ತಿದೆ. ಪುಣ್ಯಕ್ಷೇತ್ರ ದಲ್ಲಿ ದುಷ್ಕರ್ಮಿಗಳು ಅಕ್ರಮ ಗಣಿಗಾರಿಕೆ ನಡೆಸಿ ಮಠದ ಆಸ್ತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಬೇಕಾದ್ರೆ ಆಧಾರ್ ಕಡ್ಡಾಯ!

ಸಿಡಿ ಮದ್ದುಗಳಿಂದ ಮಂಟಪಕ್ಕೆ ಹಾನಿ:

ಶ್ರೀ ಮಠದ ಸಂಸ್ಥಾಪಕರಾದ ಪೇರ್ ಸಿಂಗ್ ಸ್ವಾಮೀಜಿಯ ವಂಶಸ್ಥರು ಧ್ಯಾನ ಮಾಡುವ ಮೂರು ಮಂಟಪಗಳಲ್ಲಿ ಎರಡು ಮಂಟಪಗಳು ಗಣಿಗಾರಿಕೆಯ ಸಿಡಿ ಮದ್ದುಗಳಿಂದಾಗಿ ಮುರಿದು ಬಿದ್ದಿದೆ. ಇದೇ ರೀತಿ ಮಠದ ಆಸ್ತಿಯನ್ನು 1992ರಲ್ಲಿ ಕಬಳಿಸಿದಾಗ ಕಾನೂನು ಹೋರಾಟದ ಮೂಲಕ ಅಕ್ರಮ ಗಣಿಗಾರಿಕೆ ತಡೆ ಹಿಡಿಯಲಾಗಿತ್ತು. ಈಗಾಗಲೇ ಅನೇಕ ಬಾರಿ ಜಿಲ್ಲಾಧಿಕಾರಿಗಳಿಗೆ ಮಠದ ಭಕ್ತರು ಹಾಗೂ ನಮ್ಮ ಕುಟುಂಬದ ವತಿಯಿಂದ ಮನವಿ ಸಲ್ಲಿಸಿದರೂ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ

ರಾಜ್ ಕುಮಾರ್ ಅವರೂ ದೀಕ್ಷೆ ಪಡೆದು ಪೂಜೆ ಮಾಡ್ತಿದ್ರು:

ಪೇರ್‌ಸಿಂಗ್ ಎಂಬವರು ಬಿಳಿಗುಡ್ಡೆ ಸ್ಥಳಕ್ಕೆ ಬಂದು ಜೀವಂತ ಐಕ್ಯವಾಗಿದ್ದಾರೆ. ಇಲ್ಲಿನ ದೇಗುಲದಲ್ಲಿ ಡಾ.ರಾಜ್ ಅವರ ತಾಯಿ ದೀಕ್ಷೆ ಪಡೆದಿದ್ದರು. ಬಳಿಕ, ಡಾ.ರಾಜ್ ಕುಮಾರ್, ಪಾರ್ವತಮ್ಮ ರಾಜಕುಮಾರ್ ಹಾಗೂ ಕುಟುಂಬದ ಎಲ್ಲ ಸದಸ್ಯರು ದೀಕ್ಷೆ ಪಡೆದು ವಿಶೇಷ ದಿನಗಳಲ್ಲಿ ಮಠದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ರಾಜ್ಯ ವ್ಯಾಪ್ತಿ ಸೇರಿದಂತೆ ಅನ್ಯ ರಾಜ್ಯಗಳಲ್ಲೂ ಭಕ್ತರು ಇದ್ದಾರೆ ಎಂದರು. ಅಮಾವಾಸ್ಯೆ, ಹುಣ್ಣಿಮೆ ದಿನಗಳಲ್ಲಿ ಇಲ್ಲಿ ವಿಶೇಷ ಪೂಜೆ ಭಜನೆ ಕಾರ್ಯಗಳು ನಡೆಯುತ್ತಿದೆ.

ದೂರು ನೀರಿದರೂ ಯಾವುದೇ ಕ್ರಮವಿಲ್ಲ:

ಮಠದ ಸ್ವಾಮೀಜಿಗಳು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಹಲವಾರು ಬಾರಿ ಜಿಲ್ಲಾಡಳಿತ ಸೇರಿದಂತೆ ರಾಜ್ಯ ಮುಖ್ಯಮಂತ್ರಿಗಳಿಗೆ ದೂರು ನೀಡಿದರೂ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಅಲ್ಲದೇ ಅಕ್ರಮ ಗಣಿಗಾರಿಕೆ ನಡೆಸಿ ಮಾಲೀಕರಿಂದ ಜೀವ ಬೆದರಿಕೆ ಹಾಕುತ್ತಿದ್ದಾರೆ. ಕೆಲವರು ರಾತ್ರಿ ವೇಳೆಯಲ್ಲಿ ಗುಂಪು ಕಟ್ಟಿ ಬಂದು ಮಠ ಬಿಟ್ಟು ಹೋಗುವಂತೆ ಬೆದರಿಕೆ ಹಾಕುವುದರ ಜತೆಯಲ್ಲಿ ಕುಟುಂಬಕ್ಕೆ ಅನಗತ್ಯವಾಗಿ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

click me!