
ಮಂಡ್ಯ: ಮಳವಳ್ಳಿ ತಾಲೂಕಿನ ಕಾವೇರಿ ವನ್ಯಜೀವಿ ವಲಯಕ್ಕೆ ಸೇರಿರುವ ಗುಂಡಾಪುರ ಗ್ರಾಮದಲ್ಲಿ ನಿಯಮಾವಳಿ ಉಲ್ಲಂಘಿಸಿ ಅಕ್ರಮವಾಗಿ ವಸತಿ ಬಡಾವಣೆ ನಿರ್ಮಿಸಲಾಗುತ್ತಿರುವುದು ಇದೀಗ ಗಂಭೀರ ಚರ್ಚೆಗೆ ಕಾರಣವಾಗಿದೆ. ಪರಿಸರ ಸೂಕ್ಷ್ಮ ವಲಯದಲ್ಲೇ ಮಾನವ ವಸತಿ ವಿಸ್ತರಣೆಗೆ ಅವಕಾಶ ನೀಡಿರುವ ಪರಿಣಾಮವಾಗಿ, ಇತ್ತೀಚೆಗೆ ಈ ಪ್ರದೇಶಕ್ಕೆ ಆನೆಗಳು ಲಗ್ಗೆ ಇಟ್ಟಿದ್ದು, ಮಾನವ–ವನ್ಯಜೀವಿ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಆತಂಕವನ್ನು ಪರಿಸರ ಪ್ರೇಮಿಗಳು ವ್ಯಕ್ತಪಡಿಸಿದ್ದಾರೆ.
ಗುಂಡಾಪುರ ಗ್ರಾಮದ ಸರ್ವೇ ನಂ.105/2ರಲ್ಲಿ ಇರುವ 1 ಎಕರೆ 3 ಗುಂಟೆ ವಿಸ್ತೀರ್ಣದ ಕೃಷಿ ಜಮೀನನ್ನು ಸುಮಾರು ಎರಡು ವರ್ಷಗಳ ಹಿಂದೆ ವಸತಿ ಬಡಾವಣೆ ನಿರ್ಮಾಣಕ್ಕೆ ಭೂ ಪರಿವರ್ತನೆ ಮಾಡಲಾಗಿದೆ. ಆದರೆ, ಪರಿಸರ ಸೂಕ್ಷ್ಮ ವಲಯದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಗೆ ಮುನ್ನ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯುವ ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿಯಿಂದ ಅನುಮೋದನೆ ಪಡೆಯಬೇಕಾದ ಕಡ್ಡಾಯ ನಿಯಮವಿದೆ. ಈ ನಿಯಮವನ್ನು ಉಲ್ಲಂಘಿಸಿ, ಅಂದಿನ ಜಿಲ್ಲಾಧಿಕಾರಿ ಕೆ.ಎನ್. ಗೋಪಾಲಕೃಷ್ಣ ಅವರು ಭೂ ಪರಿವರ್ತನೆಗೆ ಆದೇಶ ನೀಡಿರುವುದು ದಾಖಲೆಗಳಿಂದ ಬಹಿರಂಗವಾಗಿದೆ.
ಇದಲ್ಲದೆ, ಮಂಡ್ಯ ನಗರ ಹಾಗೂ ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕರು ಕೂಡ ಉದ್ದೇಶಿತ ಜಾಗ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿರುವುದನ್ನು ಪರಿಗಣಿಸದೆ, ವಸತಿ ಬಡಾವಣೆ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಿರುವುದು ಮತ್ತೊಂದು ಗಂಭೀರ ಲೋಪವಾಗಿ ಹೊರಹೊಮ್ಮಿದೆ.
ಈ ಅಕ್ರಮಗಳ ವಿರುದ್ಧ ಹಲಗೂರು ಗ್ರಾಮ ಪಂಚಾಯತ್ ಸದಸ್ಯ ಕೆ. ಸುರೇಂದ್ರ ಅವರು ವನ್ಯಜೀವಿ ವಿಭಾಗದ ವ್ಯಾಪ್ತಿಗೆ ಸೇರಿದ ಗುಂಡಾಪುರ ಗ್ರಾಮದಲ್ಲಿ ವಸತಿ ಬಡಾವಣೆಗೆ ಭೂ ಪರಿವರ್ತನೆ ಮಾಡಿರುವ ಆದೇಶವನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಇದೇ ವೇಳೆ, ಸಾಮಾಜಿಕ ಹೋರಾಟಗಾರ ಕೆ.ಆರ್. ರವೀಂದ್ರ ಅವರು ಮೈಸೂರಿನ ಪ್ರಾದೇಶಿಕ ಆಯುಕ್ತರು ಹಾಗೂ ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿ, ಭೂ ಪರಿವರ್ತನೆ ಆದೇಶ ಮತ್ತು ವಿನ್ಯಾಸ ನಕ್ಷೆ ಅನುಮೋದನೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು.
ಈ ದೂರುಗಳ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರು 7 ಆಗಸ್ಟ್ 2025ರಂದು ವಸತಿ ಬಡಾವಣೆ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಿದ್ದರು. ಆದರೆ, ಅಕ್ರಮವಾಗಿ ವಸತಿ ಬಡಾವಣೆ ನಿರ್ಮಿಸುತ್ತಿರುವ ಎಚ್.ಕೆ. ಜಾವೇದ್ ಅಹಮದ್ ಅವರು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ತಡೆಯಾಜ್ಞೆಗೆ ತಡೆ ತಂದುಕೊಂಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ನ್ಯಾಯಾಲಯದಿಂದ ತಡೆಯಾಜ್ಞೆಗೆ ತಡೆ ದೊರೆತ ನಂತರ, ವಸತಿ ಬಡಾವಣೆಯ ಕಾಮಗಾರಿಯನ್ನು ಮತ್ತಷ್ಟು ವೇಗಗೊಳಿಸಲಾಗಿದೆ. ಒಳಚರಂಡಿ ವ್ಯವಸ್ಥೆ, ವಿದ್ಯುತ್ ಕಂಬಗಳ ಸ್ಥಾಪನೆ, ಚರಂಡಿ ಮತ್ತು ರಸ್ತೆ ನಿರ್ಮಾಣ ಸೇರಿದಂತೆ ಮೂಲಭೂತ ಕಾಮಗಾರಿಗಳು ಭರದಿಂದ ನಡೆಯುತ್ತಿವೆ.
ಇದರ ನಡುವೆಯೇ, ವನ್ಯಜೀವಿ ವಲಯಕ್ಕೆ ಸೇರಿದ ಈ ಪ್ರದೇಶಕ್ಕೆ ನಾಲ್ಕೈದು ದಿನಗಳ ಹಿಂದೆ ಆನೆಗಳು ಲಗ್ಗೆ ಇಟ್ಟಿವೆ. ಅಲ್ಲದೆ, ಕೆಲವು ತಿಂಗಳುಗಳ ಹಿಂದೆ ಚಿರತೆ ಸೇರಿದಂತೆ ಹಲವು ಕಾಡು ಪ್ರಾಣಿಗಳು ಈ ಭಾಗದಲ್ಲಿ ಓಡಾಡಿರುವುದನ್ನು ಸ್ಥಳೀಯರು ಕಂಡಿರುವುದಾಗಿ ತಿಳಿಸಿದ್ದಾರೆ. ಇದು ಈ ಪ್ರದೇಶ ಸಂಪೂರ್ಣವಾಗಿ ವನ್ಯಜೀವಿಗಳ ಸಂಚಾರ ವಲಯವಾಗಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.
ವನ್ಯಜೀವಿ ಹಾಗೂ ಪರಿಸರ ಸೂಕ್ಷ್ಮ ವಲಯಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಬಾರದು ಎಂಬ ಸ್ಪಷ್ಟ ಕಾಯಿದೆಗಳು ಮತ್ತು ಆದೇಶಗಳಿದ್ದರೂ, ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದಿರುವುದರಿಂದಲೇ ಇಂತಹ ಅಕ್ರಮ ವಸತಿ ಬಡಾವಣೆಗಳು ತಲೆಎತ್ತುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.
ವನ್ಯಜೀವಿಗಳ ನೆಲೆಯನ್ನು ಮಾನವರು ಅಕ್ರಮವಾಗಿ ಅತಿಕ್ರಮಿಸಿಕೊಂಡರೆ, ಮಾನವ–ವನ್ಯಜೀವಿ ಸಂಘರ್ಷ ಅನಿವಾರ್ಯ. ಇದನ್ನು ಅರಿಯದೇ ಅಥವಾ ನಿರ್ಲಕ್ಷ್ಯ ಮಾಡಿ, ಅಧಿಕಾರಿಗಳು ಅಕ್ರಮ ನಿರ್ಮಾಣವನ್ನು ತಡೆಯಲು ವಿಫಲರಾಗಿದ್ದಾರೆ ಎಂದು ಪರಿಸರ ಪ್ರೇಮಿಗಳು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣವು ವನ್ಯಜೀವಿಗಳ ವಾಸಸ್ಥಳವನ್ನು ಮಾನವರು ಅಕ್ರಮವಾಗಿ ಅತಿಕ್ರಮಿಸುತ್ತಿರುವುದಕ್ಕೆ ಜ್ವಲಂತ ಉದಾಹರಣೆಯಾಗಿದೆ. ಪರಿಸರ ಸೂಕ್ಷ್ಮ ವಲಯ ಎನ್ನುವುದನ್ನು ಸಂಪೂರ್ಣವಾಗಿ ಕಡೆಗಣಿಸಿ ಭೂ ಪರಿವರ್ತನೆ ಆದೇಶ ಹಾಗೂ ವಿನ್ಯಾಸ ನಕ್ಷೆ ಅನುಮೋದನೆ ನೀಡಿದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಹೆಚ್ಚುತ್ತಿದೆ.
ಪ್ರಭಾವಿಗಳು ಮತ್ತು ರಿಯಲ್ ಎಸ್ಟೇಟ್ ಮಾಫಿಯಾದವರು ವನ್ಯಜೀವಿ ಹಾಗೂ ಪರಿಸರ ಸೂಕ್ಷ್ಮ ವಲಯಗಳನ್ನು ಹಾಳುಗೆಡವುತ್ತಿರುವುದಕ್ಕೆ ಇಂತಹ ಪ್ರಕರಣಗಳೇ ಸಾಕ್ಷಿ. ಇವುಗಳಿಗೆ ತಕ್ಷಣವೇ ತಿಲಾಂಜಲಿ ಹಾಡುವ ಅಗತ್ಯತೆ ಇದೆ. ಅಷ್ಟೇ ಅಲ್ಲ, ಮಾನವ–ವನ್ಯಜೀವಿ ಸಂಘರ್ಷವನ್ನು ತಡೆಯಲು ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅನಿವಾರ್ಯವಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
“ಕಾವೇರಿ ವನ್ಯಜೀವಿ ವಲಯದಲ್ಲಿ ಅಕ್ರಮವಾಗಿ ನಿರ್ಮಾಣವಾಗುತ್ತಿರುವ ವಸತಿ ಬಡಾವಣೆ ಸ್ಥಳಕ್ಕೆ ಇತ್ತೀಚೆಗೆ ಆನೆಗಳು ಬಂದಿವೆ. ಇನ್ನೂ ಹಲವು ಕಾಡು ಪ್ರಾಣಿಗಳು ಇಲ್ಲೇ ಓಡಾಡುತ್ತಿವೆ. ವನ್ಯಜೀವಿ ವಲಯ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಡ. ಆದರೂ ಅಭಿವೃದ್ಧಿ ಕಾಮಗಾರಿಗಳನ್ನು ತರಾತುರಿಯಲ್ಲಿ ನಡೆಸಲಾಗುತ್ತಿದೆ,” ಎಂದು ಹಲಗೂರು ಗ್ರಾಪಂ ಸದಸ್ಯ ಕೆ. ಸುರೇಂದ್ರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.