
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು(ಮೇ.31): ರಾಜ್ಯದ 18 ಜಿಲ್ಲೆಗಳನ್ನು ರಾಜಧಾನಿ ಬೆಂಗಳೂರಿನಿಂದ ಸಂಪರ್ಕಿಸುವ ಪೀಣ್ಯ ಮೇಲ್ಸೇತುವೆಯನ್ನು ‘ಮಲ್ಟಿವ್ಹೀಲ್ ವೆಹಿಕಲ್’ (ಅತ್ಯಂತ ಭಾರದ ವಾಹನ) ಹೊರತುಪಡಿಸಿ ಇನ್ನುಳಿದ ವಾಹನಗಳಿಗೆ 20 ದಿನದಲ್ಲಿ ಸಂಚಾರಕ್ಕೆ ಮುಕ್ತಗೊಳಿಸುವ ಸಾಧ್ಯತೆ ಇದೆ.
ಮೇಲ್ಸೇತುವೆಯ ಭಾರ ತಡೆಯುವ ಸಾಮರ್ಥ್ಯವನ್ನು ಪ್ರಾಥಮಿಕವಾಗಿ ಪರಿಶೀಲನೆ ನಡೆಸಿರುವ ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್‌ಸಿ) ಪರಿಣಿತರು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ)ಕ್ಕೆ ವರದಿಯೊಂದನ್ನು ನೀಡಿದ್ದಾರೆ. ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಎನ್‌ಎಚ್‌ಎಐ ಉನ್ನತ ಅಧಿಕಾರಿಗಳ ತಂಡವು ತಜ್ಞರ ತ್ರಿಸದಸ್ಯ ಸಮಿತಿ ರಚಿಸಿದ್ದು, ಸಾಧಕ-ಬಾಧಕದ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಮತ್ತೊಂದು ವರದಿ ನೀಡುವಂತೆ ಕೋರಿದೆ.
ಐಐಎಸ್‌ಸಿಯ ತಜ್ಞ ಚಂದ್ರ ಕಿಶನ್, ಟ್ಯಾಂಡನ್ ಕನ್ಸಲ್ಟೆನ್ಸಿಯ ಬ್ರಿಡ್ಜ್ ಎಂಜಿನಿಯರ್ ದೆಹಲಿಯ ಡಾ. ಮಹೇಶ್ ಟಂಡನ್, ದೆಹಲಿಯ ಸೆಂಟ್ರಲ್ ರೋಡ್ ರಿಸಚ್‌ರ್ ಇನ್‌ಸ್ಟಿಟ್ಯೂಟ್‌ನ ನಿವೃತ್ತ ವಿಜ್ಞಾನಿ ಡಾ. ಶರ್ಮಾ ಅವರ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚನೆಯಾಗಿದೆ. ಸಮಿತಿಯು ಜೂನ್ ಮೊದಲ ವಾರ ಸಭೆ ನಡೆಸಿ ಶಿಫಾರಸುಗಳುಳ್ಳ ವರದಿಯನ್ನು ಎನ್‌ಎಚ್‌ಎಐಗೆ ಸಲ್ಲಿಸಲಿದ್ದು, ಇದನ್ನು ಎನ್‌ಎಚ್‌ಎಐ ಒಪ್ಪುವ ಸಾಧ್ಯತೆ ಹೆಚ್ಚಿದೆ.
Bengaluru: ಪೀಣ್ಯ ಫ್ಲೈಓವರ್ ಮೇಲೆ ಭೀಕರ ಅಪಘಾತ: ಇಬ್ಬರಿಗೆ ಗಂಭೀರ ಗಾಯ
ಪ್ರತಿ ದಿನವೂ ಕೇಬಲ್ ಪರಿಶೀಲಿಸಿ
ಈ ಬಗ್ಗೆ ಪ್ರತಿಕ್ರಿಯಿಸಿರುವ ಐಐಎಸ್‌ಸಿಯ ತಜ್ಞ ಚಂದ್ರ ಕಿಶನ್, ಮೇಲ್ಸೇತುವೆಯಲ್ಲಿ ಮಲ್ಟಿವ್ಹೀಲ್ ವೆಹಿಕಲ್ಸ್ (ಹೆಚ್ಚು ಟೈರ್ ಹೊಂದಿರುವ ಭಾರೀ ವಾಹನಗಳು) ಓಡಾಟಕ್ಕೆ ಅವಕಾಶ ನೀಡಬಾರದು, ಲಾರಿಗಳಲ್ಲಿ ಬಂಡೆ ಸಾಗಿಸದಂತೆ ಎರಡೂ ಬದಿಯ ಪ್ರವೇಶ ಸ್ಥಳದಲ್ಲಿ ಸಂಚಾರ ಪೊಲೀಸರು ಕಾವಲಿದ್ದು ಪ್ರವೇಶ ನಿರಾಕರಿಸಬೇಕು. ಮೇಲ್ಸೇತುವೆಯಲ್ಲಿ ಒಟ್ಟಾರೆ 120 ಕಂಬಗಳಿದ್ದು(ಸ್ಪಾ್ಯನ್), ಎರಡು ಕಂಬಗಳ ನಡುವೆ ಮುನ್ನೆಚ್ಚರಿಕೆಯಾಗಿ ಹೊಸದಾಗಿ 2 ಕೇಬಲ್ ಅಳವಡಿಸಬೇಕು, ಈ ಕೇಬಲ್‌ಗಳನ್ನು ಪ್ರತಿ ದಿನವೂ ಪರಿಶೀಲಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಮಿತಿ ನೀಡುವ ವರದಿಯನ್ನು ಎನ್‌ಎಚ್‌ಎಐ ಒಪ್ಪಿದರೆ ಮಲ್ಟಿವ್ಹೀಲ್ ವೆಹಿಕಲ್, ಬಂಡೆ ಸಾಗಿಸುವ ಟ್ರಕ್ ಹೊರತುಪಡಿಸಿ ಬಸ್, ಲಾರಿ ಸೇರಿದಂತೆ ಎಲ್ಲ ಬಗೆಯ ವಾಹನ ಓಡಾಟಕ್ಕೆ ಮೇಲ್ಸೇತುವೆ 15 ರಿಂದ 20 ದಿನದಲ್ಲಿ ಮುಕ್ತವಾಗುವ ಸಂಭವವಿದೆ. ಮೇಲ್ಸೇತುವೆ ಸಾಮರ್ಥ್ಯದ ಬಗ್ಗೆ ಇನ್ನೂ ವಿಸ್ತೃತ ಪರಿಶೀಲನೆ ನಡೆಸಬೇಕಿದ್ದು, ಇದಕ್ಕೆ 6 ರಿಂದ 9 ತಿಂಗಳು ಕಾಲಾವಕಾಶ ಬೇಕಾಗಲಿದೆ. ಅಲ್ಲಿಯವರೆಗೂ ಮಲ್ಟಿವ್ಹೀಲ್ ವೆಹಿಕಲ್‌ಗಳು ಮೇಲ್ಸೇತುವೆ ಮೇಲೆ ಸಂಚರಿಸಲು ಅವಕಾಶವಿಲ್ಲ ಎಂದು ವಿವರಿಸಿದ್ದಾರೆ.
ಭಾರೀ ವಾಹನನಗಳ ಓಡಾಟದಿಂದ 7 ತಿಂಗಳ ಹಿಂದೆ ಎಂಟನೇ ಮೈಲಿ ಜಂಕ್ಷನ್ ಸಮೀಪ 102 ಮತ್ತು 103ನೇ ಪಿಲ್ಲರ್ ನಡುವಿನ ಮೂರು ಕೇಬಲ್ ಬಾಗಿತ್ತು. ಆದ್ದರಿಂದ ಆರಂಭದಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಐಐಎಸ್‌ಸಿಯ ಪರಿಣಿತರ ತಂಡ ಸಮಗ್ರವಾಗಿ ಪರಿಶೀಲಿಸಿ ಭಾರೀ ವಾಹನಗಳ ಓಡಾಟದಿಂದಲೇ ಕೇಬಲ್‌ಗಳು ಬಾಗಿವೆ ಎಂದು ಅಭಿಪ್ರಾಯಪಟ್ಟಿತ್ತು. ಬಳಿಕ ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.
‘ಭಾರೀ’ ವಾಹನಗಳನ್ನು ಗುರುತಿಸುವುದೇ ಸವಾಲು
ಹೆಚ್ಚು ಟೈರ್ ಹೊಂದಿರುವ ಭಾರೀ ವಾಹನಗಳು ಭಾರವಾದ ವಸ್ತುಗಳನ್ನು ಹೊತ್ತು ನಿಧಾನವಾಗಿ ಸಾಗುವುದರಿಂದ ಗೊರಗುಂಟೆ ಪಾಳ್ಯದಿಂದ ‘ಪಾರ್ಲೆ ಜೀ’ ಫ್ಯಾಕ್ಟರಿ ವರೆಗಿನ ರಸ್ತೆಗಳು ಬೇಗ ಹಾಳಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಆಮೆಗತಿಯಲ್ಲಿ ಈ ವಾಹನಗಳು ಸಾಗುವುದರಿಂದ ಇನ್ನುಳಿದ ವಾಹನ ಸವಾರರು ತಿಂಗಳುಗಟ್ಟಲೆ ಸಂಕಷ್ಟಅನುಭವಿಸಬೇಕಾಗಿದೆ. ಸಂಚಾರ ಪೊಲೀಸರು ಗೊರಗುಂಟೆ ಪಾಳ್ಯ ಮತ್ತು ‘ಪಾರ್ಲೆ ಜೀ’ ಫ್ಯಾಕ್ಟರಿ ಸಮೀಪ ಭಾರೀ ವಾಹನಗಳು ಮೇಲ್ಸೇತುವೆ ಪ್ರವೇಶಿಸದಂತೆ ನೋಡಿಕೊಳ್ಳುವುದೂ ಸಹ ತಲೆನೋವಾಗಿ ಪರಿಣಮಿಸಲಿದೆ. ಅಷ್ಟೇ ಅಲ್ಲ ಭಾರಿ ತೂಕದ ವಾಹನಗಳನ್ನು ಗುರುತಿಸುವುದು ಸಹ ಕಷ್ಟಕರವಾದ ಸಂಗತಿಯಾಗಿದೆ. ಒಂದು ವೇಳೆ ಸೇತುವೆ ಬಳಿ ಬಂದ ನಂತರ ಅತಿ ಹೆಚ್ಚಿನ ಭಾರ ಎಂದು ಗುರುತಿಸಿದ ವಾಹನಗಳನ್ನು ಮಾಮೂಲಿ ರಸ್ತೆಯಲ್ಲಿ ಹೋಗುವಂತೆ ಹೇಳಿದರೆ ಚಾಲಕರು ಹೈರಾಣಗುವ ಜೊತೆಗೆ ಸಂಚಾರ ವ್ಯವಸ್ಥೆ ಅಸ್ತವ್ಯವಸ್ಥ ಆಗುವ ಸಾಧ್ಯತೆ ಇದೆ.