ಕಾಡನ್ನು ಉಳಿಸಿದರೆ ಕಾಡು ನಮ್ಮನ್ನು ಉಳಿಸುತ್ತದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ವೀರನಹೊಸಹಳ್ಳಿ (ಹುಣಸೂರು ತಾಲೂಕು): ಕಾಡನ್ನು ಉಳಿಸಿದರೆ ಕಾಡು ನಮ್ಮನ್ನು ಉಳಿಸುತ್ತದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು. ಮೈಸೂರು ಜಿಲ್ಲೆ ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ದಸರಾ ಗಜಪಯಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶೇ.33 ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ, ರಾಜ್ಯದಲ್ಲಿ ಶೇ.21 ರಷ್ಟುಮಾತ್ರ ಇದೆ. ಆದ್ದರಿಂದ ಪ್ರತಿಯೊಬ್ಬರು ಕಾಡನ್ನು ಹಾಗೂ ಕಾಡು ಪ್ರಾಣಿಗಳನ್ನು ಉಳಿಸಬೇಕು.
ಅಲ್ಲದೆ ಯಾವುದೇ ಜಾತಿ ಧರ್ಮ ಭೇದ ಮಾಡದೇ ಸಮ ಸಮಾಜದ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದು ಕರೆ ನೀಡಿದರು. ವಿಶ್ವವಿಖ್ಯಾತ ದಸರಾ ಆಚರಣೆಯ ಹಿನ್ನೆಲೆಯಲ್ಲಿ ದಸರಾ ಗಜಪಯಣಕ್ಕೆ ಧಾರ್ಮಿಕ ವಿಧಿ ವಿಧಾನಗಳ ಅನ್ವಯ ಚಾಲನೆ ನೀಡಲಾಗಿದೆ. ದಸರಾ ಎನ್ನುವುದು ಕುಣಿತಕ್ಕೆ, ಸಂತೋಷಕ್ಕೆ ಸೀಮಿತವಲ್ಲ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಆಚರಣೆ. ಆದ್ದರಿಂದ ಇದು ವಿಶ್ವವಿಖ್ಯಾತಿಯನ್ನು ಪಡೆದಿದೆ ಎಂದು ಅವರು ಹೇಳಿದರು.
ನಮಗೆ ಅನ್ಯ ಪಕ್ಷದ ಶಾಸಕರ ಅವಶ್ಯಕತೆಯಿಲ್ಲ: ಡಿ.ಕೆ.ಶಿವಕುಮಾರ್
ದಸರಾಗೆ 14 ಆನೆಗಳು: ದಸರಾ ಆನೆಗಳ ಪಟ್ಟಿ ಹಾಗೂ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಗಜ ಪಯಣ ದಸರಾ ಮಹೋತ್ಸವದ ಆರಂಭ. ನಾವು ಯಾವುದೇ ಶುಭ ಕಾರ್ಯ ಮಾಡಲು ಗಣಪತಿಯನ್ನು ಪೂಜಿಸುತ್ತೇವೆ. ದಸರಾಗೆ 14 ಆನೆಗಳನ್ನು ಕಳುಹಿಸುತ್ತೇವೆ. ಇದರಲ್ಲಿ ಮೊದಲ ಹಂತವಾಗಿ 9 ಆನೆಗಳನ್ನು ಕಳುಹಿಸಲಾಗುತ್ತಿದೆ. ಸೆ.5 ರಂದು ಅರಮನೆ ದ್ವಾರದಲ್ಲಿ ಸ್ವಾಗತಿಸಲಾಗುತ್ತದೆ ಎಂದರು. ಪ್ರಕೃತಿ ಪರಿಸರವನ್ನು ಉಳಿಸಬೇಕು. ಇಲ್ಲದಿದ್ದರೆ ತಾಪಮಾನ ಹೆಚ್ಚಳ ಆಗಿ ಹವಮಾನ ವೈಪರೀತ್ಯ ಉಂಟಾಗುತ್ತದೆ. ಓಜೋನ್ ಪದರ ತೆಳುವಾಗುತ್ತಿದೆ. ಕೊರೋನಾ ಸಂದರ್ಭದಲ್ಲಿ ಆಮ್ಲಜನಕ ಸಿಗದೆ ಹಲವಾರು ಜನ ಸಾವನ್ನು ಅಪ್ಪಿದರು. ಆದ್ದರಿಂದ ಪರಿಸರ ಉಳಿಸಿ ಬೆಳಸಬೇಕು ಎಂದು ಅವರು ಕರೆ ನೀಡಿದರು.
ಗುತ್ತಿಗೆ ಸಿಬ್ಬಂದಿ ಕಾಯಂಗೊಳಿಸಿ: ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಡಿ. ಹರೀಶ್ಗೌಡ ಮಾತನಾಡಿ, ಹುಣಸೂರು ತಾಲೂಕು ಕಾಡಿನ ಗಡಿಯನ್ನು ಹೆಚ್ಚಾಗಿ ಹೊಂದಿದೆ. ಇಲ್ಲಿ ಪ್ರಾಣಿ ಹಾಗೂ ಮಾನವ ಸಂಘರ್ಷ ನಡೆಯುತ್ತಿದೆ. ಇದನ್ನು ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕು ಎಂದು ಅರಣ್ಯ ಸಚಿವರಲ್ಲಿ ಮನವಿ ಮಾಡಿದಾಗ . 5 ಕೋಟಿ ಅನುದಾನ ನೀಡುವುದಾಗಿ ಹೇಳಿದ್ದಾರೆ ಎಂದರು. ಅರಣ್ಯ ಇಲಾಖೆಯ ಗುತ್ತಿಗೆ ಆಧಾರದ ಸಿಬ್ಬಂದಿ ದಿನದ 24 ಗಂಟೆ ಕೆಲಸ ನಿರ್ವಹಿಸುತ್ತಾರೆ. ಇವರಿಗೆ ಸಕಾಲದಲ್ಲಿ ಸಂಬಳ ನೀಡಬೇಕು. ಅರಣ್ಯ ಇಲಾಖೆಯ ಗುತ್ತಿಗೆ ಆಧಾರದ ಸಿಬ್ಬಂದಿಗೆ ಸೇವಾ ಭದ್ರತೆ ಇಲ್ಲ. ಇವರನ್ನು ಕಾಯಂ ಮಾಡಿ ಸೇವಾ ಭದ್ರತೆ ನೀಡಬೇಕು ಎಂದು ಅವರು ಅರಣ್ಯ ಸಚಿವರಲ್ಲಿ ಮನವಿ ಮಾಡಿದರು.
ಕನಕಪುರದಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಚಿಂತನೆ: ಸಚಿವ ಶರಣ ಪ್ರಕಾಶ್ ಪಾಟೀಲ್
ಇದೇ ವೇಳೆ ದಸರಾ ಆನೆಗಳ ಮಾವುತರನ್ನು ಸನ್ಮಾನಿಸಲಾಯಿತು. ಮೇಯರ್ ಶಿವಕುಮಾರ್, ವಿಧಾನಪರಿಷತ್ತು ಸದಸ್ಯ ಸಿ.ಎನ್. ಮಂಜೇಗೌಡ, ದೊಡ್ಡ ಹೆಜ್ಜೂರು ಗ್ರಾಪಂ ಅಧ್ಯಕ್ಷೆ ಅಂಬಿಕಾ ಲೋಕೇಶ್, ಪಿಸಿಸಿಎಫ್ ರಾಜೀವ್ ರಂಜನ್, ಎಪಿಸಿಸಿಎಫ್ಗಳಾದ ಸಾಸ್ವತಿ ಮಿಶ್ರಾ, ಎ.ಕೆ. ಸಿಂಗ್, ಮೈಸೂರು ವೃತ್ತ ಸಿಸಿಎಫ್ ಡಾ.ಎಂ. ಮಾಲತಿಪ್ರಿಯ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಎಸ್ಪಿ ಸೀಮಾ ಲಾಟ್ಕರ್, ಡಿಸಿಫ್ಗಳಾದ ಹರ್ಷಕುಮಾರ್ ಚಿಕ್ಕನರಗುಂದ, ಸೌರಭ್ಕುಮಾರ್, ಹುಣಸೂರು ಉಪ ವಿಭಾಗಾಧಿಕಾರಿ ರುಚಿ ಬಿಂದಾಲ್ ಮೊದಲಾದವರು ಇದ್ದರು.