ಜೀವನ ಪದ್ಧತಿಯಲ್ಲಿ ಬದಲಾವಣೆ ಆಗದಿದ್ದರೆ ಭವಿಷ್ಯ ಭಯಾನಕ: ತೇಜಸ್ವಿನಿ ಅನಂತಕುಮಾರ್

By Kannadaprabha NewsFirst Published Jun 2, 2024, 5:28 PM IST
Highlights

ಮನೆ, ಕುಟುಂಬ,ಶಾಲೆಗಳ ಪರಿಸರದಲ್ಲಿನ ಬದಲಾವಣೆಯ ಜೊತೆಗೆ ನಮ್ಮ ಜೀವನ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳದೇ ಇದ್ದರೆ ಭವಿಷ್ಯ ಭಯಾನಕವಾಗಲಿದೆ ಎಂದು ಚಿಂತಕಿ, ಬೆಂಗಳೂರಿನ ಅದಮ್ಯ ಚೇತನ ಫೌಂಡೇಶನ್ ಸಂಸ್ಥಾಪಕಿ ತೇಜಸ್ವಿನಿ ಅನಂತಕುಮಾರ್ ಹೇಳಿದ್ದಾರೆ. 

ಬಂಟ್ವಾಳ (ಜೂ.02): ಮನೆ, ಕುಟುಂಬ,ಶಾಲೆಗಳ ಪರಿಸರದಲ್ಲಿನ ಬದಲಾವಣೆಯ ಜೊತೆಗೆ ನಮ್ಮ ಜೀವನ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳದೇ ಇದ್ದರೆ ಭವಿಷ್ಯ ಭಯಾನಕವಾಗಲಿದೆ ಎಂದು ಚಿಂತಕಿ, ಬೆಂಗಳೂರಿನ ಅದಮ್ಯ ಚೇತನ ಫೌಂಡೇಶನ್ ಸಂಸ್ಥಾಪಕಿ ತೇಜಸ್ವಿನಿ ಅನಂತಕುಮಾರ್ ಹೇಳಿದ್ದಾರೆ. ಅವರು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ‘ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಪರಿಸರ’ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ವಿಶ್ವಕ್ಕೆ ಮಾದರಿಯಾಗುವ ಸಂಸ್ಕೃತಿ ಭಾರತದಲ್ಲಿದೆ, ಆದರೆ ಜಗತ್ತಿನ ಅತ್ಯಂತ ಮಾಲಿನ್ಯ ನಗರಗಳಲ್ಲಿ ಎಂಟು ನಗರ ನಮ್ಮ ಭಾರತದಲ್ಲಿಯೇ ಇದೆ ಎನ್ನುವುದು ವಿಷಾದನೀಯ. ಮರು ಬಳಕೆಯ ವಸ್ತುಗಳನ್ನು ಹೆಚ್ಚು ಬಳಕೆ ಮಾಡುವುದರಿಂದ ತ್ಯಾಜ್ಯ ವಸ್ತುಗಳನ್ನು ಪ್ರಮಾಣವನ್ನು ನಿಯಂತ್ರಿಸಬಹುದು. ತಾಯಂದಿರು ಅಡುಗೆ ಮನೆಯಲ್ಲಿ ತ್ಯಾಜ್ಯ ವಸ್ತುಗಳನ್ನು ಕಡಿಮೆಮಾಡುವ ನಿರ್ಣಯ ಕೈಗೊಳ್ಳಬೇಕು. ಪ್ರತಿಯೊಬ್ಬನೂ ನಾನೇನು ಬದಲಾವಣೆ ಮಾಡಬಹುದು ಎಂದು ಯೋಚಿಸಿ ಪರಿಸರವನ್ನು ಉಳಿಸುವ ಕೆಲಸ ಮಾಡಬೇಕು. ನನ್ನ ಕಸ ನನ್ನ ಜವಬ್ದಾರಿ ಎನ್ನುವುದರ ಅರಿವಿರಬೇಕು ಎಂದ ಅವರು, ಬೆಂಗಳೂರಿನಲ್ಲಿ ಅದಮ್ಯ ಚೇತನ ಸಂಸ್ಥೆಯ ಮೂಲಕ ಹಲವು ಪರಿಸರಪೂರಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.

Latest Videos

ಕೋಲಾರ ಎಂಪಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಖಚಿತ: ಶಾಸಕ ಕೊತ್ತೂರು ಭವಿಷ್ಯ

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನುಷ್ಯನ ದುರಾಸೆಯ ಕಾರಣದಿಂದಲೇ ಜಗತ್ತು ನಾಶಕ್ಕೆ ಹೋಗುತ್ತಿದೆಯೇ ಎಂಬ ಆತಂಕ ಕಾಡುತ್ತಿದೆ. ಮಾರಣಾಂತಿಕ ಕ್ಯಾನ್ಸರ್‌ ನಂತಹಾ ರೋಗಗಳ ಆರ್ಭಟ ಹೆಚ್ಚಾಗುತ್ತಿದ್ದು, ನೀರು, ಮಣ್ಣಿಗೆ ವಿಷ ಹಾಕುವ ಕೆಲಸ ಆಗುತ್ತಿದೆ, ಪರಿಸರವನ್ನು ಉಳಿಸುವ ಮೂಲನಂಬಿಕೆಗಳನ್ನು ಜಾಗೃತಗೊಳಿಸುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸಂಯೋಜಿಸಲಾಗಿದೆ ಎಂದರು. ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಅಧ್ಯಕ್ಷತೆ‌ ವಹಿಸಿದ್ದರು. ಆರಂಭದಲ್ಲಿ ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ ಬಳಿಕ ಅಗ್ನಿಹೋತ್ರಕ್ಕೆ ಅಗ್ನಿಸ್ಪರ್ಶ, ಘೃತಾಹುತಿ ಮಾಡುವ ಮೂಲಕ ವಿಚಾರ ಸಂಕಿರಣವನ್ನು ಉದ್ಘಾಟಿಸಲಾಯಿತು.

ವಿವಿಧ ಗೋಷ್ಠಿಗಳು: ಬಳಿಕ ನಡೆದ ಪ್ರಥಮಗೋಷ್ಠಿಯಲ್ಲಿ ಪರಿಸರ ಚಿಂತಕ ಶಿವಾನಂದ ಕಳವೆ ಅವರು ಪರಿಸರ ಮತ್ತು ಮರ - ಜಾಗೃತಿಯ ದೇಸಿ ದಾರಿಯ ಕುರಿತು ಸ್ವಾನುಭವಗಳ ವಿಚಾರ ಮಂಡಿಸಿ, ಕಾಡು, ಮರ, ನೀರು ಮತ್ತು ಪ್ರಾಣಿಗಳು ಒಂದಕ್ಕೊಂದು ಸಂಬಂಧವಿದೆ,ಆದರೆ ಇಂದು ಮಾನವ ಈ ಹೊಂದಾಣಿಕೆಯನ್ನು ತನ್ನ ಸ್ವಾರ್ಥಗಳಿಂದ ಮುರಿಯುತ್ತಿದ್ದಾನೆ ಎಂದರು. 

ಎರಡನೇ ಗೋಷ್ಠಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ನರೇಂದ್ರ ರೈ ದೇರ್ಲ ಅವರು ಆರಾಧನೆ ಮತ್ತು ನಂಬಿಕೆಗಳಲ್ಲಿ ಪರಿಸರ ಉಳಿವಿನ ದೃಷ್ಟಿ ಎಂಬ ವಿಚಾರದಲ್ಲಿ ಉಪನ್ಯಾಸ ನೀಡುತ್ತಾ, ಕಳೆದ 40 ಸಾವಿರ ವರ್ಷಗಳಲ್ಲಿ ಪರಿಸರದ ಮೇಲೆ ಆಗದಷ್ಟು ಹಾನಿ, ಕಳೆದ 40 ವರ್ಷಗಳಲ್ಲಿ ಆಗಿದೆ. ನಾವು ಕೃಷಿ‌ಬದುಕಿನ‌ ಜೊತೆ ಅನುಸಂಧಾನ‌ ನಡೆಸದೆ ಯಂತ್ರಗಳಾಗುತ್ತಿದ್ದೇವೆ, ಯಂತ್ರಗಳನ್ನು ಕಳಚದೇ ಇದ್ದರೆ ನೆಮ್ಮದಿಯನ್ನು ಪಡೆಯಲು ಸಾಧ್ಯವೇ ಇಲ್ಲ ಎಂದವರು ಅಭಿಪ್ರಾಯಪಟ್ಟರು.

ಮಧ್ಯಾಹ್ನ ನಡೆದ ಮೂರನೇ ಗೋಷ್ಠಿಯಲ್ಲಿ, ಸಮಗ್ರ ತ್ಯಾಜ್ಯ ನಿರ್ವಹಣೆಯ ವಿವಿಧ ಆಯಾಮಗಳ ಬಗ್ಗೆ ಕರ್ನಾಟಕ ರಾಜ್ಯ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ.ಕೆ.ಆರ್. ಶ್ರೀಹರ್ಷ ಮಾತನಾಡಿ, ತ್ಯಾಜ್ಯ ವಿಲೇವಾರಿ ಕುರಿತಾಗಿ ಮಾನವರು ಸ್ವಯಂ ಚಿಂತನೆ ನಡೆಸದ ಹೊರತು ಸುಧಾರಣೆ ಸಾಧ್ಯವಿಲ್ಲ ಎಂದರು. ಸಾಫ್ಟ್‌ವೇರ್ ಎಂಜಿನಿಯರ್ ಹಾಗೂ ಸಾವಯವ ಕೃಷಿಕ ವಸಂತ ಕಜೆ ಅವರು ಮಣ್ಣು ಮತ್ತು ಆಹಾರ ವಿಷಮುಕ್ತವಾಗುವತ್ತ ಎನ್ನುವ ವಿಚಾರ ಮಂಡಿಸಿದರು. ಪರ್ಯಾವರಣ ಸಂರಕ್ಷಣ ಗತಿವಿಧಿ ಪ್ರಾಂತ ಸಂಯೋಜಕ ವೆಂಕಟೇಶ ಸಂಗನಾಳ ಅವರು ಪರಿಸರ ಸ್ನೇಹಿ ಜೀವನಪದ್ಧತಿ ಕುರಿತಾಗಿ ಮಾತನಾಡಿದರು.

ಶ್ರೀರಾಮ ಪ್ರಥಮದರ್ಜೆ ಮಹಾ ವಿದ್ಯಾಲಯದ ಪ್ರಾಂಶುಪಾಲ ಕೃಷ್ಣ ಪ್ರಸಾದ ಕಾಯರ್‌ ಕಟ್ಟೆ ಸ್ವಾಗತಿಸಿದರು. ಸಂಸ್ಥೆಯ ಪ್ರಮುಖರಾದ ರಮೇಶ ಎನ್., ಡಾ. ಕಮಲಾ ಪ್ರಭಾಕರ ಭಟ್, ಮಾಜಿ ಶಾಸಕ ಪದ್ಮನಾಭ, ಉಪನ್ಯಾಸಕ ಯತಿರಾಜ ಪೆರಾಜೆ ನಿರ್ವಹಿಸಿದರು. ವಿದ್ಯಾರ್ಥಿನಿ ಪ್ರತೀಕ ವಂದಿಸಿದರು. ವಿದ್ಯಾರ್ಥಿಗಳಿಂದ ಪರಿಸರದ ಕುರಿತು ವಸ್ತು ಪ್ರದರ್ಶನ ನಡೆಯಿತು. 50 ವಿದ್ಯಾಸಂಸ್ಥೆಗಳ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 200ಕ್ಕೂ ಹೆಚ್ಚು ಶಿಕ್ಷಕರು ಪಾಲ್ಗೊಂಡಿದ್ದರು.

ವಾಲ್ಮೀಕಿ ಅಭಿವೃದ್ದಿ ಅಕ್ರಮದಲ್ಲಿ ಸಚಿವರು ತಪ್ಪು ಮಾಡಿದ್ರೂ ಕಠಿಣ ಶಿಕ್ಷೆಯಾಗಲಿ: ಶಾಸಕ ಗೋಪಾಲಕೃಷ್ಣ ಬೇಳೂರು

ಗಮನ ಸೆಳೆದ ಕಲ್ಲಡ್ಕ ಫ್ಲೈ ಓವರ್‌..!: ತಮ್ಮ ಮಾತಿನ ಮಧ್ಯೆ ಕಲ್ಲಡ್ಕ ಫ್ಲೈ ಓವರ್‌ನ್ನು ಎಳೆದು ತಂದ ಹಿರಿಯ ಸಾಹಿತಿ, ಲೇಖಕ ಡಾ. ನರೇಂದ್ರ ರೈ ದೇರ್ಲ ಅವರು, ಅಭಿವೃದ್ಧಿ ಯಾವ ರೀತಿ ಶಾಪ ಆಗುತ್ತಿದೆ ಎನ್ನುವುದಕ್ಕೆ ಕಲ್ಲಡ್ಕದಲ್ಲಿ ಆಗುತ್ತಿರುವ ಫ್ಲೈ ಓವರ್ ಸಾಕ್ಷಿ. ಪ್ರತಿಯೊಬ್ಬರೂ ಕೂಡ ಪರಿಸರ ವಾದಿಗಳಾಗಬೇಕಾದ ಅನಿವಾರ್ಯತೆ ಇದೆ ಎಂದರು. ಕೊರೋನಾದಿಂದಾಗಿ ಎಲ್ಲರ ಮನಸ್ಸು ಬದಲಾಗಿದೆ. ಭಾವಿಸುವ, ಪ್ರೋತ್ಸಾಹಿಸುವ ಮನಸ್ಸು ಇಲ್ಲವಾಗಿದೆ ಎಂದ ಆತಂಕ ವ್ಯಕ್ತಪಡಿಸಿದರು.

click me!