ಬೆಂಗಳೂರು: 5 ದಿನದಲ್ಲಿ ಬಿಲ್‌ ಪಾವತಿಸದಿದ್ದರೆ ಕೆಲಸ ಸ್ಥಗಿತ, ಬಿಬಿಎಂಪಿಗೆ ಗುತ್ತಿಗೆದಾರರ ಎಚ್ಚರಿಕೆ

By Kannadaprabha NewsFirst Published Jun 1, 2023, 1:22 PM IST
Highlights

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮುಖ್ಯ ಆಯುಕ್ತರೊಂದಿಗೆ ಸಭೆ ನಡೆಸಿ ತ್ವರಿತವಾಗಿ ಹಣ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ ಗುತ್ತಿಗೆದಾರರು, ಜೂನ್‌ 5ರೊಳಗಾಗಿ ಬಾಕಿ ಬಿಲ್‌ ಪಾವತಿಸದಿದ್ದರೆ, ರಾಜಕಾಲುವೆಯ ಹೂಳು ತೆಗೆಯುವುದು ಸೇರಿದಂತೆ ಎಲ್ಲಾ ರೀತಿಯ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರು(ಜೂ.01): ಕಾಮಗಾರಿಯ ಬಾಕಿ ಬಿಲ್‌ ಪಾವತಿ ಮಾಡದಿದ್ದರೆ, ಜೂನ್‌ 5 ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.
ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮುಖ್ಯ ಆಯುಕ್ತರೊಂದಿಗೆ ಸಭೆ ನಡೆಸಿ ತ್ವರಿತವಾಗಿ ಹಣ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ ಗುತ್ತಿಗೆದಾರರು, ಜೂನ್‌ 5ರೊಳಗಾಗಿ ಬಾಕಿ ಬಿಲ್‌ ಪಾವತಿಸದಿದ್ದರೆ, ರಾಜಕಾಲುವೆಯ ಹೂಳು ತೆಗೆಯುವುದು ಸೇರಿದಂತೆ ಎಲ್ಲಾ ರೀತಿಯ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಜಿ.ಎಂ.ರವೀಂದ್ರ, 2021ರ ಮೇ ವೇಳೆಗೆ ಬಿಬಿಎಂಪಿ ಅನುದಾನದಲ್ಲಿ ಕೈಗೊಂಡು ಪೂರ್ಣಗೊಳಿಸಿದ ಕಾಮಗಾರಿಯ ಬಾಕಿ ಬಿಲ್‌ ಪಾವತಿ ಮಾಡಿಲ್ಲ. ಬಿಲ್‌ಗಾಗಿ 24 ತಿಂಗಳು ಕಾಯಬೇಕಾದ ಸ್ಥಿತಿ ಇದೆ. ಇದರಿಂದ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕೂಡಲೇ ಕನಿಷ್ಠ ಆರು ತಿಂಗಳ ಅವಧಿಯಲ್ಲಿ ಪೂರ್ಣಗೊಂಡ ಕಾಮಗಾರಿಯ (2021 ಮೇನಿಂದ 2021ರ ಸೆಪ್ಟಂಬರ್‌) ಬಾಕಿ ಬಿಲ್ಲನ್ನು ಒಟ್ಟಿಗೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲಾಗಿದೆ ಎಂದು ತಿಳಿಸಿದರು.

Bengaluru: ಇಂದಿರಾ ಕ್ಯಾಂಟೀನ್‌ ತಿಂಡಿ ಬೆಲೆಯಲ್ಲಿ ದುಪ್ಪಟ್ಟು ಹೆಚ್ಚಳ

ಸರ್ಕಾರಿ ಅನುದಾನ ಬಿಲ್‌ ಪಾವತಿಗೆ ತಡೆ:

ಇನ್ನು ರಾಜ್ಯ ಸರ್ಕಾರದ ವಿವಿಧ ಯೋಜನೆಯ ಅನುದಾನದಲ್ಲಿ ಕೈಗೊಳ್ಳಲಾದ ಕಾಮಗಾರಿಯ ಬಿಲ್ಲನ್ನು ತಡೆ ಹಿಡಿಯಲಾಗಿದೆ. ಕಳೆದ ಮೇ 6ರಂದು ಸರ್ಕಾರದಿಂದ ಬಿಬಿಎಂಪಿಗೆ .675 ಕೋಟಿ ಬಿಡುಗಡೆ ಆಗಿದೆ. ಆದರೆ, ಈ ಹಣವನ್ನು ಗುತ್ತಿಗೆದಾರರಿಗೆ ನೀಡದೇ ತಡೆ ಹಿಡಿಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಹಂತದಲ್ಲಿ ಚರ್ಚೆ: ತುಷಾರ್‌

ಗುತ್ತಿಗೆದಾರರು ಬಾಕಿ ಬಿಲ್‌ ಪಾವತಿಗೆ ಮನವಿ ಸಲ್ಲಿಸಿದ್ದಾರೆ. ಬಿಲ್‌ ಪಾವತಿ ಕುರಿತು ಸರ್ಕಾರದ ಹಂತದಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಸರ್ಕಾರ ಅನುಮತಿ ನೀಡಿದ ತಕ್ಷಣ ಹಣ ಬಿಡುಗಡೆ ಮಾಡಲಾಗುವುದು. ಇನ್ನು ಕಾಮಗಾರಿ ನಿಲ್ಲಿಸುವ ಬಗ್ಗೆ ಗುತ್ತಿಗೆದಾರರು ಮನವಿ ಪತ್ರದಲ್ಲಿ ತಿಳಿಸಿಲ್ಲ. ಗುತ್ತಿಗೆದಾರರೊಂದಿಗೆ ಚರ್ಚೆ ನಡೆಸಿ ಕಾಮಗಾರಿ ಮುಂದುವರಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸ್ಪಷ್ಟಪಡಿಸಿದ್ದಾರೆ.

click me!