ಮಂಡ್ಯ (ಸೆ.20): ಮಂಡ್ಯಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಮೀಟರ್ ಅಳವಡಿಸಲು ಬಂದರೆ ಮುಖ್ಯಮಂತ್ರಿಗಳ ಕುರ್ಚಿ ಕಾಲು ಮುರಿಯುತ್ತೇವೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಗುಡುಗಿದರು. ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಸೋಮವಾರ ರೈತರ ಹಕ್ಕೊತ್ತಾಯಗಳ ಜಾರಿಗಾಗಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ರೈತರ ಸಹವಾಸಕ್ಕೆ ಬರಬೇಡಿ. ಅನ್ನದಾತರನ್ನು ಕೆಣಕುವ ಪ್ರಯತ್ನ ಮಾಡಿದರೆ ಬಿಜೆಪಿ ಪಾಲಿಗೆ ಇನ್ನು ಮುಂದೆ ಅಧಿಕಾರ ಕನಸಾಗಲಿದೆ ಎಂದು ಎಚ್ಚರಿಕೆ ನೀಡಿದರು.
Mysuru: ಸೆ.19 ರಂದು ಮಂಡ್ಯದಲ್ಲಿ ಬೃಹತ್ ರೈತ ಸಮಾವೇಶ: ಬಡಗಲಪುರ ನಾಗೇಂದ್ರ
ವಿದ್ಯುತ್ ಉತ್ಪಾದನೆ, ಪ್ರಸರಣೆ ಹಾಗೂ ವಿತರಣೆಯ ಹೊಣೆಗಳನ್ನು ಅದಾನಿ, ಅಂಬಾನಿಗೆ ಕೊಡಲು ಮುಂದಾಗಿರುವ ಕೇಂದ್ರ ಸರ್ಕಾರದಿಂದ ರೈತರು ಯಾವ ಸೌಲಭ್ಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. 1983ರಲ್ಲಿ ಗುಂಡೂರಾವ್ ಅವರೊಂದಿಗೆ ರೈತ ಮುಖಂಡರಾದ ಎಂ.ಡಿ.ಸುಂದರೇಶÜನ್ ಹಾಗೂ ಪ್ರೊ.ವಿ.ನಂಜುಂಡಸ್ವಾಮಿ ಮಾತನಾಡಿದ ಪರಿಣಾಮ 5 ಎಚ್.ಪಿ.ವರೆಗೆ ಉಚಿತ ವಿದ್ಯುತ್ ನೀಡಲು ಒಪ್ಪಿದ್ದರು. ಆ ನಂತರದಲ್ಲಿ ಕೆ.ಎಸ್.ಪುಟ್ಟಣ್ಣಯ್ಯನವರ ನೇತೃತ್ವದಲ್ಲಿ ನಡೆದ ಹೋರಾಟದಿಂದ 10 ಎಚ್ಪಿವರೆಗಿನ ಬಳಕೆಗೆ ಮೀಟರ್ ಇರುವುದಿಲ್ಲ ಎಂದಾಯಿತು. ಆದರೆ, ಈಗಿನ ಸರ್ಕಾರ ರೈತರ ಮೇಲೆ ಬರೆ ಎಳೆಯಲು ಹೊರಟಿದ್ದು, ಮೀಟರ್ ಅಳವಡಿಸಿ ರೈತರೆಲ್ಲರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಭೂಸುಧಾರಣಾ ಕಾಯ್ದೆಗೆ ತಂದ ತಿದ್ದುಪಡಿಗಳಿಂದಾಗಿ ಶೇ.47ರಷ್ಟುಕೃಷಿ ಭೂಮಿ ಮಾರಾಟ ಹೆಚ್ಚಳವಾಗಿದೆ. ಬಡ ರೈತರು, ಸಣ್ಣ ಹಿಡುವಳಿದಾರರು ಕೃಷಿ ಭೂಮಿಯನ್ನು ಬಿಡಿಗಾಸಿಗೆ ಮಾರಾಟ ಮಾಡಿಕೊಂಡು ನೆಲೆ ಕಳೆದುಕೊಳ್ಳುತ್ತಿದ್ದಾರೆ. ದೇಶಕ್ಕೆ ಅನ್ನ ಕೊಡುವ ರೈತನ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದರು.
ಇನ್ನು ಮುಂದೆ ಜಿಲ್ಲೆಯಲ್ಲಿ ಯುವ ಶಕ್ತಿ ಉದಯಿಸುವ ಎಲ್ಲಾ ಲಕ್ಷಣಗಳಿದ್ದು, ರೈತ ಸಂಘದಿಂದ ದರ್ಶನ್ ಪುಟ್ಟಣ್ಣಯ್ಯ, ಎಸ್.ಸಿ.ಮಧುಚಂದನ್, ಪ್ರಸನ್ನ ಎನ್.ಗೌಡರಂತಹ ಯುವ ನಾಯಕರ ನಾಯಕತ್ವ ಹೊಸ ನಡೆ ನುಡಿಯ ರಾಜಕಾರಣವನ್ನು ಹುಟ್ಟುಹಾಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೈತ ಸಂಘದ ವರಿಷ್ಠೆ, ನಾಯಕಿ ಸುನೀತಾ ಪುಟ್ಟಣ್ಣಯ್ಯ ಮಾತನಾಡಿ, ಇಂದಿನ ಸಮಾವೇಶದಲ್ಲಿ ರೈತ ಕಾರ್ಯಕರ್ತರ ಒಗ್ಗಟ್ಟು ನೋಡಿ ನನಗೆ ಮನಃ ತುಂಬಿಬಂದಿದೆ. ರೈತರು ಹಸಿರು ಟವಲ್ ಬೀಸುತ್ತಿದ್ದರೆ ನಮ್ಮವರು (ಕೆ.ಎಸ್.ಪುಟ್ಟಣ್ಣಯ್ಯ) ಇಲ್ಲೇ ಎಲ್ಲೋ ಇದ್ದಾರೆಂಬ ಭಾವನೆ ಮೂಡುತ್ತಿದೆ ಎಂದು ಭಾವುಕರಾದರು.
ಟನ್ ಕಬ್ಬಿಗೆ 4500 ರು. ಅಗತ್ಯವಿದೆ. ಸರಿಯಾಗಿ ವಿದ್ಯುತ್ತನ್ನೇ ನೀಡದಿದ್ದರೂ ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ರೈತ ವಿರೋಧಿ ಹೋರಾಟಗಳು ಯಶಸ್ಸು ಸಾಧಿಸಬೇಕಾದರೆ ರೈತ ಸಂಘ ಒಗ್ಗಟ್ಟಿನಿಂದ ಇರಬೇಕೆಂದು ಸಲಹೆ ನೀಡಿದರು.
ರೈತ ಸಂಘದಿಂದ ರಾಜ್ಯ ಸರ್ಕಾರವನ್ನೆ ಬದಲಿಸುವ ಎಚ್ಚರಿಕೆ
ವೇದಿಕೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ನಂದಿನಿ ಜಯರಾಂ, ವೀರಸಂಗಯ್ಯ, ಮಲೇನೂರು ಶಂಕರಪ್ಪ, ಲಿಂಗಪ್ಪಾಜಿ, ಪ್ರಸನ್ನ ಎನ್.ಗೌಡ, ಮಹಿಳಾಧ್ಯಕ್ಷೆ ನಾಗರತ್ನ ಪಾಟೀಲ್, ಗೋವಿಂದರಾಜು, ಕೆ.ಆರ್.ರವೀಂದ್ರ, ಕೆ.ಆರ್. ಜಯರಾಂ, ಹೆಬ್ಬಸೂರು ಬಸವಣ್ಣ, ಮಂಜುಳಾ ಅಕ್ಕಿ, ರಘು ಹಿರಿಸಾವೆ, ಚಿಕ್ಕಾಡೆ ಹರೀಶ್, ಮುನಿರಾಜು, ಮಂಜುನಾಥಗೌಡ, ಅರಸು, ಸಂಘದ ತಾಲೂಕು ಹಾಗೂ ಹೋಬಳಿ ಅಧ್ಯಕ್ಷರು, ಪದಾಧಿಕಾರಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.