ಅಕಸ್ಮಾತ್ ಬಿಜೆಪಿ ದಲಿತರ ಮೀಸಲಾತಿ ಕಸಿದರೆ... ವಿಜಯಪುರದಲ್ಲಿ ಸಂಸದ ರಮೇಶ್ ಜಿಗಜಿಣಗಿ ಸ್ಫೋಟಕ ಹೇಳಿಕೆ

Kannadaprabha News   | Kannada Prabha
Published : Oct 17, 2026, 08:41 AM IST
ramesh jigajinagi

ಸಾರಾಂಶ

ದಲಿತರ ಮೀಸಲಾತಿಯನ್ನು ಕಸಿದುಕೊಂಡರೆ ನಾವು ಬಿಜೆಪಿ ಜೊತೆ ಇರುವುದಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಎಚ್ಚರಿಸಿದ್ದಾರೆ. ಮೀಸಲಾತಿ ಹೆಚ್ಚಳ ರದ್ದುಗೊಳಿಸಿದ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ಹೋಗುವಂತೆ ಕಾಂಗ್ರೆಸ್ ಸರ್ಕಾರವನ್ನು ಅವರು ಆಗ್ರಹಿಸಿದ್ದಾರೆ.

ವಿಜಯಪುರ (ಅ.17): ಯಾರೂ ಆತಂಕಪಡುವ ಅಗತ್ಯವಿಲ್ಲ. ಮೀಸಲಾತಿ ತೆಗೆಯದಂತೆ ನಾವು ನೋಡಿಕೊಳ್ಳುತ್ತೇವೆ. ಕಾಂಗ್ರೆಸ್‌ನವರು ದಲಿತರ ಬಗ್ಗೆ ಮೊಸಳೆ‌ ಕಣ್ಣೀರು ಸುರಿಸುತ್ತಾರೆ. ದಲಿತರಿಗೆ ಮೊದಲಿನಿಂದಲೂ ಕಾಂಗ್ರೆಸ್‌ನವರು ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ದಲಿತರು (ಎಡ-ಬಲ) ಕಾಂಗ್ರೆಸ್ ಜೊತೆ ಇರುವುದಿಲ್ಲ, ಯಾವತ್ತು ಬಿಜೆಪಿ ಜೊತೆಗೆ ಇರುತ್ತಾರೆ ಎಂದು ಸಂಸದ ರಮೇಶ ಜಿಗಜಿಣಗಿ ವಿಶ್ವಾಸ ವ್ಯಕ್ತಪಡಿಸಿದರು.

ಅಕಸ್ಮಾತ್‌ ಬಿಜೆಪಿ ದಲಿತರ ಮೀಸಲಾತಿ ತೆಗೆದರೆ..

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರಿಂದ ಮೀಸಲಾತಿ ಕಸಿದುಕೊಳ್ಳುವುದಿಲ್ಲ. ಅಕಸ್ಮಾತ್‌ ಕಸಿದುಕೊಂಡರೆ ನಾವು ಬಿಜೆಪಿ ಜೊತೆ ಇರುವುದಿಲ್ಲ. ಎಲ್ಲ ಬಿಟ್ಟು ಮನೆಯಲ್ಲಿರುತ್ತೇವೆ. ಮೀಸಲಾತಿ ತೆಗೆದರೆ ನಾವು ಯಾರೂ ನಿಮ್ಮ ಜೊತೆ ಇರುವುದಿಲ್ಲ. ನಮ್ಮನ್ನು ಮರೆತುಬಿಡಿ ಎಂದು ಪಾರ್ಟಿ ಮೀಟಿಂಗ್‌ನಲ್ಲೇ ನಾವು ಸ್ಪಷ್ಟವಾಗಿ ಹೇಳಿದ್ದೇವೆ ಎಂದರು.ಆದರೆ, ಕಾಂಗ್ರೆಸ್‌ನವರು ತಮ್ಮ ಅಸಡ್ಡೆಯಿಂದಲೇ ನಮ್ಮ‌ ಜನತೆಗೆ ಅನ್ಯಾಯ ಮಾಡಿದ್ದಾರೆ. ಈಗಲಾದರೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಿಸಿರುವ ಈ ಹಿಂದಿನ ಬಿಜೆಪಿ ಸರ್ಕಾರದ ಕ್ರಮ ಅಸಾಂವಿಧಾನಿಕ ಎಂದು ಆದೇಶಿಸಿರುವ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತ ಪರವಾದ ತನ್ನ ಬದ್ಧತೆ ಹಾಗೂ ನಿಲುವು ಸಾಬೀತುಪಡಿಸಬೇಕು ಎಂದು ಆಗ್ರಹಿಸಿದರು.

2022ರಲ್ಲಿ ಬಿಜೆಪಿ ಸರ್ಕಾರ ವಿಶೇಷ ಕಾಯ್ದೆ ಮೂಲಕ ಪರಿಶಿಷ್ಟ ಜಾತಿ (ಎಸ್ಸಿ) ಮೀಸಲಾತಿಯನ್ನು ಶೇ.15 ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲಾತಿಯನ್ನು ಶೇ.3 ರಿಂದ ಶೇ.7ಕ್ಕೆ ಹೆಚ್ಚಿಸಿ ತನ್ನ ಬದ್ಧತೆ ಮತ್ತು ಕಾಳಜಿ ಪ್ರದರ್ಶಿಸಿತ್ತು. ಆದರೆ, ಅದನ್ನು ಖಂಡಿಸಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪೂರಕವಾಗಿ ಪ್ರಕರಣ ಮುನ್ನಡೆಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಪರಿಣಾಮ ಹೈಕೋರ್ಟ್ ಈ ಕ್ರಮ ಅಸಾಂವಿಧಾನಿಕ ಎಂದು ಘೋಷಿಸಿ ಈ ಹೆಚ್ಚಳದ ಆದೇಶ ರದ್ದುಗೊಳಿಸಿದೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಅಸಮರ್ಪಕ, ಅವೈಜ್ಞಾನಿಕ ಹಾಗೂ ತಾತ್ಸಾರ ಮತ್ತು ನಿರ್ಲಕ್ಷಿತ ಧೋರಣೆಯೇ ಕಾರಣ ಎಂದು ದೂರಿದರು.

ಸಿಜೆಪಿ ಹಾಗೂ ಕಾಂಗ್ರೆಸ್ ಎರಡು ಒಂದೇ ಅಂದರೆ ಡಿಕ್ಲೇರ್‌ ಮಾಡಲಿ

ಸಿಜೆಪಿ-ಕಾಂಗ್ರೆಸ್ ಎರಡೂ ಒಂದೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಿಯಾಂಕ್ ಖರ್ಗೆ ಅವರ ತಂದೆಯವರೊಂದಿಗೆ ರಾಜಕಾರಣ ಮಾಡಿದವರು ನಾವು. ಪ್ರಿಯಾಂಕ್ ಖರ್ಗೆ ನಿನ್ನೆ ಮೊನ್ನೆ ರಾಜಕಾರಣಕ್ಕೆ ಬಂದವರು. ಸಿಜೆಪಿ ಹಾಗೂ ಕಾಂಗ್ರೆಸ್ ಎರಡು ಒಂದೇ ಅಂದರೆ ಡಿಕ್ಲೇರ್‌ ಮಾಡಲಿ, ಮಲ್ಲಿಕಾರ್ಜುನ್ ಖರ್ಗೆಯವರೇ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಅಧಿಕೃತವಾಗಿ ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.

ಸ್ಟಿಂಗ್ ಆಪರೇಷನ್ ವಿಚಾರವಾಗಿ ಮಾತನಾಡಿದ ಸಂಸದ ಜಿಗಜಿಣಗಿ, ಕಾಂಗ್ರೆಸ್‌ನವರು ಸ್ಟಿಂಗ್ ಆಪರೇಷನ್ ಮಾಡಿದ್ದಾರೆ ಈ ಪ್ರಶ್ನೆಯನ್ನು ಅವರಿಗೆ ಕೇಳಿ. ಕಾಂಗ್ರೆಸ್‌ನೇ ಸ್ಟಿಂಗ್ ಪಾರ್ಟಿ ಇದೆ. ಅವರವರೇ ಹೊಡೆದಾಡಿ ಸಾಯುತ್ತಿದ್ದಾರೆ. ಫೋನ್ ಕದ್ದಾಲಿಕೆ ಆರೋಪದಲ್ಲಿ ಹೆಗಡೆಯವರು ರಾಜೀನಾಮೆ ಕೊಟ್ಟಿದ್ದರು ನೆನಪಿಸಿದರು.

ಗೋಷ್ಠಿಯಲ್ಲಿ ಮುಖಂಡರಾದ ಚಿದಾನಂದ ಚಲವಾದಿ, ಈರಣ್ಣ ರಾವೂರ, ಸಾಬು ಮಾಶಾಳ, ಸಂಜೀವ ಐಹೊಳೆ, ವಿಜಯ ಜೋಶಿ ಇದ್ದರು.

ನಾನೊಂದು ಲೆವೆಲ್‌ಗೆ ಬೆಳೆದಿದ್ದೇನೆ, ಎಲ್ಲಿ ಹೋದರು ದೇವರು ನನಗೆ ಎರಡು ರೊಟ್ಟಿ ಕೊಟ್ಟಿದ್ದಾನೆ. ಆದರೆ, ನಮ್ಮ ಸಂಬಂಧಿಕರು ಹಾಗೂ ಸಮಾಜದ ಅದೆಷ್ಟೋ ಜನರಿಗೆ ಕೊಟ್ಟಿಲ್ಲ. ನಾನು ಎಲ್ಲಿಯೇ ಹೋದರು ಒಬ್ಬನೇ ಹೋಗುತ್ತೇನೆ, ಯಾಕೆಂದರೆ ನನಗೆ ಕರ್ಚಿಯಲ್ಲಿ ಕೂಡಿಸುತ್ತಾರೆ ಅಥವಾ ಹಾಸಿಗೆ ಹಾಸಿ ಕೂಡಿಸುತ್ತಾರೆ. ಆದರೆ ನಮ್ಮ ಜೊತೆಗೆ ನಮ್ಮ ಕಾಕಾಗೋಳು, ಭಾವಗೋಳು ಬಂದರೆ ಅವರಿಗೆ ದೂರ ಕೂಡಿಸುತ್ತಾರೆ. ಅವರಿಗೆ ಸಮಾನತೆ ಇಲ್ಲ, ಇದೇ ಸಾಮಾಜಿಕ ಅಸಮಾನತೆ, ಆರ್ಥಿಕ ವ್ಯತ್ಯಾಸ.

- ರಮೇಶ ಜಿಗಜಿಣಗಿ, ಸಂಸದ

PREV
Read more Articles on
click me!

Recommended Stories

ಕಡೂರು ರೈಲ್ವೆ ನಿಲ್ದಾಣದಲ್ಲಿ ದಿಢೀರ್ ಸ್ಥಗಿತಗೊಂಡ ಸೇವೆ: ಪ್ರಯಾಣಿಕರ ಪರದಾಟ, ಆಕ್ರೋಶ
ವಿದೇಶಿ ಹಣ, ಬಾಂಗ್ಲಾ ಪ್ರೇರಣೆ… ಸಿಜೆಪಿ-ಕಾಂಗ್ರೆಸ್‌ನ ಅಸಲಿ ಮುಖ ಬಯಲು? ಪ್ರಿಯಾಂಕ್ ಖರ್ಗೆ ವಿರುದ್ಧ ವಿಜಯೇಂದ್ರ ವಾಗ್ದಾಳಿ