ಖರ್ಗೆ ಕುಟುಂಬದ ಟ್ರಸ್ಟ್‌ಗೆ ಬನಶಂಕರಿ 6ನೇ ಹಂತದಲ್ಲಿ ಭೂಮಿ ಹಂಚಿಕೆ; ಕೋರ್ಟ್ ಹೇಳಿದ್ದೇನು?

Published : Oct 17, 2026, 08:03 AM IST
Mallikarjun Kharge

ಸಾರಾಂಶ

ಸಚಿವ ಪ್ರಿಯಾಂಕ್ ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಭೂಮಿ ಹಂಚಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 18ರ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಈ ಪ್ರಕರಣದ ಮರು ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದ್ದು, ಅಕ್ಟೋಬರ್ 30ರಂದು ವಾದ ಆಲಿಸಲಿದೆ.

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಸಚಿವ ಪ್ರಿಯಾಂಕ್‌ ಖರ್ಗೆ ಕುಟುಂಬ ನಿಭಾಯಿಸುತ್ತಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಭೂಮಿ ಹಂಚಿಕೆಗೆ ಸಂಬಂಧಿಸಿ 2026ರ ಆ.18ರಂದು ಹೊರಡಿಸಿದ ಆದೇಶವನ್ನು ಹಿಂಪಡೆದಿರುವ ಹೈಕೋರ್ಟ್, ಪ್ರಕರಣ ಕುರಿತು ಮರು ವಿಚಾರಣೆ ನಡೆಸಲಾಗುವುದು ತಿಳಿಸಿದೆ.

ಖಾಸಗಿ ದೂರು

ಪ್ರಕರಣದಲ್ಲಿ ಖಾಸಗಿ ದೂರಿನೊಂದಿಗೆ ಲಗತ್ತಿಸಿದ್ದ ಪ್ರಮಾಣಪತ್ರದಲ್ಲಿನ ದೋಷಗಳನ್ನು ದೂರುದಾರ ವಿಜಯರಾಘವ ಮರಾಠೆ ಪರಿಹರಿಸಬೇಕು. ದೂರಿನಲ್ಲಿರುವ ಆರೋಪಗಳ ಕುರಿತು ಲೋಕಾಯುಕ್ತ ಪೊಲೀಸರ ತನಿಖೆ ಅಗತ್ಯವಿದೆಯೇ ಎಂಬುದನ್ನು ವಿಚಾರಣಾ ನ್ಯಾಯಾಲಯ ನಿರ್ಧರಿಸಬೇಕು ಎಂದು ಬೆಂಗಳೂರಿನ 82ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ಕೋರ್ಟ್‌ಗೆ 2026ರ ಆ.18ರಂದು ಹೈಕೋರ್ಟ್‌ ಸೂಚಿಸಿತ್ತು.

ಈ ಆದೇಶ ಮರುಪಶೀಲನೆ ನಡೆಸಬೇಕು ಅಥವಾ ಹಿಂಪಡೆಯಬೇಕು ಎಂದು ಕೋರಿ ಟ್ರಸ್ಟ್‌ನ ಟ್ರಸ್ಟಿ ರಾಹುಲ್‌ ಖರ್ಗೆ (ಪ್ರಿಯಾಂಕ್‌ ಖರ್ಗೆ ಸಹೋದರ) ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಆ.18ರಂದು ವಿಶೇಷ ನ್ಯಾಯಾಲಯಕ್ಕೆ ನೀಡಿದ್ದ ನಿರ್ದೇಶನವನ್ನು ರದ್ದುಪಡಿಸಿತು. ಹಾಗೆಯೇ, ಪ್ರಕರಣ ಸಂಬಂಧ ಮೂಲ ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ರಾಹುಲ್‌ ಖರ್ಗೆ ಹಾಗೂ ಇತರರ ವಾದವನ್ನು ಅ.30ರಂದು ಆಲಿಸಲಾಗುವುದು ಎಂದು ಹೇಳಿದೆ.

ಪ್ರಕರಣವೇನು?

ಏರೋಸ್ಪೇಸ್‌ ಅಥವಾ ಸಂಶೋಧನಾ ಕ್ಷೇತ್ರದಲ್ಲಿ ಅನುಭವವಿಲ್ಲದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕೆಐಎಡಿಬಿಯು ದೇವನಹಳ್ಳಿ ಏರೋಸ್ಪೇಸ್‌ ಪಾರ್ಕ್‌ನಲ್ಲಿ ಜಮೀನು ಮಂಜೂರು ಮಾಡಿದೆ. ಬನಶಂಕರಿ 6ನೇ ಹಂತದಲ್ಲಿ ಸುಮಾರು 8,125 ಚದರ ಮೀಟರ್‌ ವಿಸ್ತೀರ್ಣದ ನಾಗರಿಕ ಸೌಲಭ್ಯ ನಿವೇಶನವನ್ನು ಬಿಡಿಎ ಮಂಜೂರು ಮಾಡಿದೆ. ಟ್ರಸ್ಟ್‌ ಅನ್ನು ಪರಿಶಿಷ್ಟ ಜಾತಿ ಸಮುದಾಯದ ಟ್ರಸ್ಟ್‌ ಎಂದು ತೋರಿಸಿ, ಬಿಡಿಎಯಿಂದ ಶೇ.50ರಷ್ಟು ರಿಯಾಯಿತಿಯಲ್ಲಿ ಜಮೀನು ಪಡೆಯಲಾಗಿದೆ.

ಆ ಟ್ರಸ್ಟ್‌ ಪರಿಶಿಷ್ಟ ಜಾತಿಗಾಗಿ ಮಾತ್ರ ಸ್ಥಾಪಿಸಲಾದ ಸಂಸ್ಥೆಯಲ್ಲ. ಎಲ್ಲ ಜಾತಿ, ಧರ್ಮ ಮತ್ತು ವರ್ಗಗಳ ಜನರ ಹಿತಕ್ಕಾಗಿ ಸ್ಥಾಪಿತವಾಗಿದೆ. ಹಾಗಾಗಿ ಪ್ರಕರಣದ ಕುರಿತು ಲೋಕಾಯುಕ್ತ ತನಿಖೆಗೆ ಆದೇಶಿಸುವಂತೆ ಕೋರಿ ವಿಜಯರಾಘವ ಮರಾಠೆ ಎಂಬಾತ ವಿಚಾರಣಾ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಆದರೆ, ವಿಶೇಷ ನ್ಯಾಯಾಲಯದ ದೂರು ಕುರಿತು ತಾನೇ ನೇರವಾಗಿ ವಿಚಾರಣೆ ನಡೆಸುವುದಾಗಿ ಆದೇಶಿಸಿತ್ತು. ಈ ಕ್ರಮವನ್ನು ವಿಜಯರಾಘವ ಮರಾಠೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

PREV
Read more Articles on
click me!

Recommended Stories

ಪೆರಿಫೆರಲ್‌ ರಿಂಗ್‌ ರೋಡ್‌-2 ಯೋಜನೆ: ಮಾಚೋಹಳ್ಳಿ ಭೂಸ್ವಾಧೀನಕ್ಕೆ ಬಿಗ್ ಟ್ವಿಸ್ಟ್!
KHB Surya Nagar 4th Phase: ಸೂರ್ಯನಗರದಲ್ಲಿ ಸೈಟ್ ಸಿಕ್ಕರೂ ನಿವೇಶನ ಖರೀದಿಸಲು ಹಿಂದೇಟು ಹಾಕ್ತಿರೋದ್ಯಾಕೆ ಅದೃಷ್ಟಶಾಲಿಗಳು?