Idgah Maidan ದಾಖಲೆ ಸಲ್ಲಿಸಲು ಇನ್ನೆರಡು ದಿನ ಮಾತ್ರ ಅವಕಾಶ!

Published : Aug 01, 2022, 07:12 AM IST
Idgah Maidan ದಾಖಲೆ ಸಲ್ಲಿಸಲು ಇನ್ನೆರಡು ದಿನ ಮಾತ್ರ ಅವಕಾಶ!

ಸಾರಾಂಶ

ಚಾಮರಾಜಪೇಟೆ ಆಟದ ಮೈದಾನ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ಆ.3ರೊಳಗೆ ಸೂಕ್ತ ದಾಖಲೆ ಸಲ್ಲಿಸಬೇಕು, ಇಲ್ಲದಿದ್ದರೆ ಅರ್ಜಿ ತಿರಸ್ಕರಿಸಲಾಗುವುದು ಎಂದು ವಕ್ಫ್ ಮಂಡಳಿಗೆ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್‌ ಸೂಚನೆ ನೀಡಿದ್ದಾರೆ.

ಬೆಂಗಳೂರು (ಜು.1): ಚಾಮರಾಜಪೇಟೆ ಆಟದ ಮೈದಾನ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ಆ.3ರೊಳಗೆ ಸೂಕ್ತ ದಾಖಲೆ ಸಲ್ಲಿಸಬೇಕು, ಇಲ್ಲದಿದ್ದರೆ ಅರ್ಜಿ ತಿರಸ್ಕರಿಸಲಾಗುವುದು ಎಂದು ವಕ್ಫ್ ಮಂಡಳಿಗೆ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್‌ ಸೂಚನೆ ನೀಡಿದ್ದಾರೆ. ಚಾಮರಾಜಪೇಟೆ ಆಟದ ಮೈದಾನದ ಮಾಲಿಕತ್ವ ತಮಗೆ ನೀಡಬೇಕು ಹಾಗೂ ಮೈದಾನವನ್ನು ಖಾತೆ ಮಾಡಿಕೊಡುವಂತೆ ವಕ್ಫ್ ಮಂಡಳಿ ಕಳೆದ ತಿಂಗಳು ಬಿಬಿಎಂಪಿಗೆ ಅರ್ಜಿ ಸಲ್ಲಿಸಿತ್ತು. ಆದರೆ, ವಕ್ಫ್ ಮಂಡಳಿ ಸಲ್ಲಿಸಿದ್ದ ಅರ್ಜಿ ಜತೆಗೆ ನೀಡಲಾಗಿದ್ದ ದಾಖಲೆಗಳು ಸಮರ್ಪಕವಾಗಿ ಇಲ್ಲದ ಕಾರಣ ಸೂಕ್ತ ದಾಖಲೆಗಳನ್ನು ನೀಡುವಂತೆ ಬಿಬಿಎಂಪಿ ಎರಡ್ಮೂರು ಬಾರಿ ನೋಟಿಸ್‌ ನೀಡಿತ್ತು. ಆದರ ವಕ್ಫ್ ಮಂಡಳಿ ಸೂಕ್ತ ದಾಖಲೆಗಳನ್ನು ಸಲ್ಲಿಸಿರಲಿಲ್ಲ. ಹೀಗಾಗಿ ಜು.28ರಂದು ವಕ್ಫ್ ಮಂಡಳಿ ವಕೀಲರು ಸೇರಿ ಇನ್ನಿತರರನ್ನು ಕರೆಸಿ ಸಭೆ ನಡೆಸಿದ್ದ ಪಶ್ಚಿಮ ವಲಯದ ಜಂಟಿ ಆಯುಕ್ತರು, ಮಾಲಿಕತ್ವ ದೃಢಿಕರಿಸುವ ದಾಖಲೆಗಳು ಸಮರ್ಪಕವಾಗಿಲ್ಲ. ಸೂಕ್ತ ದಾಖಲೆಗಳನ್ನು ನೀಡುವಂತೆ ತಿಳಿಸಿದ್ದಾರೆ. ಅದಕ್ಕೆ ಸ್ವಲ್ಪ ಸಮಯ ನೀಡುವಂತೆ ವಕ್ಫ್ ಮಂಡಳಿ ಪರವಾಗಿ ಹಾಜರಿದ್ದವರು ಕೋರಿದ್ದರು. ಆ ಹಿನ್ನೆಲೆಯಲ್ಲಿ ಆ.3ರೊಳಗೆ ದಾಖಲೆ ಸಲ್ಲಿಸಬೇಕು. ಇಲ್ಲದಿದ್ದರೆ ಅರ್ಜಿ ವಜಾಗೊಳಿಸುವುದಾಗಿ ಜಂಟಿ ಆಯುಕ್ತರು ತಿಳಿಸಿದ್ದಾರೆ.

ಈದ್ಗಾ ಪಾಲಿಕೆ ಸ್ವತ್ತೆಂದು ಘೋಷಿಸಿದರೆ ನ್ಯಾಯಾಂಗ ನಿಂದನೆ: ಶಾಫಿ ಎಚ್ಚರಿಕೆ
ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಇತ್ಯರ್ಥಕ್ಕೂ ಮುನ್ನವೇ ಮೈದಾನ ಬಿಬಿಎಂಪಿ ಸ್ವತ್ತು ಎಂದು ಘೋಷಿಸಿದರೆ ನ್ಯಾಯಾಂಗದ ನಿಂದನೆ ಆಗುತ್ತದೆ ಎಂದು ಕರ್ನಾಟಕ ವಕ್ಫ್ ಬೋರ್ಡ್‌ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಹೇಳಿದ್ದಾರೆ.

1964ರಲ್ಲಿ ಚಾಮರಾಜ ಪೇಟೆ ಮೈದಾನ ವಕ್ಫ್ ಬೋರ್ಡ್‌ ಆಸ್ತಿ ಎಂದು ಸುಪ್ರೀಂ ಕೋರ್ಚ್‌ ಹೇಳಿದೆ. ಈಗಾಗಲೇ ಬಿಬಿಎಂಪಿಗೆ ವಕ್ಫ್ ಬೋರ್ಡ್‌ ಬಳಿ ಇರುವ 1964ರ ರಾಜ್ಯ ಪತ್ರ, 1968ರ ಕಂದಾಯ ಇಲಾಖೆ ಸರ್ವೇ ವರದಿ, ಸ್ವತ್ತಿನ ಮೂಲ ಪತ್ರ ಮತ್ತು ಕ್ರಯಪತ್ರ, 1968ರಿಂದ ಸ್ವತ್ತಿನ ಪಹಣಿ ನೀಡಿದ್ದೇವೆ. ಬಿಡಿಎ ರಚಿಸಿರುವ ನಕ್ಷೆ ನಮ್ಮ ಬಳಿ ಇಲ್ಲ. ಆಗ ಬಿಡಿಎ ಅಸ್ತಿತ್ವದಲ್ಲಿ ಇರಲಿಲ್ಲ. ಹೀಗಾಗಿ ಈಗ ನಾವು ನಕ್ಷೆಗಾಗಿ ಬಿಡಿಎಗೆ ಮನವಿ ಸಲ್ಲಿಸಿದ್ದೇವೆ ಎಂದರು.

ಸುಪ್ರೀಂ ಕೋರ್ಚ್‌ನಲ್ಲಿ ನಮ್ಮ ಪ್ರತಿವಾದಿ ಬಿಬಿಎಂಪಿ. ಹೀಗಿರುವಾಗ ಪ್ರತಿವಾದಿಗಳು ವಾದಿಗಳ ಬಳಿ ದಾಖಲೆ ತಂದು ಕೊಡಲಿ ಎಂದು ಕೇಳುವುದರಲ್ಲಿ ಅರ್ಥವಿಲ್ಲ. ಆದರೂ 2022 ಜುಲೈ 8ರಂದು ದಾಖಲೆಗಳನ್ನು ಸಲ್ಲಿಸಲು ಹೆಚ್ಚಿನ ಸಮಯ ಬೇಕೆಂದು ಪತ್ರ ಸಲ್ಲಿಸಿದ್ದೇವೆ. ನಾವು ಅವರು ಕೇಳಿದ ದಾಖಲೆಗಳನ್ನು ಸಲ್ಲಿಸಿದ್ದರೂ ಇದೀಗ ದೃಢೀಕರಣ ಪತ್ರ ಕೇಳಿದ್ದಾರೆ. ಹೀಗಾಗಿ ನಾವು ಸ್ವಲ್ಪ ಹೆಚ್ಚಿನ ಕಾಲಾವಕಾಶ ನೀಡುವಂತೆ ಕೇಳಿದ್ದೇವೆ ಎಂದು ತಿಳಿಸಿದರು.

Idgah Maidan ಕ್ಕೆ ಚಾಮರಾಜೇಂದ್ರ ಒಡೆಯರ್‌ ಹೆಸರಿಡುವಂತೆ ಒತ್ತಾಯ

1964ರಲ್ಲಿ ವಕ್ಫ್ ಬೋರ್ಡ್‌ ಆಸ್ತಿ ಎಂದು ಸುಪ್ರೀಂ ಕೋರ್ಚ್‌ ಹೇಳಿದೆ. ಈದ್ಗಾ ಮೈದಾನ ವಿವಾದ ಶುರುವಾದ ಬಳಿಕ ಜೂನ್‌ 14ರಂದು ಬಿಬಿಎಂಪಿಯಿಂದ ವಕ್ಫ್ ಬೋರ್ಡ್‌ ಗೆ ನೋಟಿಸ್‌ ಬಂದಿತ್ತು. ಜೂನ್‌ 17ರಂದು ನಮ್ಮಲ್ಲಿದ್ದ ದಾಖಲೆಗಳನ್ನು ಪಾಲಿಕೆಗೆ ನೀಡಿದ್ದೇವೆ. ಒಟ್ಟು 10.10 ಎಕರೆ ವಕ್ಫ್ ಬೋರ್ಡ್‌ ಆಸ್ತಿ ಇತ್ತು. ಅದರಲ್ಲಿ 8 ಎಕರೆ ಜಾಗ ಕಬಳಿಕೆಯಾಗಿದೆ. ಇದಕ್ಕೆ ಪರಾರ‍ಯಯವಾಗಿ ಸರ್ಕಾರ ಮೈಸೂರು ರಸ್ತೆಲ್ಲಿ ಬೋರ್ಡ್‌ಗೆ 6-7 ಎಕರೆ ಜಾಗ ನೀಡಿದೆ. ಆದರೆ 2.10 ಎಕರೆ ಜಾಗ ಚಾಮರಾಜಪೇಟೆಯ ಈದ್ಗಾ ಮೈದಾನವಾಗಿದೆ. ಆದರೆ ಕೆಲವರು ಅದನ್ನು ಒಪ್ಪುತ್ತಿಲ್ಲ. ಈ ಸಂಬಂಧ ವಕ್ಫ್ ಬೋರ್ಡ್‌ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದೇವೆ. ಈವರೆಗೂ ಬಿಬಿಎಂಪಿ ನಮಗೆ ಉತ್ತರ ಕೊಟ್ಟಿಲ್ಲ ಎಂದು ಹೇಳಿದರು.

ಈದ್ಗಾ ಮೈದಾನ ಉಳಿವಿಗಾಗಿ ನಾಗರೀಕರಿಂದ ಈಗ ಹೊಸ ಅಭಿಯಾನ!

ಪಾಲಿಕೆ ಆಸ್ತಿ ಎಂದು ಘೋಷಿಸಲು ಸಿದ್ಧತೆ?
ಚಾಮರಾಜ ಪೇಟೆ ಮೈದಾನ ವಿವಾದದ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಬಿಎಂಪಿ ಮುಖ್ಯ ಆಯುಕರ್ತು, ಜಂಟಿ ಆಯುಕ್ತರ ಜೊತೆ ಸಭೆ ನಡೆಸಿ ಆದಷ್ಟುಬೇಗ ವಿವಾದ ಬಗೆಹರಿಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಾಖಲೆ ನೀಡದಿದ್ದರೆ ಪಾಲಿಕೆ ಆಸ್ತಿ ಎಂದು ಘೋಷಿಸಲು ಬಿಬಿಎಂಪಿ ಮುಂದಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

PREV
Read more Articles on
click me!

Recommended Stories

ಅಭಿವೃದ್ಧಿಗಾಗಿ ಬೆಳಗಾವಿ ಜಿಲ್ಲೆ ವಿಭಜನೆ ಅತ್ಯಗತ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿ: ಧರ್ಮ-ಸಂವಿಧಾನ ಬೇರೆಯಲ್ಲ:-ಪವನ್ ಕಲ್ಯಾಣ ಬಣ್ಣನೆ