ಬೆಳಗ್ಗೆ ತಡವಾಗಿ ಎದ್ದಿದ್ದರಿಂದ ನಾನು ನೂತನ ಸಚಿವರ ಪ್ರಮಾಣ ವಚನ ಸಮಾರಂಭಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎಂದು ಸಚಿವ ಸ್ಥಾನ ವಂಚಿತ ಶಾಸಕ ಉಮೇಶ್ ಕತ್ತಿ ಸಮಜಾಯಿಷಿ ನೀಡಿದ್ದಾರೆ. 70ನೇ ವರ್ಷದೊಳಗೆ ಒಮ್ಮೆಯಾದರೂ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದ್ದಾರೆ.
ಬೆಂಗಳೂರು(ಫೆ.07): ನನಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಯಾವ ಬೇಸರವೂ ಇಲ್ಲ. ಬೆಳಗ್ಗೆ ತಡವಾಗಿ ಎದ್ದಿದ್ದರಿಂದ ನಾನು ನೂತನ ಸಚಿವರ ಪ್ರಮಾಣ ವಚನ ಸಮಾರಂಭಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎಂದು ಸಚಿವ ಸ್ಥಾನ ವಂಚಿತ ಶಾಸಕ ಉಮೇಶ್ ಕತ್ತಿ ಸಮಜಾಯಿಷಿ ನೀಡಿದ್ದಾರೆ.
ಅಲ್ಲದೆ, ನಾನು ಮಂತ್ರಿಯಾಗದಿದ್ದರೇನು? ನನಗಿನ್ನೂ 59 ವರ್ಷ. 70 ವರ್ಷದೊಳಗೆ ಒಮ್ಮೆಯಾದರೂ ಅಖಂಡ ಕರ್ನಾಟಕದ ಮುಖ್ಯಮಂತ್ರಿಯಾಗುತ್ತೇನೆ ಎಂಬ ಆಶಾಭಾವನೆಯನ್ನೂ ವ್ಯಕ್ತಪಡಿಸಿದ್ದಾರೆ.
ಗಡಿನಾಡಲ್ಲಲ್ಲ , ಕನ್ನಡಕ್ಕೆ ಬೆಂಗಳೂರಲ್ಲೇ ಆತಂಕ ಇರೋದು: ರವಿ ಹೆಗಡೆ
ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಉಮೇಶ್ ಕತ್ತಿ ಅವರು ಗುರುವಾರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರು ಹಾಜರಾಗುವ ಮೂಲಕ ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರಾದರೂ ಅದನ್ನು ತಮ್ಮದೇ ಆದ ರೀತಿಯಲ್ಲಿ ಸಮರ್ಥಿಸಿಕೊಂಡರು.
ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಂತ್ರಿ ಆಗಲಿಲ್ಲ ಎಂಬ ಕಾರಣಕ್ಕೆ ಯಾವ ಬೇಸರವೂ ಇಲ್ಲ. ಬುಧವಾರ ಕಾರಣಾಂತರಗಳಿಂದ ತಡವಾಗಿ ಮಲಗಬೇಕಾಯಿತು. ಇದರಿಂದ ಗುರುವಾರ ಬೆಳಗ್ಗೆ ಎದ್ದಾಗ ತಡವಾಗಿತ್ತು. ಹಾಗಾಗಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋಗಲಾಗಲಿಲ್ಲ. ಅಷ್ಟಕ್ಕೂ, ನಾನು ಸಚಿವನಾಗಿ ಪ್ರಮಾಣ ವಚನ ತೆಗೆದುಕೊಳ್ಳುವುದಾಗಿದ್ದರೆ ಹೋಗಬೇಕಿತ್ತು. ಈಗ ನಾನು ಹೋಗಲೇ ಬೇಕು ಅಂತ ಏನೂ ಇರಲಿಲ್ಲ ಎಂದರು.
ಬಿಜೆಪಿಯಲ್ಲಿ ಭಿನ್ನಮತ, ಬಂಡಾಯ ಇಲ್ಲ: ರೇಣುಕಾಚಾರ್ಯ
ಕಳೆದ 40 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನಾನು ಭಾರತೀಯ ಜನತಾ ಪಾರ್ಟಿಯ ಶಿಸ್ತಿನ ಸಿಪಾಯಿ. ಬಿಜೆಪಿಯಲ್ಲಿ ಇರುವ ಪ್ರಜಾತಂತ್ರ ವ್ಯವಸ್ಥೆ ಬೇರೆ ಯಾವ ಪಕ್ಷದಲ್ಲೂ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನ್ನ ಗುರುಗಳು. ನನಗೀಗ ಇನ್ನೂ 59 ವರ್ಷ ಅಷ್ಟೆ. ಮಂತ್ರಿಯಾಗದಿದ್ದರೇನು ಸದ್ಯಕ್ಕೆ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಇರುತ್ತೇನೆ. ನನಗಿನ್ನೂ ಸಾಕಷ್ಟುಅವಕಾಶವಿದೆ. 70ನೇ ವರ್ಷದೊಳಗೆ ಒಮ್ಮೆಯಾದರೂ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ ಎಂದು ಕತ್ತಿ ಹೇಳಿದರು.
ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ ಹೇಳಿದ್ದು ನಿಜ. ಯಾವುದಕ್ಕೂ ನಸೀಬು (ಹಣೆಬರಹ) ಇರಬೇಕು. ಮೊದಲು 10+3 ಜನರಿಗೆ ಸಚಿವ ಸ್ಥಾನ ಎಂದಿದ್ದೂ ನಿಜ, ಆಮೇಲೆ ಅದು ಬದಲಾಗಿದ್ದೂ ನಿಜ. ಮೂವರನ್ನು ಯಾವ ಕಾರಣಕ್ಕೆ ಕೈಬಿಟ್ಟರು ಎಂಬುದು ಗೊತ್ತಿಲ್ಲ. ಇದರಿಂದ ನನಗೆ ಅಸಮಾಧಾನವೂ ಇಲ್ಲ. ಪಕ್ಷದಲ್ಲೇ ಇರುತ್ತೇನೆ. ಮುಂದೆ ಮಂತ್ರಿ ಆಗಬಹುದು ಎಂದರು.