'ಸಿಎಂ ಸ್ಥಾನದ ಪದತ್ಯಾಗ ಬಳಿಕ ನಿವೃತ್ತಿಗೆ ಚಿಂತಿಸಿದ್ದೆ'

By Web DeskFirst Published Sep 10, 2019, 1:06 PM IST
Highlights

ನಾನು ಸಿಎಂ ಸ್ಥಾನ ತೊರೆದ ಬಳಿಕ ನಿವೃತ್ತಿ ಬಗ್ಗೆ ಯೋಚನೆ ಮಾಡಿದ್ದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. 

ತಿಪಟೂರು [ಸೆ.10]: ಮುಖ್ಯಮಂತ್ರಿ ಸ್ಥಾನದಿಂದ ಪದತ್ಯಾಗ ಮಾಡಿದಂತಹ ಸಂದರ್ಭದಲ್ಲಿ ರಾಜಕೀಯ ನಿವೃತ್ತಿಯನ್ನು ಘೋಷಿಸುವ ಮನಸ್ಸನ್ನು ಹೊಂದಿದ್ದು, ಜನರ ಪ್ರೀತಿ, ಅಭಿಮಾನಕ್ಕೆ ಕಟ್ಟುಬಿದ್ದು ಜನರಿಗಾಗಿ ಉಳಿದಿರುವುದಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ತಾಲೂಕಿನ ನೊಣವಿನಕೆರೆಯಲ್ಲಿ ಒಕ್ಕಲಿಗ ಸಮುದಾಯ ಭವನ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಆರೂವರೆ ಕೋಟಿ ಜನರ ಅಭಿಮಾನದಿಂದ ಅಧಿಕಾರಕ್ಕೆ ಬಂದಿದ್ದು, ಅಧಿಕಾರ ಇದ್ದರೂ ಇಲ್ಲದಿದ್ದರೂ ಜನರ ಬಳಿಯಲ್ಲಿಯೇ ಇದ್ದು ಅವರ ಸೇವೆ ಸಲ್ಲಿಸುತ್ತೇನೆ. ಅಧಿಕಾರಕ್ಕಾಗಿ ಬೆನ್ನಿಗೆ ಚೂರಿ ಹಾಕುವಂತಹ ಜನರ ನಡುವೆಯೂ, ಅಭಿಮಾನ ತೋರುವ ಜನರು ಜೊತೆಗಿರುವವರೆಗೂ ಸೇವೆ ಮಾಡುತ್ತೇನೆ. ಅಧಿಕಾರದ ಆಸೆಯಿದ್ದಿದ್ದರೆ ಶಾಸಕರನ್ನು ಖರೀದಿಸುವುದು ಕಷ್ಟದ ಕೆಲಸವಾಗಿರಲಿಲ್ಲ. ಆದರೆ ನಾನು ಖುಷಿ, ಸಂತೋಷದಿಂದ ಸ್ವಂತ ಅಧಿಕಾರವನ್ನು ತ್ಯಜಿಸಿದ್ದು, ರಾಜ್ಯದ ಜನರಿಗೆ, ರೈತರಿಗೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿರುವ ಆತ್ಮತೃಪ್ತಿ ನನಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೇಕಾರರ ಸಾಲ ಮನ್ನಾ ಕೇವಲ ಆಶ್ವಾಸನೆಗೆ ಸೀಮಿತ:

ಇಂದಿನ ರಾಜ್ಯ ಸರ್ಕಾರ ಪ್ರಚಾರ ಮಾಡುತ್ತಿರುವ ನೇಕಾರರ 100 ಕೋಟಿ ರು. ಸಾಲಮನ್ನಾ ಯೋಜನೆಗೆ ಹಿಂದಿನ ಕಾಂಗ್ರೆಸ್‌ನ ಸಿದ್ದರಾಮಯ್ಯ ಸರ್ಕಾರದಲ್ಲಿ .53 ಕೋಟಿ ಹಣವನ್ನು ನೀಡಿದ್ದರು. ಉಳಿದ 47 ಕೋಟಿಯನ್ನು ನೀಡಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ನಿಜಕ್ಕೂ ದುರಂತದ ಸಂಗತಿಯಾಗಿದೆ. ನೇಕಾರರ ಸಾಲದಲ್ಲಿ ಅನೇಕ ತಾಂತ್ರಿಕ ತೊಂದರೆಯಿದ್ದು ಅದನ್ನು ಅವರ ಅಧಿಕಾರ ಮುಗಿದರೂ ಬಗೆಹರಿಸಿ ಮನ್ನಾ ಮಾಡಲು ಸಾಧ್ಯವಿಲ್ಲ. ಹೆಸರಿಗೆ ಪ್ರಚಾರಕ್ಕೆ ಮಾತ್ರವೇ ಸೀಮಿತವಾಗಿರುತ್ತದೆ ಎಂದು ವ್ಯಂಗ್ಯವಾಡಿದರು.

click me!