Covid Crisis: ಮಾಸ್ಕ್‌ ಧರಿಸುವುದು ಅವರವರಿಗೆ ಬಿಟ್ಟದ್ದು, ನಾನು ಧರಿಸುತ್ತಿಲ್ಲ: ಸಚಿವ ಕತ್ತಿ

By Kannadaprabha News  |  First Published Jan 19, 2022, 6:11 AM IST

*  ಕೊರೋನಾ ನಿಯಮಗಳಲ್ಲಿ ಸಡಿಲಿಕೆ ಮಾಡಿದ ಕೇಂದ್ರ ಸರ್ಕಾರ
* ಮಾಸ್ಕ್‌ ಹಾಕದೆ ಇರುವುದು ನನ್ನ ವೈಯಕ್ತಿಕ ವಿಚಾರ
*  ಸಿಎಂ ಕುರ್ಚಿ ಖಾಲಿ ಇಲ್ಲ


ಅಥಣಿ(ಜ.19): ಕಳೆದ ಎರಡು ದಿನದ ಹಿಂದೆ ದೇಶದ ಪ್ರಧಾನಿ ನರೇಂದ್ರ ಮೋದಿ(Narendra Modi) ಮಾಸ್ಕ್‌ ಧರಿಸುವುದು, ಬಿಡುವುದು ಅವರವರ ಭಾವಕ್ಕೆ ಬಿಟ್ಟಿದ್ದು ಎಂದು ಹೇಳಿದ್ದಕ್ಕೆ ನಾನು ಮಾಸ್ಕ್‌ ಧರಿಸುತ್ತಿಲ್ಲ ಎಂದು ಆಹಾರ ಇಲಾಖೆ ಮತ್ತು ಅರಣ್ಯ ಇಲಾಖೆ ಸಚಿವ ಉಮೇಶ ಕತ್ತಿ(Umesh Katti) ಹೇಳಿದ್ದಾರೆ. ಆದರೆ ಈ ಹೇಳಿಕೆ ವಿವಾದ ಆಗುತ್ತಿದ್ದಂತೆ ಟ್ವೀಟ್‌ ಮಾಡಿರುವ ಆವರು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕೇಂದ್ರ ಸರ್ಕಾರ(Central Government) ಕೊರೋನಾ(Coronavirus) ನಿಯಮಗಳಲ್ಲಿ ಕೆಲವನ್ನು ಸಡಿಲಿಕೆ ಮಾಡಲಾಗಿದೆ. ಮಾಸ್ಕ್‌(Mask) ಹಾಕದೆ ಇರುವುದು ನನ್ನ ವೈಯಕ್ತಿಕ ವಿಚಾರ. ನಾನು ಮಾಸ್ಕ್‌ ಹಾಕುವುದಿಲ್ಲ ಎಂದು ಹೇಳಿದ್ದರು. ಬಳಿಕ ಟ್ವೀಟಿಸಿ ಮಾಸ್ಕ್‌ ಹಾಕುವ ವಿಚಾರದಲ್ಲಿ ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಪಾಲಿಸಬೇಕು ಎನ್ನುವುದು ನನ್ನ ಹೇಳಿಕೆಯಾಗಿತ್ತು. ಮಾಸ್ಕ್‌ ಹಾಕಬೇಡಿ ಎಂದು ಯಾರಿಗೂ ಹೇಳಿಲ್ಲ. ನನ್ನ ಹೇಳಿಕೆಗೆ ಅಪಾರ್ಥ ಕಲ್ಪಿಸುವುದು ಬೇಡ ಎಂದು ಸಮರ್ಥಿಸಿಕೊಂಡಿದ್ದಾರೆ.

Tap to resize

Latest Videos

ಮತ್ತೆ ಸಿಎಂ ಬದಲಾವಣೆ ವಿಚಾರ: ಯಡಿಯೂರಪ್ಪಗೆ ಟಾಂಗ್‌ ಕೊಟ್ಟ ಸಚಿವ ಕತ್ತಿ..!

ಸಿಎಂ ಕುರ್ಚಿ ಖಾಲಿ ಇಲ್ಲ

ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಖಾಲಿಯಾದ ತಕ್ಷಣ ನಿಮಗೆ ಹೇಳುತ್ತೇನೆ. ಇಷ್ಟರಲ್ಲಿ ಸಚಿವ ಸಂಪುಟ ವಿಸ್ತರಣೆ(Cabinet Expansion)  ಹಾಗೂ ಪುನಾರಚನೆ ಎಂಬುವುದು ಸತ್ಯಕ್ಕೆ ದೂರವಾದ ಮಾತು. ಕೆಲವರು ಸಂಕ್ರಾಂತಿ ನಂತರ ಹಾಗೂ ಜ.24 ನಂತರ ಬದಲಾವಣೆಯಾಗುತ್ತದೆ ಎಂದು ಹೇಳುತ್ತಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ. ಇನ್ನು ಸಚಿವ ಸಂಪುಟದಲ್ಲಿ 4 ಸ್ಥಾನಗಳು ಖಾಲಿ ಇದ್ದು, ಸ್ಥಾನಗಳನ್ನು ತುಂಬುವುದು ಬಿಡುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದರು.

ರೈತರು ಶ್ರೀಗಂಧ ಮುಕ್ತ ಬೆಳೆಯಲು ಅವಕಾಶ

ಅರಣ್ಯ ನೀತಿಯಲ್ಲಿ(Forest Policy) ಸ್ವಲ್ಪ ಬದಲಾವಣೆ ಮಾಡಿ ಶ್ರೀಗಂಧ ಮತ್ತು ಟೀಕ್‌ ವುಡ್‌ ಅಂತಾ ಒಟ್ಟು 25 ಗಿಡಗಳನ್ನು ರೈತರು ಮುಕ್ತವಾಗಿ ಬೆಳೆದು ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗುವುದು. ಅದಕ್ಕಾಗಿ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಜತೆಗೆ ಚರ್ಚೆ ನಡೆದಿದೆ. ಅವುಗಳ ವ್ಯಾಪ್ತಿಗೆ ಈ ಗಿಡಗಳನ್ನು ತರಲು ಶೀಘ್ರದಲ್ಲಿಯೇ ಆದೇಶ ಹೊರಬಲಿದೆ ಎಂದು ಅರಣ್ಯ ಖಾತೆ ಸಚಿವ ಉಮೇಶ ಕತ್ತಿ ಹೇಳಿದರು.

ಅಥಣಿಯಲ್ಲಿ ಸೋಮವಾರ ಸಂಜೆ ಅರಣ್ಯ ಇಲಾಖೆ 20 ಎಕರೆ ಪ್ರದೇಶದಲ್ಲಿ 1.30 ಕೋಟಿಯಲ್ಲಿ ನಿರ್ಮಿಸಿರುವ ಶ್ರೀ ಲಕ್ಷೀದೇವಿ ಉದ್ಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ(Karnataka) ಪಕ್ಕದ ರಾಜ್ಯಗಳಲ್ಲಿ ಶ್ರೀಗಂಧ(Sandalwood) ಬೆಳೆಯುವುದಿಲ್ಲ. ಆದರೆ ಇಲ್ಲಿ ಬೆಳೆದಿರುವುದನ್ನು ಖರೀದಿಸಿ ಅವುಗಳ ಸಂಸ್ಕರಣವನ್ನು ನೆರೆ ರಾಜ್ಯದವರು ಮಾಡುತ್ತಿದ್ದಾರೆ. ನಂತರ ಅದನ್ನೇ ಮಾರಾಟ ಮಾಡುತ್ತಿದ್ದಾರೆ. ಈ ಹೊಸ ನೀತಿ ಜಾರಿಗೆ ಬರುವುದರಿಂದ ರೈತರು ಮುಕ್ತವಾಗಿ ಬೆಳೆಯುವುದರಿಂದ ಅವುಗಳಿಂದ ಆಗುವ ಉಪ ಉತ್ಪಾದನೆಯನ್ನು ಆರಂಭಿಸಿ ರೈತರು ಆದಾಯ ಹೆಚ್ಚಿಸಿಕೊಳ್ಳಬಹುದು ಎಂದು ಹೇಳಿದರು.

ರಾಜ್ಯದಲ್ಲಿ ಈಗ ಶೇ.21ರಷ್ಟು ಅರಣ್ಯ ಪ್ರದೇಶ(Foresrt) ಇದೆ. ಇದನ್ನು ಶೇ.33ರಷ್ಟು ಏರಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಈ ಕುರಿತು ಕಂದಾಯ ಇಲಾಖೆ(Department of Revenue) ಅವರೊಂದಿಗೆ ಚರ್ಚೆ ಮಾಡಲಾಗಿದೆ. ಅವರ ಗೈರಾಣ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಚರ್ಚೆ ಮಾಡಲಾಗುತ್ತಿದೆ ಎಂದ ಅವರು, ಈಗಾಗಲೇ ರಾಜ್ಯದಲ್ಲಿ 1500 ಆನೆಗಳು, 500 ಹುಲಿ, 300 ಸಿಂಹಗಳು ಇವೆ. ಅರಣ್ಯ ಪ್ರದೇಶ ಹೆಚ್ಚಾದರೆ ಇವುಗಳ ಸಂತತಿ ಕೂಡ ಹೆಚ್ಚಾಗುತ್ತದೆ ಎಂದು ಹೇಳಿದರು.

'ಬಿಜೆಪಿ ಬಗ್ಗೆ ಮಾತಾಡಲು ಸಿದ್ದರಾಮಯ್ಯ ಯಾರು?'

ಅಥಣಿ ತಾಲೂಕಿಗೆ ಪ್ರತಿವರ್ಷ 30 ಸಾವಿರ ಸಸ್ಯಗಳನ್ನು ಬೆಳೆಯಲು ಸ್ಥಳದಲ್ಲಿಯೇ ಸಚಿವರು ಆದೇಶ ಮಾಡಿದರು. ಸವಳು ಜವಳು ಪ್ರದೇಶದಲ್ಲಿ ಬಿದಿರು ಬೆಳೆಯುವುದರಿಂದ ರೈತರು ತಮ್ಮ ಭೂಮಿ ರಕ್ಷಿಸಿಕೊಳ್ಳುವುದು ಕೂಡ ಒಳ್ಳೆಯ ಆದಾಯ ಮಾಡಿಕೊಳ್ಳಬಹುದು. ಈಗ ನಾವು ಬಿದಿರನ್ನು ಆಮದು ಮಾಡಿಕೊಳ್ಳುತಿದ್ದೇವೆ. ಸವಳು ಜವಳು ಪ್ರದೇಶದಲ್ಲಿ ಬಿದಿರನ್ನು ಬೆಳೆದರೆ ನಾವು ಕೂಡ ಹೊರ ದೇಶಗಳಿಗೆ ರಪ್ತು ಮಾಡಬಹುದು ಎಂದರು.
ಮಾಜಿ ಉಪ ಮುಖ್ಯಮಂತ್ರಿ, ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ(Laxman Savadi) ಮಾತನಾಡಿ, ಸರ್ಕಾರ ಯೋಜನೆ ಯಶಸ್ವಿಯಾಗಲು ಜನರ ಸಹಕಾರ ಮುಖ್ಯ ಎಂದ ಅವರು, ಈ ಉದ್ಯಾನ ನಿರ್ಮಾಣಕ್ಕೆ ಹಿಂದಿನ ಶಕ್ತಿ ಸಮಾಜ ಸೇವಕರಾದ ಅರವಿಂದ ದೇಶಪಾಂಡೆ ಅವರು ಎಂದು ದೇಶಪಾಂಡೆ ಅವರ ಕೊಡುಗೆಯನ್ನು ಶ್ಲಾಘಿಸಿದರು.

ಉತ್ತರ ಕರ್ನಾಟಕದ ಆರ್‌ಎಸ್‌ಎಸ್‌ ಮುಖ್ಯಸ್ಥ ಅರವಿಂದ ದೇಶಪಾಂಡೆ ಮಾತನಾಡಿ, ಜೆ.ಇ.ಶಿಕ್ಷಣ ಸಂಸ್ಥೆಯು ಈ ಉದ್ಯಾನವನ್ನು ನಿರ್ಮಾಣ ಮಾಡಲು ಶ್ರಮಿಸಿರುವುದನ್ನು ಸವಿಸ್ತಾರವಾಗಿ ವಿವರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಅಥಣಿ ಶಾಸಕ ಮಹೇಶ ಕುಮಟಳ್ಳಿ ವಹಿಸಿದ್ದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಅರವಿಂದ ದೇಶಪಾಂಡೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಅರಣ್ಯ ಅಧಿಕಾರಿಗಳಾದ ವಿಜಯಕುಮಾರ ಸಾಲಿಮಠ ಅಂತೋನಿ ಮರಿಯಪ್ಪ ಪಾಲ್ಗೊಂಡಿದ್ದರು.
 

click me!