* ಯಾದಗಿರಿಯಲ್ಲಿ ಮೃತಪಟ್ಟ ಮೇಲೂ ಬರುತ್ತಿದೆ ಲಸಿಕೆ ಪಡೆದ, ಟೆಸ್ಟ್ ಮಾಡಿಸಿದ ಸಂದೇಶ
* ಕೋವಿಡ್ ಟೆಸ್ಟ್, ಲಸಿಕಾಕರಣದ ಗುರಿ ಸಾಧನೆಗೆ ಅಧಿಕಾರಿಗಳ ಗೋಲ್‌ಮಾಲ್
* ಮಕ್ಕಳ ಜೀವದ ಜೊತೆಯೂ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳು
ಆನಂದ್ ಎಂ. ಸೌದಿ
ಯಾದಗಿರಿ(ಜ.19): ಸತ್ತವರ ಹೆಸರಲ್ಲೂ ಲಸಿಕೆ, ನೆಗೆಟಿವ್ ಸರ್ಟಿಫಿಕೆಟ್! 2ನೇ ಡೋಸ್ ಲಸಿಕೆ(Vaccine) ಪಡೆಯದವರಿಗೂ ಕೋವಿಡ್ ಪೈನಲ್ ಸರ್ಟಿಫಿಕೆಟ್(Certificate). ಇದು ಕೋವಿಡ್(Covid-19) ಆತಂಕದ ಮಧ್ಯೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅವಾಂತರಗಳು. ಬಹುತೇಕ ಲಸಿಕಾ ಮೇಳ, ಚೆಕ್‌ಪೋಸ್ಟ್ ಪರೀಕ್ಷಾ ಕೇಂದ್ರಗಳಲ್ಲೇ ಇಂಥ ಎಡವಟ್ಟುಗಳಾಗಿದ್ದು ಗುರಿ ಸಾಧನೆಗೆ (ಟಾರ್ಗೆಟ್) ಮೇಲಧಿಕಾರಿಗಳ ಒತ್ತಡ, ಶೇಕಡ ನೂರಕ್ಕೆ ನೂರರಷ್ಟು ದಾಖಲೆ ತೋರಿಸಬೇಕು ಎನ್ನುವ ಧಾವಂತವೇ ಇಂಥ ಎಡವಟ್ಟುಗಳಿಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ಯಾದಗಿರಿಯಲ್ಲಿ ಏನಾಗುತ್ತಿದೆ:
undefined
ಮುಂಬೈ, ಬೆಂಗಳೂರು, ಹೈದರಾಬಾದ್, ಗೋವಾ ಹಾಗೂ ಪುಣೆ ಸೇರಿ ವಿವಿಧ ಮಹಾನಗರಗಳಿಗೆ ದುಡಿಯಲು ಇಲ್ಲಿಂದ ಗುಳೆ ಹೋಗಿದ್ದ ಕಾರ್ಮಿಕರ(Labors) ಪೈಕಿ ಅನೇಕರಿಗೆ 2ನೇ ಡೋಸ್ ನೀಡಲಾಗಿದೆ ಎಂದು ಸಂದೇಶ ಬಂದಿದೆ. ವಾಸ್ತವದಲ್ಲಿ ಅವರು ಲಸಿಕಾಕರಣದ(Vaccination) ವೇಳೆ ಊರಿನಲ್ಲಿ ಇರಲೇ ಇಲ್ಲ. ಲಸಿಕೆ ಪಡೆಯದಿದ್ದರೂ ಈ ರೀತಿ ಮೊಬೈಲ್ ಸಂದೇಶ ಹೇಗೆ ಬಂತೆಂಬ ಅಚ್ಚರಿ ಒಂದು ಕಡೆಯಾದರೆ, ದಾಖಲೆಗಳಲ್ಲಿ ಎರಡೂ ಡೋಸ್ ಪಡೆದಿದ್ದಾರೆಂದು ದಾಖಲಾಗಿದ್ದರಿಂದ ಈಗ ಎರಡನೇ ಡೋಸ್ ಪಡೆಯಬೇಕೆಂದರೂ ಪಡೆಯಲಾಗುತ್ತಿಲ್ಲ ಎನ್ನುವ ಸಮಸ್ಯೆ ಮತ್ತೊಂದು ಕಡೆ.
Karnataka: ಚಿಕ್ಕಬಳ್ಳಾಪುರ, ಯಾದಗಿರಿ ಮನೆಗಳಿಗೆ ಪೈಪ್‌ನಲ್ಲಿ ಗ್ಯಾಸ್
ಈ ಎಡವಟ್ಟು ಇಲ್ಲಿಗೇ ನಿಂತಿಲ್ಲ. ಶಾಲಾ ಮಕ್ಕಳ ಲಸಿಕೆ ವಿಚಾರದಲ್ಲೂ ಗುರಿ ಸಾಧನೆಗೆ ಅಧಿಕಾರಿಗಳು ತಪ್ಪಿನ ಮೇಲೆ ತಪ್ಪು ಮಾಡಿದ್ದಾರೆ. ನಿಗದಿಪಡಿಸಿದಷ್ಟು ವಯೋಮಿತಿ ಇಲ್ಲದವರನ್ನೂ ಕೂಡ ಲಸಿಕಾಕರಣಕ್ಕೆ ಒಳಪಡಿಸುವ ಮೂಲಕ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವಂತಿದೆ ಅಧಿಕಾರಿಗಳ ಆಟ.
ಬಹುತೇಕವಾಗಿ ಜಿಲ್ಲೆಯಲ್ಲಿ ‘ಲಸಿಕಾ ಮೇಳ’ಗಳಲ್ಲೇ ಈ ರೀತಿ ಬೋಗಸ್ ದಾಖಲೀಕರಣ ಹೆಚ್ಚಾಗಿ ನಡೆದಿರುವುದು ‘ಕನ್ನಡಪ್ರಭ’(Kannaa Prabha) ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ(Reality check) ಬೆಳಕಿಗೆ ಬಂದಿದೆ. ಲಸಿಕೆಗೆ ಅನೇಕರು ಹಿಂದೇಟು ಹಾಕುತ್ತಿರುವ ಮಧ್ಯೆ, ಶೇಕಡ ನೂರಕ್ಕೆ ನೂರರಷ್ಟು ಲಸಿಕಾಕರಣ ದಾಖಲೆಯಾಗಬೇಕು ಎನ್ನುವ ಮೇಲಧಿಕಾರಿಗಳ ಒತ್ತಡ ಸಿಬ್ಬಂದಿಗೆ ಹೆಚ್ಚಾಗುತ್ತಿದೆ. ಶಿಸ್ತುಕ್ರಮದ ಭೀತಿ ಹಿನ್ನೆಲೆಯಲ್ಲಿ ಇಂಥ ಬೋಗಸ್ ಎಂಟ್ರಿಗಳು ಅನಿವಾರ‍್ಯ ಎಂದು ಆರೋಗ್ಯ ಇಲಾಖೆಯ(Department of Health) ಹೆಸರೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಮೃತನಿಗೆ ಚೆಕ್‌ಪೋಸ್ಟಲ್ಲಿ ಟೆಸ್ಟ್!:
ನಾಲ್ಕೈದು ತಿಂಗಳ ಹಿಂದೆ ಮೃತಪಟ್ಟವರಿಗೂ(Death) ಲಸಿಕೆ ಹಾಕಿರುವುದು ಹಾಗೂ ಎರಡ್ಮೂರು ತಿಂಗಳ ಹಿಂದೆಯೇ ಮೃತಪಟ್ಟಿದ್ದ ಯುವಕನೊಬ್ಬನಿಗೆ ಗುರುಮಠಕಲ್ ಸಮೀಪದ ಚೆಕ್‌ಪೋಸ್ಟ್‌ನಲ್ಲಿ ಕೋವಿಡ್ ಟೆಸ್ಟ್(Covid Test) ಮಾಡಿ ನೆಗೆಟಿವ್ ರಿಪೋರ್ಟ್ ನೀಡಲಾಗಿರುವ ದಾಖಲೆಗಳು ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ. ಇವೆಲ್ಲ ನಕಲಿ ಎಂಟ್ರಿಗಳ ಕೆಲ ಸ್ಯಾಂಪಲ್ ಅಷ್ಟೆ.
ಇನ್ನು ಶಹಾಪುರ ತಾಲೂಕಿನ ದೋರನಹಳ್ಳಿಯ, ಸಹಕಾರಿ ಬ್ಯಾಂಕ್ ನಿರ್ದೇಶಕ ಮುರಾರಿರಾವ್ (69) ಮೇ 23, 2021ರಂದು ಕೋವಿಡ್ ಸೋಂಕಿನಿಂದ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆದರೆ ಆಗಸ್ಟ್ 4, 2021ರಂದು ಮುರಾರಿರಾವ್ 2ನೇ ಡೋಸ್ (ಬ್ಯಾಚ್ ನಂ. 4121ಎಂಸಿ037) ಲಸಿಕೆಯನ್ನು ಯಶಸ್ವಿಯಾಗಿ ಪಡೆದಿದ್ದಾರೆ ಎಂಬ ಮೆಸೇಜ್ ಹಾಗೂ ಕೋವಿಡ್ ಪೋರ್ಟಲ್‌ನಲ್ಲಿ(Covid Portal) ಪ್ರಮಾಣ ಪತ್ರ ಬಂದಿರುವುದು ಕುಟುಂಬಸ್ಥರ ಅಚ್ಚರಿಗೆ ಕಾರಣವಾಗಿತ್ತು.
Mekedatu Politics: 'ಪಾದಯಾತ್ರೆಗೂ ಮುನ್ನವೇ ಬೊಮ್ಮಾಯಿ ಸರ್ಕಾರಕ್ಕೆ ನಡುಕ'
ಅದೇ ರೀತಿ ಚಕ್ರ ಗ್ರಾಮದ ಯಮುನಪ್ಪ ಜೂ.12, 2021ರಂದು ಮೃತಪಟ್ಟಿದ್ದರು. ನ.2, 2021ರಂದು ಜಿಲ್ಲೆಯ ಪುಟ್‌ಪಾಕ್ ಚೆಕ್‌ಪೋಸ್ಟ್ ಬಳಿ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ ಎಂಬ ಸಂದೇಶ ಅವರ ಮೊಬೈಲ್‌ಗೆ ಬಂದಿದೆ. ಪ್ರತಿ ಕೇಂದ್ರಕ್ಕೆ ಇಂತಿಷ್ಟು ಲಸಿಕಾಕರಣ ಮಾಡಲೇಬೇಕು ಎಂಬ ಗುರಿಯಿಂದಾಗಿ, ಆಧಾರ್ ಸಂಖ್ಯೆ, ರೇಶನ್ ಕಾರ್ಡ್ ಅಥವಾ ವೋಟರ್ ಐಡಿ ಸಂಖ್ಯೆ ಮೂಲಕ ಬಲ್‌್ಕ ಎಂಟ್ರಿ ಮಾಡುತ್ತಿರುವುದರಿಂದ ಈ ಎಡವಟ್ಟು ಆಗುತ್ತಿದೆ.
ಮೊದಲ ಡೋಸ್ ಪಡೆದಿದ್ದ ನನ್ನ ಪತ್ನಿ ಇನ್ನೂ 2ನೇ ಡೋಸ್ ಪಡೆದಿರಲಿಲ್ಲ. ಹೆರಿಗೆಯಾಗಿದ್ದ ಆಕೆ ತವರು ಮನೆಯಲ್ಲೇ ಇದ್ದಿದ್ದರಿಂದ ಎರಡನೇ ಡೋಸ್ ನೀಡಿರಲಿಲ್ಲ. ಆದರೆ, 2ನೇ ಡೋಸ್ ಲಸಿಕೆ ನೀಡಲಾಗಿದೆ ಎಂಬ ಸಂದೇಶ ಬಂತು. ಈಗ 2ನೇ ಡೋಸ್ ಪಡೆಯಬೇಕೆಂದರೆ ನಮಗೆ ಸಮಸ್ಯೆಯಾಗುತ್ತಿದೆ ಅಂತ ವಡಗೇರಾ ಗ್ರಾಮಸ್ಥ ನಿಂಗಣ್ಣ ಕುರಿಯರ ತಿಳಿಸಿದ್ದಾರೆ.
17ಯಾದಗಿರ1: ಮುರಾರಿರಾವ್ ಮರಣ ಪ್ರಮಾಣಪತ್ರ
17ಯಾದಗಿರ2 : ಮುರಾರಿರಾವ್ ಲಸಿಕೆ ಪ್ರಮಾಣಪತ್ರ
17ಯಾದಗಿರ3 : ಯಮುನಪ್ಪ ಡೆತ್ ಸರ್ಟಿಫಿಕೇಟ್
17ಯಾದಗಿರ4 : ಯಮುನಪ್ಪ ಕೋವಿಡ್ ಟೆಸ್ಟ್ ರಿಪೋರ್ಟ್
17ಯಾದಗಿರ : ಅನಿಲ್ ಎಂಬುವವರು ಎರಡನೇ ಡೋಸ್ ಪಡೆಯದಿದ್ದರೂ ನೀಡಿದೆ ಎನ್ನಲಾದ ಸರ್ಟಿಫಿಕೇಟ್ (ಈ ತರಹದ ಅನೇಕ ಸರ್ಟಿಫಿಕೇಟ್‌ಗಳನ್ನು ಸಂಗ್ರಹಿಸಲಾಗಿದೆ.