ಮುಳುಗಡೆ ರೈತರ ಬೆನ್ನಿಗೆ ನಿಲ್ಲುವ ಅವಕಾಶ ನನ್ನ ಭಾಗ್ಯ: ಸಚಿವ ಮಧು ಬಂಗಾರಪ್ಪ

Published : Oct 24, 2023, 02:00 AM IST
ಮುಳುಗಡೆ ರೈತರ ಬೆನ್ನಿಗೆ ನಿಲ್ಲುವ ಅವಕಾಶ ನನ್ನ ಭಾಗ್ಯ: ಸಚಿವ ಮಧು ಬಂಗಾರಪ್ಪ

ಸಾರಾಂಶ

ಮಲೆನಾಡಿಗರು ಫಲವತ್ತಾದ ಹೊಲ- ಗದ್ದೆಗಳನ್ನು ಮತ್ತು ತಮ್ಮ ಬದುಕನ್ನು ನೀರಿನಲ್ಲಿ ಮುಳುಗಿಸಿ ನಾಡಿಗೆ ಬೆಳಕು ನೀಡಲು ಕಾರಣರಾಗಿದ್ದಾರೆ. ಅವರಿಗೆ ಭೂಮಿ ಹಕ್ಕನ್ನು ನೀಡದೇಹೋದರೆ, ನಾವು ತಿನ್ನುವ ಅನ್ನಕ್ಕೆ ದ್ರೋಹ ಬಗೆದಂತೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು. 

ಬ್ಯಾಕೋಡು (ಅ.24): ಮಲೆನಾಡಿಗರು ಫಲವತ್ತಾದ ಹೊಲ- ಗದ್ದೆಗಳನ್ನು ಮತ್ತು ತಮ್ಮ ಬದುಕನ್ನು ನೀರಿನಲ್ಲಿ ಮುಳುಗಿಸಿ ನಾಡಿಗೆ ಬೆಳಕು ನೀಡಲು ಕಾರಣರಾಗಿದ್ದಾರೆ. ಅವರಿಗೆ ಭೂಮಿ ಹಕ್ಕನ್ನು ನೀಡದೇಹೋದರೆ, ನಾವು ತಿನ್ನುವ ಅನ್ನಕ್ಕೆ ದ್ರೋಹ ಬಗೆದಂತೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು. ಸಿಗಂದೂರು ಕ್ಷೇತ್ರದಲ್ಲಿ ನವರಾತ್ರಿ ವೈಭವದ 8ನೇ ದಿನದ ಅಂಗವಾಗಿ, ಕ್ಷೇತ್ರಕ್ಕೆ ಭೇಟಿ ನೀಡಿ, ದೇವಿ ದರ್ಶನ ಬಳಿಕ ವಿಶೇಷ ಪೂಜೆ ಸಲ್ಲಿಸಿದರು. ಅನಂತರ ದೇವಸ್ಥಾನದ ಶೇಷಪ್ಪ ನಾಯಕ ವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಳುಗಡೆ ರೈತರಿಗೆ, ಅರಣ್ಯ ಹಕ್ಕು ಕಾಯಿದೆ ಸಂಬಂಧಿತ ಅರ್ಜಿಗಳನ್ನು ಪುನರ್ ಪರಿಶೀಲಿಸಿ, 94 ಸಿಸಿ ಮತ್ತು ಬಗರ್‌ಹುಕುಂ ಸಾಗುವಳಿದಾರರಿಗೆ ಭೂ ಮಂಜೂರಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸಲಾಗುವುದು. ಕೃಷಿಗೆ ಸಂಬಂಧಿಸಿದಂತೆ ನಿರಂತರ 5 ಗಂಟೆ ಉಚಿತ ವಿದ್ಯುತ್ ನೀಡಲು ಸರ್ಕಾರ ನಿರ್ಧರಿಸಿದೆ. ಮಂತ್ರಿಯಾದ ನಂತರ ಶೈಕ್ಷಣಿಕವಾಗಿ ₹35 ಸಾವಿರ ಕೋಟಿ ಖರ್ಚು ಮಾಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದರು. ರಾಜ್ಯದಲ್ಲಿ 40 ಸಾವಿರ ಶಿಕ್ಷಕರ ಕೊರತೆ ಇದ್ದು, ಈಗಾಗಲೇ 9000 ಶಿಕ್ಷಕರ ಆಯ್ಕೆ ಪ್ರಕ್ರಿಯೆ ಮುಗಿದಿದೆ. ದಸರಾ ರಜೆ ಮುಗಿಸಿ ಶಾಲೆಗಳನ್ನು ಪುನರಾರಂಭ ಮಾಡುವ ಹೊತ್ತಿನಲ್ಲಿ ಶಿಕ್ಷಕರು ಶಾಲೆಗೆ ಹಾಜರಾಗಲಿದ್ದಾರೆ. ಅತಿ ಶೀಘ್ರದಲ್ಲಿ ಉಳಿದ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು.

ಕಾವೇರಿ ಸಮಸ್ಯೆಗೆ ನ್ಯಾಯಾಲಯದಿಂದ ಪರಿಹಾರ ಸಿಗದು: ಸಂತೋಷ್ ಹೆಗ್ಡೆ

ಕಾಗೋಡು ತಿಮ್ಮಪ್ಪ ಮಾತನಾಡಿ, ನಾಡಿನಾದ್ಯಂತ ಸಿಗಂದೂರು ಚೌಡಮ್ಮನ ಹೆಸರು ಖ್ಯಾತಿ ಪಡೆಯಲು ಅನುವಂಶಿಕ ಧರ್ಮದರ್ಶಿ ಡಾ. ಎಸ್. ರಾಮಪ್ಪ ಅವರು ಕಾರಣ. ಇವರು ಸಮಾಜಕ್ಕೆ ನೀಡಿದ ಅಭೂತಪೂರ್ವ ಕಾರ್ಯಕ್ರಮಗಳು ಇದಕ್ಕೆ ಸಾಕ್ಷಿ ಎಂದು ಹೇಳಿದರು. ಧರ್ಮದರ್ಶಿ ಡಾ. ಎಸ್.ರಾಮಪ್ಪ ಮಾತನಾಡಿ, ಸಮಾಜಕ್ಕೆ ಒಳಿತನ್ನು ಬಯಸುವುದು ನನ್ನ ಕರ್ತವ್ಯ. ಸಿಗಂದೂರು ತಾಯಿ ಏನೇನನ್ನು ಆಜ್ಞಾಪಿಸುತ್ತಾಳೋ, ಅದೇ ರೀತಿ ಸಮಾಜಮುಖಿಯಾಗಿ ಕೆಲಸಗಳನ್ನು ಮಾಡಿದ್ದೇನೆ. ಇನ್ನು ಮುಂದು ಕೂಡ ನಿಮ್ಮೆಲ್ಲರ ಶುಭ ಹಾರೈಕೆಯಿಂದ ಮುಂದುವರಿಸುತ್ತೇನೆ ಎಂದರು.

ಪ್ರಧಾನ ಕಾರ್ಯದರ್ಶಿ ಎಚ್‌.ಆರ್‌. ರವಿಕುಮಾರ್, ಶರಾವತಿ ಮುಳುಗಡೆಯವರಾದ ನಮಗೆ ಭೂಮಿ ಯಾವ ಹಕ್ಕನ್ನು ಈ ಹಿಂದಿನ ಸರ್ಕಾರ ಕೊಡುವ ಕೆಲಸ ಮಾಡಿಲ್ಲ. ನಾವು ಹೊರ ರಾಜ್ಯಗಳಿಂದ ಮೀನು ಹಿಡಿಯಲು ಬಂದವರಲ್ಲ ಹಾಗೂ ಇನ್ಯಾವುದೋ ರಾಜ್ಯದಿಂದ ಡ್ಯಾಂ ಕಟ್ಟಲು ಬಂದ ದಿನಗೂಲಿ ಕೆಲಸದವರೂ ಅಲ್ಲ. ಇಲ್ಲಿ ನಮ್ಮ ಆಜ್ಜನ ಕಾಲದಿಂದ ಹುಟ್ಟಿ ಬೆಳೆದಿದ್ದೇವೆ. ನಾಡಿಗೆ ಬೆಳಕು ಕೊಡಲು ನಮ್ಮ ಜೀವನವನ್ನೇ ಅರ್ಪಿಸಿದ್ದೇವೆ. ಹಾಗಾಗಿ ಮುಳುಗಡೆ ಸಂತ್ರಸ್ತರ ಬದುಕಿಗೆ ಒಂದು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮಕ್ಕೂ ಮುನ್ನ ನುರಿತ ಕಲಾವಿದರಿಂದ ಡೊಳ್ಳು ಕುಣಿತ ಮತ್ತು ಕರೂರು ಹೋಬಳಿ ವಿವಿಧ ಭಜನಾ ತಂಡಗಳ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ ನೀಡಿ, ಸ್ವಾಗತಿಸಲಾಯಿತು. ಹೊಳೆಬಾಗಿಲಿನಿಂದ ಸಿಗಂದೂರಿನವರೆಗೆ ಸಚಿವರು ಸಾರ್ವಜನಿಕ ಬಸ್ಸಿನಲ್ಲಿ ತೆರಳಿದ್ದು ವೀಶೇಷವಾಗಿತ್ತು. ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯಕ್, ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಮಡುಬ ರಾಘವೇಂದ್ರ. ಆಯನೂರು ಮಂಜುನಾಥ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್‌.ಎಂ. ಮಂಜುನಾಥಗೌಡ. ಹಿರಿಯ ವಕೀಲ ದಯಾನಂದ ಸರಸ್ವತಿ ಮತ್ತಿತರರು ಇದ್ದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಖಚಿತ: ರಕ್ಷಾ ರಾಮಯ್ಯ

ಕರೂರು ಬಾರಂಗಿ ಹೋಬಳಿ ಸಮಸ್ಯೆಗಳಿಗೆ ಸ್ಪಂದಿಸಿ: ಜಿಪಂ ಮಾಜಿ ಸದಸ್ಯ ದೇವರಾಜ್ ಕಪ್ಪದೂರು ಮಾತನಾಡಿ, ಶ್ರೀ ಕ್ಷೇತ್ರದ ಧರ್ಮದರ್ಶಿಗಳು ಸಿಗಂದೂರಿನ ಚಿತ್ತ, ಸರ್ಕಾರಿ ಶಾಲೆಗಳತ್ತ ಎಂಬ ಕಾರ್ಯಕ್ರಮದಡಿ ಹಲವು ಸರ್ಕಾರಿ ಶಾಲೆಗಳಿಗೆ ಸುಣ್ಣಬಣ್ಣ ಸೇವೆ ಮೂಲಕ ಗಮನ ಸೆಳೆದಿದ್ದಾರೆ ಎಂದರು. ಕರೂರು ಬಾರಂಗಿಯ ಜನರು ಶರಾವತಿ ಕಣಿವೆ ಅಭಯಾರಣ್ಯ ಮತ್ತು ಮೂಕಾಂಬಿಕಾ ಅಭಯಾರಣ್ಯ ನಡುವೆ ಸಿಲುಕಿ ಬದುಕು ಚಿಂತಾಜನಕವಾಗಿದೆ. ಕರೂರು ಬಾರಂಗಿ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 107 ಶಿಕ್ಷಕರು ಕಾರ್ಯನಿರ್ವಹಿಸಬೇಕು. ಇದರಲ್ಲಿ ಅರ್ಧಕ್ಕಿಂತಲೂ ಕಡಿಮೆ ಅಂದರೆ, ಕೇವಲ 27 ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ದುರ್ಗಮ ಪ್ರದೇಶದ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು ಮತ್ತು ಮಲೆನಾಡಿನ ಎಲೆಚುಕ್ಕಿ ರೋಗಕ್ಕೆ ಸೂಕ್ತ ಕ್ರಮ ಕೈಗೊಂಡು ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.

PREV
Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ