ಕೊಪ್ಪಳ(ಸೆ.19): ಅ. 1 ರಿಂದ ಸತ್ಯಾಗ್ರಹ ಆರಂಭಕ್ಕೆ ಪಂಚಮಸಾಲಿ ಸಮುದಾಯ ತೀರ್ಮಾನಿಸಿದೆ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಅ.1 ರೊಳಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಯನ್ನ ಘೋಷಿಸಬೇಕು. ಇಲ್ಲವಾದರೆ ಬೆಂಗಳೂರಿನಲ್ಲೇ ಹೋರಾಟ ಆರಂಭಿಸಲಾಗುವುದು. ಪಂಚಮಸಾಲಿ ಪೀಠದಿಂದ ಮಾಡಿದ ಪ್ರತಿಭಟನೆಯಿಂದ ಇಡೀ ರಾಜ್ಯದ ಪಂಚಮಸಾಲಿ ಸಮುದಾಯ ಒಂದಾಗಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗಿತ್ತು. ಈ ವೇಳೆ ರಾಜ್ಯ ಸರ್ಕಾರ 6 ತಿಂಗಳ ಸಮಯಾವಕಾಶ ಕೇಳಿತ್ತು. ತಾವೇ ಕೇಳಿದ್ದ ಸಮಯ ಮೀರಿದ್ದು, ಬೇಡಿಕೆ ಈಡೇರಿಲ್ಲ. ಈ ಕಾರಣಕ್ಕೆ ಸರ್ಕಾರಕ್ಕೆ ನಮ್ಮ ಬೇಡಿಕೆ ನೆನಪಿಸಲು ಮತ್ತೆ ಅಭಿಯಾನ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಲಿಂಗಾಯತರಿಗೆ 2ಎ ಮೀಸಲು ಬೆಂಬಲಿಸುವ ಪಕ್ಷಕ್ಕೆ ಬೆಂಬಲ: ಕೂಡಲ ಶ್ರೀ
ಪಂಚಮಸಾಲಿ ಸ್ವಾಮೀಜಿ ಶಾಪದಿಂದ ಅಧಿಕಾರ ಕಳೆದುಕೊಂಡ ಯಡಿಯೂರಪ್ಪ
ಪಂಚಮಸಾಲಿ ಸ್ವಾಮೀಜಿ ಅವರ ಶಾಪದಿಂದ ಬಿ.ಎಸ್. ಯಡಿಯೂರಪ್ಪ ಅಧಿಕಾರಬನ್ನ ಕಳೆದುಕೊಂಡಿದ್ದಾರೆ ಅಂತ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ. ಪಂಚಮಸಾಲಿ ಸ್ವಾಮೀಜಿ ಅವರನ್ನು 700ಕಿ.ಮೀ ನಡೆಸಿದ್ರು, ಈ ಕಾರಣಕ್ಕೆ ಯಡಿಯೂರಪ್ಪ ಅಧಿಕಾರವನ್ನ ಕಳೆದುಕೊಂಡಿದ್ದಾರೆ. ಇದು ಅಂತಿಮ ಹೋರಾಟ, ನಾವು ಸುಮ್ಮನಿರುವುದಿಲ್ಲ. ಪಂಚಮಸಾಲಿಗಳು ಹೇಳಿ ಕೇಳಿ ತಲೆ ಕೆಟ್ಟವರಾಗಿದ್ದಾರೆ. ತಲೆ ಕೆಟ್ಟರೆ ಸುಮ್ಮನಿರುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.