ಬಿಡದಿ ಟೌನ್‌ಶಿಪ್‌ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಪಾದಯಾತ್ರೆಗೆ ಭರ್ಜರಿ ಜನ ಸ್ಪಂದನೆ

Published : Jun 22, 2026, 06:54 AM IST
 Bidadi Township

ಸಾರಾಂಶ

ಬಿಡದಿ ಟೌನ್‌ಶಿಪ್‌ ಯೋಜನೆ ವಿರೋಧಿಸಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ 'ನಮ್ಮ ಭೂಮಿ-ನಮ್ಮ ಹಕ್ಕು' ಘೋಷಣೆಯೊಂದಿಗೆ ಬೃಹತ್ ಪಾದಯಾತ್ರೆ ನಡೆಯಿತು. ಈ ವೇಳೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನಿಖಿಲ್, ರೈತರ ಭೂಮಿ ಉಳಿಸಲು ಕಾನೂನು ಹೋರಾಟಕ್ಕೂ ಸಿದ್ಧ ಎಂದರು. ಪಾದಯಾತ್ರೆ ವೇಳೆ ಯೋಜನೆ ಪರ-ವಿರೋಧ ಬಣಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು.

ರಾಮನಗರ: ಬಿಡದಿ ಟೌನ್‌ಶಿಪ್‌ (ಗ್ರೇಟರ್ ಬೆಂಗಳೂರು ಸಮಗ್ರ ಉಪ ನಗರ) ಯೋಜನೆ ವಿರೋಧಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಭಾನುವಾರ ಬೃಹತ್ ಪಾದಯಾತ್ರೆ ನಡೆಯಿತು. ಬೆಳಗ್ಗೆ 11.30ಕ್ಕೆ ಅಂಚಿಪುರ ಗ್ರಾಮದಿಂದ ಆರಂಭವಾದ ಪಾದಯಾತ್ರೆ ಹೊಸೂರುವರೆಗೆ 8 ಗ್ರಾಮಗಳ ವ್ಯಾಪ್ತಿಯಲ್ಲಿ 11 ಕಿ.ಮೀ. ದೂರ ಸಾಗಿತು. ಬಳಿಕ, ಹೊಸೂರಿನಲ್ಲಿ ಬಹಿರಂಗ ಸಭೆಯೊಂದಿಗೆ ಮೊದಲ ಹಂತದ ಪಾದಯಾತ್ರೆ ಸಮಾಪ್ತಿಗೊಂಡಿತು.

ಬೆಳಗ್ಗೆ 11.30ಕ್ಕೆ ಅಂಚಿಪುರ ಗ್ರಾಮಕ್ಕೆ ಆಗಮಿಸಿದ ನಿಖಿಲ್‌ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಅಂಚಿಪುರ ಗ್ರಾಮದ ಶಕ್ತಿದೇವತೆ ಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ‘ನಮ್ಮ ಭೂಮಿ-ನಮ್ಮ ಹಕ್ಕು’ ಘೋಷಣೆಯೊಂದಿಗೆ ನಿಖಿಲ್‌ ಪಾದಯಾತ್ರೆಗೆ ಚಾಲನೆ ನೀಡಿದರು. ಆದರೆ, ಪಾದಯಾತ್ರೆಯಲ್ಲಿ ಎಲ್ಲಿಯೂ ಜೆಡಿಎಸ್ ಪಕ್ಷದ ಬಾವುಟಗಳನ್ನು ಬಳಸಲಿಲ್ಲ. ಬದಲಿಗೆ, ಪ್ರತಿಭಟನಾಕಾರರು ಹೆಗಲ ಮೇಲೆ ಹಸಿರು ಶಾಲು ಹಾಕಿಕೊಂಡು ಪಾದಯಾತ್ರೆಯಲ್ಲಿ ಸಾಗಿದರು. ಜೆಡಿಎಸ್ ಶಾಸಕರು ಸೇರಿ ಸುಮಾರು ಎರಡೂವರೆ ಸಾವಿರ ಜನರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ದೇವನಹಳ್ಳಿಲಿ ಡಿನೋಟಿಫಿಕೇಷನ್ಮಾ ಡಿದ ಸಿದ್ದು ಜೈಲಿಗೆ ಹೋದ್ರಾ?

ಈ ಮಧ್ಯೆ, ಮೆರೆವೇಗೌಡನದೊಡ್ಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್‌ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಾತೆತ್ತಿದರೆ ಕುಮಾರಣ್ಣ ರೆಡ್ ಜೋನ್ ಮಾಡಿ ನೋಟಿಫಿಕೇಷನ್ ಹೊರಡಿಸಿದರು. ಆದರೆ, ಡಿನೋಟಿಫಿಕೇಷನ್ ಮಾಡಿ ನಾನು ಜೈಲಿಗೆ ಹೋಗಲ್ಲ ಅಂತ ಹೇಳುತ್ತಾರೆ. ಆದರೆ, ನಿಮ್ಮದೇ ಸರ್ಕಾರದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ದೇವನಹಳ್ಳಿಯಲ್ಲಿ ಡಿನೋಟಿಫಿಕೇಷನ್ ಮಾಡಿದರು. ಅವರು ಜೈಲಿಗೆ ಹೋದರಾ? ಈಗ ನೀವು ಡಿನೋಟಿಫಿಕೇಷನ್ ಮಾಡಿದರೆ ಮಾತ್ರ ಜೈಲಿಗೆ ಹೋಗುತ್ತೀರಾ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯನವರು ದೇವನಹಳ್ಳಿಯಲ್ಲಿ ರೈತರ ಭೂಮಿಯನ್ನು ಕೈ ಬಿಟ್ಟರು. ನೀವು ಇಲ್ಲಿ ರೈತರ ಭೂಮಿ ಕೈಬಿಡಿ, ಇದೇ ಜಿಲ್ಲೆಯಿಂದ ಮುಖ್ಯಮಂತ್ರಿ ಆಗಿದ್ದೀರಿ. ಜನರ ಬಳಿ ಕಾಡಿ ಬೇಡಿ ಪೆನ್ನು ಪೇಪರ್ ಪಡೆದಿದ್ದೀರಿ, ಈಗ ರೈತರ ಪರ ನಿಮ್ಮ ಪೆನ್ನು, ಪೇಪರ್ ಉಪಯೋಗಿಸಿ ಎಂದು ಆಗ್ರಹಿಸಿದರು.

ರೈತರು ಬೇಡ ಅಂದಿದ್ದಕ್ಕೆ ಕುಮಾರಸ್ವಾಮಿ ಈ ಯೋಜನೆ ಕೈಬಿಟ್ಟಿದ್ದರು. ಕುಮಾರಸ್ವಾಮಿ ಯಾವತ್ತೂ ರೈತರ ವಿರುದ್ಧ ತೀರ್ಮಾನ ಮಾಡಿಲ್ಲ. ನಾವು ಎಲ್ಲಾ ರೀತಿಯ ಹೋರಾಟಕ್ಕೆ ಸಿದ್ಧರಿದ್ದೇವೆ. ನಾವು ಹೋರಾಟದಿಂದ ಹೆದರಿ ಓಡಿ ಹೋಗುವುದಿಲ್ಲ. ಯಾರ ಬೆದರಿಕೆಗೂ ದೇವೇಗೌಡರ ಕುಟುಂಬ ಹೆದರಲ್ಲ. ರೈತರ ಜೊತೆ ವಿಧಾನಸೌಧ ಚಲೋ ಮಾಡಲು ಸಿದ್ಧ. ಇದರ ವಿರುದ್ಧ ಕಾನೂನು ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಬೇನಾಮಿ ಆಸ್ತಿ ಸಾಬೀತುಪಡಿಸಿ

ಕುಮಾರಸ್ವಾಮಿಯವರು ಈ ಭಾಗದಲ್ಲಿ 100 ಎಕರೆ ಬೇನಾಮಿ ಹೊಂದಿದ್ದಾರೆ ಅಂತ ಸ್ಥಳೀಯ ಶಾಸಕರು ಆರೋಪಿಸಿದ್ದಾರೆ. ಅದನ್ನು ಸಾಬೀತು ಮಾಡಿದರೆ ಆ ಜಮೀನನ್ನು ನಾನು ಶಾಲೆಗೆ ಅಥವಾ ಆಸ್ಪತ್ರೆಗೆ ದಾನ ಮಾಡುತ್ತೇನೆ ಎಂದು ಸವಾಲು ಹಾಕಿದರು.

ಕೇತಗಾನಹಳ್ಳಿ ಗ್ರಾಮದಲ್ಲಿ 1985ರಲ್ಲಿ ನಮ್ಮ ತಂದೆ ಜಾಗ ಖರೀದಿ ಮಾಡಿದ್ದಾರೆ. ಯಾರ ತಲೆ ಒಡೆದು ಅದನ್ನು ಖರೀದಿ ಮಾಡಿಲ್ಲ. ಸಿನಿಮಾ ಹಂಚಿಕೆ ಮಾಡಿದ ಹಣದಲ್ಲಿ ಆ ಜಮೀನನ್ನು ಖರೀದಿ ಮಾಡಿದ್ದೇವೆ. ನಮ್ಮ ತಾಯಿಯ ಹೆಸರಲ್ಲಿ 27 ಎಕರೆ, ನನ್ನ ಹೆಸರಲ್ಲಿ 5‌ ಎಕರೆ ಜಾಗವನ್ನು ಕೋವಿಡ್ ಸಮಯದಲ್ಲಿ ಖರೀದಿ ಮಾಡಿದ್ದೇವೆ. ನಮ್ಮ ಜಾಗದಲ್ಲಿ ವಾಣಿಜ್ಯ ಕಟ್ಟಡ ಕಟ್ಟಿಲ್ಲ. ರೈತರಿಗೆ ಅನುಕೂಲ ಮಾಡಲು ಹಾಲಿನ ಉತ್ಪನ್ನಗಳ ಉತ್ಪಾದನೆಗೆ ಅದನ್ನು ಬಳಸಲು ಇಟ್ಟಿದ್ದೇವೆ ಎಂದು ಹೇಳಿದರು.

ಅಂಚಿಪುರ ಕಾಲೋನಿಯಲ್ಲಿ ಉದ್ವಿಗ್ನ ವಾತಾವರಣ:

ಪಾದಯಾತ್ರೆ ಅಂಚಿಪುರ ಕಾಲೋನಿಗೆ ಬಂದಾಗ ಕಾಲೋನಿಯ ವೃತ್ತದಲ್ಲಿ ಅಳವಡಿಸಿದ್ದ ಟೌನ್ ಶಿಪ್ ಪರವಾದ ಫ್ಲೆಕ್ಸ್‌ಗಳನ್ನು ಪ್ರತಿಭಟನಾಕಾರರು ಹರಿದು ಹಾಕಿದರು. ಇದು ಯೋಜನೆ ಪರವಾಗಿದ್ದ ದಲಿತ ಮುಖಂಡರನ್ನು ಕೆರಳಿಸಿತು.

ಈ ವೇಳೆ, ನಿಖಿಲ್‌ ಅವರು ಕಾಲೋನಿಯ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ಯೋಜನೆಯ ಪರವಾಗಿರುವವರ ಜತೆ ಮಾತುಕತೆ ನಡೆಸಲು ಮುಂದಾದರು. ಆಗ ದಲಿತ ಮುಖಂಡರು ಕೈಯಲ್ಲಿ ಯೋಜನೆ ಪರವಾದ ಫ್ಲೆಕ್ಸ್‌ಗಳನ್ನು ಹಿಡಿದು ಪಾದಯಾತ್ರಿಗಳಿಗೆ ಎದುರಾದರು.

ನಮ್ಮ ಭೂಮಿಯನ್ನು ಟೌನ್‌ಶಿಪ್‌ಗೆ ಕೊಡುತ್ತೇವೆ. ಅದನ್ನು ಪ್ರಶ್ನಿಸಲು ನೀವ್ಯಾರು ಎಂದರು. ಈ ವೇಳೆ, ಪ್ರತಿಭಟನಾಕಾರರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಯಾರ ಉದ್ಧಾರಕ್ಕಾಗಿ ಸಾಲ ತೆಗೆದುಕೊಂಡು ಯೋಜನೆ ಮಾಡುತ್ತಿದ್ದಾರೆ. ರಿಯಲ್ ಎಸ್ಟೇಟ್ ಕಂಪನಿಯ ಜೊತೆ ಕಮಿಷನ್ ಪಡೆಯಲು ಯೋಜನೆ ಮಾಡುತ್ತಿದ್ದೀರಾ? ಏನೇ ಯೋಜನೆ ಮಾಡಿದರೂ ಮುಖ್ಯಮಂತ್ರಿಗಳು ₹30 ಸಾವಿರ ಕೋಟಿ ವೆಚ್ಚದ್ದೇ ಮಾಡುತ್ತಾರೆ. ಸುರಂಗ ರಸ್ತೆ, ಕಸದ ಟೆಂಡರ್ ಎಲ್ಲಾ ₹30 ಸಾವಿರ ಕೋಟಿ ಯೋಜನೆಗಳು. ಅದಕ್ಕಿಂತ ಕಮ್ಮಿ ನಮ್ಮ ಸಿಎಂ ಮುಟ್ಟೋದೆ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

 

 

PREV
Read more Articles on
click me!

Recommended Stories

Mysuru: ಅಕ್ರಮ ಬಾಂಗ್ಲರೆಂದು ಪ್ರಯಾಣಿಕರನ್ನು ಪರಿಶೀಲಿಸಿದ 6 ಮಂದಿ ವಿರುದ್ಧ ಕೇಸ್‌
15,500 ಅಡಿ ಎತ್ತರದ ಶಿಖರ ಏರಿದ ಸೃಷ್ಟಿ ಮೇಟಿ; ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ವಿದ್ಯಾರ್ಥಿನಿ