Dharwad: ಮಾವು ದರದಲ್ಲಿ ಭಾರೀ ಇಳಿಕೆ: ಬೆಳೆಗಾರರಿಗೆ ತೀವ್ರ ನಷ್ಟ

By Girish Goudar  |  First Published May 25, 2022, 4:13 AM IST

*   ಟನ್‌ಗೆ 37 ಸಾವಿರದಷ್ಟಿದ್ದ ದರ ಏಕಾಏಕಿ 18ರಿಂದ 21 ಸಾವಿರಕ್ಕೆ ಇಳಿಕೆ
*  ಮಳೆ ಬಂದ ನಂತರ ಕಾಯಿ ಕೀಳುತ್ತಿರುವ ಬೆಳೆಗಾರರಿಗೆ ತೀವ್ರ ನಷ್ಟ
*  ಧಾರವಾಡ ಜಿಲ್ಲೆಯಲ್ಲಿ ಇನ್ನೂ ತೋಟದಲ್ಲಿದೆ ಎರಡ್ಮೂರು ಸಾವಿರ ಟನ್‌ ಮಾವು
 


ಬಸವರಾಜ ಹಿರೇಮಠ

ಧಾರವಾಡ(ಮೇ.25):  ಹವಾಮಾನ ವೈಪರೀತ್ಯದ ಪರಿಣಾಮದಿಂದ ಬರೀ ಶೇ. 20ರಷ್ಟು ಮಾತ್ರ ಮಾವು ಫಸಲು ಪಡೆದ ಮಾವು ಬೆಳೆಗಾರರು ಇದೀಗ ಅಕಾಲಿಕ ಮಳೆಯಿಂದ ದರದಲ್ಲೂ ಭಾರೀ ಹೊಡೆತ ಅನುಭವಿಸುವಂತಾಗಿದೆ. ಕಳೆದ ನವೆಂಬರ್‌ ತಿಂಗಳಲ್ಲಿ ಸುರಿದ ಮಳೆಯಿಂದ ಹವಾಮಾನ ಬದಲಾಗಿ ಮಾವು ಫಸಲು ತಡವಾಗಿತ್ತು. ಜತೆಗೆ ಬಿಟ್ಟಹೂ ನೆಲಕಚ್ಚಿ ಬರೀ ಶೇ. 20ರಷ್ಟು ಮಾತ್ರ ಮಾವು ಬೆಳೆಗಾರರ ಕೈಗೆ ಸೇರಿತ್ತು. ಶೇ. 15ರಷ್ಟು ಮಾವು ಕೀಳಲಾಗಿದ್ದು ಇನ್ನೂ ಶೇ. 5ರಷ್ಟು ಮಾತ್ರ ಮಾವು ತೋಟದಲ್ಲಿದೆ. ಕಳೆದ ವಾರ ಸುರಿದ ಮಳೆಯಿಂದ ಬಿಸಿಲು ಬಿದ್ದಾಗ ಮಾವು ಕಿತ್ತರಾಯ್ತು ಎಂದುಕೊಂಡ ಬೆಳೆಗಾರರು ಇದೀಗ ಮಾವು ದರ ಕೇಳಿ ಕಂಗಾಲಾಗಿದ್ದಾರೆ.

Tap to resize

Latest Videos

ಮಾವು ಹಂಗಾಮು ಬಂದಾಗ ಟ್ರೇ ಮಾರುಕಟ್ಟೆ ಶುರುವಾಗಿ ಕೆಜಿಗೆ . 110ರ ವರೆಗೆ ಮಾರಾಟವಾಯ್ತು. ತದನಂತರ ಹೋಲ್‌ಸೇಲ್‌ ದರದಲ್ಲಿ ಮಾವು ಖರೀದಿಸುವ ಪ್ರಕ್ರಿಯೆ ಶುರುವಾದಾಗ ಮೇ 10ರ ನಂತರ ಟನ್‌ಗೆ . 37 ಸಾವಿರ ವರೆಗೂ ಕಾಯಿ ಮಾರಾಟವಾಯ್ತು. ಇದೀಗ ಮಳೆಯ ನಂತರ ಕಳೆದ ಭಾನುವಾರ ಹಾಗೂ ಸೋಮವಾರ ಮಾವು ಖರೀದಿ ಮಾಡುವ ಕಂಪನಿಗಳು ಮಾವು ಖರೀದಿಸಲು ಹಿಂದೇಟು ಹಾಕಿದ ಪರಿಣಾಮ ಮಾವು ಬೆಳೆಗಾರರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಶನಿವಾರವಷ್ಟೇ ಟನ್‌ಗೆ . 28ರಿಂದ . 30 ಸಾವಿರ ವರೆಗೆ ಇದ್ದ ದರ ಸೋಮವಾರ ಏಕಾಏಕಿ ಟನ್‌ಗೆ . 18ರಿಂದ . 21 ಸಾವಿರಕ್ಕೆ ಕುಸಿದಿದೆ. ದರದ ಮಾಹಿತಿ ಇಲ್ಲದೇ ಸೋಮವಾರ ಅಂಬ್ಲಿಕೊಪ್ಪ, ನಿಗದಿ ಹಾಗೂ ಇತರೆ ಭಾಗಗಳ ರೈತರು ಮಾವು ಕಿತ್ತು ಮಾರಾಟಕ್ಕೆ ತಂದಾಗ ಗೊತ್ತಾಗಿದ್ದು ದರ ಬಿದ್ದಿರುವುದು.

ಕೋಲಾರ ಜಿಲ್ಲೆಯಲ್ಲಿ ಮಳೆ: ಮಾವು ಸೇರಿ ಹಲವು ಬೆಳೆಗಳ ನಾಶ

ಮೊದಲೇ ಮಾವು ಬೆಳೆ ಬಂದಿಲ್ಲ. ಈ ಬಾರಿ ಸಾಕಷ್ಟು ವೆಚ್ಚ ಮಾಡಿದ್ದೇವು. ಟನ್‌ಗೆ . 30 ಸಾವಿರ ವರೆಗೆ ಪಡೆದರೆ ಮಾತ್ರ ಉತ್ತಮ ಇಲ್ಲದೇ ಹೋದಲ್ಲಿ ಪ್ರಯೋಜನವಿಲ್ಲ. ದೊಡ್ಡ ದೊಡ್ಡ ತೋಟಗಳಲ್ಲಿ ಬರೀ ಕ್ವಿಂಟಲ್‌ಗಟ್ಟಲೇ ಮಾವು ಉತ್ಪಾದನೆಯಾಗಿದೆ. ಕಾಯಿ ಕಿತ್ತು ತರುವ ವೆಚ್ಚ ಸಹ ಸಿಗದ ಸ್ಥಿತಿ ಉಂಟಾಗಿದೆ ಎಂದು ಅಂಬ್ಲಿಕೊಪ್ಪ ರೈತ ಮಂಜುನಾಥ ಆರೇರ ಬೇಸರ ವ್ಯಕ್ತಪಡಿಸಿದರು.

ಮಳೆ ಬಂದರೆ ಮಾವು ಹಾಳಾದಂತೆ. ಮಳೆ ನಂತರ ಕೀಳುವ ಮಾವು ಹಣ್ಣಾಗದೇ ಕಬ್ಬೇರುತ್ತದೆ. ಈ ಕಾರಣದಿಂದ ಜ್ಯೂಸ್‌ ಕಂಪನಿಗಳು ಮಾವು ಖರೀದಿ ಮಾಡುವುದನ್ನು ನಿಲ್ಲಿಸಿವೆ. ಹೀಗಾಗಿ ನಾವು ಸಹ ರೈತರಿಂದ ಎರಡು ದಿನ ಖರೀದಿ ನಿಲ್ಲಿಸಿದ್ದು ಇದೀಗ ತೆಗೆದುಕೊಳ್ಳುತ್ತಿದ್ದೇವೆ. ಆದರೆ, ದರ ಮಾತ್ರ ಟನ್‌ಗೆ . 18ರಿಂದ . 20 ಸಾವಿರ ಮಾತ್ರ. ಎರಡ್ಮೂರು ದಿನಗಳ ಕಾಲ ಮಳೆ, ಮೋಡದಿಂದಾಗಿ ಈ ರೀತಿಯಾಗಿದ್ದು ತಡವಾಗಿ ಮಾವು ಕಿತ್ತ ರೈತರಿಗೆ ತುಂಬ ಅನ್ಯಾಯವಾಗಿದೆ ಎಂದು ಮಾವು ಖರೀದಿ ಮಾಡುತ್ತಿರುವ ದಲ್ಲಾಳಿಯೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದರು.

ಈ ಬಾರಿ ಧಾರವಾಡ ಜಿಲ್ಲೆಯಲ್ಲಿ ಅಂದಾಜು 14 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ 12 ಸಾವಿರ ಟನ್‌ ಮಾವು ಉತ್ಪಾದನೆಯಾಗಿದ್ದು ಇನ್ನೂ ಎರಡ್ಮೂರು ಸಾವಿರ ಟನ್‌ ಮಾವು ತೋಟದಲ್ಲಿದ್ದು ಆ ರೈತರು ದರ ಬಿದ್ದ ಕಾರಣದಿಂದ ತೀವ್ರ ತೊಂದರೆಯಲ್ಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮಾವು ಹವಾಮಾನ ವೈಪರೀತ್ಯದಿಂದ ಪದೇ ಪದೇ ಪೆಟ್ಟು ತಿನ್ನುವ ಕಾರಣ ಸಾಕಷ್ಟುಬೆಳೆಗಾರರು ಮಾವು ತೆಗೆದು ಗೋಡಂಬಿ, ಬಾಳೆ ಹಾಗೂ ಅಡಕೆಯತ್ತ ಹೊರಳುತ್ತಿರುವುದು ಹೊಸದೇನಿಲ್ಲ.
 

click me!