Vijayapura ಸರ್ಕಾರಿ ಆಸ್ಪತ್ರೆಯಲ್ಲಿ ತುಂಬು ಗರ್ಭಿಣಿ ನರಳಾಟ!

By Suvarna News  |  First Published May 24, 2022, 9:01 PM IST
  • ಚಡಚಣದ ಜಿಗಜೇವಣಗಿ ಆಸ್ಪತ್ರೆಯಲ್ಲಿ ಎಡವಟ್ಟು..!
  • ಎಲ್ಲೆಡೆ ವೈರಲ್ ಆದ ನರಳಾಟದ ವಿಡಿಯೋ..!
  • ಆಸ್ಪತ್ರೆಯಲ್ಲಿ ವೈದ್ಯರೇ ಇರಲಿಲ್ಲ
     

ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ಮೇ.24) :‌ ವಿಜಯಪುರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಅದೇನು ದುರ್ದೆಸೆ‌ ಶುರುವಾಗಿದೆಯೋ ಗೊತ್ತಿಲ್ಲ. ಮೊನ್ನೆಯಷ್ಟೇ ಜಿಲ್ಲಾಸ್ಪತ್ರೆಯ ತಾಯಿಮಗು ಹೆರಿಗೆ ಆಸ್ಪತ್ರೆಯಲ್ಲಿ ಸಿಸೇರಿಯನ್‌ ಆದ ಬಾಣಂತಿಯರು ಹೊಲಿಗೆ ಬಿಚ್ಚಿ ನರಳಾಡಿದ್ದರು. ಈ ಸುದ್ದಿಯನ್ನ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಪ್ರಸಾರ ಕೂಡ ಆಗಿತ್ತು. ಆದ್ರೀಗ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಗರ್ಭಿಣಿಯೊಬ್ಬಳು ಚಡಚಣ ತಾಲೂಕಿನ ಜಿಗಜೇವಣಗಿ ಸರ್ಕಾರಿ ಆಸ್ಪತ್ರೆಯಲ್ಲಿ ನರಳಾಡಿದ್ದಾಳೆ...

Tap to resize

Latest Videos

ಆಸ್ಪತ್ರೆಯಲ್ಲಿ ಒದ್ದಾಡಿದ ತುಂಬು ಗರ್ಭಿಣಿ!
ಜಿಗಜೇವಣಗಿ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ಆಗಮಿಸಿದ್ದ ಪೂರ್ಣಿಮಾ ಎನ್ನುವ 9 ತಿಂಗಳ ತುಂಬು ಗರ್ಭಿಣಿ ನರಳಾಡಿದ್ದಾಳೆ.. ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ನಿನ್ನೆ ಮಧ್ಯಾಹ್ನ ಚಡಚಣ ತಾಲೂಕಿನ ಜಿಗಜೇವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಾರೆ. ಆದ್ರೆ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯೆ ಇರಲಿಲ್ಲ. ಹೀಗಾಗಿ ಹೊಟ್ಟೆ ನೋವಿನಿಂದ ಪೂರ್ಣಿ ಒದ್ದಾಡಿದ್ದಾರೆ. ಈ ದೃಶ್ಯವನ್ನ ಸೆರೆ ಹಿಡಿದ ಸ್ಥಳೀಯರೊಬ್ಬರು ಮಾಧ್ಯಮಗಳಿಗೆ ನೀಡಿದ್ದಾರೆ. 

ಜ್ಞಾನವ್ಯಾಪಿ ಮಂದಿರದ ಪರ ಬ್ಯಾಟ್ ಮಾಡಿದ ಬೆಂಗಳೂರು ಶಿಕ್ಷಣ ಸಂಸ್ಥೆ

ಆಸ್ಪತ್ರೆಯಲ್ಲಿ ವೈದ್ಯರೆ ಇರಲಿಲ್ಲ!
 ಮಧ್ಯಾಹ್ನ 1 ಗಂಟೆಗೆ ಆಸ್ಪತ್ರೆಗೆ ಬಂದರೆ, ಆಸ್ಪತ್ರೆಯಲ್ಲಿ ವೈದ್ಯರಾರು ಇರಲಿಲ್ಲವಂತೆ. ಕೇವಲ ಆಸ್ಪತ್ರೆ ಸಿಬ್ಬಂದಿ ಇಬ್ಬರು ಇದ್ದರಂತೆ. ಅವರು ತಪಾಸಣೆ ನಡೆಸಿ, ಚಡಚಣ ಅಥವಾ ವಿಜಯಪುರ ಆಸ್ಪತ್ರೆಗೆ ಹೋಗಲು ಸೂಚಿಸಿದರಂತೆ. ವಾಪಾಸ್ ಮನೆಗೆ ಹೋದ ಮೇಲೆ ಸಂಜೆ ಮತ್ತೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ಜಿಗಜೇವಣಿ ಸರ್ಕಾರಿ ಆಸ್ಪತ್ರೆಗೆ ಮತ್ತೆ ಹೋದಾಗ ಒಬ್ಬರೇ ಒಬ್ಬರು ವೈದ್ಯರು ಆಸ್ಪತ್ರೆಯಲ್ಲಿ ಇರಲಿಲ್ಲವಂತೆ. ಇದರಿಂದ ಹೆರಿಗೆ ನೋವಿನಿಂದ ಆಸ್ಪತ್ರೆಯಲ್ಲಿ ಪೂರ್ಣಿಮಾ ಒದ್ದಾಡಿದ್ದಾರೆ.. ಇಷ್ಟಾದರು ಕೇಳೋದಕ್ಕು ಒಬ್ಬರೇ ಒಬ್ಬ ಸಿಬ್ಬಂದಿ ಇರಲಿಲ್ಲ. ಅಂಬುಲೇನ್ಸ ವ್ಯವಸ್ಥೆ ಮಾಡಿಕೊಡಲು ಸಿಬ್ಬಂದಿ ಇರಲಿಲ್ಲ ಎಂದು ಸಂಬಂಧಿಕರೊಬ್ಬರು ಅಳಲು ತೋಡಿಕೊಂಡಿದ್ದಾರೆ. 

ಅಂಬುಲೇನ್ಸ್‌ನಲ್ಲೇ ಹೆರಿಗೆ!
ಬಳಿಕ ಸ್ಥಳೀಯರೊಬ್ಬರು ಗರ್ಭಿಣಿ ಪರದಾಡುತ್ತಿರುವ ವಿಚಾರವನ್ನ ಅಂಬುಲೇನ್ಸ್ ನವರಿಗೆ ತಿಳಿಸಿದಾಗ ಸ್ಥಳಕ್ಕೆ ಅಂಬುಲೆನ್ಸ್ ಬಂದಿದೆ. ಅಂಬುಲೆನ್ಸ್‌ನಲ್ಲೆ ಚಡಚಣಕ್ಕೆ ಹೋಗುವಾಗ ದಾರಿಯಲ್ಲೆ ಹೆರಿಗೆ ಆಗಿದೆ. ತಾಯಿ ಮಗು ಅಪಾಯದಿಂದ ಪಾರಾಗಿದ್ದಾರೆ.. ಪೂರ್ಣಿಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು,ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.

UDUPI ಮಲಗಿಕೊಂಡೇ ಓದಿ 580 ಅಂಕ ಪಡೆದ ಶ್ರಾವ್ಯಾ!

ನರ್ಸ್ ಜಯಮಾಲಾ ಪ್ರಕರಣದಿಂದಾಗಿ ಈ ಎಡವಟ್ಟು! 
ಜಿಗಜಿವಣಗಿ ಆರೋಗ್ಯ ಕೇಂದ್ರದ ಹೆರಿಗೆ ಮಾಡಿಸುತ್ತಿದ್ದ ನರ್ಸ್ ಜಯಮಾಲಾ ಮೇಲೆ ಮಕ್ಕಳ ಸಾಕಾಣಿಕೆ ಮತ್ತು ಮಾರಾಟ ಆರೋಪದಡಿ ಪ್ರಕರಣ ದಾಖಲಾಗಿದೆ, ಇದೆ ವಿಚಾರವಾಗಿ ಆಸ್ಪತ್ರೆ ಸಿಬ್ಬಂದಿ ಇಬ್ಬರು ವಿಜಯಪುರಕ್ಕೆ ತೆರಳಿದ್ದರು. ಇನ್ನುಳಿದಂತೆ ಸಿಬ್ಬಂದಿ ಆಸ್ಪತ್ರೆಯಲ್ಲಿದ್ದರು. ಆದ್ರೆ ಅವರು ಹೆರಿಗೆ ಮಾಡಿಸುವವರಾಗದ ಕಾರಣ ಗರ್ಭಿಣಿ ಕುಟುಂಬಸ್ಥರಿಗೆ ಚಡಚಣಗೆ ಹೋಗಲು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಆದ್ರೆ ಅವರು ಹೋಗದೆ ಮನೆಗೆ ತೆರಳಿ ನಂತರ ಆಸ್ಪತ್ರೆಗೆ ಬಂದಿದ್ದಾರೆ. ಅದಾದ ಮೇಲೆ ಅವರಿಗೆ ಆಸ್ಪತ್ರೆ ಸಿಬ್ಬಂದಿಯೇ ಚಡಚಣ ಆಸ್ಪತ್ರೆಗೆ ರೆಫರ್ ಮಾಡಿ ಕಳುಹಿಸಿದ್ದಾರೆ. ಆದ್ರೂ ಕೂಡ ಈ ಘಟನೆ ನಡೆಯಬಾರದಿತ್ತು. ಇದಕ್ಕೆ ಬೇಸರ ಇದೆ. ಈ ಪ್ರಕರಣದ ಬಗ್ಗೆ ಪರಿಶಿಲನೆ ನಡೆಸಿ, ಸೂಕ್ತ ತನಿಖೆ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿ ಜಿ ಕೇಡಿ  ಸ್ಪಷ್ಟಪಡಿಸಿದ್ದಾರೆ.

ಕಠಿಣ ಕ್ರಮಕ್ಕೆ‌ ಕುಟುಂಬಸ್ಥರ ಆಗ್ರಹ!
24×7 ಆಸ್ಪತ್ರೆ ಎಂದ ಮೇಲೆ ಯಾರಾದ್ರೂ ಆಸ್ಪತ್ರೆ ಇರಲೇ ಬೇಕು. ಗರ್ಭಿಣಿ ಆಸ್ಪತ್ರೆಗೆ ಬಂದು ಗಂಟೆಗೂ ಹೆಚ್ಚು ನರಳಾಡಿದ್ದಾಳೆ. ವೈದ್ಯರಿದ್ದಿದ್ರೆ ಇಂತಹ ಪರಿಸ್ಥಿತಿ ಆಗುತ್ತಿರಲಿಲ್ಲ. ಈಗಲಾದ್ರೂ ಎಚ್ಚೆತ್ತು ಜಿಲ್ಲಾ ವೈದ್ಯಾಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಅಂತಾ ಪೂರ್ಣಿಮಾ ಕುಟುಂಬಸ್ಥರು ಆಗ್ರಹಿಸಿದ್ದಾರೆ.

click me!