ತುಂಗಭದ್ರಾ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಹಸಿರು ನಿಶಾನೆ| ಎಕರೆಗೆ ಕನಿಷ್ಟ 5 ರಿಂದ .6 ಲಕ್ಷಕ್ಕೆ ಮಾರಾಟ| ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 130 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ| ಡ್ಯಾಂನಲ್ಲಿ 31.616 ಟಿಎಂಸಿಯಷ್ಟು ಹೂಳು ತುಂಬಿರುವ ಕಾರಣ ಈಗ ಪರ್ಯಾಯ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ|
ರಾಮಮೂರ್ತಿ ನವಲಿ
ಗಂಗಾವತಿ(ಮೇ.21): ಬಹು ವರ್ಷಗಳ ಬೇಡಿಕೆಯಾಗಿದ್ದ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿದ್ದು, ಈಗ ಆ ಪ್ರದೇಶದಲ್ಲಿರುವ ಭೂಮಿಗೆ ಚಿನ್ನದ ಬೆಲೆ ದೊರೆತಿದೆ. ಕನಕಗಿರಿ ಭಾಗದಲ್ಲಿ ತೀರಾ ಹಿಂದುಳಿದ ಪ್ರದೇಶವಾಗಿದ್ದ ನವಲಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಹೊಲ ಗದ್ದೆಗಳಿಗೆ ಈಗ ಚಿನ್ನದ ಬೆಲೆ ದೊರೆತಿದೆ. ಕಳೆದ 25 ವರ್ಷಗಳ ಹಿಂದೆ ಒಂದು ಎಕರೆ ಭೂಮಿ ಕೇವಲ 1 ಸಾವಿರದಿಂದ 15 ಸಾವಿರ ವರೆಗೆ ಬೆಲೆ ಇತ್ತು.
ಈಗ ತುಂಗಭದ್ರಾ ಸಮಾನಾಂತರ ಜಲಾಶಯ ಮತ್ತು ರೈಸ್ ಪಾರ್ಕ್ ನಿರ್ಮಾಣ ಆಗುತ್ತಿರುವುದರಿಂದ ಚಿನ್ನದ ಬೆಲೆ ಬಂದಿದೆ. ಒಂದು ಎಕರೆ ಭೂಮಿಗೆ ಕನಿಷ್ಠ 5 ರಿಂದ 6 ಲಕ್ಷ ಬೆಲೆ ದೊರಕುತ್ತಿದ್ದು, ರೈತ ಸಮುದಾಯಕ್ಕೆ ಆಶಾಕಿರಣವಾಗಿದೆ. ಕೇವಲ ಭೂಮಿಗೆ ಬೆಲೆ ಅಲ್ಲದೆ ನೀರಾವರಿ ಯೋಜನೆ ಅನುಷ್ಠಾನ ಆಗುತ್ತಿದ್ದರಿಂದ ರೈತರಲ್ಲಿ ಸಂತಸ ಉಂಟಾಗಿದೆ.
ಟಿಬಿ ಡ್ಯಾಂಗೆ ಸಮಾನಾಂತರ ಡ್ಯಾಂ: ಸಮೀಕ್ಷೆಗೆ ಸರ್ಕಾರ ಅಸ್ತು
ನವಲಿ ಗ್ರಾಮದಲ್ಲಿ ರೈಸ್ ಪಾರ್ಕ್ ನಿರ್ಮಾಣ ಮತ್ತು ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಈಗಾಗಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧತೆ ಕೈಗೊಳ್ಳುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿದ್ದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದರಿಂದ ಸರ್ಕಾರ ಪರ್ಯಾವಾಗಿ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಜಲಾಶಯ ನಿರ್ಮಾಣ
ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 130 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಇದ್ದರೂ 31.616 ಟಿಎಂಸಿಯಷ್ಟು ಹೂಳು ತುಂಬಿರುವ ಕಾರಣ ಈಗ ಪರ್ಯಾಯ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಈಗ ನವಲಿ ಬಳಿ ನಿರ್ಮಾಣವಾಗುವ ಜಲಾಶಯವು 35 ಟಿಎಂಸಿ ನೀರು ಸಂಗ್ರಹವಾಗುವ ಸಾಮರ್ಥ್ಯ ಹೊಂದುತ್ತದೆ. ಇದರಿಂದಾಗಿ ಕೆಳ ಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪಿಸುವ ಕಾರ್ಯ ನಡೆಸಬಹುದಾಗಿದೆ.
15 ಗ್ರಾಮಗಳು ಮುಳುಗಡೆ
ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣವಾಗುವುದರಿಂದ 15 ಗ್ರಾಮಗಳು ಮುಳುಗಡೆಯಾಗಲಿವೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಗುಡೂದೂರು, ಮಲ್ಲಾಪುರ, ಕರಡೋಣಿ, ಈಚನಾಳ, ಬುನ್ನಟ್ಟಿ, ಯತ್ನಟ್ಟಿ, ಗೊಲ್ಲರಹಟ್ಟಿ, ಪುರ, ಬುಕನಟ್ಟಿ, ಉಮಲೋಟಿ, ನೀರಲೂಟಿ, ಕಾಟಾಪುರ, ಮಲ್ಲಿಗೆವಾಡ, ಚಿಕ್ಕ ಕೇಡ, ಹಿರೇ ಖೇಡ ಗ್ರಾಮಗಳು ಮುಳುಗಡೆಯಾಗುವ ಸಂಭವ ಇದೆ. ಆದರೆ ವಿಸ್ತೃತ ಯೋಜನಾ ವರದಿ ಬಂದ ನಂತರ ಗ್ರಾಮಗಳ ಮುಳುಗಡೆ ಬಗ್ಗೆ ಖಚಿತ ಮಾಹಿತಿ ಹೊರ ಬೀಳಲಿದೆ.
ಈ ಹಿಂದೆ ನವಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಹತ್ತಿರವಿರುವ ಭೂಮಿಗೆ ಬೆಲೆ ಇದ್ದಿಲ್ಲ. ಈಚೆಗೆ ರೈಸ್ ಪಾರ್ಕ್ ಮತ್ತು ಸಮಾನಾಂತರ ಜಲಾಶಯ ನಿರ್ಮಾಣ ಆಗುತ್ತಿರುವುದರಿಂದ ಭೂಮಿ ಬೆಲೆ ಸಿಕ್ಕಿದೆ. ವಿವಿಧ ಜಿಲ್ಲೆಗಳಿಂದ ಕೆಲವರು ಭೂಮಿ ಖರೀದಿಗೆ ಲಗ್ಗೆ ಇಟ್ಟಿದ್ದಾರೆ. ಇದಕ್ಕೆ ಜಲಾಶಯ ಮತ್ತು ರೈಸ್ ಪಾರ್ಕ್ ನಿರ್ಮಾಣವೇ ಕಾರಣವಾಗಿದೆ ಎಂದು ನವಲಿ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದರಾಮಗೌಡ ಉಪ್ಪಳ ಹೇಳಿದ್ದಾರೆ.