ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಮುಖ್ಯಮಂತ್ರಿ ಚಂದ್ರು ಆರೋಪ

By Sathish Kumar KH  |  First Published Dec 7, 2023, 6:44 PM IST

ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ ಸಿಟಿ ಯೋಜನೆಯಡಿ ಆಗಿರುವ ಕಾಮಗಾರಿಗಳಲ್ಲಿ ಲೋಪ ಆಗಿದೆ. ಗುಣಮಟ್ಟದ ಕಾಮಗಾರಿಗಳಾಗಿಲ್ಲ. ಭ್ರಷ್ಟಾಚಾರ ತಾಂಡವವಾಡುತ್ತಿದೆ.


ಹುಬ್ಬಳ್ಳಿ  (ಡಿ.07): ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ ಸಿಟಿ ಯೋಜನೆಯಡಿ ಆಗಿರುವ ಕಾಮಗಾರಿಗಳಲ್ಲಿ ಲೋಪ ಆಗಿದೆ. ಗುಣಮಟ್ಟದ ಕಾಮಗಾರಿಗಳಾಗಿಲ್ಲ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಎಲ್ಲಾ ವಿಚಾರಗಳನ್ನು ಹಳ್ಳಿ ಹಳ್ಳಿಗೆ ಹೋಗಿ ಜನರೊಟ್ಟಿಗೆ ಚರ್ಚಿಸುತ್ತೇವೆ. ಎಎಪಿ ಸಂಸ್ಥಾಪನಾ ದಿನದಂದು ಮಾಡಿರುವ ಪ್ರಮಾಣದಂತೆ, ಭ್ರಷ್ಟಾಚಾರವನ್ನು ಭೇದಿಸುತ್ತೇವೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು. 

ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ 70 ವರ್ಷಗಳಿಂದ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಮೂರು ಪಕ್ಷಗಳು ಮಾಡಿದ್ದು ಕೇವಲ ಲೂಟಿ. ನರೇಂದ್ರ ಮೋದಿಯವರ ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನ ಸರಿಯಾಗಿಲ್ಲ. 100 ಸ್ಮಾರ್ಟ್ ಸಿಟಿಗಳಲ್ಲಿ ಒಂದೇ ಒಂದು ಕಡೆ ಪೂರ್ಣಗೊಂಡಿಲ್ಲ. ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆ ಕೂಡ ಹಳ್ಳ ಹಿಡಿದಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿನ ಭ್ರಷ್ಟಾಚಾರವನ್ನು ಖಂಡಿಸಿ, ಮುಂದಿನ 15 ರಿಂದ 20 ದಿನಗಳಲ್ಲಿ ಶ್ವೇತಪತ್ರ ಹೊರಡಿಸಬೇಕು. ಈ ಸಂಬಂಧ ಸಮಗ್ರ ತನಿಖೆಗೆ ಒತ್ತಾಯಿಸಿ ಆಮ್ ಆದ್ಮಿ ಪಕ್ಷ ರಾಜ್ಯದಾದ್ಯಂತ ಬೀದಿಗಿಳಿದು ಹೋರಾಟ ನಡೆಸಲಿದೆ. ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಕೇಂದ್ರದಿಂದ ಬಿಡುಗಡೆಯಾಗಿರುವ ಹಣವೆಷ್ಟು, ರಾಜ್ಯದಿಂದ ಬಿಡುಗಡೆ ಆಗಿರುವ ಹಣ ಎಷ್ಟು ಎಂಬುದನ್ನು ತಿಳಿಸಬೇಕು ಎಂದು ಒತ್ತಾಯಿಸಿದರು.

Tap to resize

Latest Videos

ಬೆಂಗಳೂರು: ಸುಸ್ತು ಅಂತ ಆಸ್ಪತ್ರೆ ಸೇರಿದ ಮಹಿಳೆಯ ಪ್ರಾಣ ತೆಗೆದು ಮಸಣಕ್ಕೆ ಕಳಿಸಿದ್ರು!

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬಿಡುಗಡೆಯಾಗಿರುವ 1000 ಕೋಟಿ ರೂ. ಪೈಕಿ ಸುಮಾರು 33 ಕೋಟಿ ಅಂದರೆ ಶೇ 0.3 ರಷ್ಟು ಮಾತ್ರ ಬಳಸಲಾಗಿದೆ. ಈ ಪೈಕಿ ಶಿಕ್ಷಣ- 4 ಕೋಟಿ ರೂ., ಆರೋಗ್ಯ- 29 ಕೋಟಿ ರೂ. ನಿಗದಿಪಡಿಸಲಾಗಿದೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ಯೋಜನೆಗಳಿಗೆ ಕಡಿಮೆ ಹಣ ಮೀಸಲಿಟ್ಟಿದೆ. ಇದೇನಾ ಬಿಜೆಪಿ ಸರ್ಕಾರದ ನಿಯತ್ತು. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಶೇ 40 ರಿಂದ 50 ರಷ್ಟು ಭ್ರಷ್ಟಾಚಾರ ನಡೆದಿದೆ. ರಸ್ತೆಗಳು, ಗ್ರೀನ್ ಕಾರಿಡಾರ್ ಯೋಜನೆಗಳು ಶಹರ ಪಟ್ಟಣಕ್ಕೆ ಒಳ್ಳೆಯ ಮೆರಗು ನೀಡುತ್ತಿವೆ. ಆದರೂ, ಕಳಪೆ ಕಾಮಗಾರಿ ಎದ್ದು ಕಾಣುತ್ತಿದೆ. ಇದನ್ನೆಲ್ಲಾ ನೋಡಿದರೆ 1000 ಕೋಟಿ ರೂ. ವೆಚ್ಚದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಅದನ್ನು ಬಯಲಿಗೆಳೆದು ಹುಬ್ಬಳ್ಳಿ-ಧಾರವಾಡವನ್ನು ನಿಜವಾಗಿಯೂ ಸ್ಮಾರ್ಟ್ ಸಿಟಿಯನ್ನಾಗಿ ಮಾಡಲು ಆಮ್ ಆದ್ಮಿ ಪಕ್ಷ ಕೆಲಸ ಮಾಡಲಿದೆ ಎಂದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಜನರ ಸಹಭಾಗಿತ್ವಕ್ಕೆ ವಾರ್ಡ್ ಸಮಿತಿ ರಚಿಸುವ ಕಾಯ್ದೆ ಇದ್ದರೂ,  ಪಾಲಿಕೆ ಅಸ್ತಿತ್ವಕ್ಕೆ ಬಂದು 3 ವರ್ಷ ಕಳೆದರೂ ವಾರ್ಡ್ ಸಮಿತಿ ರಚಿಸಿ ಕಾರ್ಯರೂಪಕ್ಕೆ ತಂದಿಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಥವಾ ಬೇರೆ ಯಾವುದೇ ಪಕ್ಷಗಳಿಗೆ ರಾಜಕೀಯ ಇಚ್ಛಾಶಕ್ತಿ ಇಲ್ಲ. ಚುನಾವಣೆ ಇದ್ದಾಗ ಮಾತ್ರ ಜನರು ನೆನಪಾಗುತ್ತಾರೆ. ಇದಕ್ಕೂ ಮುನ್ನ ಚಿಟಗುಪ್ಪ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಅಲ್ಲಿನ ನ್ಯೂನತೆಗಳ ಬಗ್ಗೆ ವೈದ್ಯರೊಂದಿಗೂ ಚರ್ಚೆ ನಡೆಸಿದರು.

ಭವಾನಿ ರೇವಣ್ಣ ವಿರುದ್ಧ ಕಿಡಿ: ತಮ್ಮ ಕಾರಿಗೆ ಅಪಘಾತ ಮಾಡಿದ ವ್ಯಕ್ತಿಯೊಬ್ಬರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಭವಾನಿ ರೇವಣ್ಣ ಅವರ ನಡೆ ಅಮಾನವೀಯವಾಗಿದ್ದು, ಅವರು ಕ್ಷಮೆ ಕೇಳಬೇಕು. ತಮ್ಮ ಒಂದೂವರೆ ಕೋಟಿ ಬೆಲೆ ಬಾಳುವ ಕಾರಿನ ಮುಂದೆ ಮನುಷ್ಯರ ಜೀವಕ್ಕೆ ಬೆಲೆ ಇಲ್ಲದಂತೆ ಅವರು ಮಾತನಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ನಡೆದುಕೊಳ್ಳಬಾರುದು. ಭವಾನಿ ಅವರನ್ನು ಸಮರ್ಥಿಸುವ ರೀತಿಯಲ್ಲಿ ದೇವೇಗೌಡರು ಮತ್ತು ರೇವಣ್ಣ ಅವರು ಮಾತನಾಡಿರುವುದು ಸರಿಯಲ್ಲ. ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. 

ಮಂಡ್ಯ ಜನತೆಗೆ ಭರ್ಜರಿ ಸಿಹಿಸುದ್ದಿ: ಕುಡಿಯುವ ನೀರಿನ ದರ ತಗ್ಗಿಸಿದ ರಾಜ್ಯ ಸರ್ಕಾರ

ಪತ್ರಿಕಾ ಘೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಬಸವರಾಜ ಮುದಿಗೌಡರ್, ಅನಂತಕುಮಾರ್ ಬುಗುಡಿ, ಜಿಲ್ಲಾಧ್ಯಕ್ಷ ಪ್ರವೀಣ್ ನಡಕಟ್ಟಿನ , ಮಹಿಳಾ ಘಟಕದ  ಅಧ್ಯಕ್ಷೆ ಪ್ರತಿಭಾ ದಿವಾಕರ ,ಜಿಲ್ಲಾ ಮಾಧ್ಯಮ ಉಸ್ತುವಾರಿ ಮಲ್ಲಿಕಾರ್ಜುನ ಹಿರೇಮಠ , ಬಸವರಾಜ ಗುತ್ತೇದಾರ, ವಿಕಾಸ್ ಸೊಪ್ಪಿನ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

click me!