ಕೈ ಮುಖಂಡ ಉಚ್ಚಾಟನೆ : ಡಿಕೆಶಿ ಭೇಟಿ ಮಾಡುವೆ ಎಂದ ನಾಯಕ

By Kannadaprabha NewsFirst Published Oct 12, 2020, 2:39 PM IST
Highlights

ಕಾಂಗ್ರೆಸ್ ಮುಖಂಡರೋರ್ವರನ್ನು ಉಚ್ಛಾಟನೆ ಮಾಡಲಾಗಿದೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷರ ಭೇಟಿಯಾಗುವುದಾಗಿ ಮುಖಂಡರು ಹೇಳಿದ್ದಾರೆ

ಹುಬ್ಬಳ್ಳಿ (ಅ.12) :  ಪೌರಕಾರ್ಮಿಕರ ಹೋರಾಟ ಹತ್ತಿಕ್ಕಲು ಶಾಸಕ ಪ್ರಸಾದ ಅಬ್ಬಯ್ಯ ಯತ್ನಿಸಿದ್ದಾರೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್‌ ಮುಖಂಡ ವಿಜಯ ಗುಂಟ್ರಾಳರನ್ನ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಲ್ತಾಫಹುಸೇನ ಹಳ್ಳೂರ ಉಚ್ಚಾಟಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುವ ಗುಂಟ್ರಾಳ, ನನ್ನನ್ನು ಉಚ್ಚಾಟಿಸುವ ಅಧಿಕಾರ ಮಹಾನಗರ ಕಾಂಗ್ರೆಸ್‌ ಅಧ್ಯಕ್ಷರಿಗಿಲ್ಲ. ಕೆಪಿಸಿಸಿ ಅಧ್ಯಕ್ಷರ ಜತೆ ಮಾತನಾಡಿ ಪಕ್ಷದಲ್ಲೆ ಮುಂದುವರಿಯುವೆ ಎಂದಿದ್ದಾರೆ.

ಉಚ್ಚಾಟನೆ ಕುರಿತು ಆದೇಶಿಸಿರುವ ಹಳ್ಳೂರ, ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಕಾರ್ಮಿಕ ಘಟಕದ ಅಧ್ಯಕ್ಷರೂ ಆಗಿರುವ ವಿಜಯ ಗುಂಟ್ರಾಳ, ಶಾಸಕ ಪ್ರಸಾದ ಅಬ್ಬಯ್ಯ ವಿರುದ್ಧ ಹೇಳಿಕೆ ನೀಡಿದ್ದು, ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ. ತಮ್ಮದೇ ಶಾಸಕರ ಬಗ್ಗೆ ಮಾತಾಡಿದ್ದು, ಪಕ್ಷಕ್ಕೆ ಮುಜುಗರ ತಂದಿದೆ ಎಂದು ಅಲ್ತಾಫಹುಸೇನ ಹೇಳಿದ್ದಾರೆ. ಮಹಾನಗರ ಜಿಲ್ಲಾ ಶಿಸ್ತು ಸಮಿತಿ ನೀಡಿದ ವರದಿಯ ಆಧಾರದ ಮೇಲೆ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ಗೆ ಗುಡ್‌ಬೈ, ಬಿಜೆಪಿಗೆ ಸೇರಿದ ನಟಿ ಖುಷ್ಬೂ! ...

ಇದಕ್ಕೆ ಪ್ರತಿಯಾಗಿ ಪ್ರಕಟಣೆ ನೀಡಿದ ಗುಂಟ್ರಾಳ, ಪೌರಕಾರ್ಮಿಕರಿಂದ ಸಾವಿರಾರು ಮತ ಪಡೆದು ಗೆದ್ದಿರುವ ಅಬ್ಬಯ್ಯಗೆ ಬಹಿರಂಗ ಚರ್ಚೆಗೆ ಬರುವ ತಾಕತ್ತಿಲ್ಲ. ಅವರು ಪಲಾಯಾನ ಮಾಡುತ್ತಿದ್ದು, ನನ್ನನ್ನು ರಾಜಕೀಯವಾಗಿ, ಸಾಮಾಜಿಕವಾಗಿ ಹತ್ತಿಕ್ಕುವ ಹುನ್ನಾರ ನಡೆಸಿದ್ದಾರೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರ ಜತೆ ಮಾತನಾಡಿ ಪಕ್ಷದಲ್ಲೆ ಮುಂದುವರಿಯುತ್ತೇನೆ. ನೋಟಿಸ್‌ ನೀಡದೆ ಏಕಾಏಕಿ ಕಾನೂನುಬಾಹಿರವಾಗಿ ಉಚ್ಚಾಟನೆ ಮಾಡುವ ಕುತಂತ್ರ ನಡೆದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ನಾನು ಕಾಂಗ್ರೆಸ್‌ ಶಿಸ್ತಿನ ಸಿಪಾಯಿ. ಪೌರಕಾರ್ಮಿಕರ ಸಂಘದಿಂದ ನಡೆಸಿರುವ ಸುದ್ದಿಗೋಷ್ಠಿಯಲ್ಲಿ ಹಿಂದಿನ ಕಾಂಗ್ರೆಸ್‌ ಸರ್ಕಾರದ ಆದೇಶದ ಕುರಿತು ವಿವರಿಸಿದ್ದೇನೆ. ಯಾವುದೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಸಂಘಟನಾತ್ಮಕವಾಗಿ ನನ್ನನ್ನು ಹತ್ತಿಕ್ಕುವ, ದಮನಕಾರಿ ನೀತಿ ಅನುಸರಿಸಲಾಗಿದೆ. ಪ್ರಶ್ನಿಸಿದವರನ್ನು ದಮನಿಸುವ ನೀತಿ ಖಂಡನೀಯ. ವಂಶ ಪರಾರಂಪಾರ‍್ಯವಾಗಿ ಕಾಂಗ್ರೆಸ್‌ಗೆ ನಿಷ್ಠರಾಗಿದ್ದೇವೆ ಎಂದು ಪ್ರಕಟಣೆ ನೀಡಿದ್ದಾರೆ.

click me!