ಹುಬ್ಬಳ್ಳಿ ‘ಡ್ರಗ್ಸ್‌ ಹಬ್‌’ ಆಗಲು ಬಿಡುವುದಿಲ್ಲ: ಗೃಹ ಸಚಿವ ಪರಮೇಶ್ವರ್‌

By Kannadaprabha News  |  First Published Aug 19, 2023, 6:18 PM IST

ಯಾವುದೇ ಕಾರಣಕ್ಕೂ ಹುಬ್ಬಳ್ಳಿಯನ್ನು ‘ಡ್ರಗ್ಸ್‌ ಹಬ್‌’ ಆಗಲು ಬಿಡುವುದಿಲ್ಲ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು. 


ಹುಬ್ಬಳ್ಳಿ (ಆ.19): ಯಾವುದೇ ಕಾರಣಕ್ಕೂ ಹುಬ್ಬಳ್ಳಿಯನ್ನು ‘ಡ್ರಗ್ಸ್‌ ಹಬ್‌’ ಆಗಲು ಬಿಡುವುದಿಲ್ಲ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು. ನವನಗರದ ಪೊಲೀಸ್‌ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಪೊಲೀಸ್‌ ಆಯುಕ್ತರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸಾರ್ವಜನಿಕವಾಗಿ ಹುಬ್ಬಳ್ಳಿಯಲ್ಲಿ ಡ್ರಗ್ಸ್‌ ಇಲ್ಲ ಎನ್ನುವ ಹಾಗೆ ಆಗಬೇಕು. ಅದಕ್ಕೆ 6 ತಿಂಗಳ ವರೆಗೆ ಕಾಲಾವಕಾಶ ನೀಡಿದ್ದೇನೆ. ಅದರ ನಂತರವೂ ಡ್ರಗ್ಸ್‌ ಪ್ರಕರಣಗಳು ಕಂಡುಬಂದಲ್ಲಿ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಹುಬ್ಬಳ್ಳಿಯನ್ನು ಡ್ರಗ್ಸ್‌ ಹಬ್‌ ಆಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Latest Videos

undefined

ಕಮಿಷನ್‌ ಆರೋಪ ಮಾಡಿದ ಗುತ್ತಿಗೆದಾರರಿಗೆ ಸರ್ಕಾರದಿಂದ ಬೆದರಿಕೆ: ಪ್ರಲ್ಹಾದ್‌ ಜೋಶಿ

ರಾಜ್ಯಾದ್ಯಂತ ಪ್ರವಾಸ: ಪೊಲೀಸ್‌ ಇಲಾಖೆ ಸಮರ್ಥವಾಗಿ ಕೆಲಸ ನಿರ್ವಹಿಸಬೇಕು. ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಸರ್ಕಾರದ ಮೇಲೆ ಜನಸಮುದಾಯಕ್ಕೆ ವಿಶ್ವಾಸ ಮೂಡಿಸಬೇಕೆಂಬ ದೃಷ್ಟಿಯಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗುತ್ತಿದೆ. ಪ್ರತಿಯೊಂದು ಜಿಲ್ಲೆಯಲ್ಲಿ ವಿವಿಧ ಸಮಸ್ಯೆಗಳಿವೆ. ಅವುಗಳನ್ನು ಪೊಲೀಸ್‌ ಇಲಾಖೆ ಕಾನೂನು ಚೌಕಟ್ಟಿನ ಅಡಿಯಲ್ಲಿ ಬಗೆಹರಿಸಬೇಕು. ಜನರ ಸಮಸ್ಯೆ ತೀವ್ರಗತಿಯಲ್ಲಿ ಪರಿಹರಿಸಬೇಕು ಎಂಬ ಸೂಚನೆಗಳನ್ನು ಪೊಲೀಸರಿಗೆ ನೀಡಿದ್ದೇನೆ ಎಂದರು.

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಜಾತಿ ನಿಂದನೆ ಪ್ರಕರಣಗಳ ಕುರಿತು ಮಾತನಾಡಿ, ಜಾತಿ ನಿಂದನೆ ಪ್ರಕರಣದಲ್ಲಿ ಯಾವುದೇ ದುರುಪಯೋಗ ಆಗುವುದಿಲ್ಲ. ಈಗಾಗಲೇ ಕಾನೂನು ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಪ್ರತಿ ತಿಂಗಳು ಸಭೆ ನಡೆಸಿ ಅದರ ಮಾಹಿತಿ ಸಂಗ್ರಹಿಸಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ಎನ್‌.ಎಚ್‌. ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ್‌, ಡಿಸಿಪಿ ರಾಜೀವ್‌ ಎಂ., ಡಾ. ಗೋಪಾಲ್‌ ಬ್ಯಾಕೋಡ, ಎಸಿಪಿ ಬೈಲಪ್ಪ ನಂದಗಾವಿ ಸೇರಿದಂತೆ ಎಲ್ಲ ಠಾಣೆಗಳ ಎಸಿಪಿಗಳು ಪಾಲ್ಗೊಂಡಿದ್ದರು.

ಈದ್ಗಾ, ಪಾಲಿಕೆ ಆಯುಕ್ತರಿಗೆ ಬಿಟ್ಟಿದ್ದು: ಈದ್ಗಾ ಮೈದಾನದಲ್ಲಿ ಕಳೆದ ವರ್ಷದಂತೆ ಗಣೇಶ ಪ್ರತಿಷ್ಠಾಪನೆಗೆ ಹಲವು ಸಂಘಟನೆಗಳು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿವೆ. ಈದ್ಗಾ ಮೈದಾನ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಸೇರಿದ್ದು, ಕಳೆದ ಬಾರಿ ಗಣೇಶ ಪ್ರತಿಷ್ಠಾಪನೆಗೆ ಸರ್ಕಾರಕ್ಕೆ ಕೇಳಿ ಅನುಮತಿ ಪಡೆದಿದ್ದರು. ಅದು ಪರ್ಮನೆಂಟ್‌ ಅಲ್ಲ. ಈ ಬಾರಿ ಪಾಲಿಕೆ ಆಯುಕ್ತರಿಗೆ ಬಿಟ್ಟಿದ್ದು, ಅಲ್ಲಿನ ಸ್ಥಿತಿಗತಿ ಹೇಗಿದೆ ಎಂಬುದನ್ನು ಅರಿತು ಪರ-ವಿರೋಧ ಕುರಿತು ಚರ್ಚಿಸಿ ಆಯುಕ್ತರೇ ಸೂಕ್ತ ತೀರ್ಮಾನ ತಗೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸ್ಟಾಲಿನ್-ಡಿಕೆಶಿ ಒಳಒಪ್ಪಂದದಿಂದ ತಮಿಳುನಾಡಿಗೆ ನೀರು: ಅಶ್ವಥ್ ನಾರಾಯಣ್ ಆರೋಪ

ಅಮಾಯಕರ ಮೇಲಿನ ಕೇಸ್‌ ವಾಪಸ್‌: ಕಳೆದ ವರ್ಷ ಹಳೇಹುಬ್ಬಳ್ಳಿಯಲ್ಲಿ ನಡೆದ ಗಲಾಟೆಯಲ್ಲಿ ಹಲವು ಅಮಾಯಕರ ಬಂಧನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ, ಈ ಬಗ್ಗೆ ನನಗೆ ಗಮನಕ್ಕೆ ಬಂದಿಲ್ಲ. ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ಹೊರಡಿಸಿದ ಪ್ರಣಾಳಿಕೆಯಲ್ಲಿ ರೈತರು, ವಿದ್ಯಾರ್ಥಿಗಳು, ಅಮಾಯಕರ ಮೇಲಿನ ಎಲ್ಲ ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ತಿಳಿಸಿದ್ದೇವೆ. ಅದರಂತೆ ನಡೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

click me!