
ಧಾರವಾಡ: ಪೊಲೀಸ್ ಪೇದೆಯೊಬ್ಬರಿಗೆ ದೋಷಯುಕ್ತ ಪಲ್ಲಂಗ ಮಾರಾಟ ಮಾಡಿದ ಹುಬ್ಬಳ್ಳಿಯ ರಾಯಲ್ ಓಕ್‌ಗೆ ದಂಡ ಮತ್ತು ಪರಿಹಾರಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಯಾಲಕ್ಕಿ ಶೆಟ್ಟರ್ ಕಾಲನಿಯ ನಿವಾಸಿ ಬಸವರಾಜ ಮಾಗುಂದನವರ ಪೋಲಿಸ್ ಪೇದೆಯಾಗಿದ್ದು, 2024ರ ಜೂ. 17ರಂದು ₹ 59,990 ಬೆಲೆಯ ಒಳಗಡೆ ಬಟ್ಟೆ ಮತ್ತು ಇತ್ಯಾದಿ ಸಾಮಾನುಗಳ ಸೌಲಭ್ಯವಿರುವ ಮರ‍್ಯ ಕಿಂಗ್ ಬೆಡ್ ಸಮೇತ ಪಲ್ಲಂಗವನ್ನು ಹುಬ್ಬಳ್ಳಿಯ ರಾಯಲ್ ಓಕ್ ಅವರಿಂದ ಖರೀದಿಸಿದ್ದರು. ಆದರೆ, ಕೆಲವೇ ದಿನಗಳಲ್ಲಿ ಆ ಪಲ್ಲಂಗದ ಫ್ಲೈವುಡ್ ಮೇಲೆ ಫಂಗಸ್ ಕಾಣಿಸಿಕೊಂಡಿತ್ತು. ಅದು ಹೆಚ್ಚಾದ ಮೇಲೆ ಆ ಸಂಗತಿಯನ್ನು ರಾಯಲ್ ಓಕ್‌ಗೆ ತಿಳಿಸಿದ್ದರು. ಅದನ್ನು ಪರಿಶೀಲಿಸಿ ಫ್ಲೈವುಡ್ ಬದಲಾಯಿಸಿಕೊಟ್ಟರು. ಆದರೂ ಹೊಸ ಫ್ಲೈವುಡ್ ಮೇಲೆ ಫಂಗಸ್ ಮತ್ತೆ ಕಾಣಿಸಿಕೊಂಡಿತ್ತು.
ಆ ಫಂಗಸ್ ಕಾಟಿನ ತುಂಬಾ ಆವರಿಸಿ ಬಟ್ಟೆ ಇಟ್ಟ ಜಾಗಕ್ಕೂ ಫಂಗಸ್ ಆವರಿಸಿತ್ತು. ಇದರಿಂದ ದೂರುದಾರರ ಬಟ್ಟೆಗಳು ಹಾನಿಯಾದವು. ಈ ವಿಷಯ ರಾಯಲ್ ಓಕ್ ಗಮನಕ್ಕೆ ತಂದರೂ ಕ್ರಮವಾಗಲಿಲ್ಲ. ಇದನ್ನು ಪ್ರಶ್ನಿಸಿ ಬಸವರಾಜ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ದೂರು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ, ಆದೇಶದ ಒಂದು ತಿಂಗಳ ಒಳಗಾಗಿ ದೋಷ ಪೂರಿತ ಪಲ್ಲಂಗ ಬದಲಿಗೆ ಅದೇ ಮೊತ್ತದ ಹೊಸ ಪಲ್ಲಂಗ ಕೊಡಬೇಕು.
ತಪ್ಪಿದರೆ, ಹಣ ಮರಳಿ ಕೊಡಬೇಕು. ಅನಾನುಕೂಲ, ಮಾನಸಿಕ ತೊಂದರೆಗಾಗಿ ₹ 30 ಸಾವಿರ ಪರಿಹಾರ ಮತ್ತು ₹ 10 ಸಾವಿರ ಪ್ರಕರಣದ ವೆಚ್ಚ ಕೊಡುವಂತೆ ಆಯೋಗವು ಉಣಕಲ್ ಬಳಿ ಇರುವ ರಾಯಲ್ ಓಕ್ ಶೋರೂಂಗೆ ಆಯೋಗ ನಿರ್ದೇಶಿಸಿದೆ.