ಕೊರೋನಾ ಸೋಂಕಿತನ ಟ್ರಾವೆಲ್‌ ಹಿಸ್ಟರಿ ನೋಡಿ ಬೆಚ್ಚಿ ಬಿದ್ದ ಹುಬ್ಬಳ್ಳಿ..!

By Kannadaprabha NewsFirst Published May 3, 2020, 7:10 AM IST
Highlights

ಪಿ- 589 ವ್ಯಕ್ತಿಯ ಟ್ರಾವೆಲ್‌ ಹಿಸ್ಟರಿ ನೋಡಿ ದಂಗಾದ ಜಿಲ್ಲಾಡಳಿತ|ಬಡವರಿಗೆ ಆಹಾರದ ಕಿಟ್‌ ವಿತರಿಸಿದ್ದ ಸೋಂಕಿತ|ಹುಬ್ಬಳ್ಳಿಯ ಬಹುತೇಕ ಬಡಾವಣೆಗಳಲ್ಲಿ ಸಂಚಾರ| ಈತ ಸಂಚರಿಸಿರುವ ಪ್ರದೇಶಗಳಲ್ಲಿ ಮೈಕ್‌ ಮೂಲಕ ಜನರಿಗೆ ಮಾಹಿತಿ ನೀಡುವ ಕೆಲಸ, ಸಂಪರ್ಕ ಬಂದವರ ಹುಡುಕುವ ಕೆಲಸಕ್ಕೂ ತಾಲೂಕಾಡಳಿತ ಪ್ರಾರಂಭಿಸಿದೆ|
 

ಹುಬ್ಬಳ್ಳಿ(ಮೇ.03): ಇಲ್ಲಿನ ಶಾಂತಿನಗರದ ಕೊರೋನಾ ದೃಢಪಟ್ಟ(ಪಿ- 589) ಟ್ರಾವೆಲ್‌ ಹಿಸ್ಟರಿ ಕೇಳಿಯೇ ಜಿಲ್ಲಾಡಳಿತ ದಂಗಾಗಿದೆ. ಹಾಗೆ ನೋಡಿದರೆ ಈತ ಬೇರೆ ಊರುಗಳಿಗೇನು ಹೋಗಿಲ್ಲ. ಆದರೆ ನಗರದ ಬಹುತೇಕ ಎಲ್ಲ ಬಡಾವಣೆಗಳಲ್ಲಿ ಸಂಚರಿಸಿದ್ದಾನೆ. ಜತೆಗೆ ಬಡವರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದ್ದಾನೆ. ಈತನ ಸಂಪರ್ಕಕ್ಕೆ ಬಂದವರನ್ನು ಹುಡುಕಿ ತೆಗೆಯುವುದೇ ಜಿಲ್ಲಾಡಳಿತ ಕ್ಕೆ ದೊಡ್ಡ ಸವಾಲಾಗಿದೆ. ಈತನ ಸಂಪರ್ಕಕ್ಕೆ ಕೆಲ ರಾಜಕೀಯ ಮುಖಂಡರು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೆಲ್ಲವೂ ಜಿಲ್ಲಾಡಳಿತವನ್ನು ಅಕ್ಷರಶಃ ಕಂಗೆಡಿಸಿದೆ.

ಕೇಶ್ವಾಪುರದ ನಿವಾಸಿಯಾಗಿರುವ ಇವರು, ಒಂದು ಸಮಾಜದ ಮುಖಂಡರು ಎಂದು ಗುರುತಿಕೊಂಡವರು. ಹಲವು ರಾಜಕೀಯ ಮುಖಂಡರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಮಾ. 27ರಂದು ತಮ್ಮ ಮಗನ ಜತೆಯಲ್ಲಿ ಹುಬ್ಬಳ್ಳಿಯ ತುಳಜಾಭವಾನಿ ದೇವಸ್ಥಾನದಲ್ಲಿ ಹಾಗೂ ನಂತರದ ದಿನಗಳಲ್ಲಿ ತೊರವಿ ಹಕ್ಕಲ, ಆನಂದನಗರ, ಅರವಿಂದನಗರ, ಹಳೇ ಹುಬ್ಬಳ್ಳಿ, ಟಿಪ್ಪುನಗರ , ನೇಕಾರನಗರ ಮತ್ತು ಕೇಶ್ವಾಪುರದಲ್ಲಿ ಸಾರ್ವಜನಿಕರಿಗೆ ಆಹಾರ ಧಾನ್ಯ ವಿತರಣೆ ಮಾಡಿದ್ದಾರೆ.

ಲಾಕ್‌ಡೌನ್‌: ಕ್ಯಾನ್ಸರ್‌ ಪೀಡಿತನಿಗೆ ಔಷಧಿ ತಲುಪಿಸಿ ಮಾನವೀಯತೆ ಮೆರೆದ ಸಿಬ್ಬಂದಿ

ಲಾಕ್‌ಡೌನ್‌ ಘೋಷಣೆಯಾದ ನಂತರ ಕಮರಿಪೇಟೆಯಲ್ಲಿನ ಮಟನ್‌ ಶಾಪ್‌ಗಳಿಗೆ ಭೇಟಿ ನೀಡಿದ್ದಾರೆ. ಏಪ್ರಿಲ್‌ ತಿಂಗಳಲ್ಲಿ ಹುಬ್ಬಳ್ಳಿಯ ಶಾಂತಿನಗರ, ಬೆಂಗೇರಿ, ಮಹಾವೀರಗಲ್ಲಿ, ಬೆಳಗಾಂವಗಲ್ಲಿ, ಮರಾಠಾಗಲ್ಲಿ, ಶಕ್ತಿನಗರ, ವಿಕಾಸನಗರ, ಗೋಕುಲ ರಸ್ತೆ, ಜನತಾಬಜಾರ, ಸುರಭಿನಗರ, ಹೊಸೂರ, ಸ್ಟೇಷನ್‌ ರಸ್ತೆ ತಬೀಬ್‌ ಲ್ಯಾಂಡ್‌, ಕಲ್ಯಾಣನಗರ, ವೆಂಕಟೇಶ ಕಾಲನಿ, ದೇಶಪಾಂಡೆ ನಗರ, ದಾಜಿಬಾನಪೇಟ, ಸಿಬಿಟಿ, ರೈಲ್ವೆ ವರ್ಕ್ ಶಾಪ್‌, ಗಣೇಶಪೇಟ, ಗೂಡ್ಸ್‌ ಶೆಡ್‌ ರೋಡ, ತಾಡಪತ್ರಿಗಲ್ಲಿ , ಚೇತನಾಕಾಲನಿ, ಭೂಸಪೇಟ ಹಾಗೂ ಹುಬ್ಬಳ್ಳಿಯ ಇನ್ನಿತರ ಸ್ಥಳಗಳಲ್ಲಿ ಸಂಚರಿಸಿದ್ದಾರೆ.

ನೂರಾರು ಜನರ ಶಂಕೆ:

ಇವರು ಎಲ್ಲೆಡೆ ಸಂಚರಿಸಿರುವ ಕಾರಣ ನೂರಾರು ಜನರು ಇವರ ಸಂಪರ್ಕಕ್ಕೆ ಬಂದಿದ್ದಾರೆ. ಅವರನ್ನೆಲ್ಲ ಹುಡುಕಿ ತೆಗೆಯೋದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ. ಇದರೊಂದಿಗೆ ಕೆಲ ರಾಜಕೀಯ ಮುಖಂಡರೊಂದಿಗೂ ಒಡನಾಟ ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಇವರನ್ನು ಸಂಪರ್ಕಿಸಿದ ಸಾರ್ವಜನಿಕರಿಗೆ ಕೊರೋನಾ ಸೋಂಕು ತಗಲುವ ಸಾಧ್ಯತೆ ಇದೆ. ಕೂಡಲೇ ಜಿಲ್ಲಾಡಳಿತದ ಸಹಾಯವಾಣಿಗೆ 1077ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಅಲ್ಲದೇ, ಸಮೀಪದ ಸರ್ಕಾರ ಆಸ್ಪತ್ರೆ ಭೇಟಿ ನೀಡಿ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ವಿನಂತಿಸಿದ್ದಾರೆ.

ಹುಡುಕಾಟ ಶುರು:

ಈ ನಡುವೆ ಈತ ಸಂಚರಿಸಿರುವ ಪ್ರದೇಶಗಳಲ್ಲಿ ಮೈಕ್‌ ಮೂಲಕ ಜನರಿಗೆ ಮಾಹಿತಿ ನೀಡುವ ಕೆಲಸ, ಸಂಪರ್ಕ ಬಂದವರ ಹುಡುಕುವ ಕೆಲಸಕ್ಕೂ ತಾಲೂಕಾಡಳಿತ ಪ್ರಾರಂಭಿಸಿದೆ.
 

click me!