
ಹುಬ್ಬಳ್ಳಿ; ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಾಂಪ್ರದಾಯಿಕ ಹಾಗೂ ಭಕ್ತಿಪೂರ್ವಕವಾಗಿ ಆಚರಿಸಲಾಗುವ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಶಾಂತಿ ಮತ್ತು ಸೌಹಾರ್ದ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯನ್ನುದ್ದೇಶಿಸಿ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಭೂಷಣ್ ಗುಲಾಬ್ರಾವ್ ಬೋರಸೆ ಅವರು, ಹಬ್ಬದ ಸಂಭ್ರಮವನ್ನು ಸುರಕ್ಷಿತವಾಗಿ, ನಿಯಮಬದ್ಧವಾಗಿ ಹಾಗೂ ಪ್ರೀತಿಯಿಂದ ಆಚರಿಸಲು ಸಾರ್ವಜನಿಕರು ಮತ್ತು ಗಣೇಶ ಮಂಡಳಿಗಳಿಗೆ ಹಲವು ಪ್ರಮುಖ ಸೂಚನೆಗಳನ್ನು ನೀಡಿದರು.
ಸಭೆಯ ಆರಂಭದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡ ಕಮಿಷನರ್ ಭೂಷಣ್ ಬೋರಸೆ, ಮಹಾರಾಷ್ಟ್ರ ನನ್ನ ಜನ್ಮಭೂಮಿಯಾಗಿದ್ದರೆ, ಕರ್ನಾಟಕ ನನ್ನ ಕರ್ಮಭೂಮಿಯಾಗಿದೆ. ಹಿಂದೆ ಬೆಳಗಾವಿಯಲ್ಲಿ ನನಗೆ ಸಾರ್ವಜನಿಕರಿಂದ ಸಿಕ್ಕ ಪ್ರೀತಿ ಮತ್ತು ಸಹಕಾರ ಇಲ್ಲೂ ಸಿಗುತ್ತದೆ ಎಂಬ ಬಲವಾದ ನಂಬಿಕೆ ನನಗಿದೆ. ಹುಬ್ಬಳ್ಳಿ-ಧಾರವಾಡದ ಗಣೇಶೋತ್ಸವವು ಅತ್ಯಂತ ವಿಶಿಷ್ಟವಾದದ್ದು, ಈ ಹಬ್ಬವು ಕೇವಲ ಸ್ಥಳೀಯ ಆಚರಣೆಯಾಗದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂಬುದು ನನ್ನ ಕನಸಾಗಿದೆ" ಎಂದು ಹೇಳಿದರು.
ಹಬ್ಬದ ಸಿದ್ಧತೆಗಳ ಕುರಿತು ಮಾತನಾಡುತ್ತಾ, ಮೂರ್ತಿಗಳ ಎತ್ತರದ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದರು. "12 ರಿಂದ 15 ಅಡಿ ಎತ್ತರದ ಗಣಪತಿ ಮೂರ್ತಿಗಳಿದ್ದರೆ ಪೆಂಡಾಲ್ ಹಾಗೂ ಮೆರವಣಿಗೆಯ ಸಮಯದಲ್ಲಿ ನಿರ್ವಹಣೆ ಮಾಡಲು ಸೂಕ್ತವಾಗಿರುತ್ತದೆ. ಅನೇಕ ಕಡೆಗಳಲ್ಲಿ ಅತಿಯಾದ ದೊಡ್ಡ ಮೂರ್ತಿಗಳಿಂದಾಗಿ ಅನಾಹುತಗಳು ಸಂಭವಿಸಿವೆ. ಒಂದು ವೇಳೆ 15 ಅಡಿಗಿಂತ ಹೆಚ್ಚಿನ ಎತ್ತರದ ಮೂರ್ತಿಯಿದ್ದರೆ, ಅದನ್ನು ಸ್ಥಳಾಂತರಿಸುವಾಗ ಅತ್ಯಂತ ಜಾಗರೂಕತೆ ವಹಿಸಬೇಕು. ವಿದ್ಯುತ್ ಕಂಬಗಳು ಮತ್ತು ತಂತಿಗಳಿಂದ ಅಪಾಯವಾಗದಂತೆ ಎಚ್ಚರ ವಹಿಸುವುದು ಕಡ್ಡಾಯ," ಎಂದು ತಿಳಿಸಿದರು. ಅಲ್ಲದೆ, ಪೆಂಡಾಲ್ ಹಾಕಲು ಹಾಗೂ ಮೆರವಣಿಗೆ ನಡೆಸಲು ಸಂಬಂಧಪಟ್ಟ ಇಲಾಖೆಗಳಿಂದ ಸೂಕ್ತ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದರು.
ಹಬ್ಬದ ವಾತಾವರಣವು ಕಲುಷಿತಗೊಳ್ಳಬಾರದು ಎಂಬ ಉದ್ದೇಶದಿಂದ ಕಮಿಷನರ್ ಹಲವು ಖಡಕ್ ನಿಯಮಗಳನ್ನು ಘೋಷಿಸಿದರು:
ಡಿಜೆ ನಿಯಮ; ರಾತ್ರಿ 10 ಗಂಟೆಗೆ ಸರಿಯಾಗಿ ಎಲ್ಲಾ ಡಿಜೆ ಸೌಂಡ್ ಸಿಸ್ಟಮ್‌ಗಳನ್ನು ಬಂದ್ ಮಾಡಬೇಕು. 10 ಗಂಟೆಯ ನಂತರ ಯಾವುದೇ ಕಾರಣಕ್ಕೂ ಡಿಜೆಗೆ ಅನುಮತಿ ನೀಡಲಾಗುವುದಿಲ್ಲ.
ಶಬ್ದ ಮಾಲಿನ್ಯ ನಿಯಮ; ಶಬ್ದದ ಪ್ರಮಾಣ 80 ಡೆಸಿಬಲ್ ದಾಟಿದರೆ ತಕ್ಷಣವೇ ಸೌಂಡ್ ಸಿಸ್ಟಮ್ ಬಂದ್ ಮಾಡಿಸಲಾಗುವುದು. ಜನರು ಚೆನ್ನಾಗಿ, ಜೋರಾಗಿ ಡ್ಯಾನ್ಸ್ ಮಾಡಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ಕರ್ಕಶ ಶಬ್ದ ಮಾಡಿ ಇತರರಿಗೆ ತೊಂದರೆ ಕೊಡಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ಹಾಡುಗಳು ಮತ್ತು ಸಂಸ್ಕೃತಿ; ಮೆರವಣಿಗೆಯ ವೇಳೆಯಲ್ಲಿ ಯಾವುದೇ ರೀತಿಯ ಅಶ್ಲೀಲ ಅಥವಾ ಸಮಾಜಕ್ಕೆ ಮುಜುಗರ ತರುವ ಹಾಡುಗಳನ್ನು ಹಾಕುವಂತಿಲ್ಲ.
ಸಂಪೂರ್ಣ ಮದ್ಯಪಾನ ನಿಷೇಧ; ಕುಡಿದ ಅಮಲಿನಲ್ಲಿ ಹಬ್ಬ ಆಚರಣೆ ಮಾಡಲು ಅಥವಾ ರಂಪಾಟ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ.
ಸಂಚಾರ ನಿಯಮ; ಹಬ್ಬದ ಸಂದರ್ಭದಲ್ಲಿ ನಗರದಲ್ಲಿ ಗೊಂದಲ ಉಂಟಾಗದಂತೆ ಸಂಚಾರಿ ನಿಯಮಗಳನ್ನು ಬಿಗಿಗೊಳಿಸಲಾಗಿದೆ.
ಮೆರವಣಿಗೆಯಲ್ಲಿ ಅಪಾಯಕಾರಿ ಪಟಾಕಿಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 'ರಾಕೆಟ್ ಪಟಾಕಿ' ಹಾರಿಸಲು ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ. ಮೆರವಣಿಗೆಯ ಸಮಯದಲ್ಲಿ ಸಾರ್ವಜನಿಕರ ಅಥವಾ ಇತರೆ ಆಚರಣೆ ಮಾಡುತ್ತಿರುವವರ ಮೈಮೇಲೆ ಪಟಾಕಿ ಎಸೆಯುವ ಪುಂಡಾಟಿಕೆ ನಡೆಸಿದರೆ, ಅಂತಹ ಘಟನೆಯ ಒಂದು ಫೋಟೋ ಅಥವಾ ವೀಡಿಯೋ ಪೊಲೀಸ್ ಇಲಾಖೆಗೆ ಕಳುಹಿಸಿದರೆ ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಹಬ್ಬದ ನೆಪದಲ್ಲಿ ನಗರದಲ್ಲಿ ಶಾಂತಿ ಭಂಗ ತರಲು ಯತ್ನಿಸುವವರ ಮತ್ತು ಚಾಕು, ಚೂರಿಗಳಂತಹ ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕರನ್ನು ಬೆದರಿಸುವವರ ವಿರುದ್ಧ ಹೋರಾಡಲು 'ಆಂಟಿ ಸ್ಟ್ಯಾಬಿಂಗ್ ಸ್ಕ್ವಾಡ್' (Anti-Stabbing Squad) ರಚಿಸಲಾಗಿದೆ. ಹಬ್ಬದ ವೇಳೆ ಚಾಕು ಅಥವಾ ಮಾರಕಾಸ್ತ್ರಗಳೊಂದಿಗೆ ಯಾರಾದರೂ ಸಿಕ್ಕಿಬಿದ್ದರೆ ಅವರಿಗೆ 10 ಲಕ್ಷ ರೂಪಾಯಿಗಳ ಶೂರಿಟಿ ಬಾಂಡ್ ಹಾಕಿಸಲಾಗುತ್ತದೆ. ಮುಂದಿನ ಬಾರಿ ಮತ್ತೆ ಅಂತಹ ಕೃತ್ಯದಲ್ಲಿ ಸಿಕ್ಕಿಬಿದ್ದರೆ ಬೃಹತ್ ಮೊತ್ತದ ದಂಡ ಮತ್ತು ಕಠಿಣ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಕಮಿಷನರ್ ಭೂಷಣ್ ಬೋರಸೆ ಎಚ್ಚರಿಸಿದ್ದಾರೆ.