Hubballi floods: ಬೆಳೆಯೆಲ್ಲ ನೀರಲ್ಲಿ ಕೊಳೆತು ಮೊಳಕೆಯೊಡೆದಿವೆ!

By Kannadaprabha NewsFirst Published Sep 10, 2022, 12:36 PM IST
Highlights

‘ರಾಶಿ ಮಾಡಿಟ್ಟಿದ್ದ ಹೆಸರು ಮೊಳಕೆಯೊಡೆದಾವ್‌.. ಹೊಲದಾಗಿನ ಬೆಳೆನೂ ಕೊಳತಾವ್‌ ನೋಡ್ರಿ. ಈ ವರ್ಷಾ ಕೈಗೆ ಬಂದ ತುತ್ತು ಬಾಯಿಗೆ ಬಾರದಂಗ ಆಗೈತಿ ನೋಡ್ರಿ..’! ಇದು ಧಾರವಾಡ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆಹಾನಿ ಕುರಿತಂತೆ ಕಿರೇಸೂರಿನ ಹನುಮಂತಗೌಡ ಮೇಟಿ ಹೇಳುವ ಮಾತು

ಶಿವಾನಂದ ಗೊಂಬಿ

 ಹುಬ್ಬಳ್ಳಿ (ಸೆ.10) :‘ರಾಶಿ ಮಾಡಿಟ್ಟಿದ್ದ ಹೆಸರು ಮೊಳಕೆಯೊಡೆದಾವ್‌.. ಹೊಲದಾಗಿನ ಬೆಳೆನೂ ಕೊಳತಾವ್‌ ನೋಡ್ರಿ. ಈ ವರ್ಷಾ ಕೈಗೆ ಬಂದ ತುತ್ತು ಬಾಯಿಗೆ ಬಾರದಂಗ ಆಗೈತಿ ನೋಡ್ರಿ..’! ಇದು ಧಾರವಾಡ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆಹಾನಿ ಕುರಿತಂತೆ ಕಿರೇಸೂರಿನ ಹನುಮಂತಗೌಡ ಮೇಟಿ ಹೇಳುವ ಮಾತು. ಎರಡ್ಮೂರು ದಿನಗಳ ಹಿಂದೆ ಸುರಿದ ಮಳೆಗೆ ಬೆಳೆಯೆಲ್ಲ ಅಕ್ಷರಶಃ ಹಾಳಾಗಿದೆ. ಅದರಲ್ಲೂ ಹಳ್ಳದ ಅಕ್ಕಪಕ್ಕದ ಹೊಲಗಳೆಲ್ಲ ನೀರಲ್ಲೇ ನಿಂತಿವೆ. ಇದರಿಂದಾಗಿ ಹೊಲದಲ್ಲಿ ಬೆಳೆಯೆಲ್ಲ ಕೊಳೆಯುತ್ತಿದೆ.

ನಮಗ ತಿನ್ನಾಕ ಹಿಡಿ ಹಿಟ್ಟೂಇಲ್ಲ; ದನಕ್ಕ ಹೊಟ್ಟೂಇಲ್ಲ ನೆರೆ ಸಂತ್ರಸ್ತೆ ಭೀಮವ್ವಳ ನೋವಿನ ಮಾತು

ಇನ್ನೂ ಕಟಾವ್‌ ಮಾಡದ ಉದ್ದು, ಹೆಸರು, ಮೆಕ್ಕೆಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳು ಕಪ್ಪಿಟ್ಟಿವೆ. ಇನ್ನೂ ಹತ್ತಿ ಗಿಡಗಳು ಹಸಿರಾಗಿವೆ. ಹಾಗೆ ನೋಡಿದರೆ ಹತ್ತಿ ಗಿಡಗಳಲ್ಲಿ ಹೂವು ಚಿಗರೊಡೆದಿವೆ. ಆದರೆ ಕಾಯಿ ಕಟ್ಟುವುದಿಲ್ಲ. ಎಲೆಗಳು ಹಸಿರಾಗಿ ಕಂಡರೂ ಬೇರುಗಳು ಕೊಳೆತಿವೆ. ಗಿಡಗಳು ಮುದುಡಿವೆ. ಹೆಸರು, ಉದ್ದು ಬೆಳೆಗಳ ಪರಿಸ್ಥಿತಿಯೂ ಇದೇ ರೀತಿಯಾಗಿದೆ. ಕಟಾವ್‌ ಮಾಡುವ ಹಂತಕ್ಕೆ ಹೆಸರು ಉದ್ದು ಬಂದಿದ್ದವು. ಮೊದಲು ಹೆಸರನ್ನು ಬಿಡಿಸುತ್ತಿದ್ದರು. ಆದರೆ ಇದೀಗ ಕಾರ್ಮಿಕರ ಸಮಸ್ಯೆಯಿಂದಾಗಿ ಮಷಿನ್‌ ಮೂಲಕ ಕಟಾವ್‌ ಮಾಡಿಸುತ್ತಾರೆ.

ಅದೇ ರೀತಿ ಕೆಲ ಹೊಲಗಳಲ್ಲಿ ಕಟಾವ್‌ ಮಾಡಿಸಿದ್ದರೆ, ಕೆಲವೆಡೆ ಕಟಾವ್‌ ಇನ್ನೂ ಮಾಡಿಸಿರಲಿಲ್ಲ. ಇನ್ನೆರಡು ದಿನಗಳಲ್ಲಿ ಕಟಾವ್‌ ಮಾಡಿಸಬೇಕೆಂಬ ಇರಾದೆ ರೈತರದ್ದಾಗಿತ್ತು. ಆದರೆ ಅಷ್ಟರೊಳಗೆ ಮಳೆ ವಿಪರೀತ ಸುರಿದು ಹೊಲದಲ್ಲೇ ಕೊಳೆಯಲು ಶುರುವಾಗಿವೆ. ನಿರಂತರ ನೀರು ನಿಂತ ಕಾರಣ ಕಪ್ಪು ಬಣ್ಣಕ್ಕೆ ತಿರುಗಿವೆ. ಇನ್ನೂ ಕಟಾವ್‌ ಮಾಡಿಸಿ ಹೊಲದ ಅಕ್ಕ ಪಕ್ಕದಲ್ಲಿ ರಾಶಿ ಮಾಡಿಟ್ಟಿದ್ದ ಉದ್ದು, ಹೆಸರುಗಳೆಲ್ಲ ನೀರು ನುಗ್ಗಿದ ಪರಿಣಾಮ ಅವು ಅಲ್ಲೇ ಮೊಳಕೆಯೊಡೆದಿವೆ. ಹೀಗೆ ಮೊಳಕೆಯೊಡೆದಿರುವ ಪರಿಣಾಮ ಅವುಗಳನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಿಲ್ಲದಂತಾಗಿದೆ. ಜಾನುವಾರುಗಳಿಗೂ ಹಾಕಲು ಬಾರದಂತಹ ಪರಿಸ್ಥಿತಿ ಈ ಬೆಳೆಗಳದ್ದಾಗಿದೆ.

ಈರುಳ್ಳಿ, ಶೇಂಗಾ ಎಲ್ಲ ಬೆಳೆಗಳ ಪರಿಸ್ಥಿತಿ ಇದೇ ರೀತಿಯಾಗಿದೆ. ವಿಪರೀತ ಮಳೆಯಿಂದಾಗಿ ಪ್ರತಿ ಎಕರೆಗೆ 2 ಅಥವಾ 3 ಕ್ವಿಂಟಲ್‌ ಹೆಸರು ಬೆಳೆ ಬಂದರೆ ಅದೇ ದೊಡ್ಡದು ಎಂಬಂತಹ ಪರಿಸ್ಥಿತಿ ಇದೆ ಎಂದು ರೈತ ಪ್ರವೀಣ ಚಿಕ್ಕರೆಡ್ಡಿ ಹೇಳುತ್ತಾರೆ.

ಎಷ್ಟೆಷ್ಟುಹಾನಿ:

ಧಾರವಾಡ ಜಿಲ್ಲೆಯಲ್ಲಿ ಬರೋಬ್ಬರಿ 2.73 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಬೆಳೆ ಬೆಳೆಯಲಾಗಿದೆ. ಈ ಪೈಕಿ ಆಗಸ್ಟ್‌ ಅಂತ್ಯದವರೆಗೆ 98 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಸಂಪೂರ್ಣ ಹಾನಿಗೀಡಾಗಿತ್ತು. ಇದೀಗ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಮತ್ತೆ 20 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿರುವ ಬೆಳೆ ಮತ್ತೆ ಹಾನಿಯಾಗಿದೆ. ಇದರಿಂದ 1.18 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಮಳೆ ಇನ್ನೂ ಪೂರ್ಣವಾಗಿ ಮುಗಿದಿಲ್ಲ. ಹೀಗಾಗಿ ಹಾನಿಯ ಪ್ರಮಾಣ ಇನ್ನಷ್ಟುಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ತಿಳಿಸುತ್ತದೆ. ಬೆಳೆ ಹಾನಿ ಪೈಕಿ ಹೆಸರು ಹಾಗೂ ಉದ್ದು ಬೆಳೆಯ ಹಾನಿಯ ಪ್ರಮಾಣವೇ ಜಾಸ್ತಿಯಿದೆ. 68 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿನ ಹೆಸರು ಬೆಳೆ ಅತಿವೃಷ್ಟಿಯಿಂದ ಹಾನಿಗೀಡಾಗಿದೆ ಎಂದು ಮೂಲಗಳು ತಿಳಿಸಿವೆ.

ಹುಬ್ಬಳ್ಳಿ-ಧಾರವಾಡ ಪ್ರವಾಹ ಪೀಡಿತ ಸ್ಥಳಗಳಿಗೆ ಸಚಿವರ ಭೇಟಿ

ಒಟ್ಟಿನಲ್ಲಿ ರೈತರಿಗೆ ಅತಿವೃಷ್ಟಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿರುವುದಂತೂ ಸತ್ಯ. ಇದೀಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆವಿಮೆ ಜತೆಗೆ ಬೆಳೆಹಾನಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಒಕ್ಕೊರಲಿನ ಆಗ್ರಹ.

ಹೊಲದಾಗಿನ ಬೆಳೆ ಕೊಳೆತಿವೆ. ಕಟಾವ್‌ ಮಾಡಿಟ್ಟಿದ್ದ ಬೆಳೆಗಳೆಲ್ಲ ಮೊಳಕೆಯೊಡೆದಿವೆ.ಇವನ್ನು ಮಾರ್ಕೆಟಿಗೆ ಒಯ್ಯುವುದಿರಲಿ ದನಕ್ಕೂ ಹಾಕಲು ಬರಂಗಿಲ್ಲ. ಸಾವಿರಾರು ರೂ.ಖರ್ಚು ಮಾಡಿ ಸಾಲಸೋಲ ಮಾಡಿ ಬಿತ್ತನೆ ಮಾಡಿದ್ದೇವು. ಈಗ ನೋಡಿದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಕಲ್ಲಪ್ಪ ಹುಲ್ಜತ್ತಿ, ಯುವ ರೈತ

click me!