
ಹುಬ್ಬಳ್ಳಿ-ಧಾರವಾಡ (ಸೆ.6): ಹುಬ್ಬಳ್ಳಿ-ಧಾರವಾಡ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಭೂಷಣ್ ಬೋರಸೆ ಅವರಿಗೆ ಗಾಂಜಾ ಪ್ರಕರಣದ ಆರೋಪಿ ಹಾಗೂ ಗೌರಿ ಲಂಕೇಶ್ ಕೊಲೆ ಪ್ರಕರಣದ ಆರೋಪಿ ಸನ್ಮಾನ ಮಾಡಿರುವ ಘಟನೆ ನಡೆದಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಎನ್‌ಡಿಪಿಎಸ್ ಪ್ರಕರಣ(NDPS Case)ದಲ್ಲಿ ಆರೋಪಿ ಎನ್ನಲಾದ ಖೇತ್‌ಸಿಂಗ್ ರಾಜಪುರೋಹಿತ ಎಂಬುವವರು ಆಯುಕ್ತರಿಗೆ ಹೂಗುಚ್ಛ ನೀಡಿ ಸನ್ಮಾನ ಮಾಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಇದೇ ವೇಳೆ ಗೌರಿ ಲಂಕೇಶ್ ಕೊಲೆ ಪ್ರಕರಣ(Gouri Lankesh Murder case)ದ ಆರೋಪಿಯಾಗಿದ್ದ ಅಮಿತ್ ಬದ್ದಿ ಎಂಬುವವರು ಕೂಡ ಆಯುಕ್ತರನ್ನು ಸನ್ಮಾನಿಸಿರುವ ಫೋಟೋ ವೈರಲ್ ಆಗಿದೆ.
ಈ ಮೊದಲು ಕಮಿಷನರ್ ಆಗಿದ್ದ ಎನ್ ಶಶಿಕುಮಾರ್ ಇತ್ತೀಚೆಗೆ ವರ್ಗಾವಣೆಗೊಂಡರು. ಅವರ ಸ್ಥಾನಕ್ಕೆ ನೂತನ ಆಯುಕ್ತರಾಗಿ ಭೂಷಣ್ ಬೋರಸೆ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಇಂತಹ ಆರೋಪಿಗಳು ಪೊಲೀಸ್ ಆಯುಕ್ತರ ಕಚೇರಿಗೆ ಪ್ರವೇಶಿಸಿ ಸನ್ಮಾನ ಮಾಡಲು ಹೇಗೆ ಸಾಧ್ಯವಾಯ್ತು? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.
ರೌಡಿಶೀಟರ್‌ಗಳು, ಪಾತಕ ಹಿನ್ನೆಲೆಯುಳ್ಳವರು ಹಾಗೂ ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿರುವವರು ಪ್ರಭಾವಿ ವ್ಯಕ್ತಿಗಳೊಂದಿಗೆ ದೋಸ್ತಿ ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮಗಳನ್ನು ಬಳಸಿಕೊಳ್ಳುವುದು ಸಾಮಾನ್ಯ. ಹೊಸದಾಗಿ ಆಯುಕ್ತರಾಗಿ ಬಂದವರಿಗೆ ಇಂಥವರ ಹಿನ್ನೆಲೆ ಬಗ್ಗೆ ಮಾಹಿತಿ ಇರೋದಿಲ್ಲ ಒಪ್ಪೋಣ ಆದರೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲವೇ? ಎಂಬ ಪ್ರಶ್ನೆ ಉದ್ಬವಿಸಿದೆ. ಅಪರಾಧ ಹಿನ್ನೆಲೆಯುಳ್ಲವರು ಪೊಲೀಸ್ ಕಚೇರಿ ಪ್ರವೇಶಿಸಲು, ಅದರಲ್ಲೂ ಕಮಿಷನರ್ ಬಳಿ ಬರಲು ಭಯ ಪಡುತ್ತಾರೆ. ಆದರೆ ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಇಬ್ಬರು ಪೊಲೀಸ್ ಕಚೇರಿಗೆ ಬಂದು ಕಮಿಷನರ್‌ಗೆ ಹೂಗುಚ್ಚ ನೀಡಿ ಸನ್ಮಾನಿಸುತ್ತಿರುವುದು ಅಚ್ಚರಿ ಹುಟ್ಟಿಸಿದೆ.
ಭೂಷಣ್ ಬೋರಸೆ ಅವರು ಅಧಿಕಾರ ವಹಿಸಿಕೊಂಡ ಕೂಡಲೇ ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಇದೀಗ ಡ್ರಗ್ಸ್ ಪ್ರಕರಣದ ಆರೋಪಿಯಿಂದಲೇ ನೂತನ ಆಯುಕ್ತರಿಗೆ ಸನ್ಮಾನ ನಡೆದಿರುವ ಫೋಟೋಗಳು ವೈರಲ್ ಆಗಿರುವುದು ಚರ್ಚೆಗೆ ಗ್ರಾಸವಾಗಿದೆ.