ಹುಬ್ಬಳ್ಳಿ: ಜಲಪ್ರಳಯಕ್ಕೆ ಕೊಚ್ಚಿಹೋದ ಸೇತುವೆ ನಿರ್ಮಿಸೋದು ಯಾವಾಗ?

By Suvarna NewsFirst Published Dec 15, 2019, 7:34 AM IST
Highlights

ನೆರೆಗೆ ಕೊಚ್ಚಿಹೋದ ಸೇತುವೆ ನಿರ್ಮಾಣ ಎಂದು| ಕೊಚ್ಚಿಹೋದ ಸೇತುವೆ ಒಂದು ಭಾಗಕ್ಕೆ ಮಣ್ಣು ಹಾಕಿದ ಪಾಲಿಕೆ| ಸ್ವಲ್ಪ ಯಾಮಾದರೂ ನಾಲಾಕ್ಕೆ ಬೀಳಲಿವೆ ವಾಹನಗಳು|ಮಣ್ಣು ಹಾಕಿ ಕಿರಿದಾದ ರಸ್ತೆ ನಿರ್ಮಿಸಿದ್ದು ಜೀವ ಕೈಯಲ್ಲಿ ಹಿಡಿದು ವಾಹನ ಚಲಾಯಿಸಬೇಕಾಗಿದೆ|

ನಾಗರಾಜ ಮಾರೇರ

ಹುಬ್ಬಳ್ಳಿ[ಡಿ.15]: ಮಳೆ ನಿಂತು... ನೆರೆ ಸರಿದಿದೆ... ಆದರೆ ಅದರಿಂದ ಆದ ಹಾನಿ ಮಾತ್ರ ಕಣ್ಣಿಗೆ ಕಟ್ಟುತ್ತಿದೆ. ನೆರೆ ಬಂದು ನಾಲ್ಕೈದು ತಿಂಗಳಾದರೂ ಅದು ಸೃಷ್ಟಿಸಿದ ಅವಾಂತರಕ್ಕೆ ಪರಿಹಾರ ಸಿಗದೆ ಜನರು ನಿತ್ಯ ಸಂಕಷ್ಟ ಎದುರಿಸುತ್ತಿದ್ದಾರೆ.

ಕುಂಭದ್ರೋಣ ಮಳೆಯಿಂದ ರಾತ್ರೋ ರಾತ್ರಿ ಕೋಡಿ ಹರಿದ ಉಣಕಲ್‌ ಕೆರೆ ನೀರು ಸಿದ್ಧಲಿಂಗೇಶ್ವರ ಹಾಗೂ ಹನುಮಂತನಗರದ ತಗ್ಗು ಪ್ರದೇಶಗಳಿಗೆ ನುಗ್ಗಿ ಜನರ ಬದುಕು ಕೊಚ್ಚಿಕೊಂಡು ಹೋಗಿದ್ದಲ್ಲದೆ ನಾಲಾಗಳಿಗೆ ನಿರ್ಮಿಸಿದ ಸೇತುವೆ, ರಸ್ತೆಗಳನ್ನು ಧ್ವಂಸ ಮಾಡಿದೆ. ಈ ಘಟನೆ ನಡೆದು ನಾಲ್ಕೈದು ತಿಂಗಳು ಕಳೆದರೂ ಈ ಭಾಗದ ಜನರಿಗೆ ಸಂಚರಿಸಲು ಸುಸಜ್ಜಿತ ಸೇತುವೆ ಇಲ್ಲ.

ಕುಸಿದ ಸೇತುವೆಗೆ ಮಣ್ಣು

ನಾಲಾದಲ್ಲಿ ಹೂಳು ತುಂಬಿಕೊಂಡಿದ್ದರಿಂದ ನೀರಿನ ಸೆಳೆತಕ್ಕೆ ನಿರ್ಮಿಸಿದ ಸೇತುವೆಗಳು ಅಕ್ಷರಶಃ ಕೊಚ್ಚಿಹೋಗಿವೆ. ಉಣಕಲ್‌ನಿಂದ ಸಿದ್ದಲಿಂಗೇಶ್ವರ ನಗರ ಮಾರ್ಗವಾಗಿ ವೀರಭದ್ರೇಶ್ವರ ಕಾಲನಿ, ಗಣೇಶ ಕಾಲನಿ, ಸನ್ಮತಿ ಲೇ ಔಟ್‌, ರಾಣಿ ಚೆನ್ನಮ್ಮ ಕಾಲನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸೇತುವೆಯ ಒಂದು ಭಾಗ ಸಂಪೂರ್ಣ ಕೊಚ್ಚಿ ಹೋದರೆ, ಇನ್ನೊಂದು ಭಾಗದಲ್ಲಿ ಶೇ. 80 ರಷ್ಟು ನೆಲ ಕಚ್ಚಿದೆ. ಮಹಾನಗರ ಪಾಲಿಕೆ ಸೇತುವೆ ಮರು ನಿರ್ಮಿಸದೆ ಕೊಚ್ಚಿ ಹೋದ ಭಾಗಕ್ಕೆ ಮಣ್ಣು ಹಾಕಿದ್ದು ಅದು ಸಹ ಸಮತಟ್ಟಾಗಿಲ್ಲದೆ ಚಾಲಕರು ಭಯದಲ್ಲಿ ವಾಹನ ಚಲಾಯಿಸಬೇಕಿದೆ. ಅದೇ ರೀತಿ ಹನುಮಂತನಗರದಲ್ಲೂ ನಾಲ್ಕು ಅಡಿ ಮಣ್ಣು ಹಾಕಿ ಇತ್ತೀಚೆಗೆ ಸೇತುವೆ ನಿರ್ಮಿಸಲಾಗಿದೆ. ಮಣ್ಣು ನೀರಿನ ಸೆಳೆತಕ್ಕೆ ಕಳಚುತ್ತಿದ್ದು ಹೆಚ್ಚಿನ ಭಾರದ ವಾಹನಗಳು ಅದರ ಮೇಲೆ ಸಂಚರಿಸುತ್ತಿಲ್ಲ.

ಬಸ್‌ ಸಂಚಾರ ಸ್ಥಗಿತ

ಸೇತುವೆ ಕಿರಿದಾಗಿದ್ದು ಸಿದ್ದಲಿಂಗೇಶ್ವರ ನಗರಕ್ಕೆ ಈ ಮೊದಲು ಬರುತ್ತಿದ್ದ ಒಂದೇ ಒಂದು ಬಸ್‌ ಸಹ ಸಂಚಾರ ಸ್ಥಗಿತಗೊಳಿಸಿದೆ. ಇದರಿಂದ ವಿವಿಧ ಕಾಲನಿಯ ಜನರು ಎರಡ್ಮೂರು ಕಿಲೋ ಮೀಟರ್‌ ನಡೆದುಕೊಂಡು ಉಣಕಲ್‌ ಕ್ರಾಸ್‌ಗೆ ಬರಬೇಕು. ಸೇತುವೆ ಬಳಿ ಲೈಟ್‌ ಸಹ ಇಲ್ಲದೆ ರಾತ್ರಿ ಇಲ್ಲಿ ಸಂಚರಿಸಲು ಜನರು ಭಯಪಡುತ್ತಿದ್ದಾರೆ. ಸುಮಾರು 1 ಕಿಲೋ ಮೀಟರ್‌ ವರೆಗೂ ಯಾವುದೇ ವಿದ್ಯುತ್‌ ದೀಪಗಳು ಇಲ್ಲದೆ ಕತ್ತಲಲ್ಲಿ ಜನರು ಸಂಚರಿಸುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ನಿರ್ಜನ ಪ್ರದೇಶವಾಗುವ ಈ ರಸ್ತೆಯಲ್ಲಿ ಒಬ್ಬಂಟಿಯಾಗಿ ಸಂಚರಿಸಲು ಮಹಿಳೆಯರು ಭಯ ಪಡುತ್ತಿದ್ದಾರೆ. ರಾತ್ರಿಯಾದರೆ ಈ ರಸ್ತೆಯಲ್ಲಿ ಬರಲು ಅಂಜಿಕೆಯಾಗುತ್ತಿದೆ. ಮನೆಯವರು ಬಂದು ನಮ್ಮನ್ನು ಕರೆದುಕೊಂಡು ಹೋಗುವರೆಗೂ ಬಸ್‌ ನಿಲ್ದಾಣದಲ್ಲಿಯೇ ಉಳಿಯಬೇಕಾಗಿದೆ ಎನ್ನುತ್ತಾರೆ ಮಹಿಳೆಯರು.

ತುಂಬುತ್ತಿದೆ ನಾಲಾ:

ನಾಲಾಗಳು ಹೂಳು ತುಂಬಿ ಮನೆ, ರಸ್ತೆಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ನಾಲಾ ಹೂಳು ತೆಗೆದಿದ್ದರೆ ಮನೆಗಳಿಗೆ ನೀರು ನುಗ್ಗುತ್ತಿರಲಿಲ್ಲ ಎಂದು ನಾಲಾ ಪಕ್ಕದ ನಿವಾಸಿಗಳು ಕಣ್ಣೀರು ಹಾಕಿದರೆ, ಅದೇ ನಾಲಾಕ್ಕೆ ಕಟ್ಟಡ ನೆಲಸಮ ಮಾಡಿದ ಸಾಮಗ್ರಿಗಳನ್ನು ತಂದು ಹಾಕುತ್ತಿದ್ದಾರೆ. ಇದರಿಂದ ನಾಲಾ ಮತ್ತಷ್ಟುತುಂಬಿಕೊಂಡಿದ್ದು ಕೊಳಚೆ ನೀರು ನಿಂತು ದುರ್ನಾತ ಬೀರುತ್ತಿದೆ.

ಉಣಕಲ್‌ ಕೆರೆ ಕೋಡಿ ಹರಿದು ಸೇತುವೆ ಕೊಚ್ಚಿ ನಾಲ್ಕೈದು ತಿಂಗಳು ಕಳೆದರೂ ಹೊಸ ಸೇತುವೆ ನಿರ್ಮಿಸಿಲ್ಲ. ಪಾಲಿಕೆ ಅಧಿಕಾರಿಗಳಿಗೂ, ಜನಪ್ರತಿನಿಧಿಗಳು ಸೇತುವೆ ನಿರ್ಮಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು  ಸ್ಥಳೀಯ ರಫೀಕ್‌ ಅವರು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಣ್ಣು ಹಾಕಿ ಕಿರಿದಾದ ರಸ್ತೆ ನಿರ್ಮಿಸಿದ್ದು ಜೀವ ಕೈಯಲ್ಲಿ ಹಿಡಿದು ವಾಹನ ಚಲಾಯಿಸಬೇಕಾಗಿದೆ. ಸ್ವಲ್ಪ ಯಾಮಾರಿದರೂ ವಾಹನ ಸಮೇತ ಕೊಳಚೆ ನೀರಿಗೆ ಬೀಳುತ್ತೇವೆ. ನೆರೆ ಬಂದು ಹಲವು ತಿಂಗಳು ಕಳೆದರೂ ಅದರ ಛಾಯೆ ಜನರ ಮೇಲಿದೆ. ಇನ್ನಾದರೂ ಅಧಿಕಾರಿಗಳು ಇತ್ತ ಧಾವಿಸಿ ಜನರ ಸಂಕಷ್ಟನಿವಾರಿಸಬೇಕು ಎಂದು ಶಾಬುದ್ದೀನ್‌ ಮುಲ್ಲಾ ಅವರು ತಿಳಿಸಿದ್ದಾರೆ. 

ನಾಲಾದಲ್ಲಿ ತುಂಬಿರುವ ಹೂಳು ತೆಗೆದಿದ್ದರೆ ನೆರೆ ನೀರು ಮನೆಗಳಿಗೆ ನುಗ್ಗುತ್ತಿರಲಿಲ್ಲ. ಅಧಿಕಾರಿಗಳು ಮೊದಲು ನಾಲಾದಲ್ಲಿ ತುಂಬಿರುವ ಹೂಳು ತೆಗೆದು ತಡೆಗೋಡೆ ನಿರ್ಮಿಸಬೇಕು. ಇದರಿಂದ ಮುಂದಿನ ದಿನಗಳಲ್ಲಾದರೂ ಮನೆಗಳಿಗೆ ನೀರು ನುಗ್ಗುವುದಿಲ್ಲ ಎಂದು ಸ್ಥಳೀಯ ದಿನೇಶ  ಅವರು ತಿಳಿಸಿದ್ದಾರೆ. (ಸಾಂದರ್ಭಿಕ)

click me!