Hubballi To Dharwad: ದಣಿದ ಚಿಗರಿಗಳಿಗೆ ಪ್ರತ್ಯೇಕ ಬಿಆರ್‌ಟಿಎಸ್‌ ಕಾರಿಡಾರ್‌ ಏಕೆ?

Published : Jun 23, 2026, 07:53 AM IST
BRTS

ಸಾರಾಂಶ

ಹುಬ್ಬಳ್ಳಿ-ಧಾರವಾಡದ ಬಿಆರ್‌ಟಿಎಸ್‌ ಪ್ರತ್ಯೇಕ ಕಾರಿಡಾರ್‌ನಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದ್ದು, ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ. ಹದಗೆಟ್ಟಿರುವ ಚಿಗರಿ ಬಸ್‌ಗಳು ಮತ್ತು ಕೆಲವು ಭಾಗಗಳಲ್ಲಿ ಈಗಾಗಲೇ ಮಿಶ್ರಪಥದಲ್ಲಿ ಸಂಚರಿಸುತ್ತಿರುವುದರಿಂದ, ಕಾರಿಡಾರ್ ರದ್ದುಪಡಿಸಿ ಸಂಚಾರ ದಟ್ಟಣೆ ನಿವಾರಿಸಬೇಕೆಂಬುದು ಸಾರ್ವಜನಿಕರ ಪ್ರಬಲ ಒತ್ತಾಯವಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ದನಿದ ಚಿಗರಿಗಳಿಗೆ ಬಿಆರ್‌ಟಿಎಸ್‌ ಕಾರಿಡಾರ್‌ ಏಕೆ? ಬಿಆರ್‌ಟಿಎಸ್‌ ಕಾರಿಡಾರ್‌ನ್ನೆಲ್ಲ ರದ್ದುಪಡಿಸಿ ಎಲ್ಲ ವಾಹನಗಳಿಗೆ ಅವಕಾಶ ಮಾಡಿಕೊಟ್ಟು ಪುಣ್ಯಕಟ್ಕೊಳ್ಳಿ..!

ಇದು ಹುಬ್ಬಳ್ಳಿ-ಧಾರವಾಡ ಮಹಾನಗರದ ಜನತೆ ಒತ್ತಾಯಿಸುತ್ತಿರುವ ಪರಿ. ಇದಕ್ಕೆ ಕಾರಣವೂ ಇಲ್ಲದಿಲ್ಲ. 2018ರಿಂದ ಆರಂಭವಾಗಿರುವ ಬಿಆರ್‌ಟಿಎಸ್‌ಗಾಗಿ ಪ್ರತ್ಯೇಕ ಕಾರಿಡಾರ್‌ ಮಾಡಲಾಗಿದೆ. ಸರಿಸುಮಾರು 100 ಬಸ್‌ಗಳು ಓಡಾಡುತ್ತಿದ್ದವು. ಅವಳಿ ನಗರದ ಮಧ್ಯೆ ಸಂಚರಿಸುವ ಜನತೆಗೆ ಹೆಚ್ಚಿನ ಹವಾನಿಯಂತ್ರಿತ ಬಸ್‌ಗಳಲ್ಲಿ ಸಂಚರಿಸುವಂತಾಗಲಿ. ಜತೆಗೆ ತ್ವರಿತಗತಿಯಲ್ಲಿ ಪ್ರಯಾಣಿಸುವಂತಾಗಲಿ ಎಂಬುದು ಸರ್ಕಾರದ ಉದ್ದೇಶವಾಗಿತ್ತು. ಆದರೆ, ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿಯಾಗುತ್ತಿದೆ. ಮಿಶ್ರಪಥ ಯಾವಾಗಲೂ ಬರೀ ಟ್ರಾಫಿಕ್‌ನಿಂದ ಕೂಡಿರುತ್ತಿತ್ತು.

ಬಿಆರ್‌ಟಿಎಸ್‌ಗೆ ಪರ್ಯಾಯವಾಗಿ ಎಲ್‌ಆರ್‌ಟಿ ಚಿಂತನೆ

ಕಾರಿಡಾರ್‌ನಲ್ಲಿ ಸಾರ್ವಜನಿಕ ವಾಹನಗಳಿಗೂ ಅವಕಾಶ ನೀಡಬೇಕು. ಇಲ್ಲವೇ ಬಿಆರ್‌ಟಿಎಸ್‌ ಬಸ್‌ಗಳನ್ನೇ ರದ್ದುಪಡಿಸಿ ಎಂಬ ಬೇಡಿಕೆಯನ್ನಿಟ್ಟುಕೊಂಡು ರಸ್ತೆ ತಡೆ, ರ್‍ಯಾಲಿ ಹೀಗೆ ಎಲ್ಲ ಬಗೆಯ ಹೋರಾಟಗಳು ನಡೆದಿವೆ. ಇವುಗಳ ನಡುವೆಯೇ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಬಿಆರ್‌ಟಿಎಸ್‌ಗೆ ಪರ್ಯಾಯವಾಗಿ ಎಲ್‌ಆರ್‌ಟಿ (ಲೈಟ್‌ ಟ್ರಾನ್ಸಿಟ್‌ ರೈಲ್‌) ಜಾರಿಗೊಳಿಸುವ ನಿಟ್ಟಿನಲ್ಲೂ ಸಮೀಕ್ಷೆ ನಡೆಸಿದ್ದರು. ಹಿಸ್ಸಾ ಎಂಬ ಕಂಪನಿ ಸಮೀಕ್ಷೆ ನಡೆಸಿ ಎಲ್‌ಆರ್‌ಟಿ ಜಾರಿಗೊಳಿಸುವುದು ಉತ್ತಮ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿತ್ತು. ಅದಾದ ಬಳಿಕ ಸರ್ಕಾರವೂ ಬದಲಾಯಿತು. ಸಚಿವರಾಗಿದ್ದ ಲಾಡ್‌ ಕೂಡ ಮಾಜಿ ಆದರು. ಸದ್ಯ ಯಾರೂ ಸಚಿವರು ಇಲ್ಲದ ಜಿಲ್ಲೆಯಾಗಿದೆ.

ಈಗೇನು ಸಮಸ್ಯೆ?

ಈಗಿರುವ ಸಮಸ್ಯೆಯೆಂದರೆ ಫ್ಲೈಓವರ್‌ ಕಾಮಗಾರಿಯಿಂದಾಗಿ ಬಿಆರ್‌ಟಿಎಸ್‌ನ ಕಾರಿಡಾರ್‌ ಅರ್ಧಕ್ಕಿಂತ ಕಡಿಮೆಯಾಗಿದೆ. ಮಹಿಳಾ ವಿದ್ಯಾಪೀಠದಿಂದಷ್ಟೇ ಕಾರಿಡಾರ್‌ ಪ್ರತ್ಯೇಕವಾಗಿದೆ. ಉಳಿದಂತೆ ಹಳೇ ಬಸ್‌ ನಿಲ್ದಾಣ, ಕಾರ್ಪೋರೇಷನ್‌, ರೈಲ್ವೆ ನಿಲ್ದಾಣ, ಸಿಬಿಟಿ ವರೆಗೂ ಈ ಚಿಗರಿ ಬಸ್‌ಗಳು ಮಿಶ್ರ ಪಥದಲ್ಲೇ ಸಂಚರಿಸುತ್ತಿವೆ. ಯಾವುದೇ ಸಮಸ್ಯೆಯಾಗುತ್ತಿಲ್ಲ. ಹಾಗಾದರೆ ಮಹಿಳಾ ವಿದ್ಯಾಪೀಠದಿಂದಾದರೂ ಏಕೆ ಪ್ರತ್ಯೇಕ ಕಾರಿಡಾರ್‌ ಎಂಬ ಪ್ರಶ್ನೆ ಇದೀಗ ಸಾರ್ವಜನಿಕರದ್ದು. ಅಲ್ಲಿ ಮಿಶ್ರಪಥದಲ್ಲಿ ಸಂಚರಿಸಬಹುದಾದರೆ ಇಲ್ಲಿಂದ ಧಾರವಾಡ ವರೆಗೂ ಮಿಶ್ರಪಥದಲ್ಲೇ ಸಂಚರಿಸಲಿ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡಕೋಟಾ ಬಸ್‌ಗಳಿಗೇಕೆ ಕಾರಿಡಾರ್‌?

ಪೂರ್ಣವಾಗಿ ಮಹಿಳಾ ವಿದ್ಯಾಪೀಠದಿಂದ ಧಾರವಾಡ ವರೆಗೂ ಪ್ರತ್ಯೇಕ ಕಾರಿಡಾರ್‌ ತೆರವುಗೊಳಿಸಿ, ಮಧ್ಯೆ ಬ್ಯಾರಿಕೇಡ್‌ ಅಳವಡಿಸಬೇಕು. ಎರಡು ಬದಿಯಲ್ಲಿ ಏಕಮುಖ ಸಂಚಾರ ಮಾಡಿ ಎಲ್ಲ ವಾಹನಗಳಿಗೂ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ ಟ್ರಾಫಿಕ್‌ ಕಿರಿಕಿರಿಯೇ ಇರುವುದಿಲ್ಲ.

ಬಿಆರ್‌ಟಿಎಸ್‌ ಬಸ್‌ಗಳು ಇದೀಗ ಮೊದಲಿನಂತೆ ಹೈಟೆಕ್‌ ಬಸ್‌ಗಳಾಗಿ ಉಳಿದಿಲ್ಲ. ಹವಾನಿಯಂತ್ರಿತ ವ್ಯವಸ್ಥೆ ಹಾಳಾಗಿದೆ. ಮುಂದಿನ ನಿಲ್ದಾಣದ ಮಾಹಿತಿ ನೀಡುವ ಧ್ವನಿಮುದ್ರಿಕೆ (ಜಿಂಗಲ್‌) ಮೌನವಾಗಿದೆ. ಮಳೆ ಬಂದರೆ ಸೋರುತ್ತವೆ. ಅಲ್ಲಲ್ಲಿ ಜಿರಳೆ ಕಾಣಸಿವೆ.

ಈಗಾಗಲೇ ಬೈಕ್‌, ಕಾರು, ಬಸ್‌ಗಳು ಸಹ ಕಾರಿಡಾರ್‌ನಲ್ಲೇ ಓಡಾಡುತ್ತವೆ. ಹೀಗಾಗಿ ಪ್ರತ್ಯೇಕ ಕಾರಿಡಾರ್‌ ಮಾಡುವ ಅಗತ್ಯವಾದರೂ ಏನು? ಕಾರಿಡಾರ್‌ ತೆರೆದು ಮಧ್ಯೆ ಬ್ಯಾರಿಕೇಡ್‌ ಹಾಕಿ. ಟ್ರಾಫಿಕ್‌ ಜಾಮ್‌ನಿಂದ ಮುಕ್ತವಾಗುತ್ತದೆ. ಜತೆಗೆ ಎಲ್‌ಆರ್‌ಟಿ ಸೇರಿದಂತೆ ಯಾವುದೇ ಯೋಜನೆಯೂ ಅಗತ್ಯವೇ ಬೀಳಲ್ಲ ಎಂಬ ಅಂಬೋಣ ಸಾರ್ವಜನಿಕರದ್ದು.

ಕಾರಿಡಾರ್‌ನಲ್ಲಿ ಎಲ್ಲ ವಾಹನಗಳು ಓಡಾಡುತ್ತಿವೆ. ಪ್ರತ್ಯೇಕ ಕಾರಿಡಾರ್‌ ಎನ್ನುವುದಕ್ಕೆ ಅರ್ಥವೇ ಉಳಿದಿಲ್ಲ. ಬಸ್‌ಗಳ ಪರಿಸ್ಥಿತಿಯೂ ಸರಿ ಇಲ್ಲ. ಪ್ರತ್ಯೇಕ ಕಾರಿಡಾರ್‌ನ್ನು ತೆರವುಗೊಳಿಸಿ ಮಧ್ಯೆ ಬ್ಯಾರಿಕೇಡ್‌ ಅಳವಡಿಸಿ ಟ್ರಾಫಿಕ್‌ ಕಿರಿಕಿರಿ ತಗ್ಗಿಸಬೇಕು ಎಂದು ಈರೇಶ್ ಜಗಜಂಪಿ  ಎಂಬವರು ಹೇಳುತ್ತಾರೆ.

PREV
Read more Articles on
click me!

Recommended Stories

ಕೈಕೊಟ್ಟ ಮಳೆ: 11 ಎಕ್ರೆ ಗೋವಿನಜೋಳದ ಬೆಳೆ ಟ್ರ‍್ಯಾಕ್ಟರ್‌ನಿಂದ ನಾಶ ಮಾಡಿದ ಹಾವೇರಿ ರೈತ
ಹೊನ್ನಾಳಿ-ದಾವಣಗೆರೆಗೆ ಬಸವಾಪಟ್ಟಣ ಮೂಲಕ ಹೊಸ ಬಸ್ ಆರಂಭ; ಮಾರ್ಗ, ಸಮಯ ಈ ರೀತಿಯಾಗಿದೆ