7 ತಿಂಗಳ ಗರ್ಭಿಣಿ ಪತ್ನಿಯೊಂದಿಗೆ ತವರಿಗೆ ಬರಲು ಹರಸಾಹಸ: ಮಾತು ಬರದ ಪತಿ-ಪತ್ನಿಯ ವೇದನೆ..!

By Kannadaprabha NewsFirst Published Apr 29, 2020, 9:15 AM IST
Highlights

ತವರಿಗೆ ಬರಲು ಪತಿ-ಪತ್ನಿಯ ಮೂಕ ವೇದನೆ| ವಿಡಿಯೋ ಮೂಲಕ ನಮ್ಮನ್ನ ಕರೆದೊಯ್ಯಿ ಎನ್ನುತ್ತಿರುವ ಮಾತು ಬರದ ದೀಪಕ, ಬಸವ್ವ| ಇಬ್ಬರೂ ಧಾರವಾಡ ತಾಲೂಕು ಲಕಮಾಪೂರ ಗ್ರಾಮದವರು| ಬೆಂಗಳೂರಿನ ಸಮರ್ಥನಂ ಸಂಸ್ಥೆಯಲ್ಲಿ ಕೆಲಸ|

ಬಸವರಾಜ ಹಿರೇಮಠ

ಧಾರವಾಡ(ಏ.29): ಪತ್ನಿ ಏಳು ತಿಂಗಳ ಗರ್ಭಿಣಿ. ಹೆರಿಗೆಯಾದರೆ ಮಗು ಹಾಗೂ ಪತ್ನಿಯನ್ನು ಜೋಪಾನ ಮಾಡಲೂ ಮನೆಯಲ್ಲಿ ಮತ್ತಾರೂ ಇಲ್ಲ. ತವರೂರಿಗೆ ಹೋಗಬೇಕೆಂದರೆ ಲಾಕ್‌ಡೌನ್‌. ತಮ್ಮಿಬ್ಬರ ಈ ಸಮಸ್ಯೆಯನ್ನು ಯಾರಿಗಾದರೂ ಹೇಳೋಣ ಎಂದರೆ ಇಬ್ಬರಿಗೂ ಮಾತು ಬರೋದಿಲ್ಲ, ಕಿವಿ ಕೇಳೋದಿಲ್ಲ. ಹೀಗಾಗಿ ವಿಡಿಯೋ ಮೂಲಕ ಹೇಗಾದರೂ ನಮ್ಮನ್ನು ಊರಿಗೆ ಕರೆದೊಯ್ಯಿರಿ ಎಂದು ಕೇಳುವ ಮೂಲಕ ಮೂಕ ವೇದನೆ ಅನುಭವಿಸುತ್ತಿದ್ದಾರೆ ಈ ಜೀವಗಳು.

ಧಾರವಾಡ ತಾಲೂಕು ಲಕಮಾಪೂರ ಗ್ರಾಮದ ದೀಪಕ ಹಾಗೂ ಬಸವ್ವ ಗಬ್ಬೂರ ರಾಜಧಾನಿ ಬೆಂಗಳೂರಿನಲ್ಲಿ ಲಾಕ್‌ ಆಗಿದ್ದಾರೆ. ಬಸವ್ವ ಈಗ 7 ತಿಂಗಳ ಗರ್ಭಿಣಿ. ಚೊಚ್ಚಲ ಹೆರಿಗೆ ತವರು ಮನೆಯಲ್ಲಿಯೇ ಆಗಬೇಕು ಎಂಬ ಬಯಕೆ. ಜೊತೆಗೆ ಬೆಂಗಳೂರಿನಲ್ಲಿ ಹೆರಿಗೆ ನಂತರದ ಜೋಪಾನ ಮಾಡುವವರಾರೂ ಇಲ್ಲ. ಹೀಗಾಗಿ ತವರೂರಿಗೆ ಹೋಗಬೇಕಾದ ಅನಿವಾರ್ಯ ಸ್ಥಿತಿ. ಆದರೆ, ಹೇಗೆ ಹೋಗಬೇಕು ಎಂಬುದೇ ಅವರಿಗೆ ತಿಳಿಯದೆ, ವಿಡಿಯೋದಲ್ಲಿ ಸನ್ನೆಯ ಮೂಲಕವೇ ಮನವಿ ಮಾಡಿಕೊಂಡು ಇಬ್ಬರೂ ತಮ್ಮ ಪಾಲಕರಿಗೆ ಕಳುಹಿಸಿದ್ದಾರೆ. ಕೈ ಮತ್ತು ಬಾಯಿ ಸನ್ನೆ ಮಾಡುವ ಮೂಲಕ ನಮ್ಮನ್ನು ಕರೆದೊಯ್ಯಿರಿ ಎಂದು ಅಂಗಲಾಚುತ್ತಿರುವುದು ಎಂತಹ ಮನಸ್ಸಿಗೂ ಖೇದ ಎನಿಸುತ್ತದೆ.

'ಮೂರು ತಿಂಗಳಿಂದ ಸಂಬಳ ಇಲ್ಲ, ಸಂಸಾರ ನಡೆಸೋದಕ್ಕೂ ಶಿಕ್ಷಕರ ಪರದಾಟ'

ಹಲವು ದಿನಗಳಿಂದ ವಿಡಿಯೋ ಕಾಲ್‌ ಮೂಲಕ ನಮ್ಮನ್ನು ಕರೆದೊಯ್ಯಿರಿ ಎಂದು ಕೇಳಿಕೊಳ್ಳುತ್ತಿದ್ದಾರೆ ಮಕ್ಕಳು. ಇಬ್ಬರೂ ಒಂದೇ ಊರಿನವರಾಗಿದ್ದು, ಅವಕಾಶ ಕೊಟ್ಟರೆ ನಾವೇ ಹೋಗಿ ಕರೆತರುತ್ತೇವೆ. ಇಲ್ಲದೇ ಇದ್ದರೆ ಸರ್ಕಾರವೇ ಅವರನ್ನು ಕರೆತರಲಿ. ಮುಖ್ಯಮಂತ್ರಿಯಾಗಲಿ, ಗೃಹ ಸಚಿವರಾಗಲಿ ಅಥವಾ ಜಿಲ್ಲಾಧಿಕಾರಿಯಾಗಲಿ ಈ ಬಗ್ಗೆ ಗಮನ ಹರಿಸಬೇಕು. ಕೊರೋನಾಕ್ಕೆ ಹೆದರಿ ಸೊಸೆ ಒಂದು ತಿಂಗಳಿಂದ ತಪಾಸಣೆ ಸಹ ಮಾಡಿಸಿಕೊಂಡಿಲ್ಲ. ನಮಗೂ ಭಯವಾಗುತ್ತಿದೆ ಎನ್ನುತ್ತಾರೆ ದೀಪಕ್‌ ತಂದೆ ಸುರೇಶ ಗಬ್ಬೂರ.

ಬೆಂಗಳೂರಿನ ಹೊಂಗಸಂದ್ರದ ಸಮರ್ಥನಂ ಅಂಗವಿಕಲ ಸಂಸ್ಥೆಯಲ್ಲಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿರುವ ದೀಪಕ್‌ಗೆ ತಮ್ಮದೇ ಊರಿನ ಬಸವ್ವಳೊಂದಿಗೆ ಕಳೆದ ಮೇ 30ರಂದು ವಿವಾಹವಾಗಿತ್ತು. ಬಳಿಕ ಪತ್ನಿಯನ್ನು ಕರೆದುಕೊಂಡು ಹೋಗಿದ್ದ ದೀಪಕ ಇದೀಗ ಲಾಕ್‌ಡೌನ್‌ ಸಮಸ್ಯೆಯಿಂದ ಪರದಾಡುವಂತಾಗಿದ್ದು, ಆಡಳಿತ ವ್ಯವಸ್ಥೆ ಅವರ ಮೂಕವೇದನೆ ಅರಿತು ರಾಜಧಾನಿಯಿಂದ ತವರೂರಿಗೆ ಕರೆ ತರಲು ವ್ಯವಸ್ಥೆ ಮಾಡುವುದೇ ಕಾದು ನೋಡಬೇಕಿದೆ.

"

click me!