
ಬೆಂಗಳೂರು (ಮೇ 03): ಬೆಂಗಳೂರು ನಗರದ ಹೆಚ್‌ಎಸ್‌ಆರ್ ಬಡಾವಣೆಯಲ್ಲಿನ ಪೇಯಿಂಗ್ ಗೆಸ್ಟ್ (ಪಿಜಿ) ವಾಸಸ್ಥಳಗಳಲ್ಲಿ ನಡೆಯುತ್ತಿರುವ ಅನಾಗರಿಕ ವರ್ತನೆಗಳು (ಯುವತಿಯರು ಹಾಡಹಗಲೇ ಅರೆನಗ್ನವಾಗಿ ಸಂಚಾರ) ಸ್ಥಳೀಯ ನಿವಾಸಿಗಳಲ್ಲಿ ಆಕ್ರೋಶವನ್ನು ಉಂಟುಮಾಡಿವೆ. ಹಾಡುಹಗಲೇ ನಡುಬೀದಿಯಲ್ಲಿ ಅರೆನಗ್ನವಾಗಿ ಓಡಾಡುವ ಯುವತಿಯರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪಿಜಿ ವಾಸಿಗಳ ನಡವಳಿಕೆಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಘಟನೆಗಳ ಹಿನ್ನೆಲೆಯಲ್ಲಿ, ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಗೆ ಹಲವಾರು ದೂರುಗಳು ಸಲ್ಲಿಸಲ್ಪಟ್ಟಿವೆ. ಆದರೆ, ಈ ದೂರುಗಳಿಗೆ ತಕ್ಷಣದ ಪ್ರತಿಕ್ರಿಯೆ ದೊರಕದೆ, ಅನಧಿಕೃತ ಪಿಜಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಗುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳು ನಿರಾಶೆಗೊಂಡಿದ್ದಾರೆ. ಹೆಚ್‌ಎಸ್‌ಆರ್ ಬಡಾವಣೆಯ ಪಿಜಿಗಳಲ್ಲಿ ನಡೆಯುತ್ತಿರುವ ಈ ರೀತಿಯ ಅನಾಗರಿಕ ವರ್ತನೆಗಳು ನಗರದಲ್ಲಿ ಪಿಜಿಗಳ ನಿಯಂತ್ರಣ ಮತ್ತು ಸುರಕ್ಷತೆ ಕುರಿತು ಗಂಭೀರ ಚಿಂತನೆಗೆ ಕಾರಣವಾಗಿವೆ. ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆ ಈ ಕುರಿತು ತಕ್ಷಣ ಕ್ರಮ ಕೈಗೊಂಡು, ಪಿಜಿಗಳಲ್ಲಿ ನಿಯಮಾನುಸಾರ ನಡವಳಿಕೆ ಮತ್ತು ಸುರಕ್ಷತೆ ಖಚಿತಪಡಿಸಿಕೊಳ್ಳಬೇಕಾಗಿದೆ.
ಬೆಂಗಳೂರಿನ ವಿವಿಧೆಡೆ ಪಿಜಿ ನಿವಾಸಿಗಳಿಂದ ಹಾವಳಿ: ಇನ್ನು ಬೊಮ್ಮನಹಳ್ಳಿ, ಕೋರಮಂಗಲ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹೊರರಾಜ್ಯಗಳು ಹಾಗೂ ವಿದೇಶಗಳಿಂದ ಬಂದ ಯುವಕ-ಯುವತಿಯರು ನೆಲೆಸಿರುವ ಪಿಜಿಗಳ ಬಳಿ ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಹಾಡ ಹಗಲೇ ಮದ್ಯ, ಗಾಂಜಾ ಸೇವನೆ ಮಾಡಿ ರಸ್ತೆಯಲ್ಲಿ ಕುಣಿದಾಡುತ್ತಾರೆ. ಸ್ಥಳೀಯ ಸಾರ್ವಜನಿಕರಿಗೆ ಸುಖಾ ಸುಮ್ಮನೆ ಕಿರುಕುಳ ನೀಡುತ್ತಾರೆ. ಪಾರ್ಕ್‌ಗಳು ಹಾಗೂ ಇತರೆ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯಗಳಲ್ಲಿ ತೊಡಗಿರುತ್ತಾರೆ. ಇನ್ನು ಪಿಜಿಗಳಲ್ಲಿ ಮಧ್ಯರಾತ್ರಿವರೆಗೆ ಕುಡಿದು ಸಾಂಗ್ ಹಾಕಿಕೊಂಡು ಡ್ಯಾನ್ಸ್ ಮಾಡುವ ಮತ್ತು ರಸ್ತೆಗಳಲ್ಲಿ ಪುಂಡಾಟಿಕೆ ಮಾಡುವ ಘಟನೆಗಳು ಹೆಚ್ಚಾಗಿವೆ, ಇದರಿಂದ ಸ್ಥಳೀಯರು ರೋಸಿ ಹೋಗಿದ್ದು, ಪೊಲೀಸರು ಮತ್ತು ಬಿಬಿಎಂಪಿಗೆ ಮಾಹಿತಿ ನೀಡಿದರೂ ಯಾವುದೇ ಕಠಿಣ ಕ್ರಮವಾಗುತ್ತಿಲ್ಲ ಎಂದು ಅವಲತ್ತುಕೊಂಡಿದ್ದಾರೆ.
ಹಣಕಾಸಿನ ವಿಚಾರಕ್ಕೆ ವಿದೇಶಿ ಯುವತಿ ಕೊಲೆ:
ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡುಕ ಹುಟ್ಟಿಸುವ ವಿದೇಶಿ ಯುವತಿಯ ಹತ್ಯೆ ಪ್ರಕರಣ ನಡೆದಿದೆ. ನಗರದಲ್ಲಿ ಉದ್ಯೋಗ ಮಾಡಿಕೊಂಡು ನೆಲೆಸಿದ್ದ ನೈಜೀರಿಯಾ ಮೂಲದ ಯುವತಿಯೊಬ್ಬಳನ್ನು ಆಕೆಯದೇ ಪರಿಚಯದ ವ್ಯಕ್ತಿ ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು ನೈಜೀರಿಯಾದ ಲೋವಿತ್ (28) ಎಂದು ಗುರುತಿಸಲಾಗಿದೆ. ಲೋವಿತ್ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿ ಪಿಜಿಯಲ್ಲಿ ವಾಸ್ತವ್ಯದಲ್ಲಿದ್ದರು. ಏಪ್ರಿಲ್ 30ರಂದು ಬೆಳಿಗ್ಗೆ ಬೆಟ್ಟಹಲಸೂರು ಮುಖ್ಯರಸ್ತೆಯ ಪಕ್ಕ ಶವ ಪತ್ತೆಯಾಗಿದ್ದು, ಚಿಕ್ಕಜಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.
ಘಾನಾ ದೇಶದ ಸ್ಯಾಮ್ಸನ್ ಒಪಾಂಗ್ ಎಂಬಾತ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಯಾಮ್ಸನ್ ಕಳೆದ 5 ವರ್ಷಗಳಿಂದ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಬಿಟಿಎಂ ಲೇಔಟ್‌ನಲ್ಲಿ ವಾಸಿಸುತ್ತಿದ್ದನು. ತನಿಖೆಯ ಪ್ರಕಾರ, ಸ್ಯಾಮ್ಸನ್‌ಗೆ ಲೋವಿತ್ ಜೊತೆಗೆ ಕಳೆದ ಕೆಲ ವರ್ಷಗಳಿಂದ ಸ್ನೇಹ ಸಂಬಂಧವಿತ್ತು. ಸ್ನೇಹ ಆಳವಾಗುತ್ತಿದ್ದಂತೆ, ಲೋವಿತ್ ಆತನಿಂದ ಹಲವಾರು ಬಾರಿ ಸಾಲ ಪಡೆದಿದ್ದಳು. ಆದರೆ, ಸಾಲ ವಾಪಸ್ ಕೊಡದ ಕಾರಣ ಸ್ಯಾಮ್ಸನ್ ಕೋಪಕ್ಕೆ ಕಾರಣವಾಗಿದೆ.
ಏ.30ರಂದು ಮಾತುಕತೆಯ ನೆಪದಲ್ಲಿ ಯುವತಿಯನ್ನು ಕರೆಸಿಕೊಂಡ ಸ್ಯಾಮ್ಸನ್, ಕಾರಿನಲ್ಲಿ ಕೂರಿಸಿಕೊಂಡು ಮಾತನಾಡುತ್ತಾ ತಲೆಗೆ ಗೇರ್ ನಿಂದ ಹೊಡೆದು, ಬಳಿಕ ಕುತ್ತಿಗೆ ಹಿಸುಕಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಶವವನ್ನ ಕಾರಿನಲ್ಲಿಯೇ ಇಟ್ಟುಕೊಂಡು ನಗರದಲ್ಲಿ ಸುತ್ತಾಡಿದ ಆರೋಪಿ, ಕೊನೆಗೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನಸಂಚಾರ ಕಡಿಮೆ ಇರುವ ಸ್ಥಳದಲ್ಲಿ ಶವ ಬಿಸಾಡಿದ್ದಾನೆ. ತಕ್ಷಣದ ತನಿಖೆ ನಡೆಸಿದ ಚಿಕ್ಕಜಾಲ ಪೊಲೀಸರು ಸಿಸಿಟಿವಿ ದೃಶ್ಯ, ಮೊಬೈಲ್ ಟ್ರ್ಯಾಕಿಂಗ್ ಮೂಲಕ ಆರೋಪಿ ಸ್ಯಾಮ್ಸನ್ ಒಪಾಂಗ್ ಅನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.