ಮೂಡಿಗೆರೆ ತಾಲೂಕಿನ ದಿಣ್ಣೆಕೆರೆ , ಕಳಸ ತಾಲೂಕಿನ ಕೆಳಗೂಡು ,ತರೀಕೆರೆ ತಾಲೂಕಿನ ಬಾವಿಕೆರೆಯಲ್ಲಿ ಮನೆ ನೆಲಸಮ. ಮನೆಯ ಅವಶೇಷಗಳ ಅಡಿ ಆಹಾರ ಸಾಮಗ್ರಿ ಹುಡುಕುವ ಮನಕಲಕುವ ದೃಶ್ಯ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಆ13): ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾದರೂ ಅನಾಹುತಗಳು ಅಬ್ಬರ ಕಡಿಮೆಯಾಗುತ್ತಿಲ್ಲ. ಕಳೆದ 15 ದಿನಗಳಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ಭೂಮಿಯ ತೇವಾಂಶ ಹೆಚ್ಚಾಗಿ ಮನೆ, ಶಾಲಾ ಕಟ್ಟಡಗಳು, ಬೆಟ್ಟ-ಗುಡ್ಡಗಳು ಕುಸಿಯುವ ಪ್ರಮಾಣ ಕೂಡ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಮಳೆ ಅವಾಂತರಗಳು ಮುಂದುವರಿದಿದ್ದು, ಭಾರೀ ಪ್ರಮಾಣದ ಆಸ್ತಿ ಪಾಸ್ತಿ ನಷ್ಟ ಉಂಟಾಗಿದೆ. ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ಮಾರ್ಗದಲ್ಲಿ ಅತೀಯಾದ ಮಳೆಯಿಂದ ಕಾಂಕ್ರೀಟ್ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಹೆಬ್ಬೆ ಮತ್ತು ಕೆಮ್ಮಣ್ಣುಗುಂಡಿಗೆ ಗುಂಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲೀಗ ಸಂಚರಿಸಲು ವಾಹನ ಸವಾರರು ಹಿಂದೇಟು ಹಾಕುವಂತಾಗಿದೆ. ರಸ್ತೆಯ ಎಡಬದಿಯಲ್ಲಿ ಸುಮಾರು ಮೂರು ಅಡಿಯಷ್ಟು ಭೂಮಿ ಕುಸಿದಿದೆ. ಕ್ಷಣ-ಕ್ಷಣಕ್ಕೂ ಬಿರುಕು ಬಿಟ್ಟು ಕುಸಿಯುತ್ತಿರುವುದರಿಂದ ಆತಂಕ ಎದರುಆಗಿದೆ. ಮಳೆ ಕೊಂಚ ಬಿಡುವ ನೀಡು ಮುನ್ಸೂಚನೆ ಇದ್ದ ಹಿನ್ನೆಲೆಯಲ್ಲಿ ಕೆಮ್ಮಣ್ಣುಗುಂಡಿಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಿದ್ದು ವಾಹನಗಳ ಒತ್ತಡಕ್ಕೆ ರಸ್ತೆ ಇನ್ನಷ್ಟು ಹಾನಿಗೀಡಾಗುವ ಭೀತಿ ಎದುರಾಗಿದೆ.
ಮುಂದುವರಿದ ಮನೆ ಹಾನಿ: ಮಲೆನಾಡು ಭಾಗದಲ್ಲಿ ಮಳೆಯಿಂದಾಗಿ ಸಾಲು ಸಾಲಾಗಿ ಮನೆಗಳು ಹಾನಿಗೀಡಾಗುತ್ತಿವೆ. ಮೂಡಿಗೆರೆ ತಾಲೂಕಿನ ದಿಣ್ಣೆಕೆರೆ , ಕಳಸ ತಾಲ್ಲೂಕಿನ ಕೆಳಗೂಡು, ತರೀಕೆರೆ ತಾಲ್ಲೂಕಿನ ಬಾವಿಕೆರೆಯಲ್ಲಿ ಮನೆಗಳು ನೆಲಸಮವಾಗಿದೆ. ಬಾವಿಕೆರೆಯಲ್ಲಿ ಬಸಪ್ಪ ಹಾಗೂ ಗಂಗಾಬೋವಿ ಎಂಬುವವರ ಮನೆಗಳು ಹಾನಿಗೀಡಾಗಿದ್ದು, ಅವಶೇಷಗಳ ಅಡಿ ಆಹಾರ ಸಾಮಗ್ರಿ ಹುಡುಕುವ ದೃಶ್ಯ ಮನಕಲಕುವಂತಿದೆ. ಕೂಡಿಟ್ಟ ಹಣ ಹಾಗೂ ಆಹಾರ ಸಾಮಗ್ರಿಗಾಗಿ ಮನೆಯವರು ಹುಡುಕಾಟ ನಡೆಸಿದ್ದು, ಕುಸಿದ ಮನೆ ಎದುರು ಕಣ್ಣೀರು ಹಾಕುತ್ತಿದ್ದಾರೆ.
ಶಾಲಾ ಕಟ್ಟಡ ಕುಸಿತ
ಮೂಡಿಗೆರೆ ತಾಲೂಕಿನ ಕಡಿದಾಳು ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಒಂದು ಗೋಡೆ ಸಂಪೂರ್ಣ ಕುಸಿದಿದ್ದು, ಇಡೀ ಕಟ್ಟಡಕ್ಕೆ ಹಾನಿ ಸಂಭವಿಸಿದೆ. 26 ಮಕ್ಕಳು ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಮಳೆ ಕಾರಣಕ್ಕೆ ಶಾಲೆಗೆ ರಜೆ ನೀಡಿದ್ದರಿಂದ ಭಾರೀ ಅನಾಹುತ ತಪ್ಪಿದೆ. ತರಗತಿ ನಡೆಯುತ್ತಿದ್ದರೆ ದೊಡ್ಡ ಸಮಸ್ಯೆ ತಲೆದೋರುತ್ತಿತ್ತು.ಶಾಲೆ ದುರಸ್ಥಿಗೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ, ತಹಶಿಲ್ದಾರರ್ ನಾಗರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಕ್ಕಳ ಜೀವಕ್ಕೆ ಕುತ್ತುಂಟಾದರೆ ನೀವೇ ಹೊಣೆ ಎಂದು ಕಿಡಿಕಾರಿದರು.
ಮಳೆಯಿಂದ ಹಾನಿಯಾದ ಸ್ಥಳಗಳಿಗೆ ಸಚಿವೆ ಶೋಭಾ ಭೇಟಿ: ಸಂತ್ರಸ್ಥ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಣೆ
ಬೆಳೆಹಾನಿ-ರೈತ ಆತ್ಮಹತ್ಯೆ: ಮಳೆಯಿಂದ ಬೆಳೆ ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ಮನನೊಂದು ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪ ತಾಲ್ಲೂಕಿನ ಜಯಪುರದಲ್ಲಿ ನಡೆದಿದೆ.ಗಣೇಶ್ (39) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದು, ಮೈಲುತುತ್ತು ಸೇವಿಸಿ ಸಾವಿಗೆ ಶರಣಾಗಿದ್ದಾನೆ. ಜಮೀನಿಗಾಗಿ ಬ್ಯಾಂಕಿನಿಂದ 2ಲಕ್ಷ ರೂ. ಹಾಗೂ 45 ಸಾವಿರ ಕೈ ಸಾಲ ಮಾಡಿಕೊಂಡಿದ್ದು, ಭಾರೀ ಮಳೆಯಿಂದ ಅಡಿಕೆ, ಕಾಫಿ, ಮೆಣಸು ಬೆಳೆ ಹಾನಿ ಸಂಭವಿಸಿದ ಕಾರಣಕ್ಕೆ ಸಾಲ ತೀರಿಸುವುದು ಹೇಗೆಂದು ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತನ ತಂದೆ ಬಾಳೇಹೊನ್ನೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
Yadagiri: ಮಳೆ ನಿಂತು ಹೋದ ಮೇಲೆ ಪ್ರವಾಹ ಭೀತಿ!
ತೋಟದಲ್ಲಿ ಭೂ ಕುಸಿತ: ನಿರಂತರ ಮಳೆಯಿಂದಾಗಿ ಭೂಮಿಯ ತೇವಾಂಶ ಹೆಚ್ಚಾಗಿ ಮನೆ ಮುಂದಿನ ತೋಟದಲ್ಲಿ ಭೂ ಕುಸಿತ ಉಂಟಾದ ಘಟನೆ ಮೂಡಿಗೆರೆ ತಾಲೂಕಿನ ಬಗ್ಗಸಗೂಡು ಗ್ರಾಮದಲ್ಲಿ ಘಟನೆ ರವಿಗೌಡ ಎಂಬುವರಿಗೆ ಸೇರಿದ ಮನೆ ಬಳಿ ಭೂಮಿ ಕುಸಿದ ಹಿನ್ನೆಲೆ ಮನೆಯ ಗೋಡಗೆಗಳು ಬಿರುಕು ಬಿಟ್ಟಿವೆ. ಮನೆ ಬೀಳಬಹುದೆಂಬ ಆತಂಕದಿಂದ ಮನೆ ಮಂದಿಯೆಲ್ಲಾ ಸಂಬಂಧಿಕರ ಮನೆಗೆ ತೆರಳಿಸಿದ್ದಾರೆ. ಮಣ್ಣು ಕುಸಿದು ತೋಟದಲ್ಲಿದ್ದ ಬಾವಿಯೂ ಕೂಡ ಮುಚ್ಚಿ ಹೋಗಿದೆ.