ಬೆಳಗಾವಿಯಲ್ಲಿ ಮಾನವೀಯತೆ ಸತ್ತೋಯ್ತಾ? ಚಿಕಿತ್ಸೆಗೆ ಅಲೆದಾಡಿದ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

By Suvarna NewsFirst Published Aug 23, 2020, 9:28 AM IST
Highlights

ಬೆಳಗಾವಿಯಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ ರೋಗಿಯ ಕುಟುಂಬಸ್ಥರು| ರೋಗಿಗೆ ಚಿಕಿತ್ಸೆ ನೀಡಲು ಮುಂದೆ ಬಾರದ ಆಸ್ಪತ್ರೆಗಳು| ಸದ್ಯ ಸಂಕೇಶ್ವರ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿ| 

ಬೆಳಗಾವಿ(ಆ.23):  ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೊಬ್ಬನಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಹಿಂದೇಟು ಹಾಕಿದ ಘಟನೆ ನಗರದಲ್ಲಿ ನಿನ್ನೆ(ಶನಿವಾರ) ನಡೆದಿದೆ. ದುರದುಂಡಿ ಗುರವ್ ಎಂಬುವರು ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ್ದರು. ತಕ್ಷಣ ಅವರನ್ನ ಚಿಕಿತ್ಸೆಗೆಂದು ನಗರದ ಜಿಲ್ಲಾಸ್ಪತ್ರೆಗೆ ಬಂದ ಸಂದರ್ಭದಲ್ಲಿ ಇಲ್ಲಿನ ಸಿಬ್ಬಂದಿ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

ಏನಿದು ಪ್ರಕರಣ? 

Latest Videos

ಜಿಲ್ಲೆಯ ನಿಡಸೋಸಿ ಗ್ರಾಮದ ನಿವಾಸಿ ದುರದುಂಡಿ ಗುರವ್‌ ಎಂಬುವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.  ತಕ್ಷಣ ಅವರನ್ನ ಸಂಕೇಶ್ವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಈ ವೇಳೆ ಸಂಕೇಶ್ವರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರೆಫರ್ ಮಾಡಿ ಕಳುಹಿಸಿದ್ದರು. ಆದರೆ ಬಿಮ್ಸ್ ಆಸ್ಪತ್ರೆಗೆ ಬಂದರೆ ಕೇವಲ ಕೋವಿಡ್ ರೋಗಿಗಳನ್ನು ಮಾತ್ರ ನೋಡುತ್ತೇವೆ ಎಂದು ವಾಪಸ್‌ ಕಳುಹಿಸಿದ್ದಾರೆ ಎಂದು ರೋಗಿಯ ಕುಟುಂಬಸ್ಥರು ಆರೋಪಿಸಿದ್ದಾರೆ. 

ಸುವರ್ಣ ನ್ಯೂಸ್‌ ವರದಿಗೆ ಸ್ಪಂದಿಸಿದ ಸಿಎಂ: ಗ್ರಾಮಸ್ಥರಿಗೆ ತಕ್ಷಣ ಬೋಟ್‌ ವ್ಯವಸ್ಥೆ ಮಾಡಲು ಸೂಚನೆ

ಬಳಿಕ ರೋಗಿಯ ಕುಟುಂಬಸ್ಥರು ಬೆಳಗಾವಿಯಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಆದರೆ, ಯಾವ ಆಸ್ಪತ್ರೆಯವರು ಮಾತ್ರ ರೋಗಿಗೆ ಚಿಕಿತ್ಸೆ ನೀಡಲು ಮುಂದೆ ಬಂದಿಲ್ಲ. ಹೀಗಾಗಿ ಆತ್ಮಹತ್ಯೆಗೆ ಯತ್ನಿಸಿದ ದುರದುಂಡಿ ಗುರವ್ ಕೈಗೆ ಸಲಾಯಿನ್ ಹಚ್ಚಿಕೊಂಡು ರೋಗಿಯೊಂದಿಗೆ ಕುಟುಂಬಸ್ಥರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದಾರೆ. 

ಆಸ್ಪತ್ರೆಗಳಿಗೆಲ್ಲಾ ಅಲೆದಾಡಿ ಕೊನೆಗೆ ಬೆಳಗಾವಿಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಬರಲಾಗಿತ್ತು. ರೋಗಿಯನ್ನ ದಾಖಲಿಸಿಕೊಂಡು ಅವರಿಗೆ ಚಿಕಿತ್ಸೆ ನೀಡಿದರೆ ದಿನಕ್ಕೆ ಮೂವತ್ತು ಸಾವಿರ ರೂಪಾಯಿ ಖರ್ಚಾಗುತ್ತೆ ಎಂದು ಸಿಬ್ಬಂದಿ ಹೇಳಿದ್ದಾರೆ ಎಂದು ರೋಗಿಯ ಕಡೆಯವರು ಆರೋಪಿಸಿದ್ದಾರೆ.  ಹೀಗಾಗಿ ದಾರಿ ದೋಚದೆ ಆಸ್ಪತ್ರೆ ಆವರಣದಲ್ಲೇ ಸಲಾಯಿನ್ ಬಾಟಲ್ ಹಚ್ಚಿಕೊಂಡು ವ್ಯಕ್ತಿ ಮಲಗಿದ್ದರು. ಅಸ್ವಸ್ಥ ಪತಿಯ ಸ್ಥಿತಿ ಕಂಡು ಪತ್ನಿ ಕಣ್ಣೀರಿಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಅಗಿದೆ. ಹೀಗಾಗಿ ಸರ್ಕಾರಿ, ಖಾಸಗಿ ಆಸ್ಪತ್ರೆಗಳ ವಿರುದ್ಧ ಸಾರ್ವಜನಿಕಎರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೊನೆಗೆ ಜಿಲ್ಲೆಯ ಸಂಕೇಶ್ವರ ಪಟ್ಟಣದ ಖಾಸಗಿ ಆಸ್ಪತ್ರೆ ರೋಗಿಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಮಹಾಮಾರಿ ಕೊರೋನಾ ಬಂದ್ಮೇಲೆ ಮಾನವೀಯತೆಯೇ ಸತ್ತೊಯ್ತಾ? ಎಂಬ ಪ್ರಶ್ನೆಗಳು ಕೇಳಲಾರಂಭಿಸಿವೆ. 

click me!