ಕಾಂಗ್ರೆಸ್ ಪಕ್ಷದ ಬೆಂಬಲದ ಜೊತೆಗೆ ಆಡಳಿತಕ್ಕೆ ಬಂದ ಬಿಜೆಪಿ ಮುಖಂಡ ಇದೀಗ ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ. ತಮ್ಮ ಆಡಳಿತದಲ್ಲಿ ವಿಪಕ್ಷ ಎನ್ನುವುದಿಲ್ಲ ಎಂದು ಪ್ರಹಸನಕ್ಕೆ ಕೊನೆ ಹಾಡಿದ್ದಾರೆ.
ಹೊಸನಗರ [ಜ.30]: ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಹಿಂಪಡೆಯಲಾಗಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ವಾಸಪ್ಪ ಗೌಡ ತಿಳಿಸಿದ್ದಾರೆ.
ತಾಲೂಕು ಪಂಚಾಯಿತಿ ಅಧ್ಯಕ್ಷರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಒತ್ತಡಗಳಿಂದಾಗಿ ರಾಜೀನಾಮೆ ನೀಡಲಾಗಿತ್ತು ಎಂದು ಸ್ಪಷ್ಟನೆ ನೀಡಿದರು.
ತಾವು ನಡೆಸಿಕೊಂಡು ಬರುತ್ತಿರುವ ಅಭಿವೃದ್ಧಿ ಕಾರ್ಯ ಕುಂಠಿತ ಆಗಬಹುದು ಹಾಗೂ ಎಲ್ಲಾ ಪಕ್ಷದ ಸದಸ್ಯರ ಒತ್ತಾಯದ ಮೇರೆಗೆ ಜಿಲ್ಲಾಧಿಕಾರಿಗೆ ಜ.16 ರಂದು ನೀಡಿದ್ದ ರಾಜೀನಾಮೆ ವಾಪಸ್ಸು ಪಡೆಯಲಾಗಿದೆ ಎಂದರು. ನನ್ನ ಆಡಳಿತ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಭ್ರಷ್ಟಾಚಾರದ ಆರೋಪ ಇಲ್ಲ. ಸಾಕಷ್ಟುಅಭಿವೃದ್ಧಿ ಕಾರ್ಯವನ್ನು ಪಕ್ಷಾತೀತವಾಗಿ ಮಾಡಿದ್ದೇನೆ ಎಂದು ತಿಳಿಸಿದರು.
ಸಚಿವ ಸ್ಥಾನ ತ್ಯಾಗದ ಬಗ್ಗೆ ಮಾತಾಡಿದ್ರು ಸಚಿವ ಈಶ್ವರಪ್ಪ...
ನಾನು ಬಿಜೆಪಿಯಿಂದ ಗೆದ್ದರೂ ಸಹ ಕಾಂಗ್ರೆಸ್ ಪಕ್ಷದ ಸಹಕಾರದಿಂದ ಅಧ್ಯಕ್ಷನಾದೆ. ಹೀಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷದ ಸದಸ್ಯರ ಬೆಂಬಲದಿಂದ ಆಡಳಿತ ನಡೆಸಲಾಗಿದೆ. ವಿರೋಧ ಪಕ್ಷ ಎಂಬುದು ನನ್ನ ಆಡಳಿತದಲ್ಲಿ ಇಲ್ಲ ಎಂದು ಅಭಿಪ್ರಾಯಪಟ್ಟರು.
ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ ಇವರ ಸಹಕಾರದಿಂದ ಅಧ್ಯಕ್ಷನಾಗಿದ್ದು, ಮೂಲ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಕ್ಕೆ ನಿಷ್ಟೆಯಿಂದ ಇದ್ದೇನೆ ಎಂದರು.
ರಾಜೀನಾಮೆ ಪ್ರಹಸನ ಏಕೆ:
ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರಿಗೆ ಅನ್ಯಾಯ ಆಗುತ್ತಿದೆ ಎಂಬ ಆರೋಪದ ಮೇರೆಗೆ ಸದಸ್ಯ ಬಿ.ಜಿ. ಚಂದ್ರಮೌಳಿ ಅವರನ್ನು ಅಧ್ಯಕ್ಷ ಗಾದಿಗೆ ತರಲು ಕಾಂಗ್ರೆಸ್ ಪಕ್ಷ ತಯಾರಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಗಾದಿಗೆ ವಾಸಪ್ಪ ಗೌಡ ಅವರಿಂದ ರಾಜೀನಾಮೆ ಪಡೆಯಲಾಗಿತ್ತು. ಆದರೆ ಈಗ ಕೊನೆ ಗಳಿಗೆಯಲ್ಲಿ ಬಿಜೆಪಿ ಬೆಂಬಲ ಪಡೆದ ವಾಸಪ್ಪ ಗೌಡ ಕಾಂಗ್ರೆಸ್ ಪಕ್ಷದ ವರಿಷ್ಠರ ಆದೇಶವನ್ನು ಧಿಕ್ಕರಿಸಿದ್ದಾರೆ ಎನ್ನಲಾಗಿದೆ.