ಬೆಂಗಳೂರು (ಸೆ.09): ಕಲಬುರಗಿಯಲ್ಲಿ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾವ ಪಕ್ಷಕ್ಕು ಬಹುಮತ ಬಾರದೆ ಜೆಡಿಎಸ್ ಕಿಂಗ್ ಮೇಕರ್ ಆಗಿದೆ. ಆದರೆ ಜೆಡಿಎಸ್ ಇದೀಗ ಭೀತಿಯಲ್ಲಿದೆ.
ಯಾವುದೇ ಪಕ್ಷಕ್ಕೆ ಪಾಲಿಕೆಯ ಅಧಿಕಾರ ಹಿಡಿಯುವಷ್ಟು ಸಂಖ್ಯಾಬಲ ಸಿಗದ ಹಿನ್ನಲೆಯಲ್ಲಿ ಆಪರೇಷನ್ ಕಮಲ ಹಾಗೂ ಆಪರೇಷನ್ ಹಸ್ತಕ್ಕೆ ಒಳಗಾಗಬಹುದು ಎನ್ನುವ ಆತಂಕದ ಹಿನ್ನೆಲೆಯಲ್ಲಿ ನಾಲ್ಕು ಸದಸ್ಯರನ್ನು ಜೆಡಿಎಸ್ ವರಿಷ್ಠರು ಬೆಂಗಳೂರಿನ ಗೌಪ್ಯ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ. ಇನ್ನು ಕೆಲದಿನ ಬೆಂಗಳೂರಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.
ಬಿಜೆಪಿ ಜೊತೆ ಮೈತ್ರಿಗೆ ಓಕೆ, ಆದ್ರೆ ಕಂಡೀಶನ್ ಹಾಕಿದ ಜೆಡಿಎಸ್..!
ಕಲಬರಗಿಯಿಂದ ಇನೊವಾ ಕಾರುಗಳಲ್ಲಿ ಬಿಡದಿಯ ಕೇತಗಾನಹಳ್ಳಿ ತೋಟದ ಮನೆಗೆ ಆಗಮಿಸಿದ ಪಾಲಿಕೆ ಚುನಾವಣೆಯಲ್ಲಿ ವಿಜೇತರಾದ ನಾಲ್ವರು ಸದಸ್ಯರು ಕುಮಾರಸ್ವಾಮಿ ರಾಮನಗರ ಜಿಲ್ಲೆಯ ಬಿಡದಿ ಬಳಿಯ ತೋಟದ ಮನೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು.
ಜೆಡಿಎಸ್ ಮೂಲಗಳ ಪ್ರಕಾರ ಖುದ್ದು ಕುಮಾರಸ್ವಾಮಿ ಅವರೇ ಪಾಲಿಕೆ ನೂತನ ಸದಸ್ಯರಾದ ವಿಜಯಲಕ್ಷ್ಮಿ ರೆಡ್ಡಿ, ಸಾಜೀದ್ ಕಲ್ಯಾಣಿ, ವಿಶಾಲ ನವರಂಗ ಹಾಗೂ ಅಲಿಮುದ್ದೀನ್ ಅವರಿಗೆ ಬಿಡದಿ ತೋಟದ ಮನೆಗೆ ಆಗಮಿಸುವಂತೆ ಬುಲಾವ್ ನೀಡಿದ್ದರು ಎನ್ನಲಾಗಿದೆ.