ಹುಬ್ಬಳ್ಳಿ‌ ಬಳಿ ಭೀಕರ ಅಪಘಾತ: ಒಂದೇ ಕುಟುಂಬದ ಮೂವರ ಸಾವು

By Suvarna News  |  First Published Aug 7, 2022, 2:06 PM IST

ಹುಬ್ಬಳ್ಳಿ ಸಮೀಪ ಜಿಗಳೂರ ಗ್ರಾಮದ ಬಳಿ  ಭೀಕರ ಕಾರು ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ.


ಹುಬ್ಬಳ್ಳಿ: ಹುಬ್ಬಳ್ಳಿ ಸಮೀಪ ಜಿಗಳೂರ ಗ್ರಾಮದ ಬಳಿ  ಭೀಕರ ಕಾರು ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಜಾಗರೂಕ ಚಾಲನೆಯ ಪರಿಣಾಮ ಕಾರು ರಸ್ತೆ ಸಮೀಪದ ದರ್ಗಾಕ್ಕೆ ನುಗ್ಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರೆಲ್ಲರೂ ಹುಬ್ಬಳ್ಳಿ ನಿವಾಸಿಗಳಾಗಿದ್ದು,ಬೆಂಗಳೂರಿನಲ್ಲಿ ಗೃಹ ಪ್ರವೇಶ ಮುಗಿಸಿ ಹುಬ್ಬಳ್ಳಿಗೆ ವಾಪಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಪತಿ, ಪತ್ನಿ ಅಳಿಯ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಹನಮಂತಪ್ಪ ಬೇವಿನಕಟ್ಟಿ, ಪತ್ನಿ ರೇಣುಕಾ ಬೇವಿನಕಟ್ಟಿ ಇವರ ಅಳಿಯ ರವೀಂದ್ರ  ಈ ಅವಘಡದಲ್ಲಿ ಸಾವನ್ನಪ್ಪಿದ್ದಾರೆ. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಶಂಭುನಾಥಪುರ ಸಮೀಪ ಕೆರೆಗೆ ಬಿದ್ದ ಕಾರು‌ 

Tap to resize

Latest Videos

ಇನ್ನೊಂದೆಡೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಶಂಭುನಾಥಪುರ ಸಮೀಪ ಕಾರೊಂದು ಕೆರೆಗೆ ಬಿದ್ದಿದ್ದು, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೊರೂರಿನಿಂದ ಅರಕಲಗೂಡಿಗೆ ಕಾರಿನಲ್ಲಿ ತೆರಳುತ್ತಿದ್ದ ಮೂವರು ಈ ದುರಂತದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಕಾರಿನಲ್ಲಿದ್ದವರು ಹಾಸನದ ಅರಕಲಗೂಡಿಗೆ ಮದುವೆಗೆಂದು ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಾರು ಕೆರೆಗೆ ಬೀಳುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಕೆರೆಗೆ ಹಾರಿ ಮೂವರನ್ನೂ ರಕ್ಷಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ನೀರಿನಿಂದ ಕಾರನ್ನು ಹೊರ ತೆಗೆದಿದ್ದಾರೆ.

ಬೈಕ್‌ಗೆ ಓಮ್ನಿ ಕಾರು ಡಿಕ್ಕಿ: ಬೈಕ್ ಸವಾರ ಶಿಕ್ಷಕ ಸಾವು

ಧರ್ಮಗುರು ಅಪಘಾತದಲ್ಲಿ ಸಾವು

ಇನ್ನೊಂದೆಡೆ ರಾಮನಗರದಲ್ಲಿ ನಡೆದ ಅಪಘಾತವೊಂದರಲ್ಲಿ ಧರ್ಮಗುರುವೊಬ್ಬರು ಸಾವನ್ನಪ್ಪಿದ್ದಾರೆ. ರಾಮನಗರದಿಂದ ಧರ್ಮ ಪಾಠ ಮುಗಿಸಿ ತೆರಳುವಾಗ ಧರ್ಮಗುರು ಚಲಿಸುತ್ತಿದ್ದ  ಟಾಟಾ ಏಸ್ ವಾಹನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅನಾಹುತ ಸಂಭವಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಶಿವಗಂಗೆ ಬಳಿಯ ಕಂಬಾಳು ಕೆರೆ ಏರಿ ಮೇಲೆ ಈ ದುರಂತ ಸಂಭವಿಸಿದೆ. 75 ವರ್ಷದ ಶ್ರೀಹರಿ ಜಗತ್ ಲಿಂಗ ಮಹಮದ್ ರಸೂಲ್ ಶಾ ಖಾದ್ರಿ ಪೂರ್ಕರ್ ಮೃತ ಧರ್ಮಗುರು. ಅವರು ಸರ್ವ ಧರ್ಮ ಆಶ್ರಮ ಹಿರೇಹಳ್ಳಿ  ಆಶ್ರಮದ ಧರ್ಮಗುರುಗಳಾಗಿದ್ದರು. ಧರ್ಮಗುರು ನಿಧನಕ್ಕೆ ಸಾವಿರಾರು ಭಕ್ತರು ಕಂಬನಿ ಮಿಡಿದಿದ್ದಾರೆ. ದಾಬಾಸ್ ಪೇಟೆಯ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿ ಧರ್ಮಗುರುಗಳ ಪಾರ್ಥಿವ ಶರೀರವನ್ನು ಇಡಲಾಗಿದೆ. ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಯಾದಗಿರಿಯಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ ಆರು ಮಂದಿ ದಾರುಣ ಸಾವು

ಖಾಸಗಿ ಬಸ್ , ಟ್ರ್ಯಾಕ್ಟರ್ ನಡುವೆ ಡಿಕ್ಕಿ

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಅರಣ್ಯ ಪ್ರದೇಶದಲ್ಲಿ ಖಾಸಗಿ ಬಸ್ ಹಾಗೂ ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿದ್ದು, ಈ ದುರಂತದಲ್ಲಿ 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಕರ್ನಾಟಕ ಗಡಿ ಅರಣ್ಯ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಮೃತರನ್ನು 45 ವರ್ಷ ಪ್ರಾಯದ ಜಮರ್ ಮುನಿ ಎಂದು ಗುರುತಿಸಲಾಗಿದೆ. ಈ ಎರಡೂ ವಾಹನಗಳು ಕರ್ನಾಟಕದಿಂದ ಆಂಧ್ರಪ್ರದೇಶದ ಮದನಪಲ್ಲಿಗೆ ಹೋಗುತ್ತಿದ್ದವು. ಗಾಯಗೊಂಡವರನ್ನು ಮದನಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅರಣ್ಯ ಪ್ರದೇಶದಲ್ಲಿ ಮೊಬೈಲ್‌ ನೆಟ್ವರ್ಕ್ ಸಹ ಕೆಲಸ ಮಾಡದೆ ಗಾಯಾಳುಗಳು ಕೆಲ ಕಾಲ ನರಳಾಟ ಅನುಭವಿಸಿದ್ದಾರೆ. ನಂತರ ಕೆಲ ಪ್ರಯಾಣಿಕರು ಸ್ವಲ್ಪ ದೂರ ನಡೆದು ಕೊಂಡು ಹೋಗಿ ಮೊಬೈಲ್‌ ನೆಟ್‌ವರ್ಕ್‌ ಸಿಕ್ಕಿದ ನಂತರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ

click me!