ರಾಯಚೂರು ಅಬಕಾರಿ ಅಧಿಕಾರಿಗಳಿಗೆ ತಲೆನೋವಾದ ಸಿಹೆಚ್ ಪೌಡರ್ ಶೇಂದಿ ದಂಧೆ

By Suvarna News  |  First Published Aug 7, 2022, 12:55 PM IST

ತೆಲಂಗಾಣದಲ್ಲಿ ಮಾರಾಟವಾಗುವ ಕಡಿಮೆ ದರದ ಶೇಂದಿಗೆ ರಾಯಚೂರಿನ ಕೆಲವರು ದಾಸರಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಗ್ಯಾಂಗ್ ಒಂದು ರಾಯಚೂರು ಜಿಲ್ಲಾ ಕೇಂದ್ರದಲ್ಲಿಯೇ ಅಕ್ರಮವಾಗಿ  ಸಿಹೆಚ್ ಪೌಡರ್ ಸೇಂದಿ ಮಾರಾಟ ದಂಧೆಗೆ ಇಳಿದಿದೆ. ಇದು ಅಬಕಾರಿ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ.


ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು: ರಾಯಚೂರು ಜಿಲ್ಲೆ ಆಂಧ್ರ ಮತ್ತು ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯಾಗಿದೆ. ಈ ಎರಡು ಗಡಿಭಾಗದ ಜನರಿಗೆ ಪ್ರಮುಖ ನಗರವೂ ಆಗಿದೆ. ಹೀಗಾಗಿ ನಿತ್ಯವೂ ಆಂಧ್ರ ಮತ್ತು ತೆಲಂಗಾಣದ ನೂರಾರು ಜನರು ರಾಯಚೂರಿಗೆ ಬಂದು ಹೋಗುವುದು ಸಾಮಾನ್ಯ. ತೆಲಂಗಾಣ ಸರ್ಕಾರ ಸೇಂದಿ ಮಾರಾಟಕ್ಕೆ ಅಲ್ಲಿ ಅವಕಾಶ ನೀಡಿದೆ. ಹೀಗಾಗಿ ತೆಲಂಗಾಣದಲ್ಲಿ ಮಾರಾಟವಾಗುವ ಕಡಿಮೆ ದರದ ಶೇಂದಿಗೆ ರಾಯಚೂರಿನ ಕೆಲವರು ದಾಸರಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಗ್ಯಾಂಗ್ ಒಂದು ರಾಯಚೂರು ಜಿಲ್ಲಾ ಕೇಂದ್ರದಲ್ಲಿಯೇ ಅಕ್ರಮವಾಗಿ  ಸಿಹೆಚ್ ಪೌಡರ್ ಸೇಂದಿ ಮಾರಾಟ ದಂಧೆಗೆ ಇಳಿದಿದೆ.

ಈ ದಂಧೆಯ ಸಂಪೂರ್ಣ ನಿಗ್ರಹಕ್ಕೆ ಅಬಕಾರಿ ಪೊಲೀಸರು ಈಗಾಗಲೇ ಸಾವಿರಾರು ದಾಳಿಗಳನ್ನ ಮಾಡಿದ್ದಾರೆ. ಜೊತೆಗೆ ನೂರಾರು ಜನರನ್ನು ಬಂಧಿಸಿ ಈ ದಂಧೆಗೆ ಬಳಸಿದ ಕಾರುಗಳು, ಆಟೋಗಳು ಮತ್ತು ಹತ್ತಾರು ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ. ಸಿಹೆಚ್ ಪೌಡರ್ ಮತ್ತು ಸೇಂದಿ ಸಮೇತ ಹಿಡಿದು ಹತ್ತಾರು ಜನರನ್ನು ಗಡಿಪಾರು ಕೂಡ ಮಾಡಿಸಿದ್ದಾರೆ. ಆದಾಗ್ಯೂ ಸಹ ರಾಯಚೂರು ನಗರದಲ್ಲಿ ಸಿಹೆಚ್ ಪೌಡರ್ ಸೇಂದಿ ದಂಧೆಯನ್ನು ಸಂಪೂರ್ಣವಾಗಿ ತಡೆಯಲು ಆಗುತ್ತಿಲ್ಲ. ಇದು ಈಗ ಅಬಕಾರಿ ಪೊಲೀಸರಿಗೆ ದೊಡ್ಡ ತಲೆನೋವು ಆಗಿದೆ.

Latest Videos

undefined

ವಿಶ್ವಾದ್ಯಂತ ಬ್ಯಾನ್ ಆದ ಸಿಹೆಚ್ ಪೌಡರ್:

ಇಡೀ ವಿಶ್ವಾದ್ಯಂತ ಸಿಹೆಚ್ ಪೌಡರ್‌ನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ಆದ್ರೂ ಮಹಾರಾಷ್ಟ್ರದ ಪೂನಾ ಕೆಮಿಕಲ್ ‌ಕಂಪನಿಯಿಂದ ಅಕ್ರಮವಾಗಿ ಸಿಹೆಚ್ ಪೌಡರ್ ತರಿಸಿ ತೆಲಂಗಾಣಕ್ಕೆ ಸಾಗಾಟ ಮಾಡಲಾಗುತ್ತದೆ. ತೆಲಂಗಾಣಕ್ಕೆ ಬಂದ ಬಳಿಕ ಕೆಜಿ ಲೆಕ್ಕದಲ್ಲಿ ರಾಯಚೂರು ಜಿಲ್ಲೆಗೂ ಸಹ ಸಿಹೆಚ್ ಪೌಡರ್ ತೆಗೆದುಕೊಂಡು ಬಂದು ಕಲಬೆರಕೆ ಸೇಂದಿ ‌ಮಾಡುವ ದೊಡ್ಡ ಗ್ಯಾಂಗ್ ರಾಯಚೂರಿನಲ್ಲಿ ಇತ್ತು. ಅಬಕಾರಿ ಇಲಾಖೆ ಸತತ ದಾಳಿ ಮಾಡುವ ಮುಖಾಂತರ ಸಿಹೆಚ್ ಪೌಡರ್ ನಿಂದ ತಯಾರಿಸಿದ ಸೇಂದಿ ಮಾರಾಟಕ್ಕೆ ಬ್ರೇಕ್ ಹಾಕುತ್ತಿದೆ. ಆದ್ರೂ ಖದೀಮರ ಗ್ಯಾಂಗ್ ತೆಲಂಗಾಣದ ಗದ್ವಾಲ್, ನಂದಿನಿ ಹಾಗೂ ಕೃಷ್ಣದಿಂದ ಸಿಹೆಚ್ ಪೌಡರ್ ಸೇಂದಿ ತೆಗೆದುಕೊಂಡು ಬಂದು ಮಾರಾಟ ಮಾಡಿ ಹೋಗುತ್ತಿದ್ದಾರೆ. ಈ ಕಲಬೆರಕೆ ಸೇಂದಿ ಸೇವಿಸಿದ ಜನ ಹತ್ತಾರು ‌ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ.

ಕೃಷ್ಣದಿಂದ ರೈಲಿನಲ್ಲಿ ಬರುತ್ತೆ ಸಿಹೆಚ್ ಪೌಡರ್ ಶೇಂದಿ: 

ತೆಲಂಗಾಣದಿಂದ ರಾಯಚೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಪ್ರತಿಯೊಂದು ರಸ್ತೆಯಲ್ಲಿ ಅಬಕಾರಿ ಪೊಲೀಸ್ ಸಿಬ್ಬಂದಿ ತಪಾಸಣೆ ‌ನಡೆಸುತ್ತಾರೆ. ತಪಾಸಣೆ ವೇಳೆ ಸಿಕ್ಕ ವ್ಯಕ್ತಿಗಳನ್ನು ಹಾಗೂ ವಾಹನಗಳು ಜಪ್ತಿ ಮಾಡಿ ಕೇಸ್ ಹಾಕಿದ್ದಾರೆ. ಆದರೆ ಇದನ್ನರಿತ ಖದೀಮರು ತಮ್ಮ ದಂಧೆಯ ಮಾರ್ಗ ಬದಲಿಸಿದ್ದಾರೆ. ‌ಸಿಹೆಚ್ ಪೌಡರ್ ಸೇಂದಿಯನ್ನ ರೈಲಿನಲ್ಲಿ ಕೃಷ್ಣದಿಂದ ರಾಯಚೂರು ಸಿಟಿಗೆ ತೆಗೆದುಕೊಂಡು ಬಂದು ರೈಲ್ವೇ ನಿಲ್ದಾಣದ ಅಕ್ಕಪಕ್ಕದಲ್ಲೇ ಮಾರಾಟ ಮಾಡಿ ಮತ್ತೆ ಕೃಷ್ಣಕ್ಕೆ ‌ರೈಲಿನಲ್ಲಿಯೇ ಈ ಗ್ಯಾಂಗ್ ತೆರಳುತ್ತದೆ. ಅಬಕಾರಿ ಪೊಲೀಸರು ಹತ್ತಾರು ಬಾರಿ ಅವರನ್ನು ಹಿಡಿದು ಕೇಸ್ ಹಾಕಿದ್ದಾರೆ. ಆದ್ರೂ ಸಹ ಆ ಗ್ಯಾಂಗ್ ರೈಲಿನಲ್ಲಿ ಮಂಗಳವಾರ, ಶುಕ್ರವಾರ ಹಾಗೂ ‌ಭಾನುವಾರ  ಪ್ರಯಾಣಿಕರಂತೆ‌ ಬ್ಯಾಗ್‌ನಲ್ಲಿ ಕಲಬೆರಕೆ ಸೇಂದಿ ತೆಗೆದುಕೊಂಡು ಬಂದು ಮಾರಾಟ ಮಾಡಿ ಹೋಗುತ್ತಿದ್ದಾರೆ. ಇದನ್ನ ತಡೆಯಬೇಕಾದ ರೈಲ್ವೆ ಪೊಲೀಸರು ಗಫ್ ಚುಫ್ ಆಗಿದ್ದು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ. 

ಸಿಹೆಚ್ ಪೌಡರ್ ಶೇಂದಿ ಸೇವಿಸಿದ್ರೆ ಏನಾಗುತ್ತೆ!

ಸಿಹೆಚ್ ಪೌಡರ್ ಶೇಂದಿ ಕೆಮಿಕಲ್ ಆಗಿದೆ. ಅಷ್ಟೇ ಅಲ್ಲದೇ ಮನುಷ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ‌ಬೀರುತ್ತೆ ಎಂಬ ಕಾರಣಕ್ಕೆ ಈ ಸಿಹೆಚ್ ಪೌಡರ್ ‌ತಯಾರಿಕೆ ಮತ್ತು ಮಾರಾಟವನ್ನು ಜಗತ್ತಿನ ತುಂಬ ಬ್ಯಾನ್ ಮಾಡಿದ್ದಾರೆ. ಆದ್ರೂ ‌ಮಹಾರಾಷ್ಟ್ರದ ಕೆಲ ಕೆಮಿಕಲ್ ‌ಕಂಪನಿಗಳು ಈ ಸಿಹೆಚ್ ಪೌಡರ್ ತಯಾರಿಕೆ ಮಾಡಿ ಕಳ್ಳತನದಿಂದ ಮಾರಾಟ ಮಾಡುತ್ತಾರೆ. ಇಂತಹ ಅಪಾಯಕಾರಿ ಸಿಹೆಚ್ ಪೌಡರ್ ನಿಂದ ತಯಾರಿಸಿದ ಸೇಂದಿ ಸೇವನೆ ಮಾಡುವುದರಿಂದ ಮನುಷ್ಯನಿಗೆ ದುಡಿದು ಮೈ- ಕೈ  ನೋವು ಅನುಭವಿಸುವರು ನಿದ್ರೆಗೆ ಜಾರುತ್ತಾರೆ. ಹೀಗಾಗಿ ಕೂಲಿ ಕಾರ್ಮಿಕರು ಈ ಸಿಹೆಚ್ ಪೌಡರ್ ಸೇಂದಿಗೆ ದಾಸರಾಗಿ ಬಿಡುತ್ತಾರೆ. 

ಶೇಂದಿ ತೆಗೆಯಲು ಬಿಡಿ ಕುಲಕಸುಬಿಗೆ ಅವಕಾಶ ಕೊಡಿ

ದಿನವಿಡೀ ದುಡಿದು ಸಂಜೆ ವೇಳೆ ಶೇಂದಿ ಸೇವಿಸಿ ಮನೆಗೆ ಹೋಗಿ ನಿದ್ರೆಗೆ ಜಾರುವುದು. ಹೀಗೆ ನಿರಂತರವಾಗಿ ಈ ಕಲಬೆರಕೆ ಕೆಮಿಕಲ್ ಸೇಂದಿ ಸೇವಿಸಿದ್ರೆ ಇಡೀ ಜೀರ್ಣಾಂಗ ವ್ಯವಸ್ಥೆ ಹಾಳಾಗಿ ಹೋಗುವುದು, ಕಿಡ್ನಿ ಸಮಸ್ಯೆ ಬರುತ್ತೆ, ಕಣ್ಣಿನ ‌ಮೇಲೆ ಕೆಟ್ಟ ಪರಿಣಾಮ ‌ಬೀರುತ್ತೆ. ಆಹಾರವೇ ಬೇಡ. ನಿತ್ಯವೂ ಕಲಬೆರಕೆ ಸೇಂದಿ ಸೇವನೆ‌ ಮಾಡಬೇಕು ಅನ್ನಿಸುತ್ತೆ. ಜೊತೆಗೆ ಸೇಂದಿ ಸೇವನೆ ಮಾಡದಿದ್ದರೆ ಕೈಕಾಲುಗಳು ‌ನಡುಗಲು ಶುರುವಾಗುತ್ತೆ. ದಿನದಿಂದ ದಿನಕ್ಕೆ ಇಡೀ ದೇಹ ಅಂಗಾಂಗಗಳು ಸವೆತ ಆಗಿ 30-35 ವರ್ಷಕ್ಕೆ ಸೇಂದಿಗೆ ದಾಸರಾದವರು ಅಕಾಲಿಕವಾಗಿ ಸಾವಿಗೀಡಾಗುತ್ತಿದ್ದಾರೆ. ಇದನ್ನು ತಪ್ಪಿಸಲು ರಾಯಚೂರು ‌ಅಬಕಾರಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಈ ಮದಿರೆ ಬಲು ಚತುರೆ: ಕಿಕ್ ಏರಕ್ಕೆ 12 ಕೋಟಿ ಬಿಚ್ಬೇಕು!

ಸಿಹೆಚ್ ಪೌಡರ್ ಶೇಂದಿ ಸೇವಿಸದಂತೆ ಜಾಗೃತಿ ‌ಅಭಿಯಾನ 

ಇಂತಹ ಅಪಾಯಕಾರಿ ಕಲಬೆರಕೆ ಶೇಂದಿ ತಡೆಗೆ  ರಾಯಚೂರು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತಂಡಗಳನ್ನು ರಚನೆ ‌ಮಾಡಿದೆ. ಅದರ ಜೊತೆಗೆ ಅಬಕಾರಿ ‌ಪೊಲೀಸರು ಹಾಗೂ ಜಿಲ್ಲಾ ಆರೋಗ್ಯ ‌ಇಲಾಖೆ‌ ವೈದ್ಯರ ತಂಡ ಜನರಲ್ಲಿ ಕಲಬೆರಕೆ ಶೇಂದಿ ಸೇವನೆ ಮಾಡದಂತೆ ಜಾಗೃತಿ ‌ಮೂಡಿಸಲು‌ ಮುಂದಾಗಿದ್ದಾರೆ. ಒಟ್ಟಿನಲ್ಲಿ ರಾಯಚೂರು ಜಿಲ್ಲಾಡಳಿತ ಮತ್ತು ಅಬಕಾರಿ ಇಲಾಖೆ ಎಷ್ಟೇ  ಕಠಿಣ ಕ್ರಮ ಕೈಗೊಂಡರೂ ಸಹ ರಾಯಚೂರು ಜಿಲ್ಲೆಯಲ್ಲಿ ಸಿಹೆಚ್ ಪೌಡರ್ ಸೇಂದಿಯನ್ನು ಸಂಪೂರ್ಣವಾಗಿ ನಿಷೇಧಿಸಲು ಆಗುತ್ತಿಲ್ಲ. ಇದು ಅಬಕಾರಿ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.

click me!