ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶವೇನೋ ಆಯ್ತು: ಇಲ್ಲಿಗೆ ಕೈಗಾರಿಕೆಗಳು ಬರ್ತಾವಾ?

By Kannadaprabha News  |  First Published Feb 16, 2020, 2:06 PM IST

ಬರೋಬ್ಬರಿ 27 ಸಾವಿರ ಕೋಟಿ ಬಂಡವಾಳ ಹೂಡಿಕೆ ಏನೋ ಆಯ್ತು | ಕೈಗಾರಿಕೆಗಳೆಲ್ಲ ಬರಬೇಕೆಂದರೆ ಇಲಾಖೆ, ಸಚಿವರು ಫಾಲೋಆಪ್ ಮಾಡಲಿ | ಯುವ ಸಮೂಹ, ಇಲ್ಲಿನ ಕೈಗಾರಿಕೋದ್ಯಮಿಗಳ ಆಗ್ರಹ|


ಶಿವಾನಂದ ಗೊಂಬಿ 

ಹುಬ್ಬಳ್ಳಿ(ಫೆ.16): ಬಹುನಿರೀಕ್ಷಿತ ‘ಇನ್ವೆಸ್ಟ್ ಕರ್ನಾಟಕ- ಹುಬ್ಬಳ್ಳಿ’ ಸಮಾವೇಶವೂ ಮುಗಿತು. ಸಮಾವೇಶದಲ್ಲಿ ನಿರೀಕ್ಷೆಗೆ ಮೀರಿ ಕೈಗಾರಿಕೋದ್ಯಮಿಗಳು ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ಬರೋಬ್ಬರಿ 27 ಸಾವಿರ ಕೋಟಿ ಬಂಡವಾಳ ಹೂಡಲು ಒಡಂಬಡಿಕೆಯೂ ಆಗಿದೆ. ಮುಂದೇನು? ಇಂಥದೊಂದು ಪ್ರಶ್ನೆ ಈಗ ಕೇಳಿ ಬರುತ್ತಿದೆ.

Latest Videos

undefined

ಆಗಿರುವ ವಾಗ್ದಾನವೆಲ್ಲ ನಿಜವಾಗಬೇಕೆಂದರೆ ಸರ್ಕಾರ ಏನು ಮಾಡಬೇಕು? ಸ್ಥಳೀಯ ಅಧಿಕಾರಿಗಳ ಪಾತ್ರವೇನು? ಹೌದು! ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ ಮಾಡುವಾಗ ಇದ್ದ ಹುಮ್ಮಸ್ಸು, ಪ್ರತಿಷ್ಠೆ, ಬದ್ಧತೆ ಈಗ ದುಪ್ಪಟ್ಟು ಆಗಬೇಕಿದೆ. ಹಾಗೆ ನೋಡಿದರೆ ಬಂಡವಾಳ ಹೂಡಿಕೆದಾರರ ಸಮಾವೇಶ ಇದೇ ಮೊದಲೇನೂ ಅಲ್ಲ. ಬರೋಬ್ಬರಿ ಐದು ಬಾರಿ ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶಗಳನ್ನು ನಡೆಸಲಾಗಿದೆ. ಆಗೆಲ್ಲ ಲಕ್ಷ ಕೋಟಿಗಟ್ಟಲೇ ಬಂಡವಾಳ ಹೂಡಿಕೆಯ ಒಡಂಬಡಿಕೆ ಒಪ್ಪಂದಗಳು ಆಗಿದ್ದವು. ಆದರೆ ಬಹುತೇಕ ಅವೆಲ್ಲ ಒಪ್ಪಂದಗಳಿಗಷ್ಟೇ ಸೀಮಿತ ವಾಗಿದ್ದವು. 

ಇನ್ವೆಸ್ಟ್‌ ಕರ್ನಾಟಕ-ಹುಬ್ಬಳ್ಳಿ: ಬರೋಬ್ಬರಿ 72000 ಕೋಟಿ ರೂ ಹೂಡಿಕೆ!

ಬೆಂಗಳೂರು ಬಿಟ್ಟು ಹೊರಗೆ ನಡೆದ ಮೊದಲ ಈ ಸಮಾವೇಶ ಇದು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪರಿಶ್ರಮದ ಫಲವಾಗಿ ಇಂಥದೊಂದು ಮಹತ್ವ ಪೂರ್ಣ ಸಮಾವೇಶ ನಡೆದಿದೆ. ಇದರಲ್ಲಿ ಮಾಡಿಕೊಂಡ ಒಪ್ಪಂದದಂತೆ ಕೈಗಾರಿಕೆಗಳು ಬರುವಂತೆ ಸರ್ಕಾರ ನೋಡಿಕೊಳ್ಳಲಿ ಎನ್ನುವುದು ಜನತೆಯ ಆಗ್ರಹ. 

ಮುಂದೇನು?: 

ಎಲ್ಲವೂ ಅಂದುಕೊಂಡಂತೆ ಸಮಾ ವೇಶದಲ್ಲಿ 27 ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗಿದ್ದೇ ನಿಜವಾದರೆ ನೇರವಾಗಿ 90 ಸಾವಿರ ಜನರಿಗೆ ಉದ್ಯೋಗ ದೊರೆಯುತ್ತದೆ. ಈ ಎಲ್ಲ ಕೈಗಾರಿಕೆಗಳು ಬಂದರೆ ಇವುಗಳ ಜೊತೆ ಪೂರಕವಾಗಿ ನೂರಾರು ಸಣ್ಣ ಕೈಗಾರಿಕೆಗಳು ಬದುಕುತ್ತವೆ. ಅದರಿಂದ ಲಕ್ಷಾಂತರ ಜನರು ಉದ್ಯೋಗ ಪಡೆದು ಬದುಕು ಸಾಗಿಸುತ್ತಾರೆ. 

ಉತ್ತರ ಕರ್ನಾಟಕದ ನಕ್ಷೆ ಬದಲಾಗುತ್ತದೆ. ಆದರೆ, ಇವೆಲ್ಲವೂ ಈ ಕೈಗಾರಿಕೆಗಳು ಬಂದಾಗ ಆಗುತ್ತದೆ. ವಾಗ್ದಾನ ಮಾಡಿರುವ ಕೈಗಾರಿಕೆಗಳು ಬರಬೇಕೆಂದರೆ ನಮ್ಮಲ್ಲಿನ ಪರಿಸ್ಥಿತಿ ಸುಧಾರಿಸಬೇಕು. ಸಚಿವರೇನೋ ಶ್ರಮಪಟ್ಟು ಬಂಡವಾಳ ಹೂಡಿಕೆದಾರರನ್ನು ಕರೆತರುವ ಪ್ರಯತ್ನ ಮಾಡಿದ್ದಾರೆ. ಆದರೆ, ಅಧಿಕಾರಿಗಳ ಸಾಥ್ ಬೇಕು. ತಹಸೀಲ್ದಾರ್ ಕಚೇರಿ, ಸ್ಥಳೀಯ ಸಂಸ್ಥೆ, ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ತಿಂಗಳಗಟ್ಟಲೇ ಆದರೂ ಪರವಾನಗಿ ಸಿಗಲ್ಲ. ಉದ್ಯಮಿಗಳು ತಿಂಗಳಗಟ್ಟಲೇ ಅಲೆದಾಡುವುದೇ ಕೆಲಸವಾಗುತ್ತೆ. ಇರುವ ಸಿಂಗಲ್ ವಿಂಡೋ ಎಂಬುದು ಬರೀ ಹೆಸರಿಗೆ ಮಾತ್ರ ಎಂಬಂತಿದೆ. ಇಲ್ಲಿ ಪ್ರತಿಯೊಂದು ಸಣ್ಣ ಪುಟ್ಟ ಕೆಲಸಕ್ಕೂ ಬೆಂಗಳೂರಿಗೆ ತೆರಳಬೇಕಾಗುತ್ತದೆ. ಇದರಿಂದ ಉದ್ಯಮಿಗಳು ಬೇಸರಗೊಂಡು ಇಲ್ಲಿಗೆ ಬರುವುದನ್ನು ಕೈಬಿಡುತ್ತಾರೆ. ಈ ಹಿಂದೆ ಆಗಿರುವ ಜಿಮ್‌ಗಳು ವಿಫಲವಾಗಲು ಇದೇ ಪ್ರಮುಖ ಕಾರಣ. 

ಮತ್ತೇನು ಮಾಡಬೇಕು?: 

ಉತ್ತರ ಕರ್ನಾಟಕದಲ್ಲೇ ಕೈಗಾರಿಕೆಗಳು ಬರುತ್ತಿರುವ ಕಾರಣ ಉದ್ಯೋಗ ಮಿತ್ರ ಕಚೇರಿಯ ಶಾಖೆಯೊಂದನ್ನು ಹುಬ್ಬಳ್ಳಿಯಲ್ಲೇ ತೆರೆಯಬೇಕು. ಈಗ ಒಪ್ಪಂದ ಮಾಡಿಕೊಂಡಿರುವ ಕೈಗಾರಿಕೆಗಳು ಬರಬೇಕೆಂದರೆ ನಿರಂತರ ಫಾಲೋಆಪ್ ಮಾಡಬೇಕು. ಇದಕ್ಕಾಗಿ ಅಧಿಕಾರಿಗಳು, ಉದ್ಯೋಗ ಮಿತ್ರ ಸಿಬ್ಬಂದಿಗಳ ಒಂದು ತಂಡವನ್ನು ರಚಿಸಬೇಕು. 

ಈ ತಂಡವೂ ಯಾರ್ಯಾರು ಒಪ್ಪಂದ ಮಾಡಿಕೊಂಡಿದ್ದಾರೆ. ಅವರಿಗೆ ಎಷ್ಟೆಷ್ಟು ಭೂಮಿ ಬೇಕು. ಅವರಿಗೆ ಯಾವ್ಯಾವ ಸೌಲಭ್ಯ ಬೇಕು. ಯಾವ್ಯಾವ ಇಲಾಖೆಯಿಂದ ಪರವಾನಗಿ ಬೇಕಿದೆ ಎಂಬುದನ್ನೆಲ್ಲ ಪರಿಶೀಲನೆ ಮಾಡಿ ಆ ಕೆಲಸಗಳನ್ನೆಲ್ಲ ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಬಳಿಕ ಪ್ರತಿ ವಾರಕ್ಕೊಮ್ಮೆ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರಿಗೆ ವರದಿ ಸಲ್ಲಿಸುವಂತಾಗಬೇಕು. ಮುಂದೆ ನವೆಂಬರ್‌ನಲ್ಲಿ ಬೆಂಗಳೂರಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾ ವೇಶದಲ್ಲಿ, ಎಷ್ಟೆಷ್ಟು ಉದ್ಯಮಗಳು ಹುಬ್ಬಳ್ಳಿ ಸಮಾವೇಶದಲ್ಲಿ ಬರಲು ಒಪ್ಪಂದ ಮಾಡಿಕೊಂಡಿದ್ದವು. 

ಇನ್ವೆಸ್ಟ್‌ ಕರ್ನಾಟಕ: 72000 ಕೋಟಿ ರೂ ಹೂಡಿಕೆ ಒಪ್ಪಂದ!

ಕೈಗಾರಿಕೆಗಳಿಗೆ ಎಲ್ಲಿ ಭೂಮಿ ನೀಡಲಾಗಿದೆ. ಎಷ್ಟು ಕೈಗಾರಿಕೆಗಳ ಸಿವಿಲ್ ವರ್ಕ್ ಪ್ರಾರಂಭವಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು ಅಂದಾಗ ಮಾತ್ರ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶವೂ ಯಶಸ್ವಿಯಾದಂತೆ. ಇಲ್ಲದಿದ್ದಲ್ಲಿ ಹತ್ತರಲ್ಲಿ ಹನ್ನೊಂದು ಎಂಬಂತಾಗುತ್ತಷ್ಟೇ ಎಂಬುದು ಸಣ್ಣ ಕೈಗಾರಿಕೋದ್ಯಮಿಗಳ ಅಂಬೋಣ. ಒಟ್ಟಿನಲ್ಲಿ ಫಾಲೋಆಪ್ ಮಾಡಲೇಬೇಕು. ಆ ಕೆಲಸವನ್ನು ಸಚಿವರು, ಇಲಾಖೆ ಮಾಡಬೇಕೆಂಬುದು ನಾಗರಿಕರ ಆಗ್ರಹವಾಗಿದೆ. 

ಉದ್ಯೋಗ ಮಿತ್ರ ಕಚೇರಿಯನ್ನು ಹುಬ್ಬಳ್ಳಿಯಲ್ಲಿ ಪ್ರಾರಂಭಿಸಬೇಕು. ಉದ್ಯಮಿಗಳನ್ನು ಅಲೆದಾಡಿಸುವ ಕೆಲಸ ಮಾಡಬಾರದು. ನಾಲ್ಕೈದು ಜನ ಅಧಿಕಾರಿಗಳ ತಂಡವನ್ನು ರಚಿಸಿ ಒಪ್ಪಂದ ಮಾಡಿಕೊಂಡ ಉದ್ಯಮಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿಟ್ಟುಕೊಂಡು ಕೈಗಾರಿಕೆಗಳು ಇಲ್ಲಿ ಪ್ರಾರಂಭ ಮಾಡುವಂತಾಗಬೇಕು ಎಂದು ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ಫೋರಂನ ಕಾರ್ಯದರ್ಶಿ ಜಗದೀಶ ಹಿರೇಮಠ ಹೇಳಿದ್ದಾರೆ.

ಸಮಾವೇಶವೇನೂ ಅತ್ಯಾದ್ಭುತವಾಗಿ ನಡೆಯಿತು. ಅದು ಪೂರ್ಣ ಯಶಸ್ವಿಯಾಗಬೇಕೆಂದರೆ ಕನಿಷ್ಠ ಪಕ್ಷ ಶೇ. 80 ರಷ್ಟಾದರೂ ಕೈಗಾರಿಕೆಗಳು ಇಲ್ಲಿ ಸ್ಥಾಪನೆಯಾಗಬೇಕು. ಅಂದಾಗ ಇಲ್ಲಿನ ನಿರುದ್ಯೋಗ ಸಮಸ್ಯೆಯೂ ನಿವಾರಣೆಯಾಗುತ್ತದೆ. ಅಭಿವೃದ್ಧಿಯೂ ಆಗುತ್ತೆ ಎಂದು ಯುವಕ ಲಕ್ಷ್ಮಿಕಾಂತ ಘೋಡಕೆ ತಿಳಿಸಿದ್ದಾರೆ. 

ಈ ಬಗ್ಗೆ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಜಗದೀಶ ಶೆಟ್ಟರ್ ಅವರು, ನಿರಂತರ ಫಾಲೋಆಪ್ ಮಾಡಿಯೇ ಮಾಡುತ್ತೇವೆ. ಈಗ ಒಪ್ಪಂದ ಮಾಡಿಕೊಂಡಿರುವ ಕೈಗಾರಿಕೆಗಳನ್ನು ಇಲ್ಲಿಗೆ ಕರೆತರಲು ನಿರಂತರ ಶ್ರಮ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾನು ನನ್ನ ಪ್ರಯತ್ನವನ್ನೂ ಮುಂದುವರಿಸುತ್ತೇನೆ ಎಂದು ತಿಳಿಸಿದ್ದಾರೆ.
 

click me!