ಮೈಷುಗರ್‌ಗೆ ನವಚೈತನ್ಯ, ಮಂಡ್ಯ ವಿಶ್ವವಿದ್ಯಾಲಯ ಗರಿ, ಲಕ್ಷಾಂತರ ಜನರ ಸಮ್ಮುಖದಲ್ಲಿ ಅಭಿನಂದಿಸಲು ತೀರ್ಮಾನ: ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್
ಮಂಡ್ಯ(ಸೆ.03): 4 ವರ್ಷಗಳಿಂದ ಸ್ಥಗಿತಗೊಂಡಿದ್ದ ಮೈಸೂರು ಸಕ್ಕರೆ ಕಾರ್ಖಾನೆಗೆ ಮರುಚಾಲನೆ ದೊರಕಿಸಿಕೊಟ್ಟು ಮಂಡ್ಯಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯದ ಗರಿ ಮೂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅದ್ಧೂರಿಯಾಗಿ ಸನ್ಮಾನಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಹೇಳಿದರು. ಮೈಷುಗರ್ ಕಾರ್ಖಾನೆಗೆ ಅಧಿಕೃತ ಚಾಲನೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸಲಿದ್ದು, ಅದೇ ದಿನವೇ ನಗರದಲ್ಲಿ ಲಕ್ಷಾಂತರ ಜನರನ್ನು ಸೇರಿಸಿ 2 ಮಹೋನ್ನತ ಕೊಡುಗೆ ನೀಡಿದ ಸ್ಮರಣಾರ್ಥ ಅಭಿನಂದಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳು ಮೈಷುಗರ್‌ಗೆ ಚಾಲನೆ ದೊರಕಿಸಲಾಗದೆ ನಿರ್ಲಕ್ಷಿಸಿದ್ದವು. ಇಂತಹ ಸಮಯದಲ್ಲಿ ಧೈರ್ಯ ಮಾಡಿ ಜಿಲ್ಲೆಯ ಆರ್ಥಿಕ ಜೀವನಾಡಿಯಂತಿರುವ ಕಾರ್ಖಾನೆಗೆ ಪುನಶ್ಚೇತನ ನೀಡುವ ಪಣ ತೊಟ್ಟು, ಹಣ ಬಿಡುಗಡೆ ಮಾಡಿ ಕಬ್ಬು ಅರೆಯುವಿಕೆಗೆ ಚಾಲನೆ ದೊರಕಿಸಿಕೊಟ್ಟಿದ್ದಾರೆ. ಕಾರ್ಖಾನೆಯಲ್ಲಿ ಸಹ ವಿದ್ಯುತ್ ಘಟಕದೊಂದಿಗೆ ಎಥೆನಾಲ್ ಘಟಕ ಹಾಗೂ ಉಪ ಉತ್ಪನ್ನಗಳ ತಯಾರಿಕೆಗೆ ಪೂರಕವಾಗಿ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಕಾರ್ಖಾನೆ ಮುಂದೆಂದೂ ನಿಲ್ಲದಂತೆ ಲಾಭದಾಯಕವಾಗಿ ಮುನ್ನಡೆಸುವ ಸಂಕಲ್ಪ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸುವುದು ನಮ್ಮ ಕರ್ತವ್ಯವೂ ಆಗಿದೆ ಎಂದರು.
ಮಂಡ್ಯದ ಜೀವನಾಡಿ ಮೈಷುಗರ್ ಒ ಅಂಡ್ ಎಂನಡಿ ಪುನಾರಂಭ
ಮಂಡ್ಯ ಏಕೀಕೃತ ವಿಶ್ವವಿದ್ಯಾಲಯವನ್ನು ಪ್ರತ್ಯೇಕ ವಿಶ್ವವಿದ್ಯಾಲಯವನ್ನಾಗಿ ಮಾಡಿದ್ದಾರೆ. 45 ಕಾಲೇಜುಗಳನ್ನು ವಿವಿ ವ್ಯಾಪ್ತಿಗೊಳಪಡಿಸಿ ಸಚಿವ ಸಂಪುಟದ ಒಪ್ಪಿಗೆ ದೊರಕಿಕೊಟ್ಟಿದ್ದಾರೆ. ಮಂಡ್ಯ ವಿಶ್ವವಿದ್ಯಾಲಯ ಸ್ವರೂಪ ಪಡೆದಿರುವುದು ಶೈಕ್ಷಣಿಕವಾಗಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ವಿಶ್ವವಿದ್ಯಾನಿಲಯ ಸ್ಥಾಪನೆಯಿಂದ ಕೋರ್ಸ್‌ಗಳನ್ನು ಹುಡುಕಿಕೊಂಡು ಜಿಲ್ಲೆಯ ವಿದ್ಯಾರ್ಥಿಗಳು ಹೊರ ಜಿಲ್ಲೆಗಳಿಗೆ ವಲಸೆ ಹೋಗುವಂತಿಲ್ಲ. ಎಲ್ಲವೂ ವಿಶ್ವವಿದ್ಯಾನಿಲಯದ ಸೂರಿನಲ್ಲೇ ಸಿಗುವಂತಾಗಿದೆ. ವಿಶ್ವವಿದ್ಯಾನಿಲಯವನ್ನು ಘೋಷಿಸಿದ ಒಂದೇ ತಿಂಗಳಲ್ಲಿ ಕಾರ್ಯಗತಗೊಳಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನೂ ಸಿಎಂ ಜೊತೆಯಲ್ಲೇ ಸನ್ಮಾನಿಸಲಾಗುವುದು ಎಂದು ಹೇಳಿದರು.
ಹೊಸ ಕೊಡುಗೆಗಳ ಘೋಷಣೆ:
ಸಿಎಂ ಬಸವರಾಜ ಬೊಮ್ಮಾಯಿ ಅವರು ಆಗಮಿಸಿದ ದಿನದಂದು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಹೊಸ ಯೋಜನೆಗಳನ್ನು ಘೋಷಿಸಲು ತೀರ್ಮಾನಿಸಿದೆ. ನಗರದ ರಸ್ತೆಗಳ ಅಭಿವೃದ್ಧಿಗೂ ಅನುದಾನ ಬಿಡುಗಡೆ ಮಾಡಿಸಿ ಸುಂದರ ನಗರವಾಗಿ ಪರಿವರ್ತಿಸಲಾಗುತ್ತದೆ. ಮಂಡ್ಯ ಜಿಲ್ಲೆಯ ಮೇಲೆ ಮುಖ್ಯಮಂತ್ರಿಗಳಿಗೆ ವಿಶೇಷ ಅಭಿಮಾನವಿರುವ ಕಾರಣ ಎರಡು ಐತಿಹಾಸಿಕ ಕೊಡುಗೆಗಳನ್ನು ನೀಡಿದ್ದಾರೆ. ಕೃಷ್ಣರಾಜಸಾಗರ ಅಣೆಕಟ್ಟೆಯ ಗೇಟುಗಳನ್ನು ಬದಲಾವಣೆ ಮಾಡಿಸಿದ್ದಾರೆ. ಅವರಿಂದ ಇನ್ನಷ್ಟು ಯೋಜನೆಗಳು ಬರುವಂತಾಗಬೇಕೆಂಬ ಸದಾಶಯದೊಂದಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು.
ಗೋಷ್ಠಿಯಲ್ಲಿ ಚಂದಗಾಲು ಶಿವಣ್ಣ, ಎಲೆಚಾಕನಹಳ್ಳಿ ಬಸವರಾಜು,ವಸಂತಕುಮಾರ್, ಪ.ನ.ಪ್ರಸನ್ನ, ಎಂ.ಬಿ.ನಾಗಣ್ಣಗೌಡ, ಸಿ.ಟಿ.ಮಂಜುನಾಥ್ ಇದ್ದರು.
ಜಿಲ್ಲೆಯಿಂದಲೇ ಆರಂಭ:
ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಬಲವರ್ಧನೆಗೊಳಿಸುವ ಹಾಗೂ ಹೊಸ ಬದಲಾವಣೆಯನ್ನು ತರುವ ಕಾರ್ಯ ಮಂಡ್ಯದಿಂದಲೇ ಆರಂಭವಾಗುವಂತೆ ಕಾರ್ಯಯೋಜನೆ ರೂಪಿಸಲಾಗಿದೆ. ಬಿಜೆಪಿಯನ್ನು ಹೆಚ್ಚು ಸಂಘಟನೆಗೊಳಿಸಿ ಹೊಸ ಶಕ್ತಿಯನ್ನು ತುಂಬುವ ಕೆಲಸ ಮಾಡಲಾಗುವುದು. ಅದಕ್ಕೆ ಸಿಎಂ ಅಭಿನಂದನಾ ಕಾರ್ಯಕ್ರಮದಿಂದಲೇ ಚಾಲನೆ ದೊರಕಿಸಲಾಗುತ್ತದೆ. ಸನ್ಮಾನ ಕಾರ್ಯಕ್ರಮ ಮಾಮೂಲಿನಂತಿರದೆ ಅದೊಂದು ಐತಿಹಾಸಿಕ ಕಾರ್ಯಕ್ರಮವನ್ನಾಗಿ ಮಾಡಲು ಎಲ್ಲರೂ ಸಿದ್ಧರಾಗಿದ್ದೇವೆ ಎಂದು ಹೇಳಿದರು.