Mangaluru: ಪ್ರವೀಣ್ ‌ನೆಟ್ಟಾರು ಚಿಕನ್‌ ಸೆಂಟರ್‌ ಪುನಾರಂಭಿಸಿದ ಹಿಂದೂ ಕಾರ್ಯಕರ್ತ..!

By Girish GoudarFirst Published Sep 3, 2022, 1:32 PM IST
Highlights

ಪ್ರವೀಣ್ ನೆಟ್ಟಾರು ‌ಕುಟುಂಬಸ್ಥರು ಅಂಗಡಿ ಮುನ್ನಡೆಸಲು ಉತ್ಸಾಹ ತೋರದ ಕಾರಣ ಅಂಗಡಿಯ ಜವಾಬ್ದಾರಿ ಹಿಂದೂ ಕಾರ್ಯಕರ್ತ ವಹಿಸಿಕೊಂಡ ಯತೀಶ್ 

ವರದಿ: ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ‌ಮಂಗಳೂರು

ಮಂಗಳೂರು(ಸೆ.03):  ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಮುಚ್ಚಿದ್ದ ಪ್ರವೀಣ್ ಮಾಲೀಕತ್ವದ ಕೋಳಿ ಅಂಗಡಿ ಮತ್ತೆ ಪುನಾರಂಭಗೊಂಡಿದೆ. ಪ್ರವೀಣ್ ನೆಟ್ಟಾರು ‌ಕುಟುಂಬಸ್ಥರು ಅಂಗಡಿ ಮುನ್ನಡೆಸಲು ಉತ್ಸಾಹ ತೋರದ ಕಾರಣ ಬೆಳ್ಳಾರೆ ಭಾಗದ ಮತ್ತೊಬ್ಬ ಬಿಜೆಪಿ ಮತ್ತು‌ ಹಿಂದೂ ಕಾರ್ಯಕರ್ತರೊಬ್ಬರು ಈ ಅಂಗಡಿಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಜು.26ರಂದು ಹಂತಕರಿಂದ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಮಾಲೀಕತ್ವದ ಅಕ್ಷಯ ಚಿಕನ್ ಸೆಂಟರ್ ಮತ್ತೆ ಪುನರಾರಂಭಗೊಂಡಿದೆ. ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿರುವ ಈ ಅಂಗಡಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಸಕ್ರೀಯ ಸದಸ್ಯ ಯತೀಶ್ ಮುರ್ಕೆತ್ತಿ ಮಾಲಕತ್ವದಲ್ಲಿ ಪುನರಾರಂಭಗೊಳ್ಳುತ್ತಿದೆ. ಯತೀಶ್ ಈ ಹಿಂದೆ ಎಬಿವಿಪಿಯಲ್ಲಿ ಜಿಲ್ಲಾ ಸಂಚಾಲಕರಾಗಿ ಬಳಿಕ ಸುಳ್ಯ ತಾಲೂಕು ಜವಾಬ್ದಾರಿಯಲ್ಲಿ ತೊಡಗಿಸಿಕೊಂಡಿದ್ದರು. ಯತೀಶ್ ಕೋಳಿ ಸಾಕಾಣಿಕೆಯನ್ನು ಮಾಡುತ್ತಿದ್ದು ಇದೀಗ ಚಿಕನ್ ಸೆಂಟರ್ ಪ್ರಾರಂಭಿಸುತ್ತಿದ್ದಾರೆ. ಮತಾಂಧ ಶಕ್ತಿಗಳಿಗೆ ಹೆದರದೆ ವ್ಯವಹಾರವನ್ನು ಮುಂದುವರೆಸುತ್ತಿದ್ದೇನೆ. ಮತಾಂಧ ಶಕ್ತಿಗಳ ನೀಚ ಕೆಲಸಕ್ಕೆ ಹಿಂದೂ ಸಮಾಜ ಎಂದಿಗೂ ಎದೆಗುಂದುವುದಿಲ್ಲ ಎಂಬ ಸಂದೇಶವನ್ನು ಈ ಮೂಲಕ ನೀಡುತ್ತಿದ್ದೇನೆ. ಈ ಅಂಗಡಿಯು ಅಕ್ಷಯ ಚಿಕನ್ ಸೆಂಟರ್ ಹೆಸರಿನಲ್ಲೇ ಮುಂದುವರೆಯಲಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಯತೀಶ್ ಹೇಳಿದ್ದಾರೆ.

Praveen Nettaru Murder Case, ಎನ್‌ಐಎ ತಂಡದಿಂದ ಪ್ರತ್ಯೇಕ ಕೇಸು ದಾಖಲು

ಅಂಗಡಿ ಪುನಾರಂಭಿಸುವ ಧೈರ್ಯ ತೋರಿದ ಯತೀಶ್!

ಅಸಲಿಗೆ ಪ್ರವೀಣ್ ‌ನೆಟ್ಟಾರು ಹತ್ಯೆ ಬೆನ್ನಲ್ಲೇ ಇದರ ಹಿಂದೆ ಕೋಳಿ ಅಂಗಡಿಯೂ ಒಂದು ಕಾರಣ ಅನ್ನೋ ಮಾತುಗಳು ಕೇಳಿ ಬಂದಿತ್ತು. ಆರೋಪಿಗಳ ಬಂಧನವಾದ ಬಳಿಕವೂ ಹಲವು ಆಯಾಮಗಳಲ್ಲಿ ‌ಕೋಳಿ ಅಂಗಡಿ ಕಾರಣಕ್ಕೆ ಪ್ರವೀಣ್ ಟಾರ್ಗೆಟ್ ಆಗಿದ್ದ ಅನ್ನೋದು ಪೊಲೀಸರಿಗೆ ಗೊತ್ತಾಗಿತ್ತು. ಇನ್ನು ಪ್ರಮುಖ ಆರೋಪಿ ಶಫೀಕ್ ತಂದೆ ಪ್ರವೀಣ್ ಅಂಗಡಿಯಲ್ಲಿ ಕೆಲಸ ಮಾಡ್ತಾ ಇದ್ದರು ಅನ್ನೋದು ಪ್ರಕರಣದಲ್ಲಿ ಪ್ರಮುಖ ಸುಳಿವು. ಜಟ್ಕಾ-ಹಲಾಲ್ ವಿವಾದ ಹಾಗೂ ಹಲವು ಹಿಂದೂ ಯುವಕರಿಗೆ ಪ್ರವೀಣ್ ಕೋಳಿ ಅಂಗಡಿಗೆ ಪ್ರೋತ್ಸಾಹ ನೀಡಿದ್ದೇ ಘಟನೆಗೆ ಕಾರಣ ಅನ್ನೋದು ತನಿಖೆ‌ ವೇಳೆಯೂ ಬಹಿರಂಗವಾಗಿದೆ. ಇದಾದ ಬಳಿಕ ಪ್ರವೀಣ್ ಮಾಲೀಕತ್ವದ ಅಕ್ಷಯ್ ಚಿಕನ್ ಸೆಂಟರ್ ‌ಕ್ಲೋಸ್ ಆಗಿದೆ. ಆದರೆ ಪ್ರವೀಣ್ ಕುಟುಂಬಿಕರು ಈ ನೋವಿನ ಮಧ್ಯೆ ಅದನ್ನ ‌ಮತ್ತೆ ಆರಂಭಿಸೋ ಮನಸ್ಸು ಮಾಡಿಲ್ಲ. ಹೀಗಾಗಿ ಮತ್ತೆ ಅಕ್ಷಯ ಚಿಕನ್ ಫ್ರಾಂಚೈಸಿ ಪಡೆಯಲು ಯಾರೂ ಧೈರ್ಯ ತೋರದಿದ್ದರೂ ಬೆಳ್ಳಾರೆ ಭಾಗದ ಹಿಂದೂ ಕಾರ್ಯಕರ್ತ ಯತೀಶ್ ಧೈರ್ಯ ತೋರಿದ್ದಾರೆ. ಪಕ್ಷ ಮತ್ತು ಆರ್.ಎಸ್.ಎಸ್ ಜೊತೆ ಉತ್ತಮ ನಂಟು ಹೊಂದಿರುವ ಯತೀಶ್ ಪೂಜೆ‌ ನೆರವೇರಿಸಿ ಅಂಗಡಿ ಪುನಾರಂಭಿಸಿದ್ದಾರೆ.
 

click me!